Morning Digest: ರಾಜ್ಯದಲ್ಲಿಂದು ಭಾರೀ ಮಳೆ, ಚಿನ್ನದ ಬೆಲೆಯಲ್ಲಿ ಇಳಿಕೆ; ಇಂದಿನ ಪ್ರಮುಖ ಸುದ್ದಿಗಳಿವು

ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು? ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    1.Karnataka Weather Today: ರಾಜ್ಯದಲ್ಲಿ ಇಂದು ಭಾರೀ ಮಳೆ; ಬೆಂಗಳೂರಿಗರು ಸಂಜೆ ವೇಳೆಗೆ ಮನೆ ಸೇರಿಕೊಳ್ಳುವುದು ಒಳಿತು..!

    Karnataka Rains Today:(ಆ.10): ಕರ್ನಾಟಕದಲ್ಲಿ ಕಳೆದ 6-7 ದಿನಗಳಿಂದ ಮತ್ತೆ ಮುಂಗಾರು ಚುರುಕುಗೊಂಡಿದೆ. ಜುಲೈ ನಂತರ ಕೊಂಚ ವಿರಾಮ ನೀಡಿದ್ದ ಮಳೆರಾಯ, ಕಳೆದ ಒಂದು ವಾರದಿಂದ ಮತ್ತೆ ತನ್ನ ಆರ್ಭಟ ಮುಂದುವರೆಸಿದ್ದಾನೆ. ಕರಾವಳಿ ಮತ್ತು ಮಲೆನಾಡಿನಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಜುಲೈ ತಿಂಗಳಲ್ಲಿ ವರುಣನ ಆರ್ಭಟಕ್ಕೆ ಮಲೆನಾಡು, ಕರಾವಳಿ ಮತ್ತು ಉತ್ತರ ಕರ್ನಾಟಕದ ಜನರು ಅಕ್ಷರಶಃ ತತ್ತರಿಸಿ ಹೋಗಿದ್ದರು. ಈಗ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ. ಇಂದೂ ಸಹ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುಂದುವರೆಯಲಿದೆ. ಇಂದು ಮಲೆನಾಡು, ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾವಾನ ಇಲಾಖೆ ಮುನ್ಸೂಚನೆ ನೀಡಿದೆ. ಕಳೆದ ಒಂದು ವಾರದಿಂದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗುತ್ತಿದೆ. ಜುಲೈ ತಿಂಗಳಾಂತ್ಯದಲ್ಲಿ ಕೊಂಚ ಬಿಡುವು ಕೊಟ್ಟಿದ್ದ ಮಳೆರಾಯ, ಮತ್ತೆ ತನ್ನ ಆರ್ಭಟ ತೋರಿಸುತ್ತಿದ್ದಾನೆ. ನಿನ್ನೆ ಸಹ ಬೆಂಗಳೂರಿನಲ್ಲಿ ಮಳೆಯಾಗಿದೆ. ಇಂದು ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಭಾರೀ ಮಳೆಯಾಗಲಿದೆ.



    2.Gold Price Today: ಇಳಿಯುತ್ತಲೇ ಇದೆ ಚಿನ್ನದ ಬೆಲೆ; ಬಂಗಾರ ಖರೀದಿಗೆ ಇದಕ್ಕಿಂತ ಒಳ್ಳೆ ಟೈಂ ಬೇಕಾ?

    Gold Rate on August 10 2021 | ಕೆಲವು ದಿನಗಳ ಹಿಂದೆ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇತ್ತು. ಕಳೆದ 4 ದಿನಗಳಿಂದ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಇಂದು ಭಾರೀ ಇಳಿಕೆ ಕಂಡಿದೆ. ಹೀಗಾಗಿ ಆಭರಣ ಪ್ರಿಯರಿಗೆ ಇದೇ ಚಿನ್ನ ಖರೀದಿಸಲು ಸೂಕ್ತ ಸಮಯವಾಗಿದೆ. ಕಳೆದ 6 ದಿನಗಳಿಂದ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿರಲಿಲ್ಲ. ನಿನ್ನೆಯಿಂದ ಮತ್ತೆ ಚಿನ್ನದ ಬೆಲೆ ಇಳಿಯುತ್ತಿದೆ. ಇಂದೂ ಸಹ ಬಂಗಾರದ ಬೆಲೆ ಕಡಿಮೆಯಾಗಿದೆ. 10 ಗ್ರಾಂ ಚಿನ್ನಕ್ಕೆ 410 ರೂಪಾಯಿ ಇಳಿಕೆಯಾಗಿದ್ದು, ಇದು ಆಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 45,690 ರೂ. ಇತ್ತು. ಇಂದು 45,280 ರೂ. ಆಗಿದೆ. ಅದೇ ರೀತಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆಯೂ ಕಡಿಮೆಯಾಗಿದೆ. ನಿನ್ನೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 46,690 ರೂ. ಇತ್ತು. ಇಂದು 46,280 ರೂಪಾಯಿ ಆಗಿದೆ.

    3.Petrol Price Today: ಭಾರತದಲ್ಲಿ ಸತತ 24ನೇ ದಿನವೂ ಸ್ಥಿರತೆ ಕಾಯ್ದುಕೊಂಡ ಪೆಟ್ರೋಲ್​-ಡೀಸೆಲ್ ಬೆಲೆ..!

    Petrol, Diesel Prices on August 10 ಬೆಂಗಳೂರು: ನಿರಂತರವಾಗಿ ಏರಿಕೆ ಕಾಣುತ್ತಾ ಬಂದಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಳೆದ 24 ದಿನಗಳಿಂದ ತಟಸ್ಥವಾಗಿದೆ. ಜುಲೈ 18ರಿಂದ ಪೆಟ್ರೋಲ್ ಬೆಲೆ ಯಾವುದೇ ಏರಿಕೆ ಕಂಡಿಲ್ಲ. ಆದರೆ, ಮೇ 4ರಿಂದ ಇಲ್ಲಿಯವರೆಗೆ ಹಲವು ಬಾರಿ ಬೆಲೆ ಹೆಚ್ಚಳಗೊಂಡ ಪರಿಣಾಮ ಈ ಅವಧಿಯಲ್ಲಿ ಪೆಟ್ರೋಲ್ 11 ರೂ ದುಬಾರಿಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 105.25 ರೂ ದರ ಇದೆ. ಡೀಸೆಲ್ ಬೆಲೆ 95.26 ರೂ ನಲ್ಲೇ ಮುಂದುವರಿದಿದೆ. ಮಹಾನಗರಿಗಳ ಪೈಕಿ ಮುಂಬೈನಲ್ಲಿ ಪೆಟ್ರೋಲ್ ಡೀಸೆಲ್ ಅತಿ ದುಬಾರಿ ಇದೆ. ಈ ವಾಣಿಜ್ಯ ನಗರಿಯಲ್ಲಿ ಪೆಟ್ರೋಲ್ ಬೆಲೆ 107.83 ಇದ್ದರೆ, ಡೀಸೆಲ್ ದರ 97.43 ರೂ ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 101.84 ರೂ ಇದೆ. ಇಲ್ಲಿ ಡೀಸೆಲ್ ಬೆಲೆ ಇನ್ನೂ 90 ರೂ ಗಡಿ ಮುಟ್ಟಿಲ್ಲ.

    4.Kodagu Rains: ಕೊಡಗಿನಲ್ಲಿ ಭಾರೀ ಮಳೆಗೆ ಬಿರುಕು ಬಿಟ್ಟ ಸೇತುವೆಗಳು; ಹಲವೆಡೆ ಗುಡ್ಡ ಕುಸಿತ, ಆತಂಕದಲ್ಲಿ ಜನರು

    ಕೊಡಗು ಜಿಲ್ಲೆಯ ಮಡಿಕೇರಿ ಮತ್ತು ಸೋಮವಾರಪೇಟೆ ತಾಲ್ಲೂಕಿನ ಹಲವೆಡೆ ಕಳೆದ ಎರಡು ಮೂರು ದಿನಗಳಲ್ಲಿ ಸುರಿದ ಭಾರೀ ಮಳೆಗೆ ಹಮ್ಮಿಯಾಲ, ಆವಂಡಿ, ಮುಟ್ಲುು, ಮತ್ತು ಮುಕ್ಕೋಡ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮೂರು ಸೇತುವೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಪರಿಣಾಮವಾಗಿ ಈ ಮೂರು ಗ್ರಾಮಗಳ ಸಂಪರ್ಕ ದುಸ್ತರವಾಗಿದ್ದು, ಜನರು ಪರದಾಡುವಂತಾಗಿದೆ. ಮುಕ್ಕೋಡ್ಲು, ಹಮ್ಮಿಯಾಲ, ಆವಂಡಿ ಮತ್ತು ಮುಟ್ಲು ಗ್ರಾಮಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಕುಟುಂಬಗಳಿದ್ದು ಅಷ್ಟು ಕುಟುಂಬಗಳು ಈಗ ನಡೆದುಕೊಂಡೇ ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆ ಸುರಿದ ಪರಿಣಾಮ ಹೊಳೆಗಳು ತುಂಬಿ ಹರಿದಿದ್ದು, ನೀರಿನ ರಭಸಕ್ಕೆ ಸೇತುವೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಮುಟ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಬಹುತೇಕ ಕುಸಿದು ಹಾಗೆ ನಿಂತಿದೆ. ಸದ್ಯ ಅಪಾಯದ ಸ್ಥಿತಿಯಲ್ಲಿರುವ ಸೇತುವೆಗಳ ಮೇಲೆ ಜನರು ನಡೆದುಕೊಂಡೆ ಓಡಾಡುತ್ತಿದ್ದಾರೆ.
    Published by:Latha CG
    First published: