ಬೆಂಗಳೂರು: ಮಾರ್ಚ್ 12ರಂದು ಬೆಂಗಳೂರು-ಮೈಸೂರು ದಶಪಥ (Bengaluru-Mysuru Expressway) ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಲೋಕಾರ್ಪಣೆಗೊಳಿಸಿದ್ದರು. ಉದ್ಘಾಟನೆಯಾದ ಮರುದಿನದಿಂದಲೇ ಟೋಲ್ ಸಂಗ್ರಹಕ್ಕೆ (Toll Collection) ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದಕ್ಕೆ ಸ್ಥಳೀಯರು ಸೇರಿದಂತೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದರು. ಕನ್ನಡ ಪರ ಸಂಘಟನೆಗಳು ಟೋಲ್ (Toll Plaza) ಬಳಿ ಬಂದು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಯನ್ನು ಸಹ ನಡೆಸಿದ್ದವು. ಅತಿಯಾದ ಟೋಲ್ ದರ (Toll Fee) ಹಾಕುತ್ತಿರೋದಕ್ಕೆ ವಾಹನ ಸವಾರರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇದೀಗ ಟೋಲ್ ದರ ತಪ್ಪಿಸಿಕೊಳ್ಳಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಇದರಿಂದ ಎನ್ಹೆಚ್ಎಐಗೆ (NHAI) ಹೊಸ ತಲೆನೋವು ಶುರುವಾಗಿದೆ.
ಹೌದು, ಬಹುತೇಕ ವಾಹನ ಸವಾರರು ಟೋಲ್ ತಪ್ಪಿಸಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಟೋಲ್ ಸಮೀಪ ಸರ್ವಿಸ್ ರಸ್ತೆಗೆ ತೆರಳಿ ಮುಂದೆ ಸ್ವಲ್ಪ ಕ್ರಮಿಸಿ ನಂತರ ಪ್ರಮುಖ ರಸ್ತೆಗೆ ಸೇರಿಕೊಳ್ಳುತ್ತಿದ್ದಾರೆ. ಇದರಿಂದ ಕೆಣಿಮಿಣಿಕಿ ಬಳಿಯ ಟೋಲ್ ಪ್ಲಾಜಾದಿಂದ ಸುಂಕ ಕಟ್ಟುವುದನ್ನು ವಾಹನ ಸವಾರರು ತಪ್ಪಿಸಿಕೊಂಡಿದ್ದಾರೆ. ಪ್ರತಿಭಟನೆಯ ಬಿಸಿ ನಡುವೆ ಆದಾಯ ನಷ್ಟದ ಅತಂಕ ಹೆದ್ದಾರಿ ಪ್ರಾಧಿಕಾರಕ್ಕೆ ಉಂಟಾಗಿದೆ.
ಈ ಬಗ್ಗೆ ದಿ ಹಿಂದೂ ಜೊತೆ ಮಾತನಾಡಿರುವ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ ಯೋಜನಾ ನಿರ್ದೇಶಕ ಬಿ.ಟಿ.ಶ್ರೀಧರ್, ಮಾರ್ಚ್ 15ರಂದು ಬೆಳಗಿನ ಜಾವ ಕೆಲ ಅಪರಿಚಿತರು ಕೆಣಿಮಿಣಿಕೆ ಟೋಲ್ ಪ್ಲಾಜಾ ಬಳಿಯಲ್ಲಿರುವ ಸರ್ವಿಸ್ ರಸ್ತೆಯನ್ನು ತೆರೆದಿದ್ದಾರೆ ಎಂದು ಹೇಳಿದ್ದಾರೆ.
ಎಡ ತಿರುವು ಪಡೆದು ಸರ್ವಿಸ್ ರಸ್ತೆ ಬಳಕೆ
ಕುಂಬಳಗೋಡು ಮೇಲ್ಸೇತುವೆಯಿಂದ ಬರುವ ವಾಹನ ಸವಾರರು ಟೋಲ್ ಪ್ಲಾಜಾಕ್ಕಿಂತ ಮೊದಲು ಎಡ ತಿರುವು ತೆಗೆದುಕೊಳ್ಳುತ್ತಾರೆ. ಸ್ವಲ್ಪ ದೂರದವರೆಗೆ ಸರ್ವಿಸ್ ರಸ್ತೆ ಬಳಸಿ ವಾಹನ ಸವಾರರು ಮುಖ್ಯರಸ್ತೆಗೆ ಮರುಳುತ್ತಿದ್ದಾರೆ. ಇದರಿಂದ ಆದಾಯ ನಷ್ಟ ಆಗುತ್ತಿದೆ. ಮುಖ್ಯ ಮಾರ್ಗವನ್ನು ಬಳಸುವ ವಾಹನ ಸವಾರರು ನಿರ್ದಿಷ್ಟಪಡಿಸಿದ ಟೋಲ್ ಶುಲ್ಕವನ್ನು ಪಾವತಿಸಬೇಕು.
ಅನಧಿಕೃತ ರಸ್ತೆ ಬಂದ್ ಮಾಡಲಾಗುವುದು
ನ್ಯಾಯಾಲಯದ ತಡೆಯಾಜ್ಞೆಯಿಂದಾಗಿ ಕ್ರೈಸ್ಟ್ ಇನ್ಸ್ಟಿಟ್ಯೂಟ್ ಬಳಿಯ ಸರ್ವಿಸ್ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕಾನೂನು ಅಡೆತಡೆಗಳಿಂದಾಗಿ ಮೂರು ವರ್ಷಗಳ ಕೇವಲ 100 ಮೀಟರ್ ರಸ್ತೆಯನ್ನು ಮಾಡಲಾಗಿಲ್ಲ. ಸದ್ಯ ನ್ಯಾಯಾಲಯದ ತಡೆಯಾಜ್ಞೆಯನ್ನು ತೆರವುಗೊಳಿಸಲಾಗಿದೆ. ಶೀಘ್ರದಲ್ಲಿಯೇ ಸರ್ವಿಸ್ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಮತ್ತು ಅನಧಿಕೃತ ರಸ್ತೆಗಳನ್ನು ಮುಚ್ಚಲಾಗುವುದು ಎಂದು ಬಿ.ಟಿ.ಶ್ರೀಧರ್ ಹೇಳಿದ್ದಾರೆ.
ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಟೋಲ್ ಸಂಗ್ರಹ ಕಾರ್ಯ ಆರಂಭವಾದ ಹಿನ್ನೆಲೆ ರಾಜ್ಯ ಸಾರಿಗೆ ಸಂಸ್ಥೆ ಪ್ರಯಾಣ ದರವನ್ನು ಹೆಚ್ಚಳ ಮಾಡಿದೆ. ಈ ದರ ಏರಿಕೆ ಬೆಂಗಳೂರು-ಮೈಸೂರು ಹೆದ್ದಾರಿಯ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದೆ.
ಬೆಂಗಳೂರು-ನಿಡಘಟ್ಟ ಮಧ್ಯದಲ್ಲಿಮ ಕೆಣಿಮಿಣಿಕೆ ಟೋಲ್ ಮುಖಾಂತರ ಸಂಚರಿಸುವ ಬಸ್ಗಳು ಬೆಲೆ ಏರಿಕೆ ಮಾಡಿವೆ. ಮಂಗಳವಾರದಿಂದಲೇ ಬೆಲೆ ಏರಿಕೆ ಮಾಡಲಾಗಿದೆ ಎಂದು ಸಾರಿಗೆ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: Bengaluru Mysuru Expresswayನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ; ಇದುವರೆಗೂ 84 ಪ್ರಯಾಣಿಕರು ಸಾವು!
ಎಷ್ಟು ದರ ಏರಿಕೆ?
ಕರ್ನಾಟಕ ಸಾರಿಗೆ ಬಸ್ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೆ ತಲಾ 15 ರೂ. ರಾಜಹಂಸ ಬಸ್ ಪ್ರಯಾಣಕ್ಕೆ ತಲಾ 18 ರೂ ಮತ್ತು ಮಲ್ಟಿ ಆಕ್ಸೆಲ್ ಬಸ್ಗಳಲ್ಲಿ ತಲಾ 20 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಈ ಪ್ರಯಾಣ ದರ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇಗಳಲ್ಲಿ ಸಂಚರಿಸುವ ವಾಹನಗಳಿಗೆ ಮಾತ್ರ ಅನ್ವಯಿಸುತ್ತದೆ. ಮೊದಲಿನಿಂದಲೂ ಟೋಲ್ ರಸ್ತೆಯಲ್ಲಿ ಈ ಪದ್ಧತಿ ಅನುಸರಿಸಲಾಗ್ತಿದೆ ಎಂದು ಮುಖ್ಯ ಸಂಚಾರ ವ್ಯವಸ್ಥಾಪಕರು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ