Morning Digest: ಬೆಂಗಳೂರಿಗರಿಗೆ ಮಳೆಯ ಜೊತೆ ಪೆಟ್ರೋಲ್-ಚಿನ್ನದ ಬೆಲೆ ಏರಿಕೆ ಬರೆ; ಕೋರಮಂಗಲದಲ್ಲಿ ಮತ್ತೆ ಅಪಘಾತ: ಬೆಳಗಿನ ಸುದ್ದಿಗಳು

Kannada News: ರಾಜ್ಯ, ದೇಶ-ವಿದೇಶದಲ್ಲಿ ನಡೆದ ಘಟನಾವಳಿಗಳ ಕುರಿತು ಓದಲೇಬೇಕಾದ ಇಂದಿನ ಪ್ರಮುಖ ಸುದ್ದಿಗಳ ಗುಚ್ಛ ಇಲ್ಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರಲ್ಲಿ 2 ದಿನ ಅಬ್ಬರಿಸಲಿರುವ ವರುಣ: ರಾಜ್ಯಾದ್ಯಂತ ಮುಂಗಾರು ಮಳೆ (Monsoon) ಮತ್ತಷ್ಟು ಚುರುಕಾಗಿದ್ದು, ಮುಂದಿನ ನಾಲ್ಕು ದಿನಗಳಲ್ಲಿ ರಾಜ್ಯದ ಹಲವು ಭಾಗದಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Department of Meteorology) ಮುನ್ಸೂಚನೆ ನೀಡಿದೆ. ರಾಜಧಾನಿ ಬೆಂಗಳೂರಿನಲ್ಲಿ ಶನಿವಾರದವರೆಗೆ ಅಂದರೆ ಇಂದು-ನಾಳೆ ವರುಣ ಅಬ್ಬರಿಸಲಿದ್ದಾನೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ. ಅ. 22 ಮತ್ತು 23ರಂದು ಹೆಚ್ಚು ಮಳೆ ಬೀಳುವ ಸಂಭವವಿದೆ. ಅ. 1 ರಿಂದ 20ರವರೆಗೆ ನಗರದಲ್ಲಿ 209 ಮಿ.ಮೀ. ಮಳೆ ಸುರಿದಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ನಗರದ ರಸ್ತೆಗಳು ಗುಂಡಿ ಬಿದ್ದು, ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ.

ಮುಂದುವರಿದ ಪೆಟ್ರೋಲ್‌, ಡೀಸೆಲ್‌ ಬೆಲೆಯೇರಿಕೆ

ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್​ ಬೆಲೆ (Petrol and Diesel Price) ನಿಯಂತ್ರಣಕ್ಕೆ ಬರುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಶುಕ್ರವಾರವಾದ ಇಂದೂ ಸಹ ತೈಲ ಬೆಲೆಯಲ್ಲಿ ಏರಿಕೆ(Fuel Price Hike) ಕಂಡು ಬಂದಿದ್ದು, ಬಡವರ ಕೈಗೆ ಎಟುಕದಂತಾಗಿದೆ. ಈಗಾಗಲೇ ಎಲ್​ಪಿಜಿ ಬೆಲೆ (LPG) ಏರಿಕೆಯಿಂದ ಕಂಗಾಲಾಗಿರುವ ಜನ ದಿನನಿತ್ಯ ಏರುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯಿಂದಾಗಿ ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿದೆ. ಉಳಿದ ಹಲವು ಜಿಲ್ಲೆಗಳಲ್ಲಿ ಸಾಕಷ್ಟು ಏರಿಳಿತ ಕಂಡಿದೆ. ಪ್ರಸ್ತುತ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು 1 ಲೀಟರ್ ಪೆಟ್ರೋಲ್​ ಅನ್ನು 110.25 ರೂ ಗೆ ಮಾರಾಟ ಮಾಡುತ್ತಿದ್ದರೆ, ಡೀಸೆಲ್​ ಅನ್ನು 101.12 ರೂ.ಗೆ ಮಾರಾಟ ಮಾಡಲಾಗುತ್ತಿದೆ.

ಬೆಂಗಳೂರಲ್ಲಿ ಮತ್ತಷ್ಟು ಹೆಚ್ಚಾದ ಚಿನ್ನ, ಬೆಳ್ಳಿ ದರ

ದೇಶದಲ್ಲಿ ಚಿನ್ನದ ಬೆಲೆ (Gold Price) ಯಲ್ಲಿ ಅಲ್ಪ ಇಳಿಕೆಯಾಗಿದ್ದು, ಆಭರಣ ಪ್ರಿಯರಿಗೆ ಖುಷಿ ತಂದಿದೆ. ಆದರೆ, ಬೆಂಗಳೂರಿನಲ್ಲಿ (Bengaluru) ಇಂದು ಚಿನ್ನದ ಬೆಲೆ ಏರಿಕೆಯಾಗಿದ್ದು, 22 ಕ್ಯಾರೆಟ್‌ ಚಿನ್ನದ ಬೆಲೆ 100 ರೂ. ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 46,490 ರೂ. ಇತ್ತು, ಇಂದು 20 ರೂ. ಬೆಲೆ ಇಳಿಕೆಯಾಗಿ 46,470 ರೂ. ಆಗಿದೆ. ಅಂತೆಯೇ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,490 ರೂ. ಆಗಿದ್ದು, ಇಂದು 47,470 ರೂ. ಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ (Gold Price) ಇಂದು 48,600 ರೂ. ಆಗಿದೆ. ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಚಿನ್ನ 44,550 ರೂ. ಇದೆ. ಹಾಗೆಯೇ ಮೈಸೂರು ಹಾಗೂ ಮಂಗಳೂರಿನಲ್ಲೂ ಇದೇ ಬೆಲೆ ಇದೆ.

ಕೋರಮಂಗಲದಲ್ಲಿ ಮತ್ತೆ ಕಾರು ಅಪಘಾತ

ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಕಾರು ಅಪಘಾತ (car accident) ಸಂಭವಿಸಿದೆ. ಕೋರಮಂಗಲ(Koramangala)ದ ಸೆಂಟ್ ಜಾನ್ ಆಸ್ಪತ್ರೆ ಸಿಗ್ನಲ್ ಬಳಿ ಕುಡಿದ ಮತ್ತಿನಲ್ಲಿ (drink and drive ) ಕಾರು ಚಾಲಕ ಡಿವೈಡರ್​​ ಗೆ ಡಿಕ್ಕಿ ಹೊಡೆದಿದ್ದಾರೆ. ಗುದ್ದಿದ ರಭಸಕ್ಕೆ ಬಲೇನೋ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಕಾರಿನ ಚಾರ್ಸಿ ಕಟ್ಟ್ ಆಗಿ ನೂರು ಮೀಟರ್ ದೂರ ಬಿದ್ದಿದೆ. ಅದೃಷ್ಟವಶಾತ್ ಕಾರಿನ ಚಾಲಕ ಪ್ರಾಣಾಪಯದಿಂದ ಪಾರಾಗಿದ್ದಾರೆ. ಅಪಘಾತದ ವೇಳೆ ಕಾರಿನಲ್ಲಿದ್ದ ಎರಡು ಕಡೆ ಏರ್ ಬ್ಯಾಗ್ ಓಪನ್ ಆಗಿವೆ. ಏರ್ ಬ್ಯಾಗ್ ಓಪನ್‌ ಆಗಿದ್ದರಿಂದ ಪ್ರಾಣಪಾಯದಿಂದ ಚಾಲಕ ಬಚಾವ್​ ಆಗಿದ್ದಾರೆ. ಪರಿಶೀಲನೆ ವೇಳೆ ಕುಡಿದು ಕಾರು ಚಲಾಯಿಸಿರೋದು ಪತ್ತೆಯಾಗಿದೆ. ಸದ್ಯ ಘಟನಾ ಸ್ಥಳಕ್ಕೆ ಭೇಟಿ‌ ನೀಡಿ ಚಾಲಕನನ್ನ ಮಡಿವಾಳ ಸಂಚಾರಿ ಪೊಲೀಸರು ವಶ ಪಡೆದುಕೊಂಡಿದ್ದಾರೆ. ಅತಿವೇಗದ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಶ್ವದಲ್ಲೇ ವೇಗವಾದ ಲಸಿಕಾ ಅಭಿಯಾನ

ಭಾರತ ಇಂದು ಶತಕೋಟಿ ಡೋಸ್ ಕೊರೋನಾ ಲಸಿಕೆ ಡೋಸ್ (100 Crore Corona Vaccine Dose Distribution) ಪೂರೈಸುವ ಮೂಲಕ ಮಹತ್ತರ ಮೈಲಿಗಲ್ಲು ಸಾಧಿಸಿದೆ. ಭಾರತದಲ್ಲಿ (India) ವಿತರಿಸಲಾಗಿರುವ ಲಸಿಕೆಯ ಪ್ರಮಾಣ ಅಮೆರಿಕಾ ಮತ್ತು ಐರೋಪ್ಯ ರಾಷ್ಟ್ರಗಳ ಒಟ್ಟು ಲಸಿಕೆಗಿಂತ ಹೆಚ್ಚು. ಈ ನೂರು ಕೋಟಿ ಡೋಸ್ ಗಳಲ್ಲಿ ಕರ್ನಾಟಕದ ಪಾಲು 6.21 ಕೋಟಿ ಡೋಸ್. ಜನವರಿ 16ರಂದು ಆರಂಭವಾದ ಲಸಿಕಾ ಅಭಿಯಾನ ಕೇವಲ 9 ತಿಂಗಳುಗಳಲ್ಲಿ ಶತಕೋಟಿ ಪೂರೈಸುವ ಮೂಲಕ ವಿಶ್ವದ ಅತ್ಯಂತ ದೊಡ್ಡ ಹಾಗೂ ವೇಗವಾದ ಲಸಿಕಾ ಅಭಿಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮಹತ್ತರ ಸಾಧನೆಗೆ ದೇಶದ ಖ್ಯಾತ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಪರಿಣಿತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
Published by:Kavya V
First published: