Monsoon 2020: ರಾಜ್ಯದಲ್ಲಿ ಮತ್ತೆ ಮುಂಗಾರು ಚುರುಕು; ಕರಾವಳಿ, ಮಲೆನಾಡು ಭಾಗದಲ್ಲಿ ಭಾರೀ ಮಳೆ

ಜೂನ್​ ತಿಂಗಳಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಅಲ್ಲದೆ, ಭತ್ತ ನಾಟಿ ಮಾಡುವ ಕಾರ್ಯವನ್ನು ಮುಂದೂಡಿದ್ದರು. ಆದರೆ, ಈಗ ಮಳೆ ಆರಂಭವಾಗುತ್ತಿದ್ದಂತೆ ಕೃಷಿ ಕಾರ್ಯ ಚುರುಕುಗೊಂಡಿದೆ.

ಮಳೆ

ಮಳೆ

 • Share this:
  ಬೆಂಗಳೂರು (ಜು.4): ಜೂನ್​ ತಿಂಗಳಲ್ಲಿ ಮುಂಗಾರು ಮಳೆ ಕೈ ಕೊಟ್ಟಿದ್ದು ರೈತರ ಆತಂಕಕ್ಕೆ ಕಾರಣವಾಗಿತ್ತು. ಆದರೆ, ಈಗ ಮಾನ್ಸೂನ್​ ಚುರುಕುಗೊಂಡಿದ್ದು, ರೈತರ ಆತಂಕ ದೂರವಾಗಿದೆ. ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು ಕೃಷಿ ಚಟುವಟಿಕೆ ಪುನರಾರಂಭಗೊಂಡಿದೆ.   

  ನಿನ್ನೆಯಿಂದ ದಕ್ಷಿಣ ಕನ್ನಡ ಭಾಗದಲ್ಲಿ ಭಾರೀ ಮಳೆ ಆಗುತ್ತಿದೆ. ಮಂಗಳೂರು ಸೇರಿದಂತೆ ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನಾದ್ಯಾಂತ ವರುಣನ ಅಬ್ಬರ ಜೋರಾಗಿದೆ. ಮುಂದಿನ ನಾಲ್ಕು ದಿನ ಭಾರೀ ಗಾಳಿ ಮಳೆ ಆಗಲಿದೆ ಎನ್ನುವ ಎಚ್ಚರಿಕೆಯನ್ನು  ಹವಾಮಾನ ಇಲಾಖೆ ನೀಡಿದೆ.

  ಇನ್ನು, ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿವೆ. ನದಿಗಳಲ್ಲಿ ನೀರಿನ ಹರಿವು ಹೆಚ್ಚಿದ ಬೆನ್ನಲ್ಲೇ ನದಿ ತಟದಲ್ಲಿ ವಾಸಿಸುವವರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

  ಉತ್ತರ ಕನ್ನಡದಲ್ಲೂ ಮಳೆ:

  ಜೂನ್​ ಮೊದಲ ವಾರದಲ್ಲಿ ಉತ್ತರ ಕನ್ನಡ ಭಾಗದಲ್ಲಿ ಮಳೆ ಆಗಿತ್ತು. ನಂತರ ವರುಣನ ದರ್ಶನ ಅಷ್ಟಾಗಿ ಆಗಿರಲಿಲ್ಲ. ಈಗ ಜಿಲ್ಲೆಯ ಕರಾವಳಿ ತಾಲೂಕು ಸೇರಿದಂತೆ ಎಲ್ಲಾ ಕಡೆ ಧಾರಾಕಾರ ಮಳೆ ಆಗುತ್ತಿದೆ. ಹೀಗಾಗಿ, ಜನ ಜೀವನ ಅಸ್ತವ್ಯಸ್ತವಾಗಿದೆ. ನದಿ ಮತ್ತು ಸಮುದ್ರ ದಂಡೆಯ ಜನತೆಯಲ್ಲಿ ಆತಂಕ ಎದುರಾಗಿದೆ. ಮುಂದಿನ ಎರಡು ಮೂರು ದಿನ ಭಾರೀ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

  ಮೀನುಗಾರಿಕೆ ಸ್ಥಗಿತ:

  ಕಾರವಾರ, ಅಂಕೋಲ, ಕುಮಟ, ಹೊನ್ನಾವರ, ಕುಂದಾಪುರ, ಉಡುಪಿ, ಮಂಗಳೂರು ಭಾಗದಲ್ಲಿ ಮೀನುಗಾರಿಕೆಯನ್ನೇ ನಂಬಿಕೊಂಡು ಸಾಕಷ್ಟು ಜನ ಇದ್ದಾರೆ. ಆದರೆ, ಮಳೆ ಜೋರಾದ್ದರಿಂದ ಅಲೆಗಳ ಅಬ್ಬರ ಜೋರಾಗಿದೆ. ಹೀಗಾಗಿ, ಸಾಂಪ್ರದಾಯಿಕ ಮೀನುಗಾರಿಕೆ ಸ್ಥಗಿತ ಮಾಡಲಾಗಿದೆ. ಈಗಾಗಲೇ ಮೀನುಗಾರರು ದೋಣಿಗಳನ್ನು ದಡಕ್ಕೆ ತಂದಿಡುವ ಕೆಲಸ ಮಾಡಿದ್ದಾರೆ.

  ಚುರುಕಾದ ಕೃಷಿ ಚಟುವಟಿಕೆ:

  ಜೂನ್​ ತಿಂಗಳಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿದ್ದರು. ಅಲ್ಲದೆ, ಭತ್ತ ನಾಟಿ ಮಾಡುವ ಕಾರ್ಯವನ್ನು ಮುಂದೂಡಿದ್ದರು. ಆದರೆ, ಈಗ ಮಳೆ ಆರಂಭವಾಗುತ್ತಿದ್ದಂತೆ ಕೃಷಿ ಕಾರ್ಯ ಚುರುಕುಗೊಂಡಿದೆ.

  ಉತ್ತರ ಕರ್ನಾಟಕದ ಭಾಗದಲ್ಲಿಲ್ಲ ಮಳೆ:

  ಉತ್ತರ ಕರ್ನಾಟಕದ ಭಾಗದಲ್ಲಿ ಅಲ್ಲಲ್ಲಿ ಚಿಕ್ಕ ಪ್ರಮಾಣದಲ್ಲಿ ಮಳೆ ಆಗುತ್ತಿದೆ. ರಾಯಚೂರು, ಗುಲ್ಬರ್ಗ, ಬೀದರ್​, ಯಾದಗಿರಿ ಭಾಗದಲ್ಲಿ ವರುಣನ ದರ್ಶನ ಆಗಿಲ್ಲ. ಹೀಗಾಗಿ ಕೃಷಿ ಚಟುವಟಿಕೆಗೆ ಅಷ್ಟಾಗಿ ಚುರುಕು ಸಿಕ್ಕಿಲ್ಲ.
  Published by:Rajesh Duggumane
  First published: