ವಿದೇಶದಲ್ಲಿ ಕೆಲಸ ಕೊಡಿಸೋದಾಗಿ ವಂಚನೆ - ಆಕರ್ಷಕ ಸಂಬಳದ ಆಮಿಷವೊಡ್ಡಿ ಪಂಗನಾಮ

ಮೋಸ ಹೋದವರು ದೂರು ನೀಡಲು ಪೊಲೀಸ್‌ ಠಾಣೆಗೆ ಹೋದರೆ ಪೊಲೀಸರು ಬುದ್ಧಿ ಮಾತು ಹೇಳಿ ಕಳಿಸುತ್ತಿದ್ದಾರೆ. ಕಲಿತವರಾಗಿ ಯಾಕೆ ಮೋಸಹೋಗುತ್ತೀರಿ ಎಂದು ಹೇಳುವುದನ್ನು ಬಿಟ್ಟರೆ ಬೇರೆ ಯಾವುದೇ ಪರಿಹಾರ ಸಿಗುತ್ತಿಲ್ಲ.

news18-kannada
Updated:January 14, 2020, 8:49 PM IST
ವಿದೇಶದಲ್ಲಿ ಕೆಲಸ ಕೊಡಿಸೋದಾಗಿ ವಂಚನೆ - ಆಕರ್ಷಕ ಸಂಬಳದ ಆಮಿಷವೊಡ್ಡಿ ಪಂಗನಾಮ
ಮೋಸ ಹೋಗಿರುವ ವ್ಯಕ್ತಿ
  • Share this:
ಹುಬ್ಬಳ್ಳಿ(ಜ.15) : ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಹುಬ್ಬಳ್ಳಿಯ ವ್ಯಕ್ತಿಯೊಬ್ಬರನ್ನು ವಂಚಿಸಲಾಗಿದೆ. ಆಕರ್ಷಕ ಸಂಬಳದ ಆಮಿಷವೊಡ್ಡಿ ಪಂಗನಾಮ ಹಾಕಲಾಗಿದೆ. ಉದ್ಯೋಗ ಆಕಾಂಕ್ಷಿಗಳಿಗೆ ಬಣ್ಣಬಣ್ಣದ ಕನಸು ತೋರಿಸುತ್ತಿರುವ ವಂಚಕರು ಹಣ ಸುಲಿಗೆ ಮಾಡುತ್ತಿದ್ದಾರೆ.

ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಪದವಿ ಮುಗಿಸಿರುವ ಹುಬ್ಬಳ್ಳಿಯ ನಿವಾಸಿ ಪ್ರಾನ್ಸಿಸ್‌ ಅಸನಗಿ, ನೈಜೀರಿಯಾದಲ್ಲಿ ಕೆಲಸ ಮಾಡಿ ಇತ್ತೀಚೆಗೆ ತಾಯಿನಾಡಿಗೆ ಮರಳಿದ್ದರು. ಇವರಿಗೆ ಉತ್ತರ ಪ್ರದೇಶದ ಲಖನೌನಲ್ಲಿರುವ ಬೆಸ್ಟ್‌ ವಿಸಾ ಕಂಪನಿಯಿಂದ ಒಂದು ಮೇಲ್‌ ಬಂದಿತ್ತು. ಸೌಥ್‌ ಆಫ್ರಿಕಾದಲ್ಲಿ ಕೆಲಸವಿದ್ದು ತಕ್ಷಣ ಸಂಪರ್ಕಿಸುವಂತೆ ಆಫರ್‌ ಕೊಡಲಾಗಿತ್ತು. ಬೆಸ್ಟ್‌ ವಿಸಾ ಕಂಪನಿಯ ಆವಂತಿಕಾ ಸಿಂಗ್‌ ಎಂಬುವವರು ಪ್ರಾನ್ಸಿಸ್‌ ಜೊತೆ ಫೋನಲ್ಲಿ ಮಾತನಾಡಿದ್ದರು.

ತಿಂಗಳಿಗೆ 2 ಲಕ್ಷ 80 ಸಾವಿರ ರೂಪಾಯಿ ಸಂಬಳ. ಉಚಿತ ಊಟ, ವಸತಿ, ವಾಹನ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದ್ದರು. ಪಾಸ್‌ಪೋರ್ಟ್‌ ಸೇರಿದಂತೆ ಎಕ್ಸ್‌ಪೇರಿಯನ್ಸ್‌ ಲೆಟರ್‌ ತರಿಸಿಕೊಂಡಿದ್ದರು. ನಂತರ ಸೌಥ್‌ ಆಫ್ರಿಕಾದ ಎಂಜೆನ್‌ ಪೆಟ್ರೋಲಿಯಮ್‌ ಕಂಪನಿಯ ಆಫರ್‌ ಲೆಟರ್‌ ಕೂಡ ಕಳಿಸಿದ್ದರು.

ಬೆಂಗಳೂರಿನ ಜಯನಗರದಲ್ಲಿ ಮೆಡಿಕಲ್‌ ಚೆಕ್‌ಅಪ್‌

ಬೆಂಗಳೂರಿನಲ್ಲಿ ಮೆಡಿಕಲ್‌ ಚೆಕ್‌ಅಪ್ ಮಾಡಿಸುವಂತೆ ತಿಳಿಸಿದ್ದರು. ಬೆಸ್ಟ್‌ ವಿಸಾ ಕಂಪನಿಯವರ ಬಣ್ಣದ ಮಾತುಗಳನ್ನು ನಂಬಿದ ಪ್ರಾನ್ಸಿಸ್‌ ಬೆಂಗಳೂರಿನ ಜಯನಗರದಲ್ಲಿರುವ ರತ್ನಾ ಡಯಗ್ನೋಸ್ಟಿಕ್‌ ಸೆಂಟರ್‌ನಲ್ಲಿ ಹದಿನಾರು ಸಾವಿರ ರೂಪಾಯಿ ಖರ್ಚುಮಾಡಿ ಮೆಡಿಕಲ್‌ ಚೆಕ್‌ಅಪ್‌ ಮಾಡಿಸಿದ್ದಾರೆ. ಆರೋಗ್ಯ ತಪಾಸಣಾ ಪತ್ರದ ಪ್ರತಿಯನ್ನು ಬೆಸ್ಟ್‌ ವಿಸಾ ಕಂಪನಿಗೆ ಕಳಿಸಿದ್ದಾರೆ. ಫೋನ್‌ ಕರೆ ಮಾಡಿದ್ದ ಆವಂತಿಕಾ ಸಿಂಗ್‌ ಸೆಕ್ಯುರಿಟಿ ಡಿಪಾಸಿಟ್ ಇಡಬೇಕೆಂದು ಹೇಳಿದ್ದರು. ಪ್ರಾನ್ಸಿಸ್‌ ಅವರಿಂದ ಇಪ್ಪತ್ತು ಸಾವಿರ ರೂಪಾಯಿ ಹಣವನ್ನು ಅಕೌಂಟ್‌ಗೆ ಹಾಕಿಸಿಕೊಂಡಿದ್ದಾರೆ. ಇಷ್ಟಾದ ಬಳಿಕ ವಿಸಾ ಪ್ರೊಸೆಸ್ಸಿಂಗ್‌ಗೆ ಮತ್ತೆ ಮೂವತ್ತು ಸಾವಿರ ರೂಪಾಯಿ ಕಳಿಸುವಂತೆ ಹೇಳಿದ್ದಾರೆ. ಸಂಶಯಗೊಂಡ ಪ್ರಾನ್ಸಿಸ್‌ ಸೌತ್‌ ಆಫ್ರಿಕಾದ ಎಂಜೆನ್ ಕಂಪನಿಯ ಕುರಿತು ಗೂಗಲ್‌ನಲ್ಲಿ ಸರ್ಚ್‌ ಮಾಡಿದ್ದಾರೆ. ಕಂಪನಿಯ ಫೋನ್‌ ನಂಬರ್‌ಗೆ ಕರೆ ಮಾಡಿ ಆಫರ್‌ ಲೆಟರ್‌ ಕುರಿತು ಕೇಳಿದ್ದಾರೆ. ಆಫರ್‌ ಲೆಟರ್‌ ತಾವು ಕಳಿಸಿಲ್ಲ ಎಂದು ಎಂಜೆನ್‌ ಕಂಪನಿ ಸ್ಪಷ್ಟಪಡಿಸಿದೆ.

ಮೋಸ ಹೋಗಿದ್ದು ಅರಿವಾಗುತ್ತಿದ್ದಂತೆ ಬೆಸ್ಟ್‌ ವಿಸಾ ಕಂಪನಿಯ ಆವಂತಿಕಾ ಸಿಂಗ್‌ಗೆ ಕರೆ ಮಾಡಿದ ಪ್ರಾನ್ಸಿಸ್‌ ತಮ್ಮ ಹಣ ಮರಳಿಸುವಂತೆ ಕೇಳಿದ್ದಾರೆ. ಬಂಡವಾಳ ಬಯಲಾಗುತ್ತಿದ್ದಂತೆ ಬೆಸ್ಟ್‌ ವಿಸಾ ಕಂಪನಿಯವರು ಪ್ರಾನ್ಸಿಸ್‌ ಫೋನ್‌ ನಂಬರ್‌ ಬ್ಲಾಕ್‌ ಮಾಡಿದ್ದಾರೆ. ಇತ್ತ ಉದ್ಯೋಗವೂ ಸಿಗದೆ, ಅತ್ತ ಕೈಯಲ್ಲಿದ್ದ ಹಣವನ್ನೂ ಕಳೆದುಕೊಂಡ ಪ್ರಾನ್ಸಿಸ್‌ ಕಂಗಾಲಾಗಿದ್ದಾರೆ.

ಫೇಕ್‌ ಕಂಪನಿಯಿಂದ ನೂರಾರು ಜನರಿಗೆ ಮೋಸಬೆಸ್ಟ್‌ ವಿಸಾ ಕಂಪನಿ ಎನ್ನುವ ಫೇಕ್‌ ಉದ್ಯೋಗದಾತ ಕಂಪನಿ ಇದೇ ರೀತಿ ನೂರಾರು ಜನರಿಗೆ ವಂಚನೆ ಮಾಡಿದೆ ಎನ್ನಲಾಗುತ್ತಿದೆ. ಪ್ರಾನ್ಸಿಸ್‌ ಮೆಡಿಕಲ್‌ ಚೆಕ್‌ಅಪ್‌ಗೆಂದು ಹೋಗಿದ್ದಾಗ ಉಡುಪಿ, ಮಂಗಳೂರು, ಕಲಬುರ್ಗಿ, ಬೆಳಗಾವಿ, ಹೈದ್ರಾಬಾದ್‌ ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳ ನೂರಾರು ಉದ್ಯೋಗಾಕಾಂಕ್ಷಿಗಳು ಅಲ್ಲಿಗೆ ಫಿಟ್ನೆಸ್‌ ಸರ್ಟಿಫಿಕೇಟ್‌ ಪಡೆಯಲು ಬಂದಿದ್ದರು. ಅವರೆಲ್ಲರಿಗೂ ಇದೇ ರೀತಿ ವೈದ್ಯಕೀಯ ಪರೀಕ್ಷೆ ನಡೆಸಿ ಆಫರ್‌ ಲೆಟರ್‌ ಕಳಿಸಿ ವಂಚಿಸಲಾಗಿದೆ. ಜಯನಗರದ ರತ್ನಾ ಡಯಗ್ನೋಸ್ಟಿಕ್‌ ಸೆಂಟರ್‌ನವರು ಬೆಸ್ಟ್‌ ವಿಸಾ ಕಂಪನಿಯೊಂದಿಗೆ ಶಾಮಿಲಾಗಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿವೆ.

ಇದನ್ನೂ ಓದಿ : ನಿವೃತ್ತ ಸೈನಿಕರಿಗೆ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕಿದ ವಂಚಕರು

ಮೋಸ ಹೋದವರು ದೂರು ನೀಡಲು ಪೊಲೀಸ್‌ ಠಾಣೆಗೆ ಹೋದರೆ ಪೊಲೀಸರು ಬುದ್ಧಿ ಮಾತು ಹೇಳಿ ಕಳಿಸುತ್ತಿದ್ದಾರೆ. ಕಲಿತವರಾಗಿ ಯಾಕೆ ಮೋಸಹೋಗುತ್ತೀರಿ ಎಂದು ಹೇಳುವುದನ್ನು ಬಿಟ್ಟರೆ ಬೇರೆ ಯಾವುದೇ ಪರಿಹಾರ ಸಿಗುತ್ತಿಲ್ಲ. ಇನ್ನಷ್ಟು ಉದ್ಯೋಗಾಕಾಂಕ್ಷಿಗಳಿಗೆ ಬೆಸ್ಟ್‌ ವಿಸಾ ಕಂಪನಿಯಂತ ವಂಚಕ ಕಂಪನಿಗಳು ಮೋಸ ಮಾಡುವ ಮೊದಲು ಪೊಲೀಸರು ಎಚ್ಚೆತ್ತುಕೊಳ್ಳಬೇಕಿದೆ. ನಿರುದ್ಯೋಗಿಗಳ ಅಸಹಾಯಕತೆಯ ದುರ್ಲಾಭ ಮಾಡಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಅಮಾಯಕರಿಗೆ ಆಗುತ್ತಿರುವ ಅನ್ಯಾಯ ತಪ್ಪಿಸಬೇಕಿದೆ
First published:January 14, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ