Karnataka Rains: ಜು. 21ರವರೆಗೆ ರಾಜ್ಯಾದ್ಯಂತ ಭಾರಿ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಜುಲೈ 18ರಿಂದ 19ರವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಜುಲೈ 20 ಮತ್ತು 21ರಂದು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಜು. 18): ಪೂರ್ವ ಅರಬ್ಬಿ ಸಮುದ್ರದಲ್ಲಿ ಕಡಿಮೆ ಒತ್ತಡ ಪ್ರದೇಶವಿದ್ದು, ರಾಜ್ಯದಲ್ಲಿ ಇನ್ನು ಮೂರು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿಎಸ್​ ಪಾಟೀಲ್​ ತಿಳಿಸಿದ್ದಾರೆ. ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್, ಯೆಲ್ಲೋ, ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಮಳೆ ಇನ್ನು ಮೂರು ದಿನಗಳ ಕಾಲ ಮುಂದುವರೆಯಲಿದ್ದು, ಕರಾವಳಿ ಜಿಲ್ಲೆಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ ನೀರಿಕ್ಷೆ ಮಾಡಲಾಗಿದ್ದು, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಚಿತ್ರದುರ್ಗ, ದಾವಣಗೆರೆ, ಮೈಸೂರು ಜಿಲ್ಲೆಗಳಿಗೆ ನಾಳೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

  ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಜು.18 ಮತ್ತು 21ರವರೆಗೆ ನಾಲ್ಕು ದಿನಗಳ ಕಾಲ ಕರಾವಳಿ ಜಿಲ್ಲೆಗಳಿಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಿಗೆ ಜುಲೈ 18ರಿಂದ 19ರವರೆಗೆ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಜುಲೈ 20 ಮತ್ತು 21ರಂದು ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

  ದಾವಣಗೆರೆಯಲ್ಲಿ ಮಳೆ ಆರ್ಭಟ
  ಬೆಣ್ಣೆ ನಗರಿ ದಾವಣಗೆರೆಯಲ್ಲಿ ನಿನ್ನೆ ಸಂಜೆಯಿಂದ ಭಾರೀ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೆರೆ ಕಟ್ಟೆ ತುಂಬಿ ಕೋಡಿ ಹರಿಯುತ್ತಿದೆ. ಅತಿಯಾದ ಮಳೆಯಿಂದ ರೈತರ ಜಮೀನಿಗೆ ನೀರು ನುಗ್ಗುತ್ತಿದ್ದು, ರೈತರು ಕಂಗಾಲಾಗಿದ್ದಾರೆ.

  ಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ
  ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಗೆ ದಕ್ಷಿಣಕನ್ನಡ ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ಹಾಗು ಕುಮಾರಧಾರಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದ್ದು, ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು ನುಗ್ಗಿದೆ. ಕುಮಾರಪರ್ವತ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿರುವ ಕಾರಣ ಕುಮಾರಧಾರಾ ನದಿಯು ಧುಮ್ಮಿಕ್ಕಿ ಹರಿಯಲು ಆರಂಭಿಸಿದ್ದು, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಕುಮಾರಧಾರಾ ಸ್ನಾನಘಟ್ಟ ಸಂಪೂರ್ಣ ಮುಳುಗಡೆಯಾಗಿದೆ.

  ಇದನ್ನು ಓದಿ: ಕೋಟ್ಯಾಂತರ ಭಕ್ತರ ಆರಾಧ್ಯ ದೈವ ಮಂಗಳೂರಿನ ಭಗವತಿ

  ನಿನ್ನೆ ಈ ಭಾಗದಲ್ಲಿ ಮಳೆಯ ಪ್ರಮಾಣ ಕೊಂಚ ಇಳಿಮುಖವಾದ ಕಾರಣ ಮುಳುಗಡೆಯಾಗಿದ್ದ ಕುಮಾರಧಾರಾ ಸ್ನಾನಘಟ್ಟದಲ್ಲಿ ನೀರಿನ ಮಟ್ಟ ಇಳಿದಿತ್ತು. ಆದರೆ ಮಧ್ಯಾಹ್ನದ ಬಳಿಕ ಮತ್ತೆ ನೀರಿನ ಹರಿವು ಹೆಚ್ಚಾದ ಕಾರಣ ಸ್ನಾನಘಟ್ಟ ಸೇರಿದಂತೆ ಭಕ್ತಾಧಿಗಳ ಲಗೇಜ್ ರೂಂ ಕೂಡಾ ಮುಳುಗಡೆಯಾಗಿತ್ತು.

  ಉಪ್ಪಿನಂಗಡಿಯಲ್ಲಿ ನೇತ್ರಾವತಿ ನದಿಯ ಅಪಾಯದ ಮಟ್ಟ 30 ಅಡಿ ಗಳಾಗಿದೆ. ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ಎರಡು ಬೋಟ್ ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಲಾಗಿದೆ. ಮುಳುಗಡೆಯಾಗುವ ನದಿಪಾತ್ರದ ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸಲು ಈ ಬೋಟ್ ಗಳನ್ನು ಬಳಸಲಾಗುತ್ತದೆ. ಸ್ಥಳದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ಗೃಹರಕ್ಷಕದಳದ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ

  ಭಾರೀ ಮಳೆಗೆ ರೈಲು ಸಂಚಾರಕ್ಕೂ ವ್ಯತ್ಯಯ
  ಮಂಗಳೂರು- ಬೆಂಗಳೂರು ರೈಲು ಮಾರ್ಗದ ಪುತ್ತೂರಿನ ವೀರಮಂಗಲದ ಗಡಿಪಿಲ ಎಂಬಲ್ಲಿ ರೈಲು ಹಳಿಗೆ ಗುಡ್ಡ ಜರಿದು ರೈಲು ಸಂಚಾರ ವ್ಯತ್ಯಯವಾಗಿದೆ. ಗಾಂಧೀಧಾಮ್- ನಾಗರಕೊಯಿಲ್ ರೈಲು ಈ ಪ್ರದೇಶದಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿಯೇ ಇಲ್ಲಿಈ ಗುಡ್ಡ‌ ಕುಸಿದಿದ್ದು, ಭಾರೀ ಅನಾಹುತ ತಪ್ಪಿದೆ.

  ಚಿಕ್ಕಮಗಳೂರು-ಹಾಸನದಲ್ಲಿ ಮಣ್ಣು ಕುಸಿತ

  ಮಲೆನಾಡು ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು, ಚಿಕ್ಕಮಗಳೂರಿನ ಮಲ್ಲಂದೂರುಭಾರೀ ಮಳೆಯಿಂದ ರಸ್ತೆ ಪಕ್ಕದಲ್ಲೇ ಭೂ ಕುಸಿತ ಉಂಟಾಗಿದೆ. ಇದರಿಂದ ರಸ್ತೆ ಸಂಪರ್ಕ ಕಡಿತ, ವಾಹನ ಸಂಚಾರ ಬಂದ್ ಆಗಿದೆ. ಮಲ್ಲಂದೂರು ಸಿರಿವಾಸೆ ರಸ್ತೆ ಸಂಪರ್ಕ ಕಡಿತ ವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

  ಕೊಡಗಿನಲ್ಲಿ ಮಳೆಯಿಂದಾಗಿ ಜಲಪಾತಗಳ ಸೌಂದರ್ಯ ಮರುಕಳಿಸಿದೆ. ನಿರಂತರ ಮಳೆಗೆ ಅಬ್ಯಾಲ ಫಾಲ್ಸ್​ ಸೇರಿದಂತೆ ಜಿಲ್ಲೆಯ ಬಹುತೇಕ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದೆ.
  ಹಾಸನ ಜಿಲ್ಲೆ ಸಕಲೇಶಪುರದ ದೋಣಿಗಾಲ್​ನಲ್ಲಿ ಚತುಷ್ಪಥ ರಸ್ತೆ ಕಾಮಗಾರಿಗೆ ತೆಗಿದಿದ್ದ ಮಣ್ಣು ಕುಸಿದಿದೆ. ಇಲ್ಲಿ ನೂರಾರು ಲಾರಿ ಲೋಡ್ ಮಣ್ಣು ಸುರಿಯಲಾಗಿತ್ತು. ಈ ಮಣ್ಣು ಕುಸಿದಿದ್ದು, ಸುಮಾರು 40 ಎಕರೆಗೂ ಹೆಚ್ಚು ಪ್ರದೇಶದ ಭತ್ತದ ಗದ್ದೆ, ಅಡಿಕೆ ತೋಟ, ಕಾಫಿ, ಮೆಣಸು, ಭತ್ತ ಬೆಳೆ ನಾಶ ವಾಗಿದ್ದು, ಗುತ್ತಿದಾರ ರಾಜ್​​ಕಮಲ್ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
  Published by:Seema R
  First published: