ನವದೆಹಲಿ: ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ವಿಷಯದಲ್ಲಿ ಬಿಜೆಪಿ ದ್ವಂದ್ವ ನಿಲುವು ಅನುಸರಿಸುತ್ತಿದೆ. ಕರ್ನಾಟಕದ ಬಿಜೆಪಿ ನಾಯಕರು ಮೇಕೆದಾಟು ಯೋಜನೆ ಮಾಡುತ್ತೇವೆ ಎನ್ನುತ್ತಾರೆ. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾ ಮಲೈ ಮೇಕೆದಾಟು ಯೋಜನೆ ಆಗಲು ಬಿಡುವುದಿಲ್ಲ ಎನ್ನುತ್ತಾರೆ. ಇನ್ನೊಂದೆಡೆ ಕೇಂದ್ರ ಸರ್ಕಾರ ಅಂಥದ್ಯಾವುದೇ ನಿಯಮಗಳು ಇಲ್ಲದಿದ್ದರೂ ಕರ್ನಾಟಕ ಮೇಕೆದಾಟು ಬಳಿ ಅಣೆಕಟ್ಟು ಕಟ್ಟಲು ತಮಿಳುನಾಡಿನ ಒಪ್ಪಿಗೆ ಪಡೆಯಬೇಕು ಎಂದು ಹೇಳಿದೆ. ಈ ಮೂಲಕ ಬಿಜೆಪಿ ಮೇಕೆದಾಟು ವಿಷಯದಲ್ಲಿ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೇಕೆದಾಟು ಯೋಜನೆ ಈಗಿನ ಸ್ಥಿತಿಗತಿ ಬಗ್ಗೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೋಕಸಭೆಯಲ್ಲಿ ಪ್ರಶ್ನೆ ಮಾಡಿದ್ದರು. ಪ್ರಜ್ವಲ್ ರೇವಣ್ಣ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ಕರ್ನಾಟಕ ಸಲ್ಲಿಸಿದ್ದ ಮೇಕೆದಾಟು ಸಮಗ್ರ ಯೋಜನಾ ವರದಿಗೆ ಷರತ್ತು ಬದ್ಧ ಅನುಮತಿ ನೀಡಿದ್ದೇವೆ. ಆದರೆ ಇದು ಅಂತಾರಾಜ್ಯ ಯೋಜನೆ ಆಗಿರೋದ್ರಿಂದ ಕಣಿವೆ ರಾಜ್ಯಗಳ ಅನುಮತಿ ಬೇಕೆಂದು ಸಂಸತ್ತಿಗೆ ತಿಳಿಸಿದ್ದಾರೆ. ಕರ್ನಾಟಕ ಡಿಪಿಆರ್ ಕೊಟ್ಟಾಗಲೇ ಡಿಪಿಆರ್ ಗೆ ಕಾವೇರಿ ನೀರು ನಿರ್ವಹಣಾ ಮಂಡಳಿಯ ಅನುಮತಿ ಕೂಡ ಕಡ್ಡಾಯ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದೆವು.
ಸದ್ಯ ಮೇಕೆದಾಟು ಯೋಜನೆಗೆ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಸಮ್ಮತಿ ಸಿಕ್ಕಿಲ್ಲ. ಯೋಜನೆಗೆ ಅನುಮತಿಯನ್ನು 6 ತಿಂಗಳ ಒಳಗೆ ನೀಡಿಲ್ಲ ಎಂದಾದರೆ ಅದನ್ನು ಕರ್ನಾಟಕವು 'ಕೇಂದ್ರ ಸಮ್ಮತಿ ನೀಡಿದೆ' ಎಂದೇ ಭಾವಿಸಲಿದೆ ಎಂದು ತಿಳಿಸಿತ್ತು. ಈ ವಿಷಯವನ್ನು ಪ್ರಜ್ವಲ್ ರೇವಣ್ಣ ಜಲಶಕ್ತಿ ಸಚಿವರ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಗಜೇಂದ್ರ ಸಿಂಗ್ ಶೇಖಾವತ್, 'ಸಮ್ಮತಿ ಇದೆ ಎಂದು ಕರ್ನಾಟಕ ಭಾವಿಸಿದರೂ ಅದನ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ತಿಳಿಸಬೇಕು ಮತ್ತು ಪ್ರಾಧಿಕಾರದ ಅನುಮತಿಯಬೇಕು' ಎಂದು ಹೇಳಿದರು.
ಇದನ್ನೂ ಓದಿ: ಎಲ್ಲವನ್ನೂ ಸಹಿಸಿಕೊಳ್ಳುತ್ತೇನೆ, ನನ್ನ ಸಮಯ ಬಂದೇ ಬರುತ್ತೆ: ಸಚಿವ ಸ್ಥಾನವೂ ಸಿಗದಿದ್ದಕ್ಕೆ ಬೆಲ್ಲದ್ ಬೇಸರ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಜ್ವಲ್ ರೇವಣ್ಣ, ಇಂದು ನಾನು ಸದನದಲ್ಲಿ ಮೇಕೆದಾಟು ಯೋಜನೆಯ ಬಗ್ಗೆ ಪ್ರಶ್ನೆ ಮಾಡಿದ್ದೆ. ಅದಕ್ಕೆ ತಮಿಳುನಾಡು ಅನುಮತಿ ಪಡೆಯಲು ಹೇಳಿದ್ದಾರೆ. ನಾವ್ಯಾಕೆ ತಮಿಳುನಾಡಿಗೆ ಅನುಮತಿ ಕೇಳಬೇಕು? ನಾವು ನಮ್ಮ ನೀರನ್ನ ಬಳಸಿಕೊಳ್ಳುತ್ತಿದ್ದೇವೆ. ಕುಡಿಯುವ ನೀರಿಗಾಗಿ ಈ ಯೋಜನೆ ರೂಪಿಸಲಾಗಿದೆ. ಪ್ರತಿ ವರ್ಷ ಎಷ್ಟು ನೀರು ಕೋಡಬೇಕಂತ, ಸುಪ್ರೀಂ ಕೋರ್ಟ್ ಮತ್ತು ಕಾವೇರಿ ನ್ಯಾಯಾಧೀಕರಣ ಹೇಳಿದೆಯೋ ಅಷ್ಟು ನೀಡುತ್ತಿದ್ದೆವೆ. ನಮ್ಮ ನೀರನ್ನು ನಾವು ಯಾವುದಕ್ಕಾದರೂ ಬಳಸಿಕೊಳ್ಳುತ್ತೆವೆ ಎಂದು ಹೇಳಿದರು.
ಪರಿಸರ ಇಲಾಖೆಗೆ ಅನುಮತಿಗೆ ನಮ್ಮ ಕಡೆಯಿಂದ ಅನುಮತಿ ಕೇಳಲಾಗಿದೆ. ಇದರ ನಂತರವೂ ತಮಿಳುನಾಡಿನಿಂದ ಕೇಳಿಕೊಂಡು ಬಾ ಎಂದರೆ ಹೇಗೆ? ಹಾಗಾದರೆ ನ್ಯಾಯಾಧೀಕರಣದಿಂದ ಯಾವ ರೀತಿಯ ನ್ಯಾಯ ಸಿಕ್ಕಂತಾಯಿತು. ಕೇಂದ್ರದಿಂದ ಆರು ತಿಂಗಳ ಒಳಗಾಗಿ ಅನುಮತಿ ಕೊಡಲಿಲ್ಲ ಎಂದರೆ ಡಿಮ್ಡ್ ಅಪ್ರುವಲ್ ಅಂತ ತಿಳಿದುಕೊಳ್ತಿವಿ ಅಂತಾ ಹೇಳಿದ್ದೆವೆ. ಈಗ ಕೇಂದ್ರ ಸರ್ಕಾರವೇ ಮೇಕೆದಾಟು ಯೋಜನೆ ಆಗುತ್ತೊ ಇಲ್ವೋ ಅಂತ ಹೇಳಬೇಕು ಎಂದು ಒತ್ತಾಯಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ