HOME » NEWS » State » MORNING DIGEST HERE IS IMPORTANT NEWS OF THIS DAY JUNE 22TH LG

Morning Digest: ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ತಜ್ಞರ ಸಲಹೆ, ರಾಜ್ಯದಲ್ಲಿ ತಗ್ಗಿದ ಮಳೆಯ ಪ್ರಮಾಣ: ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

news18-kannada
Updated:June 22, 2021, 8:29 AM IST
Morning Digest: ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ತಜ್ಞರ ಸಲಹೆ, ರಾಜ್ಯದಲ್ಲಿ ತಗ್ಗಿದ ಮಳೆಯ ಪ್ರಮಾಣ: ಇಂದಿನ ಪ್ರಮುಖ ಸುದ್ದಿಗಳಿವು
ಸಾಂದರ್ಭಿಕ ಚಿತ್ರ
  • Share this:
1.ಶಾಲೆ ಆರಂಭಿಸುವಂತೆ ಸರ್ಕಾರಕ್ಕೆ ತಜ್ಞರ ಸಲಹೆ

ಕೊರೋನಾ ಸಾಂಕ್ರಾಮಿಕದ ನಡುವೆ ಶಾಲಾ ಕಾಲೇಜುಗಳನ್ನು ತೆರೆದು ಶೈಕ್ಷಣಿಕ ವರ್ಷ ಆರಂಭಿಸುವ ಸಂಬಂಧ ಇಂದು ಮಧ್ಯಾಹ್ನ 12.15 ಕ್ಕೆ ಡಾ. ದೇವಿ ಪ್ರಸಾದ್ ನೇತೃತ್ವದ ಸಮಿತಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ತನ್ನ ಮಧ್ಯಂತರ ವರದಿಯನ್ನು ಸಲ್ಲಿಸಲಿದೆ. ನ್ಯೂಸ್​18 ಕನ್ನಡಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ ತಜ್ಞರ ಸಮಿತಿಯು ಶಾಲೆಗಳ ಪುನರಾರಂಭಕ್ಕೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ. ಸತತ ಎರಡು ಅಥವಾ ಮೂರು ವರ್ಷ ಶಾಲೆ-ಕಾಲೇಜುಗಳು ಆರಂಭವಾಗದೆ ಇದ್ದರೆ, ಮಕ್ಕಳ ಶೈಕ್ಷಣಿಕ ಭವಿಷ್ಯದ ಮೇಲಾಗಬಹುದಾದ ಪರಿಣಾಮವನ್ನು ಮನಗಂಡು ತಜ್ಞರ ಸಮಿತಿ ಶಾಲೆಗಳ ಆರಂಭಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹಿರಿಯ ಸಚಿವರು ಮತ್ತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಇಂದು ಶಾಲೆಗಳನ್ನು ತೆರೆಯುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇದಲ್ಲದೆ, ತಜ್ಞರ ಸಮಿತಿಯು ಶಾಲೆ ಆರಂಭಕ್ಕೆ ಸಂಬಂಧಿಸಿದಂತೆ ಸರ್ಕಾರಕ್ಕೆ ಹಲವು ಸಲಹೆಗಳನ್ನೂ ಸಹ ಸರ್ಕಾರಕ್ಕೆ ನೀಡಿದೆ.

2. ಒಂದೇ ದಿನದಲ್ಲಿ 80 ಲಕ್ಷ ಜನರಿಗೆ ಲಸಿಕೆ ವಿತರಣೆ

ಕೇಂದ್ರದ ಹೊಸ ಲಸಿಕೆಯ ಪರಿಷ್ಕೃತ ನೀತಿಯ ಮೊದಲ ದಿನವೇ ದೇಶ ದಾಖಲೆ ಬರೆದಿದೆ. ಒಂದೇ ದಿನದಲ್ಲಿ ದೇಶಾದ್ಯಂತ ಸುಮಾರು 80 ಲಕ್ಷದ 96 ಸಾವಿರ ಲಸಿಕೆಗಳನ್ನು ದೇಶದ ಜನರಿಗೆ ನೀಡಲಾಗಿದೆ. ಒಂದೇ ದಿನದಲ್ಲಿ ಇಷ್ಟು ಪ್ರಮಾಣದ ಲಸಿಕೆ ವಿತರಣೆ ನಡೆದಿರುವ ವಿಶ್ವದಲ್ಲಿಯೇ ಮೊದಲು ಎಂದು ಕೂಡ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ಸೋಮವಾರದಿಂದ ಎಲ್ಲಾ ವಯೋಮಾನದವರಿಗೆ ಉಚಿತ ಲಸಿಕೆ ವಿತರಣೆ ಆರಂಭಿಸಿದೆ. ದಾಖಲೆ ಮಟ್ಟದ ಲಸಿಕೆ ವಿತರಣೆ ನಡೆದಿರುವ ಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಂತಸ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ. ಕೋವಿಡ್​ 19 ವಿರುದ್ಧ ಹೋರಾಡಲು ಇರುವ ಪ್ರಬಲ ಅಸ್ತ್ರ ಎಂದರೆ ಅದು ಲಸಿಕೆ ಆಗಿದೆ. ಲಸಿಕೆ ಪಡೆದವರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

3. ತಗ್ಗಿದ ಮಳೆಯ ಪ್ರಮಾಣ; ಮಲೆನಾಡು, ಕರಾವಳಿಯಲ್ಲಿ ಹಳದಿ ಅಲರ್ಟ್ ಘೋಷಣೆ

ಸತತವಾಗಿ ಒಂದು ವಾರಗಳ ಕಾಲ ಅಬ್ಬರಿಸಿದ್ದ ಮಳೆರಾಯ ಕಳೆದರೆಡು ದಿನಗಳಿಂದ ಕೊಂಚ ಬಿಡುವು ಪಡೆದಿದ್ದಾನೆ. ಆದರೂ, ಇಂದು ಕೂಡ ಮಳೆ ಮುಂದುವರೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು, ದಕ್ಷಿಣ ಒಳನಾಡಿನಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ. ಹೀಗಾಗಿ, ಈ ಭಾಗಗಳಲ್ಲಿ ಇಂದು ಹಳದಿ ಅಲರ್ಟ್​ ಘೋಷಿಸಲಾಗಿದೆ. ಕರಾವಳಿ ತೀರದ ಜಿಲ್ಲೆಗಳಲ್ಲಿ ಸುಮಾರು 10 ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿತ್ತು. ಇದೀಗ 2 ದಿನಗಳಿಂದ ಮಳೆ ಕೊಂಚ ಕಡಿಮೆಯಾಗಿದ್ದು, ಇಂದು ಸಾಧಾರಣ ಮಳೆಯಾಗುವ ಸಾಧ್ಯತೆ ಇರುವುದರಿಂದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹಳದಿ ಅಲರ್ಟ್​ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉತ್ತರ ಕರ್ನಾಟಕದ ಕೃಷ್ಣಾ ಮತ್ತು ಘಟಪ್ರಭಾ ನದಿ ತೀರಗಳಲ್ಲಿ ನೀರಿನ ಹರಿವು ಹೆಚ್ಚಾಗಿ, ಪ್ರವಾಹದ ಭೀತಿ ಎದುರಾಗಿದೆ.

4.Bangalore: ಬೆಂಗಳೂರಿನ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ಹೆಲಿಪೋರ್ಟ್ ನಿರ್ಮಾಣಕ್ಕೆ ಸರ್ಕಾರ‌ ಅಸ್ತುಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ 6 ಹೆಲಿಕಾಪ್ಟರ್ ಗಳು ಒಟ್ಟಿಗೆ ಲ್ಯಾಂಡಿಂಗ್ ಹಾಗೂ ಟೇಕಾಫ್ ಆಗಲು ಅಗತ್ಯ ಮೂಲಭೂತ ಸೌಕರ್ಯ ಅಭಿವೃದ್ಧಿಪಡಿಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಯಿತು. ದೇಶ ವಿದೇಶ ಹಾಗೂ ಹೊರ ರಾಜ್ಯಗಳಿಂದ ರಾಜಧಾನಿ ಬೆಂಗಳೂರಿಗೆ ಆಗಮಿಸುವ ಪ್ರವಾಸಿಗರು ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಿಂದ ರಾಜ್ಯದ ಇತರೆ ಜಿಲ್ಲೆಗಳು ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳಿಗೆ ತೆರಳಲು ಅನುಕೂಲ ಮಾಡಿಕೊಡುವ ದೃಷ್ಠಿಯಿಂದ ಈ ಯೋಜನೆಯನ್ನು ರೂಪಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ ರವರು ಸಭೆಯಲ್ಲಿ ತಿಳಿಸಿದರು.

5. ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ ಮತ್ತು ಬೆಳ್ಳಿ ಬೆಲೆ
ಮೂರ್ನಾಲ್ಕು ದಿನಗಳಿಂದ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತವಾಗಿದೆ. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ಯಥಾಸ್ಥಿತಿ ಕಾಯ್ದುಕೊಂಡಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) 47,980 ರೂ.ಗೆ ಇದ್ದರೆ, 22 ಕ್ಯಾರೆಟ್​ನ 10 ಗ್ರಾಂ ಚಿನ್ನಕ್ಕೆ 43,900 ರೂ. ಇದೆ. ಬೆಳ್ಳಿ ದರವೂ ಯಥಾಸ್ಥಿತಿಯಲ್ಲಿದ್ದು, ಕಳೆದ 4 ದಿನಗಳಿಂದ ಬೆಳ್ಳಿ ಬೆಲೆ (Silver Price) 1 ಕೆ.ಜಿಗೆ 67,600 ಇದೆ.
Published by: Latha CG
First published: June 22, 2021, 8:29 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories