HOME » NEWS » State » MORNING DIGEST HERE IS IMPORTANT NEWS OF THIS DAY JULY 22ND LG

Morning Digest: ಇಂದು-ನಾಳೆ ರಾಜ್ಯದಲ್ಲಿ ಮಳೆಯ ಆರ್ಭಟ; ಡಿಕೆಶಿ ಅಧ್ಯಕ್ಷಗಾದಿಗೇ ಕಂಟಕ? ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

news18-kannada
Updated:July 22, 2021, 8:32 AM IST
Morning Digest: ಇಂದು-ನಾಳೆ ರಾಜ್ಯದಲ್ಲಿ ಮಳೆಯ ಆರ್ಭಟ; ಡಿಕೆಶಿ ಅಧ್ಯಕ್ಷಗಾದಿಗೇ ಕಂಟಕ? ಇಂದಿನ ಪ್ರಮುಖ ಸುದ್ದಿಗಳಿವು
ಸಾಂದರ್ಭಿಕ ಚಿತ್ರ
  • Share this:
1. Karnataka Weather Today: ಇಂದು ನಾಳೆ ರಾಜ್ಯದಲ್ಲಿ ಮಳೆಯ ಆರ್ಭಟ; ಈ ಜಿಲ್ಲೆಗಳಲ್ಲಿ ಆರೆಂಜ್​-ಯೆಲ್ಲೋ ಅಲರ್ಟ್​ ಘೋಷಣೆ

Karnataka Rain Updates: ಬೆಂಗಳೂರು(ಜು.22): ಪೂರ್ವ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನರು ತತ್ತರಿಸಿ ಹೋಗಿದ್ದಾರೆ. ಮಲೆನಾಡು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿನ ಒಳನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲೂ ಸಹ ಕಳೆದೊಂದು ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜಿಟಿ-ಜಿಟಿ ಮಳೆಗೆ ವಾಹನ ಸವಾರರು ಪರದಾಡುವಂತಾಗಿದೆ. ನಿನ್ನೆ-ಮೊನ್ನೆ ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನಲ್ಲೂ ನಿರಂತರ ಮಳೆಯಾಗಿದೆ. ಜುಲೈ 23ರ ತನಕವೂ ಇದೇ ವಾತಾವರಣ ಮುಂದುವರೆಯುವ ಸಾಧ್ಯತೆ ಇದೆ. ಮಂಗಳವಾರ ಮುಖ್ಯವಾಗಿ ಶಿವಮೊಗ್ಗ ಜಿಲ್ಲೆಯ ಹೊಸನಗರದಲ್ಲಿ ಅತೀ ಹೆಚ್ಚು ಅಂದರೆ 12 ಸೆಂ.ಮೀ ಮಳೆಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 6 ಸೆಂ.ಮೀ, ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಮಣ್ಯದಲ್ಲಿ 7 ಸೆಂ.ಮೀ ಮಳೆಯಾಗಿದೆ. ಪೂರ್ವ ಅರಬ್ಬಿ ಸಮುದ್ರದ ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರದೇಶಗಳಲ್ಲಿ ಕಡಿಮೆ ಒತ್ತಡವಿರುವ ಪ್ರದೇಶ ವಿಸ್ತರಿಸಿದೆ. ಇದರಿಂದಾಗಿ ಜುಲೈ 23ರ ವೇಳೆಗೆ ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಜುಲೈ 24ರವರಗೆ ವ್ಯಾಪಕ ಮಳೆಯಾಗುವ ಸಂಭವವಿದೆ ಎಂದು ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ ಎಸ್ ಪಾಟೀಲ್ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ದಾರೆ.

2. D K Shivakumar: ಕಾಂಗ್ರೆಸ್​ನಲ್ಲೂ ಮೇಜರ್ ಸರ್ಜರಿ, ಡಿಕೆಶಿ ಅಧ್ಯಕ್ಷ ಗಾದಿಗೇ ಕಂಟಕ? ಮುಂದಿನ ಅಧ್ಯಕ್ಷ ಯಾರು ?

ರಾಜಕಾರಣದಲ್ಲಿ ಯಾವಾಗ ಏನು ಬೇಕಾದರು ಸಂಭವಿಸಬಹುದು. ಯಾರು ಏನು ಬೇಕಾದರೂ ಆಗಬಹುದು.‌ ಇದಕ್ಕೆ ಬಹಳ ಒಳ್ಳೆಯ ಉದಾಹರಣೆ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು. ಮೊನ್ನೆ ಮೊನ್ನೆವರೆಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಂಬಲಿಗರು 'ಡಿಕೆಶಿ ಮುಂದಿನ‌ ಮುಖ್ಯಮಂತ್ರಿ' ಎಂಬ ಘೋಷಣೆ ಮೊಳಗಿಸುತ್ತಿದ್ದರು. ಮುಂದಿನ ಸಿಎಂ ಎಂಬ ಮಾರ್ದನಿ ಕಿವಿಗೆ ಅಪ್ಪಳಿಸುತ್ತಿದ್ದರೂ ಡಿ.ಕೆ. ಶಿವಕುಮಾರ್ ಬಾಯಿ‌ ಬಿಡುತ್ತಿರಲಿಲ್ಲ. ಈ ಮೂಲಕ 'ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುವ' ಕಸರತ್ತು ನಡೆಸುತ್ತಿದ್ದರು. ಆದರೀಗ ಅವರಿಗೆ ಶಾಕ್ ಆಗುವಂತಹ ಮಾತುಗಳು ಕೇಳಿಬರುತ್ತಿವೆ. ರಾಜ್ಯ ಬಿಜೆಪಿಯಲ್ಲಿ ಬಿ.ಎಸ್. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸುವುದು ಗ್ಯಾರಂಟಿ ಆಗಿರುವುದರಿಂದ ಕಾಂಗ್ರೆಸ್ ಪಕ್ಷ ಈಗ ಲಿಂಗಾಯತ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿದೆ. ಈಗಾಗಲೇ ರಾಜ್ಯ ಕಾಂಗ್ರೆಸಿನ ಪ್ರಮುಖ ಲಿಂಗಾಯತ ನಾಯಕರಾದ ಎಂ.ಬಿ. ಪಾಟೀಲ್ ಮತ್ತು ಶಾಮನೂರು ಶಿವಶಂಕರಪ್ಪ 'ಲಿಂಗಾಯತರ ಮಹಾನ್ ನಾಯಕ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಾರದು' ಎಂದು ಹೇಳುವ ಮೂಲಕ ಚರ್ಚೆಗೆ ಮುನ್ನುಡಿ ಬರೆದಿದ್ದಾರೆ. ಇನ್ನೊಂದೆಡೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಕೆಲ ದಿನಗಳ ಅಂತರದಲ್ಲಿ ಲಿಂಗಾಯತ ನಾಯಕನನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಕೂರಿಸಬೇಕು ಎಂಬ ಕಸರತ್ತು ಶುರುವಾಗಿದೆ.

3.Petrol Price Today: ಇಂದಿನ ಪೆಟ್ರೋಲ್​-ಡೀಸೆಲ್ ದರ ಇಂತಿದೆ

ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆಯಿಂದಾಗಿ ಜನ ಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಸ್ತೆಗೆ ವಾಹನ ಇಳಿಸಲು ಯೋಚಿಸುವಂತಾಗಿದೆ. ಸದ್ಯ ಅಚ್ಚರಿ ಎಂಬಂತೆ ಕಳೆದ ನಾಲ್ಕು ದಿನಗಳಿಂದ ಪೆಟ್ರೋಲ್-ಡೀಸೆಲ್​​​ ಬೆಲೆಯಲ್ಲಿ ಏರಿಕೆಯಾಗಿಲ್ಲ. ಇಂದು ಭಾರತದಲ್ಲಿ ಪೆಟ್ರೋಲ್​ ಬೆಲೆ 101.84 ರೂ. ಇದ್ದರೆ ಡೀಸೆಲ್​ ಬೆಲೆ 89.87 ರೂ. ಇದೆ. ಮುಂಬೈನಲ್ಲಿ ಒಂದು ಲೀಟರ್​ ಪೆಟ್ರೋಲ್​ ಬೆಲೆ 107.83 ರೂ. ಆಗಿದ್ದರೆ, ಒಂದು ಲೀಟರ್​ ಡೀಸೆಲ್​ ಬೆಲೆ 97.45 ರೂ. ಆಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105 ರೂ ದಾಟಿದೆ. ಸದ್ಯ 105.25 ರೂಪಾಯಿಗೆ ಬಂದು ಮುಟ್ಟಿದೆ. ಇನ್ನು, ಡೀಸೆಲ್ ಬೆಲೆ ಇಲ್ಲಿ ಲೀಟರ್​ಗೆ 95.26 ರೂ ಇದೆ. ಬೆಂಗಳೂರಿನಲ್ಲಿ ಕಳೆದ 10 ದಿನಗಳಿಂದ ಪೆಟ್ರೋಲ್ ಬೆಲೆ 1.49 ರೂಪಾಯಿಯಷ್ಟು ಏರಿಕೆ ಕಂಡಿದೆ. ಇದೇ ಅವಧಿಯಲ್ಲಿ ಡೀಸೆಲ್ ಬೆಲೆಯಲ್ಲಿ 37 ಪೈಸೆಯಷ್ಟು ಹೆಚ್ಚಳವಾಗಿದೆ.
Published by: Latha CG
First published: July 22, 2021, 8:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories