HOME » NEWS » State » MOOD SET IN KARNATAKA TO ELECT 15 LAW MAKERS IN 2019 BY POLLS MAK

ಉಪ ಚುನಾವಣೆ; ಅನರ್ಹರ ಕುರಿತು ಜನರ ಮನಸ್ಥಿತಿ ಏನು? ಯಾರಿಗೆ ಸಿಹಿ, ಯಾರಿಗೆ ಕಹಿ? ಏನಾಗಲಿದೆ ಫಲಿತಾಂಶ? ಇಲ್ಲಿದೆ ಡೀಟೈಲ್ಸ್​

2008ರಲ್ಲಿ ಬಿಜೆಪಿ ನಾಯಕರು ನಡೆಸಿದ್ದ ಅಪರೇಷನ್ ಕಮಲ ಕಾರ್ಯಾಚರಣೆ ದಶಕಗಳ ಹಿಂದೆಯೇ ರಾಜ್ಯದ ಮತದಾರನ ಸ್ವಾಭಿಮಾನವನ್ನು ಕೆಣಕಿತ್ತು. ಇದೇ ಕಾರಣಕ್ಕೆ ಮತದಾರರು 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದರು.

MAshok Kumar | news18-kannada
Updated:December 2, 2019, 3:16 PM IST
ಉಪ ಚುನಾವಣೆ; ಅನರ್ಹರ ಕುರಿತು ಜನರ ಮನಸ್ಥಿತಿ ಏನು? ಯಾರಿಗೆ ಸಿಹಿ, ಯಾರಿಗೆ ಕಹಿ? ಏನಾಗಲಿದೆ ಫಲಿತಾಂಶ? ಇಲ್ಲಿದೆ ಡೀಟೈಲ್ಸ್​
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು: ರಾಜ್ಯದಲ್ಲಿ 15ನೇ ವಿಧಾನಸಭಾ ಚುನಾವಣಾ ಮುಗಿದು ಇನ್ನೂ ಒಂದೂವರೆ ವರ್ಷವೂ ಪೂರ್ಣವಾಗಿಲ್ಲ. ಅಷ್ಟರಲ್ಲೇ ಕರ್ನಾಟಕ ಮತ್ತೊಂದು ಉಪ ಚುನಾವಣೆಗೆ ಸಿದ್ದಗೊಂಡಿದೆ. ಇದಕ್ಕೆ ನೇರ ಕಾರಣ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಿಂದ ಬಿಜೆಪಿಗೆ ಪಲಾಯನಗೈದ ಅನರ್ಹ ಶಾಸಕರು ಎಂದು ಬೇರೆ ಬಿಡಿಸಿ ಹೇಳಬೇಕಾಗಿಲ್ಲ.

ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ರಾಜ್ಯ ರಾಜಕೀಯ ಸಾಕಷ್ಟು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿತ್ತು. ಜೆಡಿಎಸ್ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಈ ಇಬ್ಬರೂ ನಾಟಕೀಯ ಬೆಳವಣಿಗೆಯಲ್ಲೇ ಮುಖ್ಯಮಂತ್ರಿ ಗಾದಿಯವರೆಗೆ ಏರಿದ್ದರು ಎಂಬುದು ಉಲ್ಲೇಖಾರ್ಹ. ಆದರೆ, ಈ ಎಲ್ಲಾ ನಾಟಕಕ್ಕಿಂತ ಜನರನ್ನು ಹೆಚ್ಚು ಕೆರಳಿಸಿದ್ದು, ದಿಗ್ಭ್ರಮೆಗೆ ದೂಡಿದ್ದು ಮಾತ್ರ ಅನರ್ಹ ಶಾಸಕರ ರಾಜೀನಾಮೆ ಪರ್ವ ಮತ್ತು ದಶಕದ ನಂತರ ಮತ್ತೆ ರಾಜ್ಯದಲ್ಲಿ ಮತ್ತೆ ತನ್ನ ಕಬಂಧಬಾಹುಗಳನ್ನು ಚಾಚಿದ್ದ ಅಪರೇಷನ್ ಕಮಲದಂತಹ ಪ್ರಜಾಪ್ರಭುತ್ವ ವಿರೋಧಿ ಕೃತ್ಯ ಎಂದರೆ ತಪ್ಪಾಗಲಾರದು.

ಅಧಿಕಾರ ಮತ್ತು ಹಣದ ಆಸೆಗೆ ಮೈತ್ರಿ ಶಾಸಕರು ಪಕ್ಷಾಂತರ ಮಾಡುವ ಮೂಲಕ ಪಕ್ಷಕ್ಕೆ, ರಾಜ್ಯದ ಜನತೆಗೆ ದ್ರೋಹ ಬಗೆದಿದ್ದಾರೆ ಎಂಬುದು ಕಾಂಗ್ರೆಸ್-ಜೆಡಿಎಸ್ ದೂರು. ಇನ್ನೂ ಕ್ಷೇತ್ರದ ಅಭಿವೃದ್ಧಿ ಹಾಗೂ ಸ್ವಾಭಿಮಾನಕ್ಕಾಗಿ ಮಾತ್ರ ತಾವು ರಾಜೀನಾಮೆ ನೀಡಿದ್ದೇವೆ ಎಂಬುದು ಅನರ್ಹ ಶಾಸಕರ ಅಭಿಮತ. ಪ್ರಸ್ತುತ ಉಪ ಚುನಾವಣೆ ಈ ಎರಡೂ ವೈರುಧ್ಯ ವಾದಗಳ ನಡುವಿನ ಮುಖಾಮುಖಿ.

ಈ ನಡುವೆ ಅನರ್ಹ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್​ನಲ್ಲಿ ಇತ್ಯರ್ಥವಾಗಿದೆ. ಡಿಸೆಂಬರ್ 5ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಎಲ್ಲಾ ಅನರ್ಹರು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತವಾಗಿದೆ. ಈ ಉಪ ಚುನಾವಣೆಯಲ್ಲಿ 15 ಜನ ಅನರ್ಹ ಶಾಸಕರ ಹಣೆಬರಹವನ್ನು ಬರೆಯಲು ಮತದಾರ ಸಹ ಸಿದ್ದಗೊಂಡಿದ್ದಾನೆ.

ಆದರೆ, ರಾಜ್ಯದ ಮತದಾರ ಮಾತ್ರ ಈ ಉಪ ಚುನಾವಣೆಯನ್ನು ಹಿಂದಿನ ಚುನಾವಣೆಯಂತೆ ಪರಿಗಣಿಸುತ್ತಿಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಹಾಗಾದರೆ ಈ ಉಪ ಚುನಾವಣೆ ಮತ್ತು ಅನರ್ಹ ಶಾಸಕರ ಕುರಿತ ಜನರ ಅಭಿಪ್ರಾಯ ಏನು? ಪಕ್ಷಾಂತರ, ಕುದುರೆ ವ್ಯಾಪಾರದ ಬಗ್ಗೆ ಮತದಾರ ನಿಜಕ್ಕೂ ರೊಚ್ಚಿಗೆದ್ದಿದ್ದಾನ? ಇದರ ಫಲ ಚುನಾವಣಾ ಫಲಿತಾಂಶದಲ್ಲಿ ಪ್ರಕಟಗೊಳ್ಳುತ್ತಾ? ಅನರ್ಹರಿಗೆ ತಕ್ಕ ಪಾಠ ಕಲಿಸ್ತಾನ? ಅಥವಾ ಮತ್ತೆ ಅವರನ್ನೇ ಗೆಲ್ಲಿಸುತ್ತಾನ? ಇಂತಹ ಜನಾಭಿಪ್ರಾಯ ರೂಪಿಸುವಲ್ಲಿ ಸಾಮಾಜಿಕ ಜಾಲತಾಣದ ಪಾತ್ರವೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ರಾಜ್ಯದ ಮತದಾರನ ರಾಜಕೀಯ ಪ್ರಜ್ಞೆಯನ್ನು ಚಿವುಟಿದ ಪಕ್ಷಾಂತರ;

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜೀನಾಮೆ ನೀಡಿದ 17 ಜನ ಅನರ್ಹ ಶಾಸಕರು ಹೋದಲ್ಲಿ ಬಂದಲ್ಲೆಲ್ಲಾ ತಾವು ಹಣಕ್ಕಾಗಿ ಮಾರಾಟವಾಗಿಲ್ಲ, ಸ್ವಾಭಿಮಾನಕ್ಕಾಗಿ ಈ ಚುನಾವಣೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ, ಪ್ರಸ್ತುತ ಸ್ಥಿತಿಯನ್ನು ಗಮನಿಸಿದರೆ ಮತದಾರರು ಅನರ್ಹರ ಈ ವಾದವನ್ನು ನಂಬುವ ಸ್ಥಿತಿಯಲ್ಲಿ ಇಲ್ಲ. ಅಲ್ಲದೆ, ಅವರ ರಾಜಕೀಯ ಪ್ರಜ್ಞೆಯೂ ಸಹ ಈ ಮೂಲಕ ಜಾಗೃತವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.ಅನರ್ಹ ಶಾಸಕರು ಹಣಕ್ಕಾಗಿಯೇ ತಮ್ಮನ್ನು ಮಾರಿಕೊಂಡಿದ್ದಾರೆ ಎಂದು ಜನ ಬಲವಾಗಿ ನಂಬಿದ್ದಾರೆ. ಜನರ ಈ ನಂಬಿಕೆಗೆ ಕಾರಣವೂ ಇಲ್ಲದೆ ಏನಿಲ್ಲ. ಏಕೆಂದರೆ ರಾಜ್ಯದ ಮತದಾರರು 2008ರಲ್ಲೂ ಸಹ ಬಿಜೆಪಿ ಪಕ್ಷದಿಂದ ಇಂತಹದ್ದೇ ಕೃತ್ಯಕ್ಕೆ ಕೆಂಡವಾಗಿದ್ದರು.
2008ರಲ್ಲಿ ಬಿಜೆಪಿ ನಾಯಕರು ನಡೆಸಿದ್ದ ಅಪರೇಷನ್ ಕಮಲ ಕಾರ್ಯಾಚರಣೆ ದಶಕಗಳ ಹಿಂದೆಯೇ ರಾಜ್ಯದ ಮತದಾರನ ಸ್ವಾಭಿಮಾನವನ್ನು ಕೆಣಕಿತ್ತು. ಇದೇ ಕಾರಣಕ್ಕೆ ಮತದಾರರು 2013ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದರು.

ಇದೀಗ ರಾಜ್ಯದಲ್ಲಿ ಮತ್ತೆ ಅಂತಹದ್ದೇ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ಮತದಾರರು ಶತಾಯಗತಾಯ ಅನರ್ಹ ಶಾಸಕರನ್ನು ಸೋಲಿಸಿಯೇ ತೀರಲಿದ್ದಾರೆ ಎಂಬುದು ರಾಜಕೀಯ ತಜ್ಞರ ಹಾಗೂ ವಿಶ್ಲೇಷಕರ ವಾದ. ಆದರೆ ವಿಮರ್ಶೆಗಳು ತಲೆಕೆಳಗಾದರೆ ಆಶ್ಚರ್ಯವಿಲ್ಲ. ಉಪ ಚುನಾವಣೆಗಳಲ್ಲಿ ಆಡಳಿತದಲ್ಲಿರುವ ಪಕ್ಷಕ್ಕೆ ಹೆಚ್ಚಿನ ಬಲವಿರುತ್ತದೆ.

ಈ ನಡುವೆ ಅನರ್ಹರ ಕ್ಷೇತ್ರದ ಹಲವಾರು ಗ್ರಾಮಗಳಲ್ಲಿ ಹಾಗೂ ಮಠಗಳಲ್ಲಿ “ಹಣಕ್ಕಾಗಿ ತಮ್ಮನ್ನು ಮಾರಿಕೊಂಡಿರುವ ಅನರ್ಹ ಶಾಸಕರಿಗೆ ಒಳಗೆ ಪ್ರವೇಶವಿಲ್ಲ” ಎಂದು ಬಹಿರಂಗವಾಗಿ ಫಲಕಗಳನ್ನು ನೇತು ಹಾಕಲಾಗಿದೆ. ಈ ಫಲಕಗಳು ಅನರ್ಹರ ಪಾಲಿಗೆ ಮುಜುಗರದ ಜೊತೆಗೆ ಅವರ ಸೋಲಿನ ಕುರಿತೂ ಭೀತಿಯನ್ನು ಹುಟ್ಟುಹಾಕಿದೆ ಎಂದು ಹೇಳಲಾಗುತ್ತಿದೆ.

ಇತ್ತೀಚೆಗೆ ಪಕ್ಷಾಂತರ ಮಾಡಿದ ಯಾವ ಶಾಸಕನು ಗೆದ್ದ ಇತಿಹಾಸವೇ ಇಲ್ಲ:

ಪಕ್ಷಾಂತರ ಎಂಬುದು ಇತ್ತೀಚೆಗೆ ಸಾಮಾಜಿಕ ಪಿಡುಗಿನಂತೆ ಬದಲಾಗಿದೆ. ಈ ಪಿಡುಗಿನಿಂದ ಸಾಕಷ್ಟು ಹಾನಿಗೆ ಒಳಗಾಗುತ್ತಿರುವುದು ಮಾತ್ರ ಪ್ರಾದೇಶಿಕ ಪಕ್ಷಗಳು. ಆದರೆ, ಹೀಗೆ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದ ಶಾಸಕರು ಉಪ ಚುನಾವಣೆಯಲ್ಲಿ ಗೆದ್ದ ಇತಿಹಾಸವೇ ಇಲ್ಲ ಎನ್ನುತ್ತಿವೆ ಇತ್ತೀಚಿನ ಕೆಲವು ಚುನಾವಣಾ ಫಲಿತಾಂಶಗಳು.

2016ರಲ್ಲಿ ತಮಿಳುನಾಡಿನ ಅಂದಿನ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಮರಣದ ನಂತರ ತಮಿಳುನಾಡು ರಾಜಕೀಯ ದೊಡ್ಡದೊಂದು ನಾಟಕಕ್ಕೆ ಅಣಿಯಾಗಿತ್ತು. ಅಧಿಕಾರದ ಆಸೆಗಾಗಿ ಆಡಳಿತರೂಢ ಎಐಎಡಿಎಂಕೆ ಪಕ್ಷವನ್ನು ಇಬ್ಭಾಗವಾಗಿ ಒಡೆಯುವ ಪ್ರಯತ್ನ ನಡೆಸಲಾಗಿತ್ತು. ಇದರ ಫಲವಾಗಿ ಪಕ್ಷದ 18 ಶಾಸಕರು ಸರ್ಕಾರದ ಮೇಲೆ ತಮಗೆ ವಿಶ್ವಾಸವಿಲ್ಲ ಎಂದು ರಾಜೀನಾಮೆ ನೀಡುವ ಮೂಲಕ ಎಐಎಡಿಎಂಕೆ ಪಕ್ಷದ ಮತ್ತೊಂದು ಬಣವಾದ ಟಿಟಿವಿ ದಿನಕರನ್ ನೇತೃತ್ವದ ಅಮ್ಮಾ ದ್ರಾವಿಡ ಮುನ್ನೆಟ್ರ ಕಳಗಂ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಪ್ರಕರಣ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತ್ತು.

ಆದರೆ, ಇದರ ಬೆನ್ನಿಗೆ ನಡೆದ ಉಪ ಚುನಾವಣೆಯಲ್ಲಿ ಈ ಎಲ್ಲಾ 18 ಶಾಸಕರನ್ನೂ ಸೋಲಿಸುವ ಮೂಲಕ ತಮಿಳುನಾಡಿನ ಮತದಾರ ಪಕ್ಷಾಂತರಿಗಳಿಗೆ ತಕ್ಕ ಪಾಠ ಕಲಿಸಿದ್ದರು. ಇನ್ನೂ ಮಹಾರಾಷ್ಟ್ರದಲ್ಲೂ ಸಹ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಾಂತರ ಮಾಡಿದ್ದ ಸುಮಾರು 17 ಜನ ಶಾಸಕರಿಗೆ ಅಲ್ಲಿನ ಮತದಾರರು ಸೋಲಿನ ರುಚಿ ತೋರಿಸಿದ್ದರು. ಈ ಅಂಶ ಸಾಮಾನ್ಯವಾಗಿ ಕರ್ನಾಟಕದ ಅನರ್ಹರಿಗೆ ಆಘಾತವನ್ನುಂಟು ಮಾಡಿರುವುದು ಸುಳ್ಳಲ್ಲ.

ಅನರ್ಹರಲ್ಲಿ ಉರಿಯುತ್ತಿರುವ ಬೆಂಕಿಗೆ ಗಳ ಹಿರಿಯುತ್ತಿದೆ ಸಾಮಾಜಿಕ ಜಾಲತಾಣ;

ನವ ಮಾಧ್ಯಮದ ಇಂದಿನ ಯುಗದಲ್ಲಿ ಜನಾಭಿಪ್ರಾಯ ರೂಪಿಸುವಲ್ಲಿ ಫೇಸ್​ಬುಕ್​, ವಾಟ್ಸಾಪ್, ಟ್ವೀಟರ್​ನಂತಹ ಸಾಮಾಜಿಕ ಜಾಲತಾಣಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರಸ್ತುತ ಈ ಸಾಮಾಜಿಕ ಜಾಲತಾಣಗಳಲ್ಲಿ ಅನರ್ಹರ ಕುರಿತು ಕ್ರಿಯೇಟ್ ಮಾಡಲಾಗುತ್ತಿರುವ ಮೀಮ್ಸ್ ಮತ್ತು ಅಭಿಪ್ರಾಯಗಳು ಮಾತ್ರ ಅನರ್ಹರಲ್ಲಿ ಉರಿಯುತ್ತಿರುವ ಬೆಂಕಿಗೆ ಗಳ ಹಿರಿಯುವ ಕೆಲಸ ಮಾಡುತ್ತಿದೆ ಎಂದರೆ ತಪ್ಪಾಗಲಾರದು.

ಅನರ್ಹ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ಹೊರಟಿದ್ದ ದಿನದಿಂದ ಈವರೆಗೆ “ಶಾಸಕರು ಮಾರಟಕ್ಕಿದ್ದಾರೆ” ಎಂಬಂತೆ ಅನೇಕ ರೀತಿಯಲ್ಲಿ ಅನರ್ಹರನ್ನು ಅಪಹಾಸ್ಯಕ್ಕೆ ಗುರಿ ಮಾಡುತ್ತಿರುವ ಪೋಸ್ಟ್​ಗಳು ಮೀಮ್ಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗುತ್ತಿವೆ. ಅಲ್ಲದೆ, “ಅನರ್ಹರನ್ನು ಸೋಲಿಸಿ ಕನ್ನಡಿಗರು ರಾಜ್ಯದ ಸ್ವಾಭಿಮಾನವನ್ನು ಎತ್ತಿಹಿಡಿಯಬೇಕು” ಎಂಬಂತಹ ಸಂದೇಶಗಳೂ ಸಹ ವ್ಯಾಪಕವಾಗಿ ಹರಿದಾಡುತ್ತಿವೆ.

ಕಳೆದ ಹಲವು ತಿಂಗಳುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೀಗೆ ಓಡಾಡುತ್ತಿರುವ ಮೀಮ್ಸ್ ಹಾಗೂ ಸಂದೇಶಗಳಿಗೆ ಜನರೂ ಸಹ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣಗಳ ಕಡೆಗಿನ ಜನರ ಈ ಸ್ಪಂದನೆ ಚುನಾವಣಾ ಫಲಿತಾಂಶದ ಸಂದರ್ಭದಲ್ಲಿ ಅನರ್ಹರ ಪಾಲಿಗೆ ಕಂಟಕವಾದರೂ ಅಚ್ಚರಿ ಇಲ್ಲ.

ಒಟ್ಟಾರೆ ರಾಜ್ಯ ಉಪ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳೆರಡೂ ತಮ್ಮ ಪಕ್ಷ ಎಲ್ಲೆಲ್ಲಿ ಗೆಲುವು ಸಾಧಿಸಬಹುದು ಎಂದು ಈಗಾಗಲೇ ಲೆಕ್ಕಾಚಾರ ಹಾಕಿ ವರದಿ ತರಿಸಿಕೊಳ್ಳುತ್ತಿವೆ. ಆದರೆ, ಇದನ್ನು ತೀರ್ಮಾನ ಮಾಡುವುದು ಮಾತ್ರ ರಾಜ್ಯ ಮತದಾರನೇ ಹೊರತು ಸರ್ಕಾರದ ವರದಿಗಳಲ್ಲ. ಈ ನಡುವೆ ರಾಜ್ಯ ರಾಜಕಾರಣದಲ್ಲಿನ ಪ್ರಸ್ತುತ ಯಾವ ಅಂಶಗಳು ಸಹ ಅನರ್ಹರ ಪಾಲಿಗೆ ಪೂರಕವಾಗಿಲ್ಲ ಎಂಬುದು ವೇದ್ಯವಾಗಿದೆ. ಆದರೆ, ಇದನ್ನೂ ಮೀರಿ ಅನರ್ಹರು ಅಧಿಕ ಸಂಖ್ಯೆಯಲ್ಲಿ ಜಯಗಳಿಸಿದರೆ ಅದನ್ನು ಪವಾಡ ಎನ್ನದೆ ವಿಧಿ ಇಲ್ಲ.
First published: December 2, 2019, 3:16 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading