news18-kannada Updated:March 8, 2020, 3:38 PM IST
ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಬೆಂಗಳೂರು (ಮಾ.8): ರಾಜ್ಯದ ಆಡಳಿತದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಗ ಬಿ.ವೈ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ವಿಷಯದಲ್ಲಿ ಕೆಲ ಶಾಸಕರು ಹೈಕಮಾಂಡ್ಗೂ ದೂರು ನೀಡಿದ್ದರು ಎನ್ನಲಾಗಿತ್ತು. ಈಗ ಈ ವಿಚಾರವನ್ನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಮುಖಂಡರೂ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಬಿಎಸ್ ಯಡಿಯೂರಪ್ಪಗೆ ಕಿವಿ ಮಾತು ಹೇಳಿದ್ದಾರೆ.
ಜನಸೇವಾ ವಿದ್ಯಾಕೇಂದ್ರ ಕಾರ್ಯಕ್ರಮ ನಿಮಿತ್ತ ಆರ್ಎಸ್ಎಸ್ ಮುಖ್ಯಸ್ಥ
ಮೋಹನ್ ಭಾಗವತ್ ಬೆಂಗಳೂರಿಗೆ ಆಗಮಿಸಿದ್ದರು. ಕಾರ್ಯಕ್ರಮದ ಪೂರ್ಣಗೊಂಡ ಬಳಿಕ ಭಾಗವತ್ ಅವರು ಸಿಎಂ ಯಡಿಯೂರಪ್ಪನವರೊಂದಿಗೆ ಚರ್ಚೆ ನಡೆಸಿದ್ದರು. ಈ ವೇಳೆ ಸಿಎಂಗೆ ಭಾಗವತ್ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಬಿಎಸ್ವೈ ಮಗ ವಿಜಯೇಂದ್ರ ಅವರಿಗೂ ರಾಜ್ಯ ಸರ್ಕಾರಕ್ಕೂ ಯಾವುದೇ ನೇರ ಸಂಬಂಧವಿಲ್ಲ. ಆದಾಗ್ಯೂ, ರಾಜ್ಯ ಸರ್ಕಾರ ನಡೆಸಿದ ಸಾಕಷ್ಟು ಸಭೆಗಳಲ್ಲಿ ಅವರು ಪಾಲ್ಗೊಂಡ ಉದಾಹರಣೆ ಇದೆ. ಜೆಡಿಎಸ್ ಭದ್ರಕೋಟೆ ಕೆ.ಆರ್. ಪೇಟೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಕೆಆರ್ ಪೇಟೆ ಉಪಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದು ಇದೇ ವಿಜಯೇಂದ್ರ. ಹೀಗೆ ಅನೇಕ ವಿಚಾರಗಳಿಗೆ ಇವರು ಮುನ್ನೆಲೆಗೆ ಬರುತ್ತಿದ್ದಾರೆ. ಇದು ಅನೇಕ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಈ ವಿಚಾರವಾಗಿ ಸಾಕಷ್ಟು ಬಿಜೆಪಿ ನಾಯಕರು ಹೈಕಮಾಂಡ್ಗೆ ದೂರು ದಾಖಲಿಸಿದ್ದರು. ಹೀಗಾಗಿ ಸಿಎಂಗೆ ಮೋಹನ್ ಭಾಗ್ವತ್ ಕೆಲ ಸಲಹೆ ಸೂಚನೆ ನೀಡಿದ್ದಾರೆ ಎನ್ನುವುದು ಮೂಲಗಳ ಮಾಹಿತಿ.
ಇದನ್ನೂ ಓದಿ: ರಾಮ ಮಂದಿರ ವಿಚಾರ: ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಎದುರೇ ಪ್ರತಿಭಟನೆ ನಡೆಸಿದ ಹಿಂದೂ ಕಾರ್ಯಕರ್ತರು!
“ಆಡಳಿತದಿಂದ ಕುಟುಂಬ ಸದಸ್ಯರನ್ನು ಸಂಪೂರ್ಣವಾಗಿ ದೂರವಿಡಿ. ರಾಜಕೀಯದಲ್ಲಿ ಕುಟುಂಬವನ್ನು ಎಳೆದುತರುವುದು ಸರಿಯಲ್ಲ,” ಎಂದು ಬಿಎಸ್ವೈಗೆ ಭಾಗ್ವತ್ ಸೂಚನೆ ನೀಡಿದ್ದಾರೆ. ಈ ಮೂಲಕ ಬಿಎಸ್ವೈಗೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
First published:
March 8, 2020, 3:38 PM IST