Morning Digest: ಇಂದಿನಿಂದ ಶಾಲೆಗಳು ಶುರು, ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತಕ್ಕೆ ಬೆಳ್ಳಿ; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  1. Karnataka Weather Today: ಇಂದು-ನಾಳೆ ಕರ್ನಾಟಕದಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

  Karnataka Rains Today:(ಆ.23): ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನಲ್ಲಿ ಕಳೆದ ಮೂರು ದಿನಗಳಿಂದ ಮಳೆಯ ಆರ್ಭಟ ಹೆಚ್ಚಾಗಿದೆ. ಇಂದು ಮತ್ತು ನಾಳೆ ಕರ್ನಾಟಕದಲ್ಲಿ ಅಧಿಕ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ 9 ಜಿಲ್ಲೆಗಳಲ್ಲಿ ಇಂದು ನಾಳೆ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಆಗಸ್ಟ್​ 23 ಮತ್ತು 24ರಂದು ಕರ್ನಾಟಕದ ಬಹುತೇಕ ಪ್ರದೇಶಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗಲಿದೆ. ಮುಖ್ಯವಾಗಿ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ವರುಣ ತನ್ನ ಆರ್ಭಟ ತೋರಿಸಲಿದ್ದಾನೆ. ಶಿವಮೊಗ್ಗ, ರಾಮನಗರ, ಕೊಡಗು, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ ಮತ್ತು ಕೋಲಾರ ಈ 9 ಜಿಲ್ಲೆಗಳಲ್ಲಿ ಆಗಸ್ಟ್​ 24ರವರೆಗೆ ಅಧಿಕ ಮಳೆಯಾಗಲಿದ್ದು, ಇನ್ನೆರಡು ದಿನ ಯಲ್ಲೋ ಅಲರ್ಟ್​ ಘೋಷಿಸಲಾಗಿದೆ.

  2.Karnataka Schools Reopen: ಇಂದಿನಿಂದ ರಾಜ್ಯದ 26 ಜಿಲ್ಲೆಗಳಲ್ಲಿ ಶಾಲೆಗಳು ಆರಂಭ; ಪಾಲಿಸಬೇಕಾದ ನಿಯಮಗಳೇನು?

  ಬೆಂಗಳೂರು(ಆ.23): ಕೊರೋನಾ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಮುಚ್ಚಲ್ಪಟ್ಟಿದ್ದ ಶಾಲೆಗಳು ಇಂದಿನಿಂದ ತೆರೆಯುತ್ತಿವೆ. ಹೌದು, ಆಗಸ್ಟ್​ 23ರಿಂದ 9,10,11 ಮತ್ತು 12ನೇ ತರಗತಿಗಳು ಶುರುವಾಗಲಿದ್ದು, ಶಿಕ್ಷಣ ಇಲಾಖೆ ಸಕಲ ಸಿದ್ದತೆಯನ್ನು ಮಾಡಿಕೊಂಡಿದೆ. ಬರೋಬ್ಬರಿ 18 ತಿಂಗಳ ಬಳಿಕ ಶಾಲೆಗಳು ತೆರೆಯುತ್ತಿದ್ದು, ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಲು ಉತ್ಸುಕರಾಗಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಮನೆಯಲ್ಲೇ ಆನ್​ಲೈನ್​ ಕ್ಲಾಸ್​ ಕೇಳಿ ಕೇಳಿ ಬೇಸರಗೊಂಡಿದ್ದ ಮಕ್ಕಳು ಈಗ ಶಾಲೆಯ ವಾತಾವರಣದಲ್ಲಿ ನೇರವಾಗಿ ಪಾಠ ಕೇಳುವ ಅವಕಾಶ ಸಿಕ್ಕಿದೆ. ಆದರೆ ಇಡೀ ದಿನ ಶಾಲೆ ಇರುವುದಿಲ್ಲ. ಬದಲಾಗಿ ಇಂದಿನಿಂದ ಅರ್ಧ ದಿನ ಮಾತ್ರ ಶಾಲೆಗಳು ತೆರೆದಿರುತ್ತವೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1.30ರವರೆಗೆ ಮಾತ್ರ ಶಾಲೆಗಳು ಓಪನ್ ಇರುತ್ತವೆ. ಇಂದು ಒಟ್ಟು 26 ಜಿಲ್ಲೆಗಳಲ್ಲಿ ಶಾಲೆಗಳು ಆರಂಭವಾಗಲಿವೆ.

  3.ಶೈಲಿ ಸಿಂಗ್​ಗೆ ಬೆಳ್ಳಿ; ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಹೊಸ ದಾಖಲೆ

  ಬೆಂಗಳೂರು: ಕೀನ್ಯಾದ ನೈರೋಬಿಯಲ್ಲಿ ನಿನ್ನೆ ಮುಕ್ತಾಯಗೊಂಡ 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ (World Athletics U20 Championships 2021) ಭಾರತ ಉತ್ತಮ ಸಾಧನೆ ಮಾಡಿದೆ. ಆಗಸ್ಟ್ 17ರಂದು ಪ್ರಾರಂಭಗೊಂಡ ಈ ಕಿರಿಯರ ಕೂಟದಲ್ಲಿ ಭಾರತ 3 ಪದಕಗಳನ್ನ ಗೆದ್ದು ಹೊಸ ದಾಖಲೆ ಬರೆದಿದೆ. 1986ರಿಂದ ಪ್ರತೀ ಎರಡು ವರ್ಷಕ್ಕೊಮ್ಮೆ ನಡೆಯುತ್ತಿರುವ ಈ ಅಥ್ಲೆಟಿಕ್ಸ್ ಕೂಟದ ಇತಿಹಾಸದಲ್ಲಿ ಭಾರತ ಎಂದೂ ಒಂದಕ್ಕಿಂತ ಹೆಚ್ಚು ಪದಕ ಗೆದ್ದದ್ದಿಲ್ಲ. ಈ ಬಾರಿ ಮೂರು ಪದಕಗಳನ್ನ ಜಯಿಸಿದೆ. ಟೋಕಿಯೋ ಒಲಿಂಪಿಕ್ಸ್​ನಲ್ಲೂ ಅತಿ ಹೆಚ್ಚು ಪದಕಗಳನ್ನ ಗೆದ್ದಿದ್ದ ಭಾರತ ಈಗ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲೂ ಗಮನಾರ್ಹ ಪ್ರದರ್ಶನ ನೀಡಿದೆ. ಎರಡು ಬೆಳ್ಳಿ ಮತ್ತು 1 ಕಂಚಿನ ಪದಕಗಳನ್ನ ಭಾರತದ ಕಿರಿಯ ಅಥ್ಲೀಟ್​ಗಳು ಗೆದ್ದಿದ್ದಾರೆ.

  4.ಮುಂದಿನ ಚುನಾವಣೆಗೆ ಎಚ್​ಡಿಕೆ ಮಾಸ್ಟರ್ ಪ್ಲಾನ್; ಚನ್ನಪಟ್ಟಣದಲ್ಲಿ ಸದ್ದಿಲ್ಲದೇ ಸಾಗ್ತಿವೆ ಅಭಿವೃದ್ಧಿ ಕಾರ್ಯಗಳು

  ರಾಮನಗರ(ಆ.23): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಇದರ ಜೊತೆಗೆ ರಾಮನಗರ ಜಿಲ್ಲೆಯಲ್ಲಿಯೂ ಸಹ ಪಕ್ಷ ಸಂಘಟನೆಗೆ ಒತ್ತು ನೀಡಿರುವ ಕುಮಾರಸ್ವಾಮಿ ಈಗ ಫುಲ್ ಅಲರ್ಟ್ ಆಗಿದ್ದಾರೆ. 2023 ರ ಸಾರ್ವತ್ರಿಕ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ತಂದು ಮತ್ತೊಮ್ಮೆ ಸಿಎಂ ಆಗುವ ಕನಸು ಕಾಣ್ತಿದ್ದಾರೆ ಕುಮಾರಸ್ವಾಮಿ. ಚನ್ನಪಟ್ಟಣ ಕ್ಷೇತ್ರ ಜೆಡಿಎಸ್ ಪಕ್ಷದ ಭದ್ರಕೋಟೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಕುಮಾರಸ್ವಾಮಿ ಕ್ಷೇತ್ರದ ಶಾಸಕರಾದ ಬಳಿಕ ಚನ್ನಪಟ್ಟಣ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸಕಾರ್ಯಗಳು ಸದ್ದಿಲ್ಲದೆ ನಡೆಯುತ್ತಿವೆ. ಪ್ರಮುಖವಾಗಿ ಕ್ಷೇತ್ರದ ಪ್ರತಿ ಹಳ್ಳಿಯ ರಸ್ತೆಗಳು ಅಭಿವೃದ್ಧಿ ಕಾಣ್ತಿವೆ. ಇದರ ಜೊತೆಗೆ ಮೂಲಭೂತ ಸೌಕರ್ಯಗಳ ಪೂರೈಕೆಯಲ್ಲಿಯೂ ಸಹ ಕುಮಾರಸ್ವಾಮಿ ಅಧಿಕಾರಿಗಳ ಮೇಲೆ ಒತ್ತಡ ತಂದು ಕೆಲಸ ಮಾಡಿಸುತ್ತಿದ್ದಾರೆ. ಆದರೆ ಅಧಿಕಾರಿಗಳ ವರ್ಗದಲ್ಲಿ ಕೆಲವರು ಲಂಚ ಪಡೆಯುವ ಮೂಲಕ ಜನರಿಗೆ ತೊಂದರೆ ಕೊಡ್ತಿದ್ದಾರೆಂಬ ಚರ್ಚೆಯೂ ಸಹ ಹೆಚ್ಚಾಗಿ ನಡೆಯುತ್ತಿದ್ದು ಈ ಬಗ್ಗೆ ಕುಮಾರಸ್ವಾಮಿರವರು ಗಮನಹರಿಸಬೇಕಿದೆ.
  Published by:Latha CG
  First published: