HOME » NEWS » State » MORE PREGNANCIES DURING COVID CHILDREN ARE AT HIGH RISK THIS SEASON DOCTORS WORRY SKTV

Covid Effect: ಆತಂಕದ ಛಾಯೆಯಲ್ಲಿ ಗರ್ಭಿಣಿಯರ ಪಾಡು, ಜನರ ಉಡಾಫೆ, ಮಕ್ಕಳಲ್ಲಿ ಸೋಂಕು… ಎರಡೂ ಹೆಚ್ಚಾಗಿದೆ: ವೈದ್ಯರಿಗೆ ಆತಂಕ !

ಗಮನಾರ್ಹ ವಿಚಾರವೆಂದರೆ 2020ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಗರ್ಭಿಣಿಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಈ ವರ್ಷ(2021) ಜನವರಿ ತಿಂಗಳಿನಿಂದ ಇಲ್ಲಿವರಗೆ ದೇಶದಾದ್ಯಂತ ಗರ್ಭಿಣಿಯರ ಸಂಖ್ಯೆಯಲ್ಲಿ ಶೇಕಡಾ 10ರಿಂದ 20ರಷ್ಟು ಹೆಚ್ಚಳವಾಗಿದೆ. ಐವಿಎಫ್ ಅಥವಾ ಕೃತಕ ಗರ್ಭಧಾರಣೆಯ ಪ್ರಮಾಣದಲ್ಲಿ ಮಾತ್ರ ಶೇಕಡಾ 80ರಿಂದ 90ರಷ್ಟು ಇಳಿಕೆಯಾಗಿದೆ, ನೈಸರ್ಗಿಕ ಗರ್ಭಧಾರಣೆ ಪ್ರಮಾಣದಲ್ಲಿ ಏರಿಕೆಯಾಗಿದೆ.

news18-kannada
Updated:April 18, 2021, 4:05 PM IST
Covid Effect: ಆತಂಕದ ಛಾಯೆಯಲ್ಲಿ ಗರ್ಭಿಣಿಯರ ಪಾಡು, ಜನರ ಉಡಾಫೆ, ಮಕ್ಕಳಲ್ಲಿ ಸೋಂಕು… ಎರಡೂ ಹೆಚ್ಚಾಗಿದೆ: ವೈದ್ಯರಿಗೆ ಆತಂಕ !
ಸಾಂದರ್ಭಿಕ ಚಿತ್ರ
  • Share this:
Covid Effects: ಕೋವಿಡ್ ಆರ್ಭಟ ಹೆಚ್ಚಾದಾಗ ಕಳೆದ ಬಾರಿ ಅತೀ ಹೆಚ್ಚು ಆತಂಕ ಸೃಷ್ಟಿಸಿದ್ದು ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯದ ವಿಚಾರ. ಈಗಲೂ ಲಸಿಕೆಯನ್ನು ಈ ಎರಡು ವರ್ಗಗಳಿಗೆ ಕೊಡುವ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾಗಿ ಎರಡನೇ ಅಲೆಯ ಈ ಸಂದಿಗ್ಧ ಕಾಲದಲ್ಲೂ ಗರ್ಭಿಣಿಯರು ಮತ್ತು ಮಕ್ಕಳ ಆರೋಗ್ಯವನ್ನು ಕೋವಿಡ್ ಸೋಂಕಿನಿಂದ ಕಾಪಾಡುವ ಕುರಿತು ಆತಂಕವಂತೂ ಇದ್ದೇ ಇದೆ.

ಗಮನಾರ್ಹ ವಿಚಾರವೆಂದರೆ 2020ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚು ಗರ್ಭಿಣಿಯರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಆದರೆ ಹಿಂದಿನ ವರ್ಷಗಳಿಗೆ ಹೋಲಿಸಿದ್ರೆ ಈ ವರ್ಷ(2021) ಜನವರಿ ತಿಂಗಳಿನಿಂದ ಇಲ್ಲಿವರಗೆ ದೇಶದಾದ್ಯಂತ ಗರ್ಭಿಣಿಯರ ಸಂಖ್ಯೆಯಲ್ಲಿ ಶೇಕಡಾ 10ರಿಂದ 20ರಷ್ಟು ಹೆಚ್ಚಳವಾಗಿದೆ. ಐವಿಎಫ್ ಅಥವಾ ಕೃತಕ ಗರ್ಭಧಾರಣೆಯ ಪ್ರಮಾಣದಲ್ಲಿ ಮಾತ್ರ ಶೇಕಡಾ 80ರಿಂದ 90ರಷ್ಟು ಇಳಿಕೆಯಾಗಿದೆ, ನೈಸರ್ಗಿಕ ಗರ್ಭಧಾರಣೆ ಪ್ರಮಾಣದಲ್ಲಿ ಏರಿಕೆಯಾಗಿದೆ.

ಕುಟುಂಬವೆಲ್ಲಾ ಮನೆಯಲ್ಲೇ ಕಾಲ ಕಳೆದಿದ್ದರಿಂದ ಅನೇಕರಿಗೆ ಮಗುವಿನ ಬಗ್ಗೆ ಆಲೋಚಿಸಲು ಸಮಯ ಸಿಕ್ಕಂತಾಗಿದೆ. ಆದರೆ ಕೋವಿಡ್ ಸಂದರ್ಭದಲ್ಲಿ ಗರ್ಭಧರಿಸುವುದನ್ನು ಕೆಲ ತಿಂಗಳವರಗೆ ಮುಂದೂಡಲು ಆಗ ವೈದ್ಯರೇ ಸೂಚಿಸಿದ್ದರು. ಅಲ್ಲದೇ ಇಡೀ ವಿಶ್ವಕ್ಕೇ ಸೋಂಕಿನ ಕುರಿತು ಭಯ ಮತ್ತು ಭವಿಷ್ಯದ ಅನಿಶ್ಚಿತತೆ ಇದ್ದಿದ್ರಿಂದ ಹೆಣ್ಣುಮಕ್ಕಳ ಆರೋಗ್ಯದಲ್ಲೂ ಸಾಕಷ್ಟು ಏರುಪೇರು ಉಂಟಾಗಿತ್ತು ಎನ್ನುತ್ತಾರೆ ವೈದ್ಯರು.

ಹೆರಿಗೆ ಆಸ್ಪತ್ರೆಗಳನ್ನು ಎಲ್ಲೂ ಕೋವಿಡ್ ಆಸ್ಪತ್ರೆಗಳೆಂದು ಗುರುತಿಸಿಲ್ಲ. ಆದ್ರೆ ಹೆರಿಗೆ ಆಸ್ಪತ್ರೆಗಳಲ್ಲಿ ಕೂಡಾ ಇಂತಿಷ್ಟು ಹಾಸಿಗೆಗಳನ್ನು ಸೋಂಕಿತ ಗರ್ಭಿಣಿಯರು ಮತ್ತು ತಾಯಂದಿರಿಗಾಗಿ ಮೀಸಲಿಡಲಾಗಿತ್ತು, ಈ ಬಾರಿಯೂ ಅದೇ ವ್ಯವಸ್ಥೆ ಮುಂದುವರೆಯಲಿದೆ. ಆದರೆ ಗರ್ಭಿಣಿಯರಲ್ಲಿ ಆತಂಕ ಬಹಳಷ್ಟು ಹೆಚ್ಚಿದೆ. ಇದು ಅವರ ದೈಹಿಕ, ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ ಎನ್ನುತ್ತಾರೆ ಕ್ಲೌಡ್​ನೈನ್ ಆಸ್ಪತ್ರೆಗಳ ಸಂಸ್ಥಾಪಕ ನಿರ್ದೇಶಕ ಮತ್ತು ನಿಯೊನೆಟಾಲಜಿಸ್ಟ್ ಡಾ ಕಿಶೋರ್ ಕುಮಾರ್.

ನಮ್ಮ ಆಸ್ಪತ್ರೆಗಳಲ್ಲಿ ಈಗಲೂ ಶೇಕಡಾ 20ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತ ಗರ್ಭಿಣಿಯರು ಮತ್ತು ತಾಯಂದಿರಿಗಾಗಿ ಮೀಸಲಾಗಿಟ್ಟಿದ್ದೇವೆ. ಕೋವಿಡ್ ಸದ್ಯಕ್ಕೆ ಬೆಂಗಳೂರಿನಲ್ಲಿ ಮುಂಬೈ ಮತ್ತು ದೆಹಲಿಯಷ್ಟು ಪ್ರಬಲವಾಗಿಲ್ಲ, ನಿಜ. ಆದ್ರೆ ಕಳೆದ ವರ್ಷವನ್ನು ಗಮನಿಸಿದ್ರೆ ಆ ನಗರಗಳಲ್ಲಿ ಸೋಂಕು ತಾರಕಕ್ಕೇರಿದ ಮೂರ್ನಾಲ್ಕು ವಾರಗಳಿಗೆ ಬೆಂಗಳೂರಿನಲ್ಲೂ ಪರಿಸ್ಥಿತಿ ಕೈಮೀರಿತ್ತು. ಈ ಬಾರಿಯೂ ಆ ಅಪಾಯವನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಈ ಬಾರಿ ನಾವು ಹೆಚ್ಚು ಮಕ್ಕಳಲ್ಲಿ ಸೋಂಕು ನೋಡುತ್ತಿರುವುದು ಆತಂಕಕಾರಿ ವಿಚಾರ ಎನ್ನುತ್ತಾರೆ ಡಾ ಕಿಶೋರ್ ಕುಮಾರ್.

0-10 ವರ್ಷದ ಮಕ್ಕಳಲ್ಲಿ ಜ್ವರ, ಬೇಧಿ ಮುಂತಾದ ಸಾಮಾನ್ಯ ರೋಗಲಕ್ಷಣಗಳೊಂದಿಗೆ ಸೋಂಕು ಪತ್ತೆಯಾಗ್ತಿದೆ. ಸಣ್ಣ ಮಕ್ಕಳಾದ್ದರಿಂದ ಇದು ಬಹಳ ಸೂಕ್ಷ್ಮ ವಿಚಾರ ಎನ್ನುತ್ತಾರೆ ತಜ್ಞರು.

ಇನ್ನು ರಾಜ್ಯದ ಅತಿ ದೊಡ್ಡ ಸರ್ಕಾರಿ ಹೆರಿಗೆ ಆಸ್ಪತ್ರೆಯಾದ ವಾಣಿ ವಿಲಾಸದಲ್ಲಿ ಪರಿಸ್ಥಿತಿ ಭಿನ್ನವಾಗಿಲ್ಲ. ಈಗೀಗ ಕೋವಿಡ್ ಸೋಂಕಿತರ ಸಂಖ್ಯೆ ಕಡಿಮೆಯಾಗಿ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿ ಸುಧಾರಿಸಿಕೊಳ್ಳುತ್ತಿದ್ದರು. ಆಗಲೇ ಎರಡನೇ ಅಲೆ ಜೋರಾಗೇ ಅಪ್ಪಳಿಸಿದೆ. ವರ್ಷಕ್ಕೆ ಸುಮಾರು 15 ರಿಂದ 17 ಸಾವಿರ ಮಕ್ಕಳು ವಾಣಿ ವಿಲಾಸ ಆಸ್ಪತ್ರೆಯಲ್ಲಿ ಜನಿಸುತ್ತಾರೆ. ಆದ್ರೆ ಕಳೆದೊಂದು ವರ್ಷ ಕೋವಿಡ್ ಭಯಕ್ಕೆ ಅನೇಕರು ಆಸ್ಪತ್ರೆಗಳಿಗೆ ಬರಲು ಹೆದರಿಕೊಂಡು ತಮ್ಮ ಊರುಗಳಲ್ಲಿ ಮಗುವಿಗೆ ಜನ್ಮವಿತ್ತಿದ್ದಾರೆ. ಆದರೆ ಸೋಂಕಿತ ಗರ್ಭಿಣಿಯರಿಗೆ ಅತಿ ಹೆಚ್ಚು ಪ್ರಮಾಣದ ಚಿಕಿತ್ಸೆ ದೊರಕಿದ್ದು ವಾಣಿ ವಿಲಾಸ ಆಸ್ಪತ್ರೆಯಲ್ಲೇ. 450ಕ್ಕೂ ಹೆಚ್ಚು ಸೋಂಕಿತ ಗರ್ಭಿಣಿಯರ ಹೆರಿಗೆ ಮಾಡಿಸಿ, ಅವರನ್ನು ಆರೋಗ್ಯವಂತವಾಗಿ ಮನೆಗೆ ಕಳಿಸಿದ ಹೆಗ್ಗಳಿಕೆ ಇಲ್ಲಿನ ವೈದ್ಯರು ಮತ್ತು ಸಿಬ್ಬಂದಿಯದ್ದು.
Youtube Video

ಆದರೆ ಈ ಬಾರಿ ಪರಿಸ್ಥಿತಿ ಹೆಚ್ಚು ಆತಂಕಕಾರಿಯಾಗಿದೆ ಎನ್ನುತ್ತಾರೆ ವಾಣಿ ವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ ಗೀತಾ ಶಿವಮೂರ್ತಿ. ಜನರಲ್ಲಿ ಕೊರೊನಾ ಬಗ್ಗೆ ಭಯ ಕಡಿಮೆಯಾಗಿದೆ. ಗರ್ಭಿಣಿಯನ್ನು ಆಸ್ಪತ್ರೆಗೆ ಕರೆತಂದವರೂ ಸರಿಯಾಗಿ ಮಾಸ್ಕ್ ಧರಿಸಿರುವುದಿಲ್ಲ, ಜೊತೆಗಿರುವ ವ್ಯಕ್ತಿ ಸೋಂಕಿತ ಎಂದು ತಿಳಿದರೂ ಆಂಬ್ಯುಲೆನ್ಸ್​ನಲ್ಲಿ ಸಂಬಂಧಿಕರೂ ಜೊತೆಗೇ ಪ್ರಯಾಣಿಸುತ್ತಾರೆ. ಕಳೆದ ವರ್ಷ ಸೋಂಕಿತರ ಜೊತೆಗೆ ಇರುವವರೆಲ್ಲಾ ಪಿಪಿಇ ಧರಿಸಿರುತ್ತಿದ್ದರು. ಈ ಸಲ ಅದ್ಯಾವ್ದೂ ಇಲ್ಲದೇ ಜನ ಬಹಳ ಉಡಾಫೆಯಿಂದ ಇದ್ದಾರೆ. ನಾವು ವೈದ್ಯರು ಮತ್ತು ಸಿಬ್ಬಂದಿ ಮಾತ್ರ ಎಷ್ಟು ಜೋಪಾನ ಮಾಡಲು ಸಾಧ್ಯ? ಜನರ ಬೇಜವಾಬ್ದಾರಿತನ ಭವಿಷ್ಯದ ಆಪತ್ತನ್ನು ಕಣ್ಮುಂದೆ ಇರಿಸುತ್ತದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಡಾ ಗೀತಾ ಶಿವಮೂರ್ತಿ.
Published by: Soumya KN
First published: April 18, 2021, 4:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories