ವಿಜಯಪುರ (ಡಿ. 18): ಅತ್ತೆ ಸೊಸೆ ಎಂಬ ಇಬ್ಬರು ಒಂದೇ ಮನೆಯ ವಿರುದ್ಧ ದಿಕ್ಕುಗಳಿದ್ದಂತೆ. ಅವರು ಎಂದು ಸಂದಿಸುವುದಿಲ್ಲ ಎಂಬ ಆಪಾದನೆ ಇದೆ. ಇದೇ ಕಾರಣಕ್ಕೆ ಮನೆಯ ಅಧಿಪತ್ಯ ಸಾಧಿಸಿದಲೂ ಇವರಿಬ್ಬರು ಸದಾ ಪೈಪೋಟಿ ಮಾಡುತ್ತಿರುತ್ತಾರೆ. ಈ ಅತ್ತೆ-ಸೊಸೆ ಕಾದಾಟ ಈಗ ಗ್ರಾಮ ಪಂಚಾಯತ್ ವರೆಗೂ ತಲುಪಿದ್ದು, ಸೊಸೆ ವಿರುದ್ಧ 72 ವರ್ಷದ ಅತ್ತೆ ಸ್ಪರ್ಧಿಸುವ ಮೂಲಕ ಪೈಪೋಟಿಗೆ ಇಳಿದಿರುವ ರೋಚಕ ಸನ್ನಿವೇಶ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಡಗಾನೂರ ಗವ್ಯಾಪ್ತಿಯ ಲಕ್ಕುಂಡಿ ಗ್ರಾಮ ಪಂಚಾಯಿತಿಯಲ್ಲಿ ನಡೆದಿದೆ. ಇಲ್ಲಿನ 6ನೇ ವಾರ್ಡು ಈ ಬಾರಿ ಎಲ್ಲರ ರೋಚಕ ಕಣವಾಗಿದೆ. ಇಲ್ಲಿ ಮಹಿಳೆಯರಿಗೆ ಮೀಸಲಾಗಿರುವ ಒಂದು ಸ್ಥಾನಕ್ಕೆ ಸೊಸೆಯ ವಿರುದ್ಧ 72 ವರ್ಷದ ಅತ್ತೆ ಕಣಕ್ಕಿಳಿಯುವ ಮೂಲಕ ರಾಜಕೀಯದ ಅದೃಷ್ಠ ಪರಿಕ್ಷೆಗೆ ಮುಂದಾಗಿದ್ದಾರೆ.
ನಿರ್ಮಲಾ ಬಸನಗೌಡ ಪಾಟೀಲ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿದ್ದು, ಈಗ ಎರಡನೇ ಬಾರಿಗೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇವರು ಆಯ್ಕೆಯಾಗುವುದಕ್ಕಿಂತಲೂ ಮುಂಚೆ ಇವರ ಪತಿ ಬಸನಗೌಡ ಪಾಟೀಲ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ನಂತರ ಮೀಸಲಾತಿ ಬದಲಾದ ಹಿನ್ನೆಲೆಯಲ್ಲಿ ಪತ್ನಿಯನ್ನು ಕಣಕ್ಕಿಳಿಸಿದ್ದರು. ಈಗ ಮತ್ತೆ ಸತತ ಎರಡನೇ ಬಾರಿ ಪತ್ನಿಯನ್ನು ಕಣಕ್ಕಿಳಿಸಿದ್ದಾರೆ. ಅಲ್ಲದೇ, ತಾವು ಕಳೆದ 10 ವರ್ಷದ ಅವಧಿಯಲ್ಲಿ ಮಾಡಿರುವ ಜನಪರ ಕಾರ್ಯಗಳು ತಮ್ಮನ್ನು ಕೈ ಹಿಡಿಯಲಿವೆ. ಮೊದಲ 5 ವರ್ಷ ನಾನು ಮತ್ತು ನಂತರ 5 ವರ್ಷ ಪತ್ನಿ ಸದಸ್ಯರಾಗಿ ಕೆಲಸ ಮಾಡಿದ್ದೇವೆ. ಗ್ರಾಮದಲ್ಲಿ ರಸ್ತೆ, ನೀರು, ವಿದ್ಯುತ್, ಚರಂಡಿ, ಶಾಲಾ ಕಂಪೌಂಡ್, ಸಿಸಿ ರಸ್ತೆ, ಅಂಗನವಾಡಿ, ಗೋಡೌನ್ ಸೇರಿದಂತೆ ನಾನಾ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಹಳ್ಳಿಗೆ ಮೂಲಭೂತ ಸೌಕರ್ಯ ಒದಗಿಸಿದ ಸಂತೃಪ್ತಿಯಿದ್ದು, ಈಗ ನನ್ನ ಪತ್ನಿಯ ಪ್ರತಿಸ್ಪರ್ಧಿಯಾಗಿ ನಮ್ಮ ದೊಡ್ಡಮ್ಮನನ್ನು ಕಣಕ್ಕಿಳಿಸಿದ್ದಾರೆ. ಇದು ಸೊಸೆ ಮತ್ತು ಅತ್ತೆಯ ನಡುವಿನ ಸ್ಪರ್ಧೆ. ಇದರಲ್ಲಿ ಜಯಗಳಿಸುತ್ತೇವೆ ಎಂದು ಅಭ್ಯರ್ಥಿಯ ಪತಿ ಬಸನಗೌಡ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸೊಸೆಯ ವಿರುದ್ಧ 72 ವರ್ಷದ ಅತ್ತೆ ಗಂಗಮ್ಮ ರುದ್ರಗೌಡ ಪಾಟೀಲ ಕಣಕ್ಕಿಳಿದಿದ್ದಾರೆ. ಗ್ರಾಮಸ್ಥರು ತಮ್ಮನ್ನು ಒತ್ತಾಯ ಪೂರ್ವಕವಾಗಿ ಚುನಾವಣೆ ಕಣಕ್ಕಿಳಿಸಿದ್ದಾರೆ. ಗೆಲ್ಲಿಸುವುದಾಗಿ ಭರವಸೆಯನ್ನೂ ನೀಡಿದ್ದಾರೆ. ಸೊಸೆಯ ವಿರುದ್ಧ ಗೆಲುವು ತಮ್ಮದೇ ಎಂದು ಅತ್ತೆ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಓಎಲ್ಎಕ್ಸ್ ನಲ್ಲಿ ವಾರಣಾಸಿಯ ಪ್ರಧಾನಿ ಮೋದಿ ಕಚೇರಿ ಮಾರಾಟಕ್ಕೆ ಯತ್ನ: ನಾಲ್ವರ ಬಂಧನ
ಈ ಗ್ರಾಮ ಪಂಚಾಯಿತಿಯಲ್ಲಿ ಇವರು ಸ್ಪರ್ಧಿಸಿರುವ ವಾರ್ಡಿನಲ್ಲಿ ಇವರಿಬ್ಬರೆ ಅಭ್ಯರ್ಥಿಗಳಾಗಿದ್ದಾರೆ. ಹೀಗಾಗಿ ಇಲ್ಲಿ ಸೊಸೆ ಮತ್ತು ಅತ್ತೆಯ ಮಧ್ಯೆ ನೇರಾ ಹಣಾಹಣಿ ಸ್ಪರ್ಧೆ ಏರ್ಪಟ್ಟಿದೆ. ಇಲ್ಲಿ ಯಾರೇ ಆಯ್ಕೆಯಾದರೂ ಒಂದೇ ಕುಟಂಬಕ್ಕೆ ಸೇರಿದವರು ಜಯಗಳಿಸಿದಂತಾಗುತ್ತದೆ. ಗೆದ್ದರೆ ಸೊಸೆ ಗೆಲ್ಲಬೇಕು, ಇಲ್ಲದಿದ್ದರೆ ಅತ್ತೆ ಗ್ರಾಮ ಪಂಚಾಯಿತಿಯ ನೂತನ ಸದಸ್ಯೆಯಾಗಬೇಕು.
ಈ ಚುನಾವಣೆಯಲ್ಲಿ ಶತಾಯಗತಾಯ ಗೆಲ್ಲಲೇಬೇಕು ಎಂದು ಪಣತೊಟ್ಟಿರುವ ಸೊಸೆ ಮತ್ತು ಅತ್ತೆ ಬಿರುಸಿನ ಪ್ರಚಾರವನ್ನೂ ಕೈಗೊಂಡಿದ್ದಾರೆ. ಮತದಾರರ ಯಾರಿಗೆ ಮನ್ನಣೆ ನೀಡುತ್ತಾರೆ, ಅದೃಷ್ಠ ಲಕ್ಷ್ಮಿ ಯಾರ ಕೈ ಹಿಡಿಯುತ್ತಾಳೆ ಎಂಬುದು ಚುನಾವಣೆ ಫಲಿತಾಂಶದ ನಂತರವಷ್ಟೆ ಗೊತ್ತಾಗಲಿದೆ.
(ವರದಿ: ಮಹೇಶ್ ವಿ ಶೆಟಗಾರ್)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ