ರಾಜ್ಯಕ್ಕೆ ಕೈಕೊಟ್ಟ ಮುಂಗಾರು, ಹಲವೆಡೆ ಬರದ ಛಾಯೆ; ಈವರೆಗೆ ಎಲ್ಲಿಲ್ಲಿ ಎಷ್ಟೆಷ್ಟು ಮಳೆ? ಇಲ್ಲಿದೆ ವರದಿ

ರಾಜ್ಯ ಹವಾಮಾನ ಇಲಾಖೆ ನೀಡುವ ಅಂಕಿಅಂಶಗಳ ಪ್ರಕಾರ ರಾಜ್ಯದ ಯಾವ ಯಾವ ಭಾಗದಲ್ಲಿ ಸರಾಸರಿ ಎಷ್ಟು ಪ್ರಮಾಣದ ಮಳೆ ಆಗಬೇಕಿತ್ತು? ಈವರೆಗೆ ಸುರಿದಿರುವ ಮಳೆಯ ಪ್ರಮಾಣ ಎಷ್ಟು? ಎಲ್ಲಿ ಮಳೆಯಾಗಿಲ್ಲ? ಎಲ್ಲೆಲ್ಲಿ ಬರದ ಛಾಯೆ ಮೂಡಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಬೆಂಗಳೂರು (ಜುಲೈ. 05); ಪ್ರತಿ ವರ್ಷದಂತೆಯೇ ಈ ವರ್ಷವೂ ರಾಜ್ಯಕ್ಕೆ ನಿಗದಿತ ಸಮಯದಲ್ಲಿ ಮುಂಗಾರು ಪ್ರವೇಶವಾಗಿತ್ತು. ಜೂನ್.01ರಂದು ಕೇರಳದ ಮೂಲಕ ಮುಂಗಾರು ಮಳೆಯ ಮಾರುತಗಳು ದೇಶಕ್ಕೆ ಪ್ರವೇಶಸಿದ್ದರೆ, ಜೂನ್.03ರ ವೇಳೆಗೆ ಕರ್ನಾಟಕದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಿಗೆ ಮುಂಗಾರು ಹಾಜರಿ ಹಾಕಿತ್ತು. ಜೂನ್ ಎರಡನೇ ವಾರದಲ್ಲಿ ಬಿಟ್ಟೂ ಬಿಡದೆ ಸುರಿದ ಮಳೆ ರಾಜ್ಯದ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದ್ದು ಸುಳ್ಳಲ್ಲ.

ಅಲ್ಲದೆ, ಕಳೆದ ವರ್ಷ ಇಡೀ ಕರ್ನಾಟಕ ಪ್ರವಾಹದಿಂದ ತತ್ತರಿಸಿ ಹೋಗಿತ್ತು. ಇದೇ ಕಾರಣಕ್ಕೆ ಈ ಬಾರಿಯ ಮಳೆಗಾಲವೂ ಜನರಲ್ಲಿ ಭಯದ ವಾತಾವರಣ ಮೂಡಿಸಿತ್ತು. ಆದರೆ, ಏಪ್ರಿಲ್ ತಿಂಗಳಲ್ಲೇ ಮಾಹಿತಿ ನೀಡಿದ್ದ ಹವಾಮಾನ ಇಲಾಖೆ, “ಈ ಬಾರಿ ರಾಜ್ಯದಲ್ಲಿ ಪ್ರವಾಹದ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇಲ್ಲ. ಉತ್ತಮ ಮಳೆಯಾಗಿ ಎಲ್ಲಾ ಕೆರೆ, ಕಟ್ಟೆ, ಕಾಲುವೆಗಳು ಅಣೆಕಟ್ಟೆಗಳು ತುಂಬಲಿವೆ” ಎಂದು ತಿಳಿಸಿದ್ದರು. ಈ ವರದಿಯಿಂದಲೇ ಅನೇಕರು ಹಿರಿಹಿರಿ ಹಿಗ್ಗಿದ್ದರು.

ಆದರೆ, ವಾಸ್ತವದಲ್ಲಿ ಈ ವರ್ಷದ ಮುಂಗಾರು ನಿರೀಕ್ಷಿಸಿದ ಮಟ್ಟಕ್ಕೆ ಈವರೆಗೆ ಫಲ ನೀಡಿಲ್ಲ ಎಂಬುದೇ ಸತ್ಯ. ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆಯಾದರೂ, ಮುಖ್ಯವಾಗಿ ಮಳೆ ಆಗಲೇಬೇಕಾದ ಮಲೆನಾಡು, ಕರಾವಳಿ, ಕಾವೇರಿಯ ಕೊಳ್ಳದ ಭಾಗಗಳಲ್ಲಿ ಸರಾಸರಿ ಮಳೆಗಿಂತ ಅತ್ಯಂತ ಕಡಿಮೆ ಪ್ರಮಾಣದ ಮಳೆಯಾಗಿದೆ. ಇನ್ನೂ ಉತ್ತರ ಒಳನಾಡು ಮತ್ತು ದಕ್ಷಣ ಒಳನಾಡಿನಲ್ಲೂ ಈವರೆಗೆ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಪರಿಣಾಮ ರಾಜ್ಯದ ಹಲವಾರು ಪ್ರಮುಖ ಅಣೆಕಟ್ಟೆಗಳು ಈವರೆಗೆ ತುಂಬದೆ ಹಾಗೆಯೇ ಉಳಿದಿವೆ.

ಹಾಗಾದರೆ, ರಾಜ್ಯ ಹವಾಮಾನ ಇಲಾಖೆ ನೀಡುವ ಅಂಕಿಅಂಶಗಳ ಪ್ರಕಾರ ರಾಜ್ಯದ ಯಾವ ಯಾವ ಭಾಗದಲ್ಲಿ ಸರಾಸರಿ ಎಷ್ಟು ಪ್ರಮಾಣದ ಮಳೆ ಆಗಬೇಕಿತ್ತು? ಈವರೆಗೆ ಸುರಿದಿರುವ ಮಳೆಯ ಪ್ರಮಾಣ ಎಷ್ಟು? ಎಲ್ಲಿ ಮಳೆಯಾಗಿಲ್ಲ? ಎಲ್ಲೆಲ್ಲಿ ಬರದ ಛಾಯೆ ಮೂಡಿದೆ? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಉಡುಪಿಯಲ್ಲಿ ದಾಖಲಾಯ್ತು ಅತಿಹೆಚ್ಚು ಮಳೆ:

ಜುಲೈ.05ರ ಅಂಕಿಅಂಶದ ಪ್ರಕಾರ ಕಳೆದ ವರ್ಷದಂತೆ ಈ ವರ್ಷವೂ ಉಡುಪಿ ಜಿಲ್ಲೆಯಲ್ಲಿ ಅತ್ಯಧಿತ ಮಳೆ ದಾಖಲಾಗಿದೆ. ಉಡುಪಿ ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣ 1106 ಮಿಮೀ. ಆದರೆ, ಈ ವರ್ಷ ಈವರೆಗೆ 1016 ಮಿಮೀ ಮಳೆಯಾಗಿದೆ. ಅಂದರೆ ಸರಾಸರಿ ಗಿಂತಲೂ 90 ಮಿಮೀ ಮಳೆ ಕಡಿಮೆಯಾಗಿದೆ. ಮಳೆಯ ಪ್ರಮಾಣ ಕಡಿಮೆಯಾದರೂ ಸಹ ಅತ್ಯಧಿಕ ಮಳೆಯಾದ ಜಿಲ್ಲೆ ಎಂಬ ಶ್ರೇಯಕ್ಕೆ ಉಡುಪಿ ಪಾತ್ರವಾಗಿದೆ. ಜುಲೈ ಮೂರನೇ ವಾರದಲ್ಲಿ ಈ ಭಾಗದಲ್ಲಿ ಅಧಿ ಮಳೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಉಡುಪಿಗೆ ಹೊಂದಿಕೊಂಡಂತೆಯೇ ಇರುವ ಕರಾವಳಿ ಭಾಗವಾದ ಉತ್ತರ ಕನ್ನಡ ಮತ್ತು ದಕ್ಷಿಣ ಭಾಗದಲ್ಲೂ ಸಹ ಈ ವರ್ಷ ನಿರೀಕ್ಷಿತ ಮಳೆಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣ ಜುಲೈ.05ಕ್ಕೆ 928 ಮಿಮೀ ಎಂದು ಅಂದಾಜಿಸಲಾಗಿದೆ. ಆದರೆ, ಈವರೆಗೆ ಸುರಿದಿರುವ ಮಳೆಯ ಪ್ರಮಾಣ ಕೇವಲ 630 ಮಿಮೀ ಮಾತ್ರ. ಇನ್ನೂ ಉತ್ತರ ಕನ್ನಡ ಜಿಲ್ಲೆಯ ಸರಾಸರಿ ಮಳೆಯ ಪ್ರಮಾಣ 691 ಮಿಮೀ. ಆದರೆ, ಈವರೆಗೆ ಸುರಿದಿರುವ ಮಳೆ ಕೇವಲ 666 ಮಿಮೀ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬರದ ಕಡೆಗೆ ಮುಖ ಮಾಡಿದ ಮಲೆನಾಡು:

ಪಶ್ಚಿಮಘಟ್ಟ ಭೂಪ್ರದೇಶದಲ್ಲಿ ಹತ್ತಾರು ನದಿಗಳನ್ನೂ, ಅಣೆಕಟ್ಟೆಗಳನ್ನೂ ಹೊಂದಿರುವ ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲೂ ಈ ಬಾರಿ ನಿರೀಕ್ಷಿತ ಮಳೆಯಾಗಿಲ್ಲ.

ಈ ಭಾಗದಲ್ಲಿ ಸುರಿಯುವ ಮಳೆಯ ಪ್ರಮಾಣ ಕೇವಲ ಈ ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ಬದಲಾಗಿ ಹತ್ತಾರು ಜಿಲ್ಲೆ ಮತ್ತು ನೆರೆ ರಾಜ್ಯಗಳು ಸಹ ಇಲ್ಲಿನ ಮಳೆಯ ಫಲಾನುಭವಿಗಳೇ. ಹೀಗಾಗಿ ಮಲೆನಾಡು ಭಾಗದಲ್ಲಾಗುವ ಮಳೆಯ ಪ್ರಮಾಣಕ್ಕಾಗಿ ಹಲವರು ಕಾಯುತ್ತಿರುತ್ತಾರೆ.

ಆದರೆ, ಕಳೆದ ವರ್ಷ ಉತ್ತಮ ಮಳೆಯನ್ನು ಕಂಡಿದ್ದ ಮಲೆನಾಡು ಭಾಗದಲ್ಲಿ ಈ ವರ್ಷ ಮುಂಗಾರು ನಿರೀಕ್ಷಿತ ಮಟ್ಟಕ್ಕೆ ಸ್ಪೋಟಿಸಿಲ್ಲ. ಪರಿಣಾಮ ಇಲ್ಲಿನ ಹಾಗೂ ಮಲೆನಾಡು ಆಶ್ರಿತ ಎಲ್ಲಾ ಜಿಲ್ಲೆಗಳೂ ಬರದ ಕಡೆಗೆ ಮುಖಮಾಡುವಂತಾಗಿದೆ.

ಶಿವಮೊಗ್ಗದಲ್ಲಿ ಈ ವೇಳೆಯ ಸರಾಸರಿ ಮಳೆ ಬರೊಬ್ಬರಿ 472 ಮಿಮೀ. ಆದರೆ, ಈವರೆಗೆ ದಾಖಲಾಗಿರುವ ಮಳೆಯ ಪ್ರಮಾಣ ಕೇವಲ 309 ಮಿಮೀ. ಹಾಸನದಲ್ಲಿ 164 ಮಿಮೀ ಮಳೆ ದಾಖಲಾಗಬೇಕಿತ್ತು. ಈವರೆಗೆ ಆಗಿರುವ ಮಳೆಯ ಪ್ರಮಾಣ ಕೇವಲ 117 ಮಿಮೀ.

ಚಿಕ್ಕಮಗಳೂರಿನಲ್ಲಿ 328 ಮಿಮೀ ಮಳೆಯಾಗಬೇಕಿತ್ತು. ಆದರೆ, ಈವರೆಗೆ ದಾಖಲಾಗಿರುವುದು ಮಾತ್ರ ಕೇವಲ 201 ಮಿಮೀ ಮಳೆ. ಇನ್ನೂ 534 ಮಿಮೀ ಮಳೆ ಕಾಣಬೇಕಿದ್ದ ಕೊಡಗಿನಲ್ಲೂ ಈವರೆಗೆ ದಾಖಲಾಗಿರುವುದು ಕೇವಲ 342 ಮಿಮೀ ಮಳೆ ಮಾತ್ರ. ಹೀಗಾಗಿ ಕಾವೇರಿಯ ಒಡಲೂ ಸಹ ಬರಿದಾದಂತಿದೆ.

ಕಳೆದ ವರ್ಷ ಪ್ರವಾಹಕ್ಕೆ ಸಾಕ್ಷಿಯಾದ ಕೊಡಗಿನಲ್ಲಿ ಈ ವರ್ಷ ಸರಾಸರಿ ಮಳೆಯೂ ದಾಖಲಾಗದೆ ಇರುವುದು ಹಲವರಲ್ಲಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಮಲೆನಾಡಿನ ಮಳೆಯನ್ನು ಆಶ್ರಯಿಸಿರುವ ಪ್ರಮುಖ ಅಣೆಕಟ್ಟೆಗಳಾದ ಭದ್ರಾ, ತುಂಗಾ, ಲಿಂಗನಮಕ್ಕಿ, ಯಗಚಿ, ಕಬಿನಿ ಹಾಗೂ ಕೆ.ಎಸ್.ಆರ್ ಅಣೆಕಟ್ಟೆಗಳು ನೀರಿಲ್ಲದೆ ಬಣಗುಡುವಂತಾಗಿದೆ.

ಉತ್ತರ-ದಕ್ಷಿಣ ಒಳನಾಡಿನ ಪರಿಸ್ಥಿತಿ ಶೋಚನೀಯ

ರಾಜ್ಯದಲ್ಲಿ ಅಧಿಕ ಮಳೆಯಾಗುವ ಮಲೆನಾಡು ಮತ್ತು ಕರಾವಳಿ ಭಾಗದಲ್ಲೇ ಈ ಬಾರಿ ಮಳೆ ಕೈಕೊಟ್ಟಿದೆ. ಇನ್ನೂ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗೇನು ಇಲ್ಲ. ಈ ಭಾಗದಲ್ಲಿ ಈವರೆಗೆ ನಿರೀಕ್ಷೆಗಿಂತ ಶೇ.40ರಷ್ಟು ಕಡಿಮೆ ಮಳೆಯಾಗಿದೆ. ಸಾಮಾನ್ಯವಾಗಿ ಇದು ಭವಿಷ್ಯದಲ್ಲಿ ಉಂಟಾಗಬಹುದಾದ ಬರದ ಭಯವನ್ನು ರೈತರಲ್ಲಿ ಬಿತ್ತಿದೆ.

ದಕ್ಷಿಣ ಒಳನಾಡು ಪ್ರದೇಶಗಳಾದ ಬೆಂಗಳೂರು ನಗರ, ಬೆಂ.ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಚಾಮರಾಜನಗರ, ಮೈಸೂರು ಹಾಗೂ ಮಂಡ್ಯ ಭಾಗದಲ್ಲಿ ಈವೇಳೆಗಾಗಲೇ ಸರಾಸರಿಯಾಗಿ ಕನಿಷ್ಟ 80 ಮಿಮೀ ನಿಂದ ಗರಿಷ್ಠ 132 ಮಿ.ಮೀ ವರೆಗೆ ಮಳೆ ಆಗಬೇಕಿತ್ತು. ಆದರೆ, ಈ ಜಿಲ್ಲೆಗಳ ಪೈಕಿ ಈವರೆಗೆ ಬೆಂಗಳೂರು ನಗರ ಭಾಗದಲ್ಲಿ ದಾಖಲಾಗಿರುವ 132 ಮಿ.ಮೀ ಅತ್ಯಧಿಕ ಮಳೆಯಾಗಿದೆ. ಇನ್ನೂ ಅನೇಕ ಜಿಲ್ಲೆಗಳಲ್ಲಿ ಶೇ.40 ರಿಂದ ಶೇ.50 ರಷ್ಟು ಮಳೆ ಕಡಿಮೆಯಾಗಿದೆ.

ಅಲ್ಲದೆ, ತುಮಕೂರು, ಚಿತ್ರದುರ್ಗ, ಮಂಡ್ಯ ತಾಲೂಕುಗಳಾದ, ಪಾವಗಡ, ಮೊಲಕಾಲ್ಮೂರು, ಕೂಡ್ಲಿಗಿ, ನಾಗಮಂಗಲ, ಕೊಟ್ಟೂರು ಹಾಗೂ ಶಿರಾ ಈವರೆಗೆ ಒಂದೇ ಒಂದು ಮಳೆಯನ್ನೂ ಕಾಣದಿರುವುದು ಇಲ್ಲಿನ ರೈತರ ಮುಖದಲ್ಲಿ ಬರದ ಛಾಯೆಯನ್ನು ಮೂಡಿಸಿದೆ.

ಇನ್ನೂ ಉತ್ತರ ಒಳನಾಡು ಭಾಗಗಳಾದ ಬಳ್ಳಾರಿ, ಕೊಪ್ಪಳ, ರಾಯಚೂರು, ಕಲಬುರ್ಗಿ, ಯಾದಗಿರಿ, ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲೂ ನಿರೀಕ್ಷಿತ ಮಳೆಯಾಗಿಲ್ಲ.

ಈ ವೇಳೆಗೆ ಕನಿಷ್ಟ ಶೇ.75 ಮಿಮೀ ನಿಂದ ಗರಿಷ್ಟ ಶೇ.146 ಮಿಮೀ ಇಲ್ಲಿನ ಸರಾಸರಿ ಮಳೆಯ ಪ್ರಮಾಣ. ಆದರೆ, ಕಲಬುರ್ಗಿಯಲ್ಲಿ 139 ಮಿಮೀ, ಯಾದಗಿರಿಯಲ್ಲಿ 143 ಮಿಮೀ ಮಳೆಯಾದದ್ದು ಬಿಟ್ಟರೆ ಉಳಿದ ಜಿಲ್ಲೆಗಳು ತೀವ್ರ ಮಳೆಯ ಅಭಾವವನ್ನು ಎದುರಿಸುತ್ತಿವೆ. ಇನ್ನೂ ಬಳ್ಳಾರಿಯ ಹಲವಾರು ಭಾಗದಲ್ಲಿ ಮಳೆಯಾಗದೆ ಇರುವುದು ಬರದ ಮುನ್ಸೂಚನೆಯನ್ನು ನೀಡಿದೆ.

ಹವಾಮಾನ ವರದಿಯ ಪ್ರಕಾರ ಈವರೆಗೆ ಹಲವಾರು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿಲ್ಲ. ಮುಂಗಾರು ಮಳೆ ಈ ವರ್ಷ ಕೈಕೊಟ್ಟಿದೆ. ಆದರೆ, ಮುಂಗಾರು ಕೈಕೊಟ್ಟರೂ ಸಹ ಹಿಂಗಾರು ರೈತರ ಕೈಹಿಡಿಯುವ ನಿರೀಕ್ಷೆ ಇದೆ. ಒಂದು ಈ ವರ್ಷ ಹಿಂಗಾರು ಮಾರುತಗಳೂ ಸಹ ರಾಜ್ಯದಲ್ಲಿ ಉತ್ತಮ ಮಳೆ ಸುರಿಸದಿದ್ದರೆ, ಪರಿಸ್ಥಿತಿ ಕೈಮೀರಲಿದೆ. ಹಲವಾರು ತಾಲೂಕುಗಳು ಬರ ಪೀಡಿತವಾಗಲಿವೆ ಎನ್ನಲಾಗುತ್ತಿದೆ.
Published by:MAshok Kumar
First published: