• Home
  • »
  • News
  • »
  • state
  • »
  • ಟೊಯೋಟಾ ಕಂಪನಿ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ: ಕಾರ್ಮಿಕರ ಹೋರಾಟಕ್ಕೆ ನನ್ನ ಬೆಂಬಲ ಎಂದು ಘೋಷಣೆ

ಟೊಯೋಟಾ ಕಂಪನಿ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ: ಕಾರ್ಮಿಕರ ಹೋರಾಟಕ್ಕೆ ನನ್ನ ಬೆಂಬಲ ಎಂದು ಘೋಷಣೆ

ಸಂಸದ ಡಿ ಕೆ ಸುರೇಶ್

ಸಂಸದ ಡಿ ಕೆ ಸುರೇಶ್

ಜಪಾನ್‌ನಿಂದ ಬಂದು ಇಲ್ಲಿ ನಮ್ಮ ರೈತರ ಮಕ್ಕಳ ಜೀವನದಲ್ಲಿ ಆಟವಾಡುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾನು ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ. ಅವರ ಎಲ್ಲಾ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ

  • Share this:

ರಾಮನಗರ(ಡಿಸೆಂಬರ್​.23): ಟೊಯೋಟಾ ಕಿರ್ಲೋಸ್ಕರ್ ಕಂಪನಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಒಕ್ಕೂಟದ ಜಗಳ ಕಳೆದ ಸುಮಾರು ದಿನಗಳಿಂದ ನಡೆಯುತ್ತಿದೆ. ಇದೇ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ ಆಡಳಿತ ಮಂಡಳಿಯ ಜೊತೆಗೆ ಸಂಧಾನ ಸಭೆ ನಡೆಸಿದರು. ಆದರೆ ಸಭೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡದೇ ಸಭೆ ವಿಫಲವಾಯ್ತು. ಡಿ.ಕೆ.ಸುರೇಶ್ ಕೂಡ ಟೊಯೋಟಾ ವಿರುದ್ಧ ಕಿಡಿಕಾರಿದ್ದಾರೆ. ಕಾರ್ಮಿಕರು ಸಹ ಹೋರಾಟ ಮುಂದುವರೆಸಿದ್ದಾರೆ. ರಾಮನಗರ ಜಿಲ್ಲೆ ಬಿಡದಿ ಕೈಗಾರಿಕ ಪ್ರದೇಶದಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಹಾಗೂ ಕಾರ್ಮಿಕ ಒಕ್ಕೂಟದ ನಡುವೆ ಕಳೆದ 45 ದಿನಗಳಿಂದ ಹಗ್ಗಜಗ್ಗಾಟ ನಡೆಯುತ್ತಿದೆ. ಕಂಪನಿಯ ವಿರುದ್ಧ ಕಾರ್ಮಿಕರು ಮುಷ್ಕರಕ್ಕೆ ಮುಂದಾಗಿದ್ದಾರೆ. ಕಾರ್ಮಿಕರ ಹೋರಾಟ ವಿರೋಧಿಸಿ ಕಂಪನಿ ಈಗಾಗಲೇ 65 ಜನ ಕಾರ್ಮಿಕರನ್ನ ಕೆಲಸದಿಂದಲೇ ಅಮಾನತ್ತು ಮಾಡಿದೆ. ಈ ಕಾರಣ ಸಂಸದ ಡಿ.ಕೆ.ಸುರೇಶ್ ಬಿಡದಿಯ ಈಗಲ್ ರೆಸಾರ್ಟ್‌ನಲ್ಲಿ ಟೊಯೋಟಾ ಆಡಳಿತ ಮಂಡಳಿಯ ಪ್ರಮುಖರ ಸಭೆ ನಡೆಸಿದರು.


ಸರಿಸುಮಾರು 2 ಗಂಟೆಗಳ ಕಾಲ ಸಭೆ ನಡೆಸಿದರು ಸಹ ಆಡಳಿತ ಮಂಡಳಿಯವರು ಕಾರ್ಮಿಕರ ಜೊತೆ ರಾಜೀಯಾಗಲು ಒಪ್ಪಿಲ್ಲ. ಈ ಹಿನ್ನೆಲೆ ಸಭೆಯ ನಂತರ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಟೊಯೋಟಾದವರಿಗೆ ಎಷ್ಟೇ ಮನವಿ ಮಾಡಿದರು ಒಪ್ಪುತ್ತಿಲ್ಲ. ಅವರು ಸಂಪೂರ್ಣವಾಗಿ ಕಾರ್ಮಿಕ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಇದನ್ನ ಬಗೆಹರಿಸುವುದಕ್ಕೆ ಮುಂದಾಗಿಲ್ಲ. ಜಪಾನ್‌ನಿಂದ ಬಂದು ಇಲ್ಲಿ ನಮ್ಮ ರೈತರ ಮಕ್ಕಳ ಜೀವನದಲ್ಲಿ ಆಟವಾಡುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ನಾನು ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ. ಅವರ ಎಲ್ಲಾ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟಪಡಿಸಿದರು.


ಇನ್ನು ಇದೇ ವಿಚಾರವಾಗಿ ಕಾರ್ಮಿಕ ಒಕ್ಕೂಟದವರು ಮಾತನಾಡಿ ಸಂಸದ ಡಿ.ಕೆ.ಸುರೇಶ್‌ರವರು ನಮ್ಮ ಪರವಾಗಿ ಬಂದು ಸಂಧಾನ ಮಾಡಿಸಲು ಸಭೆ ಮಾಡಿದ್ದಾರೆ. ಆದರೆ ಆಡಳಿತಮಂಡಳಿಯವರು ಮಾತ್ರ ಯಾವುದಕ್ಕೂ ಒಪ್ಪುತ್ತಿಲ್ಲ. ಜೊತೆಗೆ ಇವತ್ತಿನ ಸಭೆಗೆ ನಮ್ಮನ್ನ ಸೇರಿಸಲು ನಿರಾಕರಿಸಿದ್ದಾರೆ. ಇದರಿಂದಲೇ ಗೊತ್ತಾಗುತ್ತೆ ಕಾರ್ಮಿಕ ವಿರೋಧಿ ನೀತಿಯನ್ನ ಕಂಪನಿಯ ಆಡಳಿತ ಮಂಡಳಿಯವರು ಎಷ್ಟು ಅನುಸರಿಸುತ್ತಿದ್ದಾರೆಂದು. ಹಾಗಾಗಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹೋರಾಟ ನಡೆಸುತ್ತೇವೆ. ನಮಗೆ ನ್ಯಾಯಸಿಗುವರೆಗೂ ಹೋರಾಟ ಮಾಡುತ್ತೇವೆ ಎಂದು ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಚಕ್ಕೆರೆ ಪ್ರಸನ್ನ ಸ್ಪಷ್ಟಪಡಿಸಿದರು.


ಒಟ್ಟಾರೆ ರಾಜ್ಯ ಸರ್ಕಾರ ಕಾರ್ಮಿಕರ ಪರವಾಗಿ ನಿಲ್ಲುತ್ತಿಲ್ಲ, ಬದಲಾಗಿ ಬಂಡವಾಳಶಾಹಿ ಪರವಾಗಿ ನಿಲ್ಲುತ್ತದೆ. ದೇಶದಲ್ಲಿ ಕಾರ್ಮಿಕರ ಪರವಾಗಿ ಇದ್ದ ಎಲ್ಲಾ ಕಾಯ್ದೆಗಳು ಬಂಡವಾಳಶಾಹಿಗಳ ಪರವಾಗಿ ಆಗಿವೆ. ಎಂದು ಸಂಸದ ಡಿ.ಕೆ.ಸುರೇಶ್ ಬೇಸರ ವ್ಯಕ್ತಪಡಿಸಿದರು.


ಇನ್ನು ಬ್ರಿಟನ್ ನ ನೂತನ ವೈರಸ್ ಹರಡುವಿಕೆ ಹಿನ್ನೆಲೆ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ವಿಚಾರವಾಗಿ ಸಿಎಂ ಯಡಿಯೂರಪ್ಪನವರು ಆದೇಶ ಮಾಡಿದ್ದಾರೆ. ಆದರೆ ನೈಟ್ ಕರ್ಫ್ಯೂಗಿಂತ ಫುಲ್ ಕರ್ಫ್ಯೂ ಮಾಡಲಿ. ವ್ಯಾಕ್ಸಿನೇಷನ್ ಬಂದಿದೆ ಅಂದಮೇಲೆ ನೈಟ್ ಕರ್ಫ್ಯೂ ಯಾಕೆ ಎಂದು ಡಿ.ಕೆ.ಸುರೇಶ್ ವ್ಯಂಗ್ಯವಾಡಿದರು.


ಇನ್ನು ವಾಕ್ಸಿನೇಷನ್ ಬಂದ ಮೇಲೆ ಬೇರೆ ವೈರಸ್ ಹೇಗೆ ಬರುತ್ತೆ. ಹಾಗಾಗಿ  ವಾಕ್ಸಿನೇಷನ್ ಫೇಲ್ ಆಗಿದೆ, ಈಗ ಸರ್ಕಾರ ವಾಕ್ಸಿನೇಷನ್ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ, ಜನರನ್ನ ಹೆದರಿಸುತ್ತಿದೆ ಅಷ್ಟೇ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.


ವರದಿ: ಎ.ಟಿ.ವೆಂಕಟೇಶ್

Published by:G Hareeshkumar
First published: