Morning Digest: ನಾಳೆ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ, ರಾಜ್ಯದಲ್ಲಿ ಕ್ಷೀಣಿಸಿದ ಮುಂಗಾರು; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1.Cabinet Crisis: ಇಂದು ಸಂಪುಟ ಪಟ್ಟಿಗೆ ಒಪ್ಪಿಗೆ, ನಾಳೆಯೇ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ

  ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮೇಲೆ ಸಚಿವ ಸಂಪುಟ ವಿಸ್ತರಣೆ ಮಾಡಬೇಕಾದ ಒತ್ತಡ ಹೆಚ್ಚಾಗುತ್ತಿದ್ದು ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಆದ್ಯಕ್ಷ ಜೆ.ಪಿ. ನಡ್ಡ ಭೇಟಿ ಮಾಡಿ ಸುದೀರ್ಘವಾದ ಸಮಾಲೋಚನೆ ನಡೆಸಿದ್ದಾರೆ. ಮಾತುಕತೆ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಮತ್ತು ಕೇಂದ್ರ ಸಂಸದೀಯ ವ್ಯವಹಾರಗಳ ಹಾಗೂ ಗಣಿ ಸಚಿವ ಪ್ರಹ್ಲಾದ್ ಜೋಷಿ ಕೂಡ ಉಪಸ್ಥಿತರಿದ್ದರು. ಹೊಸ ಮಂತ್ರಿ ಮಂಡಳ ಹೇಗಿರಬೇಕು ಎಂದು ಹಲವು ಆಯಾಮಗಳಲ್ಲಿ ಸುದೀರ್ಘವಾಗಿ ಚರ್ಚಿಸಿದ ನಾಯಕರು ನೂತನ ಸಚಿವರ ಪಟ್ಟಿ ಸಿದ್ದ ಮಾಡಿದ್ದು ಆಗಸ್ಟ್ 4 ಅಥವಾ ಆಗಸ್ಟ್ 5ರಂದು ಸಚಿವ ಸಂಪುಟ ವಿಸ್ತರಣೆ ಆಗುವ ಸಾಧ್ಯತೆ ಇದೆ. ಜೆ.ಪಿ. ನಡ್ಡ ಭೇಟಿ ಬಳಿಕ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಹೈಕಮಾಂಡ್ ನಾಯಕರಿಗೆ ನೀಡಲಾಗಿದೆ. ಎಷ್ಟು ಮಂದಿ ಸಚಿವರಾಗಬೇಕು, ಯಾರು ಇರಬೇಕು? ಎಷ್ಟು ಮಂದಿ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಬೇಕು? ಎಂಬುದನ್ನು ಹೈಕಮಾಂಡ್ ನಾಯಕರು ನಿರ್ಧರಿಸಲಿದ್ದಾರೆ. ನಾಳೆ ಸಂಜೆಯೊಳಗೆ ಪಟ್ಟಿಗೆ ಹೈಕಮಾಂಡಿನ ಮುದ್ರೆ ಬೀಳಲಿದೆ. ಬಳಿಕ ಕೂಡಲೇ ಪಟ್ಟಿಯನ್ನು ರಾಜಭವನಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.

  2.Karnataka Weather Today: ಉತ್ತರ ಕನ್ನಡ ಜಿಲ್ಲೆಯ ನೆರೆ ಸಂತ್ರಸ್ತರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ ಸಿದ್ದರಾಮಯ್ಯ

  ಮಾಜಿ ಸಿಎಂ ಸಿದ್ದರಾಮಯ್ಯ ಸೋಮವಾರ(ನಿನ್ನೆ) ಪ್ರವಾಹ ಪೀಡಿತ ಉತ್ತರ ಕನ್ನಡ ಜಿಲ್ಲೆಯ ಕದ್ರಾ ಮತ್ತು ಮಲ್ಲಾಪುರ ಗ್ರಾಮಗಳಿಗೆ ಭೇಟಿ ನೀಡಿ ನೆರೆ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಪ್ರತೀ ವರ್ಷ ಮಳೆಗಾಲದಲ್ಲಿ ಇದೇ ಪರಿಸ್ಥಿತಿ ಎದುರಾಗುತ್ತದೆ. ಮುನ್ಸೂಚನೆ ನೀಡದೆ ಏಕಾಏಕಿ ಕದ್ರಾ ಡ್ಯಾಂನಿಂದ ನೀರು ಬಿಡುತ್ತಾರೆ. ಗಂಗಾವಳಿ ನದಿ ದಡದಲ್ಲಿರುವ ಜನರ ಪಾಡು ಹೇಳತೀರದಾಗಿದೆ. ಇರಲು ಮನೆಯೂ ಇಲ್ಲ, ಎಲ್ಲವೂ ನೀರಲ್ಲಿ ಕೊಚ್ಚಿಕೊಂಡು ಹೋಗಿದೆ. ಸರ್ಕಾರ ಪರಿಹಾರವನ್ನೂ ನೀಡಿಲ್ಲ ಎಂದು ಅಲ್ಲಿನ ಮಹಿಳೆಯರು ತಮ್ಮ ಗೋಳು ತೋಡಿಕೊಂಡರು. ಇಂದು ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆ, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ಜೊತೆಗೆ ಉಳಿದ ಜಿಲ್ಲೆಗಳಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ.ಭಾನುವಾರ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಕೊರ್ಲಕೈನಲ್ಲಿ 68 ಮಿ.ಮೀ ಮಳೆಯಾಗಿದೆ. ನಿನ್ನೆ ರಾಜ್ಯದಲ್ಲಿ ಅತೀ ಹೆಚ್ಚು ಮಳೆಯಾಗಿರುವ ಪ್ರದೇಶ ಇದಾಗಿದೆ.

  3.Petrol Price Today: ಸತತ 17ನೇ ದಿನವೂ ಯಥಾಸ್ಥಿತಿ ಕಾಯ್ದುಕೊಂಡ ಪೆಟ್ರೋಲ್​-ಡೀಸೆಲ್ ಬೆಲೆ..!

  Petrol, Diesel Prices on August 3 ಬೆಂಗಳೂರು: ನಿರಂತರವಾಗಿ ಏರಿಕೆ ಕಾಣುತ್ತಾ ಬಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 17 ದಿನಗಳಿಂದ ತಟಸ್ಥವಾಗಿದೆ. ಜುಲೈ 17ರಿಂದ ಪೆಟ್ರೋಲ್ ಬೆಲೆ ಯಾವುದೇ ಏರಿಕೆ ಕಂಡಿಲ್ಲ. ಆದರೆ, ಮೇ 4ರಿಂದ ಇಲ್ಲಿಯವರೆಗೆ ಹಲವು ಬಾರಿ ಬೆಲೆ ಹೆಚ್ಚಳಗೊಂಡ ಪರಿಣಾಮ ಈ ಅವಧಿಯಲ್ಲಿ ಪೆಟ್ರೋಲ್ 11 ರೂ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.25 ರೂ ದರ ಇದೆ. ಡೀಸೆಲ್ ಬೆಲೆ 95.26 ರೂ ನಲ್ಲೇ ಮುಂದುವರಿದಿದೆ. ಮಹಾನಗರಿಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಡೀಸೆಲ್ ಅತಿ ದುಬಾರಿ ಇದೆ. ಈ ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ 107.83 ಇದ್ದರೆ, ಡೀಸೆಲ್ ದರ 97.43 ರೂ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.84 ರೂ ಇದೆ. ಇಲ್ಲಿ ಡೀಸೆಲ್ ಬೆಲೆ ಇನ್ನೂ 90 ರೂ ಗಡಿ ಮುಟ್ಟಿಲ್ಲ.

  4.ನನಗೆ ಗಾಡ್ ಫಾದರ್ ಇಲ್ಲ; ನನ್ನ ಬಳಸಿಕೊಂಡು ಬೇರೆಯವರು ಮಂತ್ರಿಗಳಾದರು: ಗೂಳಿಹಟ್ಟಿ ಶೇಖರ್

  ನಾನು ಪಕ್ಷದ ಪರ ಇರುತ್ತೇನೆ, ಡಬಲ್ ಗೇಮ್ ಆಡಲ್ಲ. ಕೆಲವರು ಟೀ ಪಾರ್ಟಿ ಮಾಡಿಕೊಂಡು ನಮ್ಮ ಹೇಳಿಕೆ ಮಾಡಿಸಿ ಮಂತ್ರಿಗಳಾದರು. ಕೆಲವರು ಬ್ಲಾಕ್ ಮೇಲ್ ಮಾಡಿಕೊಂಡು ಮಂತ್ರಿ ಆಗುತ್ತಾರೆ. ಪಕ್ಷದಲ್ಲಿ ಇದ್ದು ನಾನು ಜಾಸ್ತಿ ಮಾತನಾಡುವುದಿಲ್ಲ. ಹೈಕಮಾಂಡ್ ನಾಯಕರು ಎಲ್ಲರೂ ಸೇರಿ ಕೇಂದ್ರ ಸರ್ಕಾರ ಮಾದರಿಯಲ್ಲಿ ಸಚಿವ ಸಂಪುಟ ಮಾಡಿದರೆ ನಮಗೆ ಅವಕಾಶ ಸಿಗುತ್ತದೆ. ಬೇಕಾ ಬಿಟ್ಟಿ ಸಂಪುಟ ರಚನೆ ಮಾಡಿದರೆ ನಮಗೆ ಅವಕಾಶ ಸಿಗಲ್ಲ. ಯಾವುದೇ ನಾಯಕರನ್ನ ನಾನು ಭೇಟಿ ಮಾಡಿಲ್ಲ. ಪಕ್ಷದಲ್ಲಿ ನನಗೆ ಗಾಡ್ ಫಾದರ್ ಇಲ್ಲ ಎಂದು ಚಿತ್ರದುರ್ಗದಲ್ಲಿ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಬೇಸರದ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗ ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್, ದಕ್ಷಿಣ ಭಾರತದಲ್ಲಿ ಬಿಜೆಪಿ ತಂದ ಮೊದಲ ವ್ಯಕ್ತಿ ಗೂಳಿಹಟ್ಟಿ ಎಂದು ಎಲ್ಲರಿಗೂ ಗೊತ್ತು. ಆದರೆ ನನಗೆ 2008 ಮಂತ್ರಿ ಮಾಡುವಾಗ ಅನ್ಯಾಯ ಮಾಡಿದ್ರು. ನನ್ನನ್ನ ಕರೆದುಕೊಂಡು ಹೋದವರು ಮೂವರು ಮಂತ್ರಿಗಳಾದರು. ಗೂಳಿಹಟ್ಟಿ ಕೋಟಿ ಕೋಟಿ ಹಣ ಪಡೆದರು ಎಂದು ಬಿಂಬಿಸಿದರು ಎಂದು ಹೇಳಿದ್ದಾರೆ.
  Published by:Latha CG
  First published: