Monsoon 2020: ಮಹಾರಾಷ್ಟ್ರದ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಜೀವಕಳೆ; 26 ಗೇಟ್​ಗಳಿಗೂ ವಿದ್ಯುತ್ ಅಲಂಕಾರ

Alamatti Dam: ಆಲಮಟ್ಟಿ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, 26 ಗೇಟುಗಳ ಮೂಲಕ ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗುತ್ತಿದೆ. ರಾತ್ರಿ ವೇಳೆ ಈ ಎಲ್ಲ 26 ಗೇಟುಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಆ ದೃಶ್ಯಗಳು ಮೈ ನವಿರೇಳಿಸುವಂತಿವೆ. 

news18-kannada
Updated:August 10, 2020, 10:09 AM IST
Monsoon 2020: ಮಹಾರಾಷ್ಟ್ರದ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಜೀವಕಳೆ; 26 ಗೇಟ್​ಗಳಿಗೂ ವಿದ್ಯುತ್ ಅಲಂಕಾರ
ಆಲಮಟ್ಟಿ ಡ್ಯಾಂ
  • Share this:
ವಿಜಯಪುರ (ಆ. 10): ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ಬಸವನಾಡು ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನಲ್ಲಿರುವ ಆಲಮಟ್ಟಿ ಜಲಾಶಯಕ್ಕೆ ಜೀವಕಳೆಯನ್ನು ತಂದಿದೆ.  ಈ ಜಲಾಶಯದಲ್ಲಿ ಈಗ ಎಲ್ಲಿ ನೋಡಿದರೂ ಜಲರಾಶಿ ಕಂಗೊಳಿಸುತ್ತಿದೆ.

ಹಗಲು ಹೊತ್ತಿನಲ್ಲಿ ಜಲಾಶಯದಿಂದ ನೀರು ಬಿಡುಗಡೆಯ ದೃಶ್ಯಗಳು ಒಂದೆಡೆಯಾದರೆ, ರಾತ್ರಿ ವೇಳೆಯಲ್ಲಿ ಕಾಣುವ ದೃಶ್ಯಗಳು ಮತ್ತೊಂದೆಡೆ.  ಈ ದೃಶ್ಯಗಳನ್ನು ನೋಡಲು ಎರಡು ಕಣ್ಣುಗಳು ಸಾಲದು.  ಅಷ್ಟು ಸುಂದರ ಮತ್ತು ಅದ್ಭುತವಾಗಿವೆ ದೃಶ್ಯಗಳು.

ಸಧ್ಯಕ್ಕೆ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ವಿದ್ಯುತ್ ಉತ್ಪಾದನೆ ಘಟಕಗಳು ಮತ್ತು ಎಲ್ಲ 26 ಗೇಟುಗಳ ಮೂಲಕ ಅಪಾರ ಪ್ರಮಾಣದ ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗುತ್ತಿದೆ.  ರಾತ್ರಿ ವೇಳೆ ಈ ಎಲ್ಲ 26 ಗೇಟುಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಆ ದೃಶ್ಯಗಳು ಮೈ ನವಿರೇಳಿಸುವಂತಿವೆ.  ಕಲರ್‌ಫುಲ್ ದೃಶ್ಯಗಳು ನೋಡಲು ಚಂದವಾಗಿದ್ದರೆ, ಆಗಾಗ ಬದಲಾಗುವ ಬೆಳಕಿನ ಬಣ್ಣಗಳು ಅಷ್ಟೇ ಅಂದವಾಗಿ ಕಾಣಿಸುತ್ತಿವೆ.  ಕೇಸರಿ, ಬಿಳಿ, ಹಸಿರು, ನೀಲಿ ಮುಂತಾದ ಬಣ್ಣಗಳು ಗಮನ ಸೆಳೆಯುತ್ತಿವೆ.

Karnataka Alamatti Dam Gates Open due to Heavy Rain Lashes in Maharashtra
ಆಲಮಟ್ಟಿ ಡ್ಯಾಂ


ಇದನ್ನೂ ಓದಿ: Karnataka Dams Water Level: ರಾಜ್ಯದ 7 ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಒಂದೆಡೆ ಜಲಾಶಯದಿಂದ ನೀರು ನಿರಂತರವಾಗಿ ಹೊರ ಹೋಗುತ್ತಿದ್ದರೆ, ಆ ಜಲರಾಶಿಯ ಮೇಲೆ ಆಗಾಗ ಬಣ್ಣ ಬದಲಾಯಿಸುವ ವಿದ್ಯುತ್ ದೀಪಗಳು ನೀರಿನ ಹೊರ ಹರಿವನ್ನು ಮತ್ತಷ್ಟು ಸುಂದರವಾಗಿಸುತ್ತಿವೆ.  ರಾತ್ರಿ ವೇಳೆ ನೀರು ಬಿಡುಗಡೆ ದೃಶ್ಯಗಳು ಕಲರ್​ಫುಲ್ ಆಗಿರುವುದು ಗಮನಾರ್ಹವಾಗಿದೆ. ನಾನಾ ಬಣ್ಣಗಳ ಬೆಳಕಿನ ಮಧ್ಯೆ ಧುಮ್ಮಿಕ್ಕಿ ಹರಿಯುತ್ತಿರುವ ಕೃಷ್ಣೆಯ ದೃಶ್ಯಗಳನ್ನು ನೋಡಲು ನಯನ ಮನೋಹರವಾಗಿವೆ.
ಈ ವರ್ಷ ಮೊದಲ ಬಾರಿಗೆ ಗೇಟುಗಳ ಮೂಲಕ ನೀರು ಬಿಡುಗಡೆಯಾದಾಗ ಈ ವಿದ್ಯುತ್ ದೀಪಗಳು ದುರಸ್ಥಿಯಲ್ಲಿದ್ದವು.  ಹೀಗಾಗಿ ಹಲವು ದಿನಗಳಿಂದ ರಾತ್ರಿ ವೇಳೆ ಜಲಾಶಯದ ದೃಶ್ಯಗಳು ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ.  ಈಗ ನಿನ್ನೆ ರಾತ್ರಿಯಿಂದ ಈ ವಿದ್ಯುತ್ ದೀಪಗಳು ಮತ್ತೆ ಗತವೈಭವಕ್ಕೆ ಮರಳಿವೆ.  ಅರ್ಥಾತ್ ಈ ವಿದ್ಯುತ್ ದೀಪಗಳನ್ನು ದುರಸ್ಥಿ ಮಾಡಿಸಲಾಗಿದ್ದು, ಮತ್ತೆ ಕಾರ್ಯಾರಂಭ ಮಾಡಿವೆ.

ಆಲಮಟ್ಟಿ ಜಲಾಶಯದ ಎದುರು ಇರುವ ಹೆದ್ದಾರಿಯಲ್ಲಿ ರಾತ್ರಿ ವೇಳೆ ಸಂಚರಿಸಿದರೆ ಸಾಕು ಅಣೆಕಟ್ಟೆ ಕಡೆಗೆ ಗಮನ ಹರಿಯುತ್ತದೆ.  ಜಲಾಶಯದ ಎದುರು ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಈ ಸೇತುವೆಯ ಮೇಲೆ ನಿಂತು ನೋಡಿದರೆ ಲಾಲ್ ಬಹಾದ್ದೂರ್ ಶಾಸ್ತ್ರಿ ಸಾಗರದ ನೀರು ಬಿಡುಗಡೆಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ.  ಈ ಬಾರಿಯೂ ಆಲಮಟ್ಟಿ ಜಲಾಶಯಕ್ಕೆ ಜೀವಕಳೆ ಬಂದಿದ್ದು, ನೀರು ಬಿಡುಗಡೆಯ ದೃಶ್ಯಗಳು ಹಗಲು ಹೊತ್ತಿನಲ್ಲಿ ನೈಸರ್ಗಿಕವಾಗಿ ಗೋಚರಿಸುತ್ತಿದ್ದರೆ ರಾತ್ರಿ ವೇಳೆಯಲ್ಲಿ ದೀಪಾಲಂಕಾರಗಳಿಂದಾಗಿ ಮತ್ತಷ್ಟು ಗಮನ ಸೆಳೆಯುತ್ತಿವೆ.
Published by: Sushma Chakre
First published: August 10, 2020, 10:08 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading