ಮಧ್ಯಪ್ರದೇಶ ಹೈಡ್ರಾಮ: ಅತೃಪ್ತರ ಮನವೊಲಿಕೆಗೆ ಮುಂದಾದ ಡಿಕೆಶಿ ಟೀಂ

ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬೆಂಬಲಿಗ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ರಹಸ್ಯವಾಗಿ ರಮಾಡ ಹೋಟೆಲ್ ಪ್ರವೇಶ ಮಾಡಿದ್ದಾರೆ. 

news18-kannada
Updated:March 18, 2020, 9:01 AM IST
ಮಧ್ಯಪ್ರದೇಶ ಹೈಡ್ರಾಮ: ಅತೃಪ್ತರ ಮನವೊಲಿಕೆಗೆ ಮುಂದಾದ ಡಿಕೆಶಿ ಟೀಂ
ಡಿಕೆ ಶಿವಕುಮಾರ್​ ಜೊತೆ ಮಂಜುನಾಥ್ ಗೌಡ
  • Share this:
ಬೆಂಗಳೂರು (ಮಾ. 18): ಮಧ್ಯಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ದಿನದಿಂದ ದಿನಕ್ಕೆ ಕಳೆಗಟ್ಟುತ್ತಿದೆ. ಸಿಎಂ ಕಮಲನಾಥ್​ ವಿರುದ್ಧ ಅಸಮಾಧಾನಗೊಂಡು ಬೆಂಗಳೂರಿನ ರಮಾಡ ರೆಸಾರ್ಟ್​ ಸೇರಿರುವ ಅತೃಪ್ತ ಶಾಸಕರ ಕೈಯಲ್ಲಿ ಮಧ್ಯಪ್ರದೇಶ ಸರ್ಕಾರದ ಭವಿಷ್ಯ ನಿಂತಿದೆ. ಈ ಹಿನ್ನೆಲೆಯಲ್ಲಿ ಅತೃಪ್ತರ ಮನವೊಲಿಕೆಗೆ ಇಂದು ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಆಪ್ತ ಎಂಟ್ರಿ ಕೊಟ್ಟಿದ್ದಾರೆ. 

ಯಲಹಂಕ ಬಳಿ ಇರುವ ರಮಾಡ ರೆಸಾರ್ಟ್​ನಲ್ಲಿ ಬಿಗಿ ಭದ್ರತೆಯಲ್ಲಿರುವ ಕಾಂಗ್ರೆಸ್​ನ ಅತೃಪ್ತ ಶಾಸಕರನ್ನು ಭೇಟಿ ಮಾಡಲು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಪ್ರಯತ್ನಿಸಿದ್ದರು. ಆದರೆ, ಈ ಹಿಂದೆ ಮುಂಬೈನ ರಿನಿಸೈನ್ಸ್​ ಹೋಟೆಲ್​ನಲ್ಲಿ ತಂಗಿದ್ದ ಕರ್ನಾಟಕದ ಅತೃಪ್ತ ಶಾಸಕರನ್ನು ಭೇಟಿಯಾಗಲು ಹೋಗಿದ್ದ ಡಿ.ಕೆ. ಶಿವಕುಮಾರ್​ ಅವರನ್ನು ಹೋಟೆಲ್ ಗೇಟಿನ ಬಳಿಯೇ ತಡೆದು, ಪೊಲೀಸರು ವಶಕ್ಕೆ ಪಡೆದ ರೀತಿಯಲ್ಲೇ ದಿಗ್ವಿಜಯ ಸಿಂಗ್ ಅವರನ್ನೂ ಗೇಟಿನ ಬಳಿಯೇ ತಡೆಹಿಡಿಯಲಾಯಿತು. ತಮ್ಮ ಬೆಂಬಲಿಗರೊಂದಿಗೆ ರಸ್ತೆಯಲ್ಲಿಯೇ ದಿಗ್ವಿಜಯ ಸಿಂಗ್ ಪ್ರತಿಭಟನೆಗೆ ಕುಳಿತ ಘಟನೆಯೂ ನಡೆಯಿತು.  ಹೋಟೆಲ್ ಪ್ರವೇಶಕ್ಕೆ ಮುಂದಾದ ದಿಗ್ವಿಜಯ ಸಿಂಗ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆದರೆ, ಅದರ ಬೆನ್ನಲ್ಲೇ ರಮಾಡ ಹೋಟೆಲ್​ಗೆ ಆಗಮಿಸಿದ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಬೆಂಬಲಿಗ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಮಂಜುನಾಥ್ ಗೌಡ ರಹಸ್ಯವಾಗಿ ರಮಾಡ ಹೋಟೆಲ್ ಪ್ರವೇಶ ಮಾಡಿದ್ದಾರೆ.  ಇಂದು ಬೆಳಗ್ಗೆಯೇ ರಮಾಡ ರೆಸಾರ್ಟ್​ ಪ್ರವೇಶ ಮಾಡಿರುವ ಮಂಜುನಾಥ್ ಗೌಡ ಅತೃಪ್ತ ಶಾಸಕರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ರೆಸಾರ್ಟ್​​​ನಲ್ಲಿ ಮಧ್ಯಪ್ರದೇಶದ ಕೈ ಶಾಸಕರು; ಡಿಕೆಶಿಯಂತೆಯೇ ಗೇಟ್ ಕಾಯುತ್ತಿರುವ ದಿಗ್ವಿಜಯ್ ಸಿಂಗ್

ಅಧಿವೇಶನವನ್ನು 10 ದಿನಗಳ ಕಾಲ ಮುಂದೂಡಿರುವ ಸ್ಪೀಕರ್ ಆದೇಶವನ್ನು ಪ್ರಶ್ನಿಸಿ ವಿರೋಧಪಕ್ಷವಾದ ಬಿಜೆಪಿ ನಾಯಕರು ಕೋರ್ಟ್​ ಮೆಟ್ಟಿಲೇರಿದ್ದರು. ಆ ಅರ್ಜಿಯ ವಿಚಾರಣೆ ಇಂದು ನಡೆಯಲಿದೆ. ಈಗಾಗಲೇ ಕಾಂಗ್ರೆಸ್ ನಾಯಕರು ಅತೃಪ್ತ ಶಾಸಕರ ಮನವೊಲಿಕೆಗೆ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಇದರಿಂದ ಬಿಜೆಪಿ ನಾಯಕರಿಗೆ ಮತ್ತೊಮ್ಮೆ ಆತಂಕ ಎದುರಾಗಿದೆ.

230 ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಪ್ರಸ್ತುತ 228 ಶಾಸಕರಿದ್ದಾರೆ. ಬಹುಮತಕ್ಕೆ 115 ಸ್ಥಾನಗಳ ಅವಶ್ಯಕತೆ ಇದೆ. ಬಿಎಸ್​ಪಿಯ ಇಬ್ಬರು ಶಾಸಕರು, ಸಮಾಜವಾದಿ ಪಕ್ಷದ ಓರ್ವ ಶಾಸಕ ಹಾಗೂ ನಾಲ್ವರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ 121 ಸದಸ್ಯರ ಬಲದೊಂದಿಗೆ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಆದರೆ, ಇದೀಗ ಪಕ್ಷೇತರರು ಸೇರಿದಂತೆ ಕಾಂಗ್ರೆಸ್​ನ 22 ಶಾಸಕರು ರಾಜೀನಾಮೆ ನೀಡಿದ್ದಾರೆ. ಹಾಲಿ ಕಾಂಗ್ರೆಸ್​ನಲ್ಲಿ ಕೇವಲ 92 ಶಾಸಕರಿದ್ದಾರೆ. ಹೀಗಾಗಿ, ಒಂದುವೇಳೆ ಸಿಎಂ ಕಮಲನಾಥ್​ಗೆ ವಿಶ್ವಾಸಮತ ಯಾಚನೆಗೆ ಸೂಚನೆ ನೀಡಿದರೆ ಸರ್ಕಾರ ಪತನವಾಗುವ ಸಾಧ್ಯತೆ ಹೆಚ್ಚಾಗಿದೆ.
 
First published:March 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading