ವಿದ್ಯುತ್ ಅವಘಡಗಳಿಂದ ಸತ್ತವರು 350ಕ್ಕೂ ಹೆಚ್ಚು; ಬೆಸ್ಕಾಮ್ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ ಬೇಕು?

Benaglore: ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಕಳೆದ 3 ವರ್ಷದಲ್ಲಿ ಒಟ್ಟಾರೆ 757 ವಿದ್ಯುತ್ ಅಪಘಾತಗಳಾಗಿದೆ. ಅದರಲ್ಲಿ 368 ಪ್ರಕರಣಗಳಲ್ಲಿ ಜೀವಹಾನಿ ಸಂಭವಿಸಿದೆ.

ಪ್ರಾಯೋಗಿಕ ಚಿತ್ರ

ಪ್ರಾಯೋಗಿಕ ಚಿತ್ರ

  • News18
  • Last Updated :
  • Share this:
ಬೆಂಗಳೂರು(ಮೇ 14): ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ ಯಮ ಸ್ವರೂಪಿ ವಿದ್ಯುತ್ ಕಂಬ, ಬಲಿಗಾಗಿ ಕಾದಿರುವ ವಿದ್ಯುತ್ ತಂತಿಗಳಿವೆ ಎಚ್ಚರ ಎಚ್ಚರ. ಮಳೆಗಾಲದ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚು ಜಾಗೃತರಾಗಬೇಕಾಗಿದೆ. ಕಳೆದ ಮೂರು ವರ್ಷದಲ್ಲಿ 8 ಜಿಲ್ಲೆಗಳಲ್ಲಿ ನೂರಾರು ಅಮೂಲ್ಯ ಜೀವಗಳು ಬಲಿಯಾಗಿರುವ ದಾರುಣ ಸಂಗತಿ ಬೆಳಕಿಗೆ ಬಂದಿದೆ.

ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಗೆ ಬರುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಈ 8 ಜಿಲ್ಲೆಗಳಲ್ಲಿ ಪಾದಚಾರಿ ಮಾರ್ಗಗಳಲ್ಲೇ ಯಮಸ್ವರೂಪಿ ವಿದ್ಯುತ್ ಕಂಬಗಳಿವೆ. ಮಳೆ-ಗಾಳಿ ಸಂದರ್ಭದಲ್ಲಿ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಅಥವಾ ದುರ್ಬಲ ವಿದ್ಯುತ್ ಕಂಬ ನೆಲಕ್ಕೆ ಬಿದ್ದ ಸಾಕಷ್ಟು ಅಪಘಾತಗಳು ಸಂಭವಿಸಿವೆ. ರಾಜಧಾನಿ ಒಂದರಲ್ಲೇ 2015-16 ರಿಂದ 2017-18 ರ 3 ವರ್ಷದಲ್ಲಿ 60 ಜನ ತಮ್ಮ ಜೀವ ಕಳೆದುಕೊಂಡಿದ್ದಾರೆ. ಹೀಗಾಗಿ ಇಂತಹ ಸ್ಥಳಗಳಲ್ಲಿ ಓಡಾಡುವಾಗ ಜನರು ಸಾಕಷ್ಟು ಜಾಗ್ರತೆ ವಹಿಸಬೇಕು. ಎಷ್ಟೋ ವೇಳೆ ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬಗಳ ಬಗ್ಗೆ ದೂರು ನೀಡಿದ್ರೂ ಬೆಸ್ಕಾಂ ಸೂಕ್ತ ರೀತಿ ಕ್ರಮ ಕೈಗೊಳ್ತಿಲ್ಲ ಎಂಬ ಆರೋಪಗಳಿವೆ.

ಎಷ್ಟೋ ಕಂಬಗಳಲ್ಲಿ ವಿದ್ಯತ್​​ ವೈರ್ ಜೋತು ಬಿದ್ದಿದ್ದು, ಅದಕ್ಕೆ ಸೂಕ್ತ ರೀತಿಯಲ್ಲಿ ಇನ್ಸಲೇಷನ್ ಟೇಪ್ ಕೂಡ ಹಾಕಿರಲ್ಲ. ಹೀಗಾಗಿ ಅದರ ಬಳಿ ಅಕಸ್ಮಾತಾಗಿ ಓಡಾಡುವ ಸಂದರ್ಭದಲ್ಲಿ ಕೈ, ಕಾಲಿಗೋ ವಿದ್ಯುತ್ ವೈರ್ ತಾಗಿದರೇ ಅಪಾಯ ಕಟ್ಟಿಟ್ಟ ಬುತ್ತಿ. ಮನೆ ಮುಂದೆ ವಿದ್ಯುತ್ ಕಂಬದ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಮನೆಗೆ ತೀರಾ ಹತ್ತಿರವಾಗಿದ್ರೆ ಅವುಗಳನ್ನು ಎಲೆಕ್ಟ್ರಿಕ್ ಕೊಳವೆಗಳಿಂದ ಕವರ್ ಮಾಡುವ ಬಗ್ಗೆ ಬೆಸ್ಕಾಂ ಗೆ ಮನವಿ ಮಾಡಿದ್ರೆ ಒಳ್ಳೆಯದು.

ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಲ್ಲಿ ಸಂಭವಿಸಿದ ಅಪಘಾತಗಳ ವಿವರ

* 2016 ರಿಂದ 2018ರ ವರೆಗೆ ಒಟ್ಟು 757 ವಿದ್ಯುತ್ ಅಪಘಾತ ಘಟನೆಗಳು

* ಕಳೆದ 3 ವರ್ಷದಲ್ಲಿ 368 ಸಾವು

* 251 ಸಾಮಾನ್ಯ ವಿದ್ಯುತ್ ಅಪಘಾತಗಳು

ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ತುಮಕೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಗಳಲ್ಲಿ 2016 ರಿಂದ 2018ರ 3 ವರ್ಷದಲ್ಲಿ ಒಟ್ಟಾರೆ 757 ವಿದ್ಯುತ್ ಅಪಘಾತಗಳಾಗಿದೆ. ಅದರಲ್ಲಿ 368 ಪ್ರಕರಣಗಳಲ್ಲಿ ಜೀವಹಾನಿ ಸಂಭವಿಸಿದೆ.  251 ಸಾಮಾನ್ಯ ವಿದ್ಯುತ್ ಅಪಘಾತ ಸಂಭವಿಸಿದ್ದಾಗಿ ಬೆಸ್ಕಾಂ ತಿಳಿಸಿದೆ.

ವಿದ್ಯುತ್ ಅಪಘಾತಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಬೆಸ್ಕಾಂ ವಿಫಲವಾಗಿದೆ ಎಂದು ಸರ್ಕಾರೇತರ ಸಂಘ ಸಂಸ್ಥೆಗಳು ಆರೋಪಿಸಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳನ್ನ ಕೇಳಿದ್ರೆ 'ಜನರಲ್ಲಿ ವಿದ್ಯುತ್ ಅಪಘಾತವಾಗದಂತೆ ಮುಂಜಾಗ್ರತೆ ಕೈಗೊಳ್ಳುವ ಬಗ್ಗೆ ಹೆಚ್ಚಿನ ಜಾಗೃತಿಯಿಲ್ಲ. ಮಳೆಗಾಲಕ್ಕೆ ಮುನ್ನ ತಂತಿಗೆ ತಾಕುವ ಮರದ ಕೊಂಬೆಯ ಟ್ರಿಮಿಂಗ್, ವಾಲಿದ ಕಂಬ ಸರಿಪಡಿಸುವುದು, ಟ್ರಾನ್ಸ್ ಫಾರ್ಮರ್ ರಿಪೇರಿ ಮತ್ತಿತರ ಕೆಲಸಗಳು ಆಗಿವೆ' ಅಂತ ಹೇಳ್ತಾರೆ. ಆದರೆ ಪ್ರತಿ ವರ್ಷವೂ ಇದೇ ಕೆಲಸ ಮಾಡಿ, ಜಾಗೃತಿ ಮೂಡಿಸುವ ಕೆಲಸವನ್ನೂ ಮಾಡಿದರೆ ವಿದ್ಯುತ್ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿತ್ತು ಎಂದು ಸಂಘ ಸಂಸ್ಥೆಗಳ ಅಭಿಪ್ರಾಯ.

ಈ ಹಿನ್ನೆಲೆಯಲ್ಲಿ, ಸಾರ್ವಜನಿಕರೂ ಕೂಡ ತಮ್ಮ ಜವಾಬ್ದಾರಿ ತೋರುವುದು ಅಗತ್ಯವಿದೆ. ವಿದ್ಯುತ್ ಕಂಬ, ಟ್ರಾನ್ಸ್​ಫಾರ್ಮರ್ ಮತ್ತು ಮನೆ ಮೇಲಿನ ವಿದ್ಯುತ್ ತಂತಿಗಳು ಹಾದು ಹೋಗಿರುವ ಕಡೆ ಅದರಿಂದ ದೂರ ಇರೋದೇ ಒಳ್ಳೆಯದು. ಮಳೆಗಾಲದಲ್ಲಂತೂ ಸಾಕಷ್ಟು ಎಚ್ಚರಿಕೆ ವಹಿಸಬೇಕು. ದೋಷಪೂರಿತ ವಿದ್ಯುತ್ ಕಂಬ, ವಿದ್ಯುತ್ ತಂತಿಗಳು ಅಥವಾ ಪವರ್ ಟ್ರಾನ್ಸ್ ಫಾರ್ಮರ್ ಒಂದೊಮ್ಮೆ ಕಂಡುಬಂದ್ರೆ ಬೆಸ್ಕಾಂನ 1912 ಹೆಲ್ಪ್ ಲೈನ್ ಗೆ ಕೂಡಲೇ ದೂರು ನೀಡಿ.

(ವರದಿ : ಶ್ಯಾಮ್​​​ ಎಸ್​​)
First published: