Morning Digest: M Yoga App ಲಾಂಚ್​ ಮಾಡಿದ ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಲಾಕ್​ಡೌನ್ ತೆರವು; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. International Yoga Day 2021: ಅಂತರಾಷ್ಟ್ರೀಯ ಯೋಗ ದಿನದಂದು M Yoga App ಲಾಂಚ್​ ಮಾಡಿದ ಪ್ರಧಾನಿ ಮೋದಿ

  ಇಂದು 7ನೇ ಅಂತರಾಷ್ಟ್ರೀಯ ಯೋಗ ದಿನ. ಈ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಯೋಗದ ಮಹತ್ವ ಸಾರಿದ್ದಾರೆ. M Yoga Appನ್ನು ಲಾಂಚ್​ ಮಾಡಿ, ‘ಒಂದು ವಿಶ್ವ-ಒಂದು ಆರೋಗ್ಯ‘ ಎಂಬ ಥೀಮ್​ನ್ನು ಅಭಿವೃದ್ಧಿಪಡಿಸಲು ನಾಂದಿ ಹಾಡಿದ್ದಾರೆ. ಇಡೀ ವಿಶ್ವವೇ ಕೊರೋನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾಗ, ಯೋಗ ಭರವಸೆಯ ಕಿರಣವಾಗಿ ಹೊರಹೊಮ್ಮಿತು ಎಂದು ಮೋದಿ ಹೇಳಿದ್ದಾರೆ. ಪ್ರತಿಯೊಂದು ದೇಶ, ಸಮಾಜ ಹಾಗೂ ಪ್ರತಿಯೊಬ್ಬರೂ ಸಹ ಆರೋಗ್ಯವಾಗಿ ಇರಬೇಕು ಎಂದಿದ್ದಾರೆ. ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದಾಗಿ ಭಾರತ ಸೇರಿದಂತೆ ವಿಶ್ವದಲ್ಲಿ ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳನ್ನು ಆಯೋಜಿಸಿಲ್ಲ. ಆದರೆ ಯೋಗದ ಬಗ್ಗೆ ಇರುವ ಉತ್ಸಾಹ ಮಾತ್ರ ಕಡಿಮೆಯಾಗಿಲ್ಲ ಎಂದು ಹೇಳಿದರು. ‘ಉತ್ತಮ ಆರೋಗ್ಯಕ್ಕಾಗಿ ಯೋಗ‘ ಈ ವರ್ಷದ ಇಂಟರ್​ನ್ಯಾಷನಲ್ ಯೋಗ ದಿನದ ಥೀಮ್ ಆಗಿದೆ. ವಿಶ್ವಾದ್ಯಂತ ಸುಮಾರು 190 ದೇಶಗಳಲ್ಲಿ ಯೋಗ ದಿನವನ್ನು ಆಚರಿಸಲಾಗುತ್ತಿದೆ. ‘ಮನೆಯಲ್ಲೇ ಯೋಗ ಮತ್ತು ಕುಟುಂಬದ ಜೊತೆ ಯೋಗ‘. ಅಂದರೆ ಕೊರೋನಾ ಇರುವ ಕಾರಣ ಮನೆಯಲ್ಲೇ ಯೋಗ ಮಾಡಿ ಎಂದು ಹೇಳಲಾಗಿದೆ. ಯೋಗ ನಮಗಿರುವ ಒತ್ತಡವನ್ನು ಕಡಿಮೆ ಮಾಡುವುದರ ಜೊತೆಗೆ, ನಮ್ಮನ್ನು ಮತ್ತಷ್ಟು ಬಲಪಡಿಸಲು ಸಹಕಾರಿಯಾಗಿದೆ ಎಂದು ಮೋದಿ ಹೇಳಿದರು.

  2. Karnataka Weather Today: ಮಲೆನಾಡು, ಕರಾವಳಿಯಲ್ಲಿ ಇನ್ನೆರಡು ದಿನ ಮಳೆಯ ಆರ್ಭಟ

  ಸುಮಾರು 10 ದಿನಗಳಿಂದ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದ್ದು, ಕರಾವಳಿ ಮತ್ತು ಉತ್ತರ ಕರ್ನಾಟಕದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಇಂದು ಮತ್ತು ನಾಳೆ ಕೂಡ ರಾಜ್ಯಾದ್ಯಂತ ಮಳೆ ಮುಂದುವರೆಯಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಉತ್ತರ ಕರ್ನಾಟಕದ ಕೃಷ್ಣಾ ಮತ್ತು ಘಟಪ್ರಭಾ ನದಿ ತೀರಗಳಲ್ಲಿ ನೀರಿನ ಹರಿವು ಹೆಚ್ಚಾಗಿ, ಪ್ರವಾಹದ ಭೀತಿ ಎದುರಾಗಿದೆ. ಇಂದು ಮತ್ತು ನಾಳೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆಯಾಗುವುದರಿಂದ ಆರೆಂಜ್ ಅಲರ್ಟ್​ ನೀಡಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಕೊಂಚ ಕಡಿಮೆಯಾಗುವ ಸಾಧ್ಯತೆಯಿದೆ.

  3.Karnataka Unlock 2.O: ರಾಜ್ಯದಲ್ಲಿ ಇಂದಿನಿಂದ ಬಸ್, ಮೆಟ್ರೋ​ ಸಂಚಾರ ಆರಂಭ; ಪಾಲಿಸಬೇಕಾದ ನಿಯಮಗಳೇನು?

  ಇಂದಿನಿಂದ ರಾಜ್ಯದಲ್ಲಿ ಅನ್​ಲಾಕ್​​ 2.O ಜಾರಿಯಾಗಿದ್ದು, ಬಸ್​ ಸಂಚಾರಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇಂದು ಬೆಳಗ್ಗೆ 6 ಗಂಟೆಯಿಂದಲೇ ಬಿಎಂಟಿಸಿ ಹಾಗೂ ಕೆಎಸ್​ಆರ್​ಟಿಸಿ ಸಂಚಾರ ಆರಂಭವಾಗಿದೆ. ಶೇ 50ರಷ್ಟು ಪ್ರಯಾಣಿಕರಿಗೆ ಮಾತ್ರ ಸಂಚಾರ ಮಾಡಲು ಅವಕಾಶ ನೀಡಲಾಗಿದೆ. ಬಿಎಂಟಿಸಿಯ ವೋಲ್ವೋ ಬಸ್​ಗಳ ಕಾರ್ಯಾಚರಣೆ ಸದ್ಯಕ್ಕಿಲ್ಲ. ಸಾಮಾನ್ಯ ಸಾರಿಗೆ ಬಸ್​​ಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ, ಡ್ರೈವರ್ ಕಂಡಕ್ಟರ್ ಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ ಎಂದು ಹೇಳಲಾಗಿದೆ. ಈಗಾಗಲೇ ಶೇ.90ರಷ್ಟು ಚಾಲಕ-ನಿರ್ವಾಹಕರಿಗೆ ವ್ಯಾಕ್ಸಿನ್​ ಹಾಕಲಾಗಿದೆ. ಇಂದಿನಿಂದ 1500-2000 ಬಿಎಂಟಿಸಿ ಬಸ್​​ಗಳು ಕಾರ್ಯಾಚರಣೆ ನಡೆಸಲಿವೆ. ಇಂದಿನಿಂದ 1500 ಕೆಎಸ್ ಆರ್ ಟಿಸಿ ಬಸ್​ಗಳ ಸಂಚಾರ ಆರಂಭವಾಗಲಿದೆ. ಇಂದಿನಿಂದ ನಮ್ಮ ಮೆಟ್ರೋ ಕೂಡ ಸಂಚಾರ ಆರಂಭಿಸಲಿದೆ. ಬೆಳಗ್ಗೆ 7 ಗಂಟೆಯಿಂದ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ. ಬೆಳಗ್ಗೆ 7ರಿಂದ ಬೆಳಗ್ಗೆ 11 ಗಂಟೆವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಪ್ರತೀ 5 ನಿಮಿಷಗಳ ಅಂತರದಲ್ಲಿ ಮೆಟ್ರೋ ಸೇವೆ ಲಭ್ಯವಾಗಲಿದೆ.

  4.Bengaluru Unlock 2.0: ಬೆಂಗಳೂರು ಸೇರಿ 16 ಜಿಲ್ಲೆಗಳಲ್ಲಿ ಇಂದಿನಿಂದ ಲಾಕ್​ಡೌನ್ ತೆರವು; ಯಾವುದಕ್ಕೆ ಅನುಮತಿ? ಯಾವುದು ನಿಷೇಧ?

  ಬೆಂಗಳೂರು ಸೇರಿದಂತೆ 16 ಜಿಲ್ಲೆಗಳಲ್ಲಿ ಇಂದಿನಿಂದ 2ನೇ ಹಂತದ ಅನ್​ಲಾಕ್​ ಜಾರಿಯಾಗಲಿದ್ದು, ಲಾಕ್​ಡೌನ್ ತೆರವಾದ ಹಿನ್ನೆಲೆ ಜನರಿಗೆ ಮತ್ತಷ್ಟು ರಿಲೀಫ್ ಸಿಕ್ಕಂತಾಗಿದೆ. ಇಂದು ಬೆಳಗ್ಗೆ 5 ಗಂಟೆಯಿಂದ ವೀಕ್ ಎಂಡ್ ಲಾಕ್ ಡೌನ್ ತೆರವಾಗಿದ್ದು, ಬೆಂಗಳೂರಿನಲ್ಲಿ ಜಾರಿಯಲ್ಲಿದ್ದ 144 ಸೆಕ್ಷನ್ ಸಹ ತೆರವಾಗಿದೆ. ಬೆಂಗಳೂರಿನಲ್ಲಿ ಇಂದಿನಿಂದ ಹೋಟೆಲ್, ರೆಸ್ಟೋರೆಂಟ್, ಜಿಮ್ ಸೇರಿ‌ ಹಲವು ಉದ್ಯಮಗಳು ಓಪನ್ ಆಗಲಿವೆ. ಹಾಗಿದ್ದರೆ ಇಂದಿನಿಂದ ಮತ್ತೆ ಯಾವುದಕ್ಕೆ ಅನುಮತಿ ನೀಡಲಾಗಿದೆ? ಯಾವುದಕ್ಕೆ ನಿಷೇಧ ಹೇರಲಾಗಿದೆ? ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಬೆಂಗಳೂರಿನಲ್ಲಿ ಮೂರು ತಿಂಗಳಿಂದ ನಿಂತಿದ್ದ ಬಸ್ ಗಳ ಸಂಚಾರ ಇಂದಿನಿಂದ ಆರಂಭವಾಗಲಿದೆ. ಶೇ. 50ರಷ್ಟು ಪ್ರಯಾಣಿಕರೊಂದಿಗೆ ಬಸ್ ಗಳ‌ ಸಂಚಾರ ಶುರುವಾಗಲಿದೆ. ಹೋಟೆಲ್ , ರೆಸ್ಟೋರೆಂಟ್ ನಲ್ಲಿ ಶೇ. 50ರಷ್ಟು ಜನರಿಗೆ ಅವಕಾಶ ಕಲ್ಪಿಸಲಾಗಿದೆ. ಮುಂಜಾನೆ 6 ಗಂಟೆಯಿಂದ ಸಂಜೆ 6 ರ ವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಇಂದಿನಿಂದ ಬೆಂಗಳೂರು ಸಿಟಿ ಫುಲ್ ಅನ್ ಲಾಕ್ ಆಗಲಿದೆ.
  Published by:Latha CG
  First published: