ಕೋಲಾರ (ಡಿ. 7): ದೇಶಕ್ಕೆ ಮೊದಲು ಚಿನ್ನ ನೀಡಿದ ಜಿಲ್ಲೆಯ 'ಕೋಲಾರ ಗೋಲ್ಡ್ ಫೀಲ್ಡ್ ' ಕೆಜಿಎಫ್ನಲ್ಲಿ ಮತ್ತೆ ಚಿನ್ನ ಗಣಿಗಾರಿಕೆ ಆರಂಭಿಸುವ ದಿನಗಳು ಹತ್ತಿರ ಬಂದಿದೆ. 2001 ರಲ್ಲಿ ನಷ್ಟದ ನೆಪವೊಡ್ಡಿ ಮುಚ್ಚಿದ್ದ ಚಿನ್ನದಗಣಿ ಪ್ರದೇಶದಲ್ಲಿ, ಮತ್ತೆ ಚಿನ್ನದ ಗಣಿಗಾರಿಕೆ ನಡೆಸಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ ಎಂದು ಕೋಲಾರ ಬಿಜೆಪಿ ಸಂಸದ ಎಸ್ ಮುನಿಸ್ವಾಮಿ ತಿಳಿಸಿದ್ದಾರೆ. ಕಳೆದ ಎರಡು ತಿಂಗಳ ಹಿಂದಷ್ಟೆ ಕೇಂದ್ರ ಕಲ್ಲಿದ್ದಲು, ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಅವರ ಸಮ್ಮುಖದಲ್ಲಿ ಸಿಎಂ ಯಡಿಯೂರಪ್ಪ, ಸಂಸದ ಮುನಿಸ್ವಾಮಿ ಸಭೆ ನಡೆಸಿ, ಚಿನ್ನದಗಣಿಯಲ್ಲಿ ಚಿನ್ನ ಲಭ್ಯತೆಯ ಬಗ್ಗೆ ಪರಿಶೋಧನೆ ನಡೆಸಲು ಆದೇಶಿಸಿದ್ದರು. ಅದರಂತೆ, ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿರುವ ಸಂಸ್ಥೆಯೊಂದು ಚಿನ್ನದ ಅದಿರು ಮಾದರಿಯನ್ನು ತೆಗೆದು ಸಂಶೋಧನೆಗೆ ಕಳಿಸಿದ್ದು, ಗಣಿಯಲ್ಲಿ ಹೆಚ್ಚಾಗಿ ಚಿನ್ನ ದೊರೆಯುವ ಅದಿರು ಪತ್ತೆಯಾಗಿದೆಯೆಂದು ಕೇಂದ್ರಕ್ಕೆ ವರದಿ ನೀಡಲಾಗಿದೆ. ಹಾಗಾಗಿ ಗಣಿ ಪುನರ್ ಆರಂಭಿಸುವ ಹೇಳಿಕೆಯನ್ನ ಕೇಂದ್ರ ಸಚಿವರು ನೀಡಿದ್ದು, ಸದ್ಯದಲ್ಲೆ ಅಧಿಕೃತ ಆದೇಶವೂ ಬರಲಿದೆ ಎಂದರು.
ಈ ಬಗ್ಗೆ ನ್ಯೂಸ್ 18 ಕನ್ನಡ ಜೊತೆಗೆ ಮಾತನಾಡಿದ ಸಂಸದ ಮುನಿಸ್ವಾಮಿ, ಸಂಸದರಾಗಿ ಮೊದಲು ಆಯ್ಕೆಯಾದಾಗ ಚಿನ್ನದಗಣಿ ತೆರೆಯಲು ಸಲ್ಲಿಸಿದ್ದ ಮನವಿಯನ್ನ ಪ್ರಧಾನಿ ಮೋದಿಯವರು ಪರಿಗಣಿಸಿದ್ದಾರೆಂದು ಹರ್ಷ ವ್ಯಕ್ತಪಡಿಸಿದ್ದಾರೆ. ಗಣಿ ಪ್ರದೇಶದಲ್ಲಿ ಅಪಾರ ಪ್ರಮಾಣದಲ್ಲಿ ಚಿನ್ನ ಸಿಗುವ ಸಾಧ್ಯತೆಯಿದೆ. ಈ ಹಿಂದೆಯು ಕೆಲ ಖಾಸಗಿ ಕಂಪನಿಗಳು ಗುತ್ತಿಗೆ ನೀಡುವಂತೆ ಮನವಿ ಮಾಡಿತ್ತಾದರು, ಸರ್ಕಾರ ಖಾಸಗಿಯವರಿಗೆ ಗಣಿ ಗುತ್ತಿಗೆ ನೀಡುವ ಪ್ರಸ್ತಾಪವನ್ನ ಪರಿಗಣಿಸಿಲ್ಲ. ಇದೀಗ ಚಿನ್ನದಗಣಿಯನ್ನ ಕೇಂದ್ರ ಸರ್ಕಾರದ ನಿರ್ದೇಶನದಂತೆ ರಾಜ್ಯ ಸರ್ಕಾರವೇ ಆರಂಭಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ ಎಂದರು.
ಇದನ್ನು ಓದಿ: ನಾಳೆ ಶಾಂತಿಯುತ ಭಾರತ್ ಬಂದ್ಗೆ ಕರೆ: ಯಾವೆಲ್ಲಾ ಪಕ್ಷ, ಸಂಘಟನೆಗಳಿಂದ ಬೆಂಬಲ?
ಮುನಿಸ್ವಾಮಿ ಭ್ರಷ್ಟಾಚಾರ ಆರೋಪ
ಕೆಜಿಎಫ್ ಚಿನ್ನದಗಣಿಗೆ ಮೊದಲ ಬಾರಿಗೆ ವಿದ್ಯುತ್ ಪೂರೈಸಿದಾಗ, ಬೆಲೆಬಾಳುವ ಅತ್ಯುತ್ತಮ ಗುಣಮಟ್ಟದ ತಾಮ್ರದ ತಂತಿಗಳನ್ನು ಬಳಸಲಾಗಿತ್ತು, ಆದರೆ ಅಂದಿನ ದಿನಗಳಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ತಾಮ್ರದ ತಂತಿಗಳನ್ನು ಕಳುವು ಮಾಡಲಾಗಿದೆ. ಅಷ್ಟೇ ಅಲ್ಲದೆ ಚಿನ್ನದ ಗಣಿ ಕಚೇರಿಯಲ್ಲಿ ಪ್ರದರ್ಶನಕ್ಕೆ ಇಡಲಾಗಿದ್ದ ಚಿನ್ನದ ಅಚ್ಚುಗಳನ್ನ ಕಳುವು ಮಾಡಲಾಗಿದೆ .ಇದೆಲ್ಲಾ ಮಾಜಿ ಸಂಸದರ ಆಳ್ವಿಕೆಯಲ್ಲೇ ನಡೆದಿದೆ ಎಂದು ಮಾಜಿ ಸಂಸದ ಕೆಎಚ್ ಮುನಿಯಪ್ಪ ವಿರುದ್ಧ ಗಂಭೀರ ಆರೋಪ ಮಾಡಿದರು.
ಕೆಜಿಎಫ್ ಚಿನ್ನದಗಣಿ ಪ್ರದೇಶದಲ್ಲಿ 86 ಮಂದಿಯ ಹೆಸರಲ್ಲಿ 3,200 ಎಕರೆ ಪ್ರದೇಶವನ್ನು ಕಬಳಿಸಲು ಆರ್ ಟಿಸಿ ಮೂಲಕ ಪ್ರಯತ್ನ ಮಾಡಲಾಗಿದೆ. ಮಾಜಿ ಸಂಸದರು 7 ಬಾರಿ ಸಂಸದ ರಾಗಿ ಆಯ್ಕೆಯಾಗಿ ತಮ್ಮ ಕುಟುಂಬಕ್ಕೆ ಮಾತ್ರ ಎಲ್ಲಾ ಸೌಲಭ್ಯಗಳನ್ನು ಕೊಡಿಸಿ, ಕುಟುಂಬವನ್ನು ಮಾತ್ರ ಬೆಳೆಸಿಕೊಂಡಿದ್ದಾರೆ. ಇದೀಗ ಜನರು ಅಂತವರನ್ನ ಚುನಾವಣೆಯಲ್ಲಿ ತಿರಸ್ಕರಿಸಿದ್ದಾರೆ, ಸದ್ಯ ಮಾಜಿ ಸಂಸದರಾಗಿರುವ ಮುನಿಯಪ್ಪ, ಮುಳಬಾಗಿಲು ತಾಲೂಕಿನ ಗ್ರಾಮ ಪಂಚಾಯಿತಿ ಚುನಾವಣೆ ಉಸ್ತುವಾರಿಯನ್ನು ನೋಡಿಕೊಳುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ