Morning Digest: ರಾಜ್ಯದಲ್ಲಿ ಇಂದು, ನಾಳೆ ಭಾರೀ ಮಳೆ, ಚಿನ್ನದ ಬೆಲೆಯಲ್ಲಿ ಇಳಿಕೆ; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.Karnataka Weather Today: ಕರ್ನಾಟಕದಲ್ಲಿ ಇಂದು, ನಾಳೆ ಮಳೆಯ ಆರ್ಭಟ; ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಹಲವೆಡೆ ಆರೆಂಜ್ ಅಲರ್ಟ್​ ಘೋಷಣೆ

  ಪೂರ್ವ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದಾದ್ಯಂತ ಇಂದು ಮತ್ತು ನಾಳೆ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವೀಕೆಂಡ್​ನಲ್ಲಿ ಅಂದರೆ ಜು.17 ಮತ್ತು ಜು.18ರಂದು ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್​ ಪಾಟೀಲ್​ ತಿಳಿಸಿದ್ದಾರೆ. ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್, ಯೆಲ್ಲೋ ಹಾಗೂ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಬೆಂಗಳೂರಿನಲ್ಲೂ ಕೂಡ ಇಂದು ಮತ್ತು ನಾಳೆ ಭಾರೀ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಇಂದು(ಜು.17) ಭಾರೀ ಮಳೆಯಾಗಲಿದ್ದು, ಭಾರತೀಯ ಹವಾಮಾನ ಇಲಾಖೆ ಈ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಿಸಿದೆ. ಈ ಜಿಲ್ಲೆಗಳಲ್ಲಿ ಇಂದು ಅಧಿಕ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ ಪ್ರದೇಶದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

  2.ಚಿತ್ರದುರ್ಗ ಜಿಲ್ಲೆಗೆ ಭದ್ರಾ ನೀರು ಹರಿಸಲು ಸರ್ಕಾರ ಆದೇಶ; ಮಲೆನಾಡು ಭಾಗದ ರೈತರ ವಿರೋಧ

  ಭದ್ರಾ ಮೇಲ್ದಂಡೆ ಯೋಜನೆ ಬಯಲು ಸೀಮೆ ಚಿತ್ರದುರ್ಗ ಜಿಲ್ಲೆಯ ಜನರ ಬಹು ಕನಸಿನ ಯೋಜನೆ. ಈ ಕನಸು ನನಸಾಗಲು ಕಾಲ ಕೂಡಿದ್ದು, ಭದ್ರಾ ಡ್ಯಾಂನಿಂದ 700 ಕ್ಯೂಸೆಕ್ಸ್ ನೀರು ಹರಿಸಲು ಸರ್ಕಾರ ಆದೇಶಿಸಿದೆ. ಸರ್ಕಾರದ ಈ ನಡೆಗೆ ಮಲೆನಾಡು ಭಾಗದ ಅನ್ನದಾತರು ವಿರೋಧ ಮಾಡಿದ್ದಾರೆ. ಇದ್ರಿಂದ ಕೋಟೆನಾಡಿನ ರೈತರು ಕಾಡಾ ಸಲಹಾ ಸಮಿತಿ ನಿರ್ಧಾರಕ್ಕೆ ಕೆರಳಿದ್ದು, ಶಾಸಕರೂ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ. ಕೋಟೆನಾಡು ಚಿತ್ರದುರ್ಗ ಸತತವಾಗಿ ಬರದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಈ ಜಿಲ್ಲೆ ಹತ್ತಾರು ವರ್ಷಗಳಿಂದ ಬರದಿಂದ ತತ್ತರಿಸಿ, ಬಯಲುಸೀಮೆ ಜನರು ಹನಿ ನೀರಿಗೂ ನಲುಗಿ ಹೋಗಿದ್ದಾರೆ. ಇದರಿಂದ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಈ ಭಾಗದ ಅನ್ನದಾತರ ಹೋರಾಟಕ್ಕೆ ದಶಕಗಳೇ ಉರುಳಿವೆ. ಆದರೆ ಇದೀಗ ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿಸಲು ಸರ್ಕಾರ ಒಂದು ಹೆಜ್ಜೆ ಮುಂದೆ ಸಾಗಿದೆ.

  3. Gold Price Today: ಚಿನ್ನ ಖರೀದಿಸುತ್ತಿದ್ದೀರಾ? ಇವತ್ತು ಬೆಲೆ ಇಳಿಕೆಯಾಗಿದೆ ನೋಡಿ

  ಕಳೆದ ಎರಡು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇತ್ತು. ಇಂದು ಚಿನ್ನದ ಬೆಲೆ ಇಳಿಕೆ ಕಂಡಿದೆ. ನಿನ್ನೆ 10 ಗ್ರಾಂಗೆ 100 ರೂಪಾಯಿ ಏರಿಕೆಯಾಗಿತ್ತು. ಇಂದು 10 ಗ್ರಾಂ ಚಿನ್ನಕ್ಕೆ 10 ರೂಪಾಯಿ ಇಳಿಕೆಯಾಗಿದೆ. ನೀವೇನಾದರೂ ಚಿನ್ನ ಖರೀದಿಸಲು ಯೋಚಿಸುತ್ತಿದ್ದರೆ ದೇಶದ ಪ್ರಮುಖ ನಗರಗಳಲ್ಲಿ ಇಂದು ಚಿನ್ನಕ್ಕೆ ಎಷ್ಟು ಬೆಲೆ ಇದೆ ಎಂಬ ಬಗ್ಗೆ ಇಲ್ಲಿದೆ ಪೂರ್ತಿ ಮಾಹಿತಿ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಏರಿಕೆಯಾಗಿದೆ. (Gold Price) ನಿನ್ನೆ 49,270 ರೂ. ಇದ್ದದ್ದು, ಇಂದು 49,380 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯೂ ಏರಿಕೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ 45,160 ರೂ. ಇದ್ದದ್ದು, ಇಂದು 45,260 ರೂ. ಆಗಿದೆ. ಭಾರತದಲ್ಲಿ ಇಂದು ಬೆಳ್ಳಿ ಬೆಲೆಯೂ ಇಳಿಕೆಯಾಗಿದ್ದು, 1 ಕೆ.ಜಿ.ಗೆ 1300 ರೂ. ಕಡಿಮೆಯಾಗಿದೆ. ನಿನ್ನೆ ಒಂದು ಕೆ.ಜಿ ಬೆಳ್ಳಿಗೆ 300 ರೂ. ಏರಿಕೆಯಾಗಿತ್ತು. ನಿನ್ನೆ 1 ಕೆಜಿ ಬೆಳ್ಳಿಗೆ 69,700 ರೂ. ಇತ್ತು. ಇಂದು 1 ಕೆ.ಜಿ ಬೆಳ್ಳಿಗೆ 68,400 ರೂ.ಇದೆ.

  4.ಬಿಜೆಪಿಯಲ್ಲಿ ಗೊಂದಲ ಇಲ್ಲ; ಯಡಿಯೂರಪ್ಪ ನಮ್ಮ ಸರ್ವಸಮ್ಮತ ನಾಯಕ: ಕಟೀಲ್

  ಕೋಲಾರ: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ವ್ಯಕ್ತವಾಗುತ್ತಿರುವ ಕೂಗನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ತಳ್ಳಿಹಾಕಿದ್ದಾರೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಅವರೇ ನಮ್ಮ ಸರ್ವ ಸಮ್ಮತ ನಾಯಕ ಎಂದು ಸ್ಪಷ್ಟಪಡಿಸಿದ ಅವರು, ಯಡಿಯೂರಪ್ಪ ನಮ್ಮ ನಾಯಕ ಎಂದು ಎಲ್ಲರು ಒಪ್ಪಿದ್ದೇವೆ. ಸಿಎಂ ಆಗಿ ಯಡಿಯೂರಪ್ಪ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಕೋವಿಡ್ ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ಉತ್ತಮ ಸಾಧನೆ ಮಾಡಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೋಲಾರದ ಕುಂಬಾರಹಳ್ಳಿ ಹೊರವಲಯದ ರತ್ನ ಕನ್ವೆನ್ಷನಲ್‌ ಹಾಲ್ ನಲ್ಲಿ ಜಿಲ್ಲಾ ಬಿಜೆಪಿ ಘಟಕ ಆಯೋಜಸಿದ್ದ, ಜಿಲ್ಲಾ ಕಾರ್ಯಕಾರಿಣಿ ಸಭೆಗೆ ನಳಿನ್ ಕುಮಾರ್ ಕಟೀಲ್ ನಿನ್ನೆ ಚಾಲನೆ ನೀಡಿದ ಸಂದರ್ಭದಲ್ಲಿ ಕೈ ಪಾಳಯವನ್ನು ಕುಟುಕಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಂಸದ ಎಸ್ ಮುನಿಸ್ವಾಮಿ, ಶಾಸಕ ಎಚ್ ನಾಗೇಶ್, ಎಮ್ ಎಲ್ ಸಿ ವೈ ಎ ನಾರಾಯಣಸ್ವಾಮಿ ಸೇರಿದಂಗೆ ಜಿಲ್ಲಾ ಬಿಜೆಪಿ ನಾಯಕರು ಭಾಗಿಯಾಗಿದ್ದರು.
  Published by:Latha CG
  First published: