Kodagu Rain: ಕೊಡಗಿನಲ್ಲಿ ಭಾರೀ ಮಳೆ; ಜಿಲ್ಲಾಡಳಿತದಿಂದ ಇಂದು, ನಾಳೆ ಯೆಲ್ಲೋ ಅಲರ್ಟ್ ಘೋಷಣೆ
Kodagu Weather: ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಜಿಲ್ಲಾಡಳಿತ ಸೋಮವಾರ ಬೆಳಿಗ್ಗೆ 6ರಿಂದ ಮಂಗಳವಾರ ಬೆಳಿಗ್ಗೆ 6ರವರೆಗೆ ಯೆಲ್ಲೋ ಅಲರ್ಟ್ ಮತ್ತು ಮಂಗಳವಾರ ಬೆಳಿಗ್ಗೆ 6ರಿಂದ ಆ. 7ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಕೊಡಗು (ಆ. 3): ಕರ್ನಾಟಕದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ಮಲೆನಾಡಿನಲ್ಲಿ ಆರಂಭದಲ್ಲಿ ಚುರುಕುಗೊಂಡಿದ್ದ ಮಳೆ ಈಗ ನಾಪತ್ತೆಯಾಗಿದೆ. ಕರಾವಳಿಯ ಕೆಲವು ಪ್ರದೇಶಗಳಲ್ಲಿಯೂ ಜುಲೈನಲ್ಲಿ ಪ್ರವಾಹದ ವಾತಾವರಣ ನಿರ್ಮಿಸಿದ್ದ ಮಳೆಯ ಅಬ್ಬರ ಈಗ ಕಡಿಮೆಯಾಗಿದೆ. ಕೊಡಗಿನಲ್ಲಿ ಹಲವು ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದ ಮಳೆ ನಿನ್ನೆ ಬೆಳಗ್ಗೆಯಿಂದ ಮತ್ತೆ ಬಿರುಸು ಪಡೆದಿದೆ.
ಕೊಡಗಿನಲ್ಲಿ ನಿನ್ನೆಯಿಂದ ಭಾರೀ ಮಳೆಯಾಗುತ್ತಿದ್ದು, ನದಿ, ಹಳ್ಳಗಳೆಲ್ಲ ತುಂಬಿ ಹರಿಯುತ್ತಿದೆ. ತಲಕಾವೇರಿ ಭಾಗಮಂಡಲ ಬ್ರಹ್ಮಗಿರಿ ತಪ್ಪಲು, ನಾಪೋಕ್ಲು, ಮಡಿಕೇರಿ ಮಾದಾಪುರ ಸೇರಿದಂತೆ ಕೊಡಗಿನ ಬಹುತೇಕ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಹೀಗಾಗಿ, ಇಂದು ಮತ್ತು ನಾಳೆ ಕೊಡಗಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಾಳೆ ಸಂಜೆಯಿಂದ ಆ. 7ರವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಇಂದು ಕೊಡಗಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇಂದು ಕೊಡಗು ಜಿಲ್ಲೆಯಲ್ಲಿ 64 ಮಿಲಿ ಮೀಟರ್ 115ರವರೆಗೆ ಮಳೆಯಾಗುವ ಸಾಧ್ಯತೆ ಇದೆ. ನಾಳೆ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಳವಾಗುವ ಸಾಧ್ಯತೆ ಇದ್ದು, 115 ಮಿ. ಮೀಟರ್ ನಿಂದ 204 ಮಿ.ಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಮಾಹಿತಿಯ ಆಧಾರದಲ್ಲಿ ಕೊಡಗು ಜಿಲ್ಲಾಡಳಿತ ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 6ರಿಂದ ಮಂಗಳವಾರ ಬೆಳಿಗ್ಗೆ 6ರವರೆಗೆ ಯೆಲ್ಲೋ ಅಲರ್ಟ್ ಮತ್ತು ಮಂಗಳವಾರ ಬೆಳಿಗ್ಗೆ 6ರಿಂದ ಆ. 7ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಈ ಸಮಯದಲ್ಲಿ ಜನರು ಎಚ್ಚರಿಕೆ ಇಂದ ಇರುವಂತೆ ಸೂಚಿಸಲಾಗಿದೆ.
ಕೊಡಗು ಜಿಲ್ಲೆಯ ಏಕೈಕ ಜಲಾಶಯ ಹಾರಂಗಿ ಬಹುತೇಕ ಭರ್ತಿಯಾಗಿದೆ. 8.5 ಟಿಎಂಸಿ ಸಾಮರ್ಥ್ಯದ ಜಲಾಶಯಕ್ಕೆ 7.71 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಇಂದು ಹಾರಂಗಿ ಜಲಾಶಯದಲ್ಲಿ ನೀರಿನ ಮಟ್ಟ 2,859 ಅಡಿಗಳಿಗೆ ಏರಿಕೆಯಾಗಿದೆ. ನಿನ್ನೆ ಸುರಿದ ಮಳೆಯಿಂದ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಪ್ರತಿವರ್ಷ ಕೊಡಗಿನಲ್ಲಿ ಪ್ರವಾಹ ಉಂಟಾಗುವುದರಿಂದ ಈ ಬಾರಿ ಜಿಲ್ಲಾಡಳಿತ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.
Published by:Sushma Chakre
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ