ಮೂರು ಸಾವಿರ ಮಠ ವಿವಾದ: ಮೂಜಗು ಸ್ವಾಮಿಗೆ ದಿಂಗಾಲೇಶ್ವರರಿಂದ 45 ದಿನ ಗಡುವು; ಉತ್ತರಾಧಿಕಾರಿ ರೇಸ್​ನಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ

ಹುಬ್ಬಳ್ಳಿಯ ಮೂರು ಸಾವಿರ ಮಠದಲ್ಲಿ ಇವತ್ತು ಹೈಡ್ರಾಮಾ ಸೃಷ್ಟಿಯಾಗಿತ್ತು. ಉತ್ತರಾಧಿಕಾರಿ ನೇಮಕ ವಿವಾದ ದೊಡ್ಡಮಟ್ಟದ ಸದ್ದು ಮಾಡಿತು. ದಿಂಗಾಲೇಶ್ವರ ಸ್ವಾಮೀಜಿ ಸತ್ಯದರ್ಶನ ಸಭೆಯನ್ನು ಮಾಡುವ ಮೂಲಕ ವಿವಾದ ಇತ್ಯರ್ಥಕ್ಕೆ ಗಡುವು ನೀಡಿದ್ರು.

news18-kannada
Updated:February 23, 2020, 11:00 PM IST
ಮೂರು ಸಾವಿರ ಮಠ ವಿವಾದ: ಮೂಜಗು ಸ್ವಾಮಿಗೆ ದಿಂಗಾಲೇಶ್ವರರಿಂದ 45 ದಿನ ಗಡುವು; ಉತ್ತರಾಧಿಕಾರಿ ರೇಸ್​ನಲ್ಲಿ ಮಲ್ಲಿಕಾರ್ಜುನ ಸ್ವಾಮೀಜಿ
ದಿಂಗಾಲೇಶ್ವರ ಶ್ರೀ
  • Share this:
ಹುಬ್ಬಳ್ಳಿ(ಫೆ. 23): ಇಲ್ಲಿಯ ಪ್ರತಿಷ್ಠಿತ ಮೂರು ಸಾವಿರ ಮಠ ಇಂದು ಗೊಂದಲದ ಗೂಡಾಗಿತ್ತು. ಒಂದೆಡೆ ಮಹಾಶಿವರಾತ್ರಿ ಅಮವಾಸ್ಯೆಯ ನಿಮಿತ್ತ ಗುರುಸಿದ್ಧೇಶ್ವರರ ಗದ್ದುಗೆಯ ದರ್ಶನಕ್ಕೆ ಸಹಸ್ರಾರು ಭಕ್ತರು ಆಗಮಿಸಿದ್ರು. ಇನ್ನೊಂದೆಡೆ ಬಾಲೆ ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಗಳ ಬೃಹತ್‌ ಮೆರವಣಿಗೆ ನಡೆಯಿತು. ಮತ್ತೊಂದೆಡೆ ಘಟಪ್ರಭಾ ಗುಬ್ಬಲಗುಡ್ಡದ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳ ಭಕ್ತರ ದಂಡು ಮಠಕ್ಕೆ ಬಂದಿತ್ತು. ಧಾರ್ಮಿಕ ಕೇಂದ್ರವಾದ ಮಠದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕ ವಿವಾದ ಮತ್ತೆ ಮುನ್ನೆಲೆಗೆ ಬಂದಿರುವ ಕಾರಣ ಈ ವಾತಾವರಣ ಸೃಷ್ಟಿಯಾಗಿತ್ತು.

ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಗಡುವು:

ಮಠದ ಉತ್ತರಾಧಿಕಾರಿ ತಾನೇ ಎಂದು ಹೇಳಿರುವ ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿಗಳು ಇಂದು ಸತ್ಯದರ್ಶನ ಕಾರ್ಯಕ್ರಮ ಹಮ್ಮಿಕೊಂಡಿದ್ರು. ಹುಬ್ಬಳ್ಳಿಯ ನೆಹರು ಮೈದಾನದಿಂದ ದಿಂಗಾಲೇಶ್ವರ ಸ್ವಾಮೀಜಿಗಳ ಪಾದಯಾತ್ರೆಗೆ ಚಾಲನೆ ದೊರೆಯಿತು. ಮಾರ್ಗ ಮಧ್ಯದಲ್ಲಿ ಬರುವ ಮಹಾತ್ಮಾ ಬಸವೇಶ್ವರರು, ಸರ್ ಸಿದ್ದಪ್ಪ ಕಂಬಳಿ, ಸಂಗೊಳ್ಳಿರಾಯಣ್ಣ, ಕಿತ್ತೂರು ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಇದನ್ನೂ ಓದಿ: ಒಂದು ವಾರದಲ್ಲಿ ಬಿಜೆಪಿಯ 32 ಶಾಸಕರು ರಾಜೀನಾಮೆ?: ಸಿ.ಎಂ. ಇಬ್ರಾಹಿಂ ಹೊಸ ಬಾಂಬ್

ಪಾದಯಾತ್ರೆ ಮೂರು ಸಾವಿರ ಮಠಕ್ಕೆ ಆಗಮಿಸುತ್ತಿದ್ದಂತೆ ಪೊಲೀಸರು ತಡೆದು ನಿಲ್ಲಿಸಿದ್ರು. ಮಠದೊಳಗೆ ಪ್ರವೇಶಿಸದಂತೆ ಮಹಾದ್ವಾರದ ಎದುರೇ ನಿರ್ಬಂಧ ಹೇರಿದ್ರು. ಹೀಗಾಗಿ ಮಹಾದ್ವಾರದ ಎದುರಿನ ರಸ್ತೆಯಲ್ಲಿಯೇ ಸತ್ಯದರ್ಶನ ಸಭೆ ನಡೆಯಿತು. ಶಾಸಕ ನೆಹರು ಓಲೇಕಾರ್, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಕುಂಟೋಜಿ ಚೆನ್ನವೀರ ಸ್ವಾಮೀಜಿ, ಬೊಮ್ಮನಹಳ್ಳಿ ಶ್ರೀಗಳು, ಅಗಡಿ ಸ್ವಾಮೀಜಿ, ಮಂಟೂರು ಶ್ರೀಗಳು ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಹಲವು ಗಣ್ಯರು ಉಪಸ್ಥಿತರಿದ್ದರು. ತೆರೆದ ವಾಹನ ಏರಿದ ದಿಂಗಾಲೇಶ್ವರ ಸ್ವಾಮೀಜಿ ನೆರೆದಿದ್ದ ಸಹಸ್ರಾರು ಜನರನ್ನು ಉದ್ದೇಶಿಸಿ ಮಾತನಾಡಿದ್ರು. ಉತ್ತರಾಧಿಕಾರಿ ಮಾಡುವ ಸಂದರ್ಭದಲ್ಲಿ ನಡೆದ ಘಟನಾವಳಿಗಳ ಕುರಿತು ಸುದೀರ್ಘ ಮಾಹಿತಿ ನೀಡಿದ್ರು. ಮೂರು ಸಾವಿರ ಮಠದ ಹಾಲಿ ಪೀಠಾಧ್ಯಕ್ಷರಾದ ಮೂಜಗು ಸ್ವಾಮೀಜಿಗಳು 2014ರಲ್ಲಿ ತಮ್ಮನ್ನು ಉತ್ತರಾಧಿಕಾರಿ ಎಂದು ಘೋಷಿಸಿದ್ದಾರೆ. ಘೋಷಣಾ ಪತ್ರಕ್ಕೆ 52 ಗಣ್ಯರು ಸಹಿ ಮಾಡಿದ್ದಾರೆ. ಕೆಲವು ಕಾವಿಧಾರಿಗಳ ಒತ್ತಡದಿಂದ ಉತ್ತರಾಧಿಕಾರಿ ವಿವಾದ ಬಗೆಹರಿಯುತ್ತಿಲ್ಲ. ಮೂಜಗು ಸ್ವಾಮೀಜಿ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು. 45 ದಿನಗಳಲ್ಲಿ ಯೋಗ್ಯ ತೀರ್ಮಾನ ತೆಗೆದುಕೊಂಡು ವಿವಾದ ಬಗೆಹರಿಸಬೇಕು ಎಂದು ಗಡುವು ನೀಡಿದ್ರು. ಸತ್ಯದರ್ಶನ ಸಭೆಯ ನಂತರ ಮಠವನ್ನು ಪ್ರವೇಶಿಸಿದ ದಿಂಗಾಲೇಶ್ವರ ಸ್ವಾಮೀಜಿ ಮತ್ತವರ ಬೆಂಬಲಿಗರು ಕರ್ತೃ ಗದ್ದುಗೆಯ ದರ್ಶನ ಪಡೆದ್ರು.

ಇದನ್ನೂ ಓದಿ: ಭಾರತ ಮಾತೆಗೆ ಅಗೌರವ ಸಲ್ಲಿಸುವವರಿಗೆ ಕಠಿಣ ಶಿಕ್ಷೆ ನೀಡಬೇಕು: ದೇವೇಗೌಡರ ಮೊಮ್ಮಗ ಆಗ್ರಹ

ಉತ್ತರಾಧಿಕಾರಿ ರೇಸ್‌ನಲ್ಲಿರುವ ಮಲ್ಲಿಕಾರ್ಜುನ ಸ್ವಾಮೀಜಿ:ದಿಂಗಾಲೇಶ್ವರ ಸ್ವಾಮೀಜಿಗಳು ಮೂರು ಸ್ವಾವಿರ ಮಠದಿಂದ ನಿರ್ಗಮಿಸುತ್ತಿದ್ದಂತೆ ಘಟಪ್ರಭಾ ಕೆಂಪಯ್ಯಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮೀಜಿಗಳು ಮಠಕ್ಕೆ ಆಗಮಿಸಿದ್ರು. ಸಾವಿರಾರು ಬೆಂಬಲಿಗರೊಂದಿಗೆ ಮಠಕ್ಕೆ ಬಂದ ಮಲ್ಲಿಕಾರ್ಜುನ ಸ್ವಾಮೀಜಿ ಕರ್ತೃ ಗದ್ದುಗೆಯ ದರ್ಶನ ಪಡೆದ್ರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೂರು ಸಾವಿರ ಮಠದ ಉತ್ತರಾಧಿಕಾರಿ ತಾನೇ ಎಂದು ಹೇಳಿದ್ರು. ಈ ಹಿಂದಿನ ಮೂಜಗಂ ಸ್ವಾಮೀಜಿಗಳು ಮಾಡಿಸಿರುವ ಉಯಿಲು ತಮ್ಮ ಬಳಿಯಿದೆ. ಈ ಪ್ರಕರಣ ನ್ಯಾಯಾಲಯದಲ್ಲಿದ್ದು ಅಲ್ಲಿಯೇ ಇತ್ಯರ್ಥವಾಗಬೇಕು. ಹಾಲಿ ಪೀಠಾಧ್ಯಕ್ಷ ಮೂಜಗು ಸ್ವಾಮೀಜಿಗಳು ಮಠವನ್ನು ನಡೆಸಲು ಸಮರ್ಥರಿದ್ದಾರೆ. ಹೀಗಾಗಿ ಅವರೇ ಪೀಠಾಧ್ಯಕ್ಷರಾಗಿ ಮುಂದುವರಿಯಲಿ. ಒಂದುವೇಳೆ ಅವರು ವಿಶ್ರಾಂತಿ ಬಯಸಿದ್ರೆ ತಮ್ಮನ್ನೇ ಉತ್ತರಾಧಿಕಾರಿ ಮಾಡಬೇಕು ಎಂದು ಆಗ್ರಹಿಸಿದ್ರು.

ಉತ್ತರಾಧಿಕಾರಿ ವಿಚಾರದಲ್ಲಿ ಮೌನ ಮುರಿಯದ ಮೂಜಗು ಸ್ವಾಮೀಜಿ:

ಮಹಾಶಿವರಾತ್ರಿ ಅಮವಾಸ್ಯೆಯ ದಿನವಾದ ಇಂದು ಮೂರು ಸಾವಿರ ಮಠದ ಆವರಣ ಸಂಪೂರ್ಣ ಗೊಂದಲ ಮಯವಾಗಿತ್ತು. ವಿವಾದ ಬಗೆಹರಿಸಬೇಕಿದ್ದ ಮೂಜಗು ಸ್ವಾಮೀಜಿಗಳು ಮಠದಲ್ಲಿಯೇ ಇದ್ದರೂ ಕೂಡ ಮೌನಕ್ಕೆ ಶರಣಾಗಿದ್ದರು. ಉತ್ತರಾಧಿಕಾರಿ ವಿಚಾರದ ಕುರಿತು ಪ್ರತಿಕ್ರಿಯೆಗೆ ನಿರಾಕರಿಸಿದ್ರು. ದಿಂಗಾಲೇಶ್ವರ ಸ್ವಾಮಿಜಿ ಮತ್ತು ಮಲ್ಲಿಕಾರ್ಜುನ ಸ್ವಾಮೀಜಿಗಳ ಭೇಟಿಗೆ ಮೂಜಗು ಸ್ವಾಮೀಜಿಗಳು ಅವಕಾಶ ಕೊಡಲಿಲ್ಲ. ಹೀಗಾಗಿ ಉತ್ತರಾಧಿಕಾರಿ ಪಟ್ಟದ ಆಕಾಂಕ್ಷಿಗಳಿಬ್ಬರೂ ಮೂಜಗು ಸ್ವಾಮೀಜಿಗಳ ಜೊತೆ ಚರ್ಚೆ ನಡೆಸದೆ ವಾಪಸ್‌ ಹೋಗಬೇಕಾಯಿತು. ಮಠದ ಉನ್ನತ ಮಟ್ಟದ ಸಮಿತಿಯ ಯಾವೊಬ್ಬ ಸದಸ್ಯರೂ ಮಠದತ್ತ ಸುಳಿಯಲಿಲ್ಲ. ಒಟ್ಟಾರೆ ಉತ್ತರಾಧಿಕಾರಿ ನೇಮಕಕ್ಕಾಗಿ ನಡೆದ ಸ್ವಾಮೀಜಿಗಳ ಹಗ್ಗಜಗ್ಗಾಟ ಯಾವುದೇ ತಾರ್ಕಿಕ ಅಂತ್ಯ ಕಾಣಲಿಲ್ಲ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading