ಬೆಂಗಳೂರು(ಫೆ. 12): ಮೇಖ್ರಿ ಸರ್ಕಲ್ ಬಳಿ ಸಂಭವಿಸಿದ ಬೆಂಟ್ಲಿ ಕಾರು ಅಪಘಾತ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಮೊಹಮ್ಮದ್ ನಲಪಾಡ್ ಅವರನ್ನು ಪೊಲೀಸರು ಬಂಧಿಸಿದರು. ಅಪಘಾತ ಪ್ರಕರಣದಲ್ಲಿ ಸ್ಪಷ್ಟೀಕರಣ ನೀಡಬೇಕೆಂದು ಪೊಲೀಸರು ನೋಟೀಸ್ ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆಂದು ನಲಪಾಡ್ ಅವರು ಠಾಣೆಗೆ ಬಂದಾಗ ಅವರ ಬಂಧನವಾಗಿದೆ. ಬಳಿಕ ಕೂಡಲೇ ಅವರಿಗೆ ವಿಶೇಷ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಸದಾಶಿನಗರ ಠಾಣೆ ಇನ್ಸ್ಪೆಕ್ಟರ್ ನಾಗರಾಜು ಅವರು ನಲಪಾಡ್ ಅವರಿಂದ ಬಾಂಡ್ ಬರೆಸಿಕೊಂಡು ವಿಶೇಷ ಜಾಮೀನು ನೀಡಿದರು. ಸಂಚಾರಿ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇ ಗೌಡ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಠಾಣೆಗೆ ಹೋಗುವ ಮುನ್ನ ನಲಪಾಡ್ ಅವರು ಮಾಧ್ಯಮದವರ ಮುಂದೆ ಗದ್ಗದಿತಗೊಂಡು ಮಾತನಾಡಿದ್ಧಾರೆ. ವಿದ್ವತ್ ಹಲ್ಲೆ ಘಟನೆ ನಂತರ ತಾನು ಸಾಕಷ್ಟು ಬದಲಾಗಿದ್ದೇನೆ. ಆದರೆ ಈಗಲೂ ಕೂಡ ಗೂಂಡಾ ಎಂದು ನನ್ನನ್ನ ಕರೆಯುತ್ತೀರಿ. ನನಗೇನೂ ಮನಸ್ಸಿಲ್ವಾ? ನಾನೇನೂ ಮನುಷ್ಯನಲ್ಲವಾ? ಎಂದು ನಲಪಾಡ್ ಪ್ರಶ್ನೆ ಮಾಡಿದ್ಧಾರೆ. ಅಪಘಾತ ಪ್ರಕರಣದಲ್ಲಿ ಪೊಲೀಸರ ವಿಚಾರಣೆಗೆ ಸದಾಶಿವನಗರ ಪೊಲೀಸ್ ಠಾಣೆಗೆ ಆಗಮಿಸಿದ ಸಂದರ್ಭದಲ್ಲಿ ನಲಪಾಡ್ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಆವತ್ತು ನಡೆದ ಅಪಘಾತ ಒಂದು ಆಕಸ್ಮಿಕ. ನಾನು ಬೇಕಂತ ಯಾರ ಮೇಲೂ ಗುದ್ದಿಲ್ಲ. ಅವತ್ತು ನಾನು ಕಾರು ಓಡಿಸುತ್ತಿರಲಿಲ್ಲ. ಬಾಲುನೇ ಡ್ರೈವ್ ಮಾಡುತ್ತಿದ್ದುದು. ಯಾವುದೋ ಚಾನಲ್ನವರು ಬಾಲುಗೆ ಕಾರು ಓಡಿಸಲು ಬರುವುದಿಲ್ಲ ಎಂದು ನ್ಯೂಸ್ ಹಾಕಿದ್ದರು. ಹಲವು ವರ್ಷಗಳಿಂದಲೂ ಬಾಲುನೇ ನನ್ನ ಕಾರನ್ನು ಓಡಿಸುತ್ತಿದ್ದಾನೆ. ಇದು ಎಲ್ಲರಿಗೂ ಗೊತ್ತಿದೆ ಎಂದು ನಲಪಾಡ್ ಹೇಳಿದರು.
ಇದನ್ನೂ ಓದಿ: ಕಪ್ಪತ್ತ ಗುಡ್ಡದ ತಂಟೆಗೆ ಬಂದ್ರೆ ಮತ್ತೆ ಹೋರಾಟ; ಎಸ್.ಆರ್.ಹಿರೇಮಠ ಎಚ್ಚರಿಕೆ..!
ಮನೆಯಲ್ಲಿ 87 ವರ್ಷದ ಅಜ್ಜ, ಅಜ್ಜಿ ಇದ್ದಾರೆ. ಅಪಘಾತ ಆದಾಗ ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗುತ್ತದೆ. ಕೆಳಗೆ ಅಪಘಾತದಲ್ಲಿ ಇಬ್ಬರು ಸಾವು ಎಂದು ಹಾಕಿರುತ್ತಾರೆ. ಅದನ್ನು ಓದಿದವರು ಏನಂದುಕೊಳ್ಳಬೇಕು? ನನ್ನ ಬಗ್ಗೆ ಯಾಕೆ ಈ ರೀತಿ ಸುದ್ದಿ ಬಿತ್ತರ ಮಾಡುತ್ತಿದ್ದೀರಿ ಎಂದು ನಲಪಾಡ್ ಬೇಸರಪಟ್ಟರು.
ಈ ಬೆಳವಣಿಗೆಯ ಹಿಂದೆ ಯಾವ ವ್ಯಕ್ತಿಗಳು ಇದ್ದಾರೆ ಎಂಬುದು ಗೊತ್ತಿದೆ. ನಾನು ನ್ಯಾಯಾಲಯದಲ್ಲಿ ಫೈಟ್ ಮಾಡುತ್ತೇನೆ ಎಂದು ಈ ವೇಳೆ ನಲಪಾಡ್ ಸ್ಪಷ್ಟಪಡಿಸಿದ್ಧಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಬಳಿಕ ಅವರು ಪೊಲೀಸ್ ವಿಚಾರಣೆಗೆ ಸದಾಶಿವನಗರ ಠಾಣೆಗೆ ಹೋದರು.
ಕೆಲ ದಿನಗಳ ಹಿಂದೆ ಮೇಖ್ರಿ ಸರ್ಕಲ್ ಬಳಿ ಕೋಟ್ಯಂತರ ಮೌಲ್ಯದ ಬೆಂಟ್ಲಿ ಕಾರು ಅಪಘಾತವಾಗಿತ್ತು. ಒಂದು ಬೈಕ್ ಸೇರಿ ಮೂರು ವಾಹನಗಳಿಗೆ ಗುದ್ದಿತ್ತು. ಬೈಕ್ ಸವಾರ ಪ್ರಫುಲ್ಲಾಗೆ ಗಾಯವಾಗಿತ್ತು. ಆ ಕಾರಿನಲ್ಲಿ ಮೊಹಮ್ಮದ್ ನಲಪಾಡ್ ಕೂಡ ಇದ್ದರು. ಅಪಘಾತವಾದ ಕೂಡಲೇ ಅವರು ಬೇರೊಂದು ಕಾರಿಗೆ ಹತ್ತಿ ತಪ್ಪಿಸಿಕೊಂಡು ಹೋಗಿದ್ದರು. ನಂತರ, ಅವರ ಗನ್ ಮ್ಯಾನ್ ಬಾಲು ಅವರು ತಾನೇ ಆ ಕಾರು ಚಲಾಯಿಸುತ್ತಿದ್ದುದು ಎಂದು ಪೊಲೀಸರಲ್ಲಿ ಶರಣಾಗಲು ಹೋಗಿದ್ದರು. ಆದರೆ, ಅವರೇ ಕಾರು ಚಲಾಯಿಸುತ್ತಿದ್ದುದಕ್ಕೆ ಪೊಲೀಸರಲ್ಲಿ ಆಧಾರ ಸಿಕ್ಕಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ