ಲಂಡನ್​ನ ಬಸವ ಉತ್ಸವದಲ್ಲಿ ಮೋದಿ ಭಾಗಿ; ಕರ್ನಾಟಕದ ಲಿಂಗಾಯತರ ಮನ ಗೆಲ್ಲುತ್ತಾರಾ ಪ್ರಧಾನಿ..?

news18
Updated:April 16, 2018, 2:24 PM IST
ಲಂಡನ್​ನ ಬಸವ ಉತ್ಸವದಲ್ಲಿ ಮೋದಿ ಭಾಗಿ; ಕರ್ನಾಟಕದ ಲಿಂಗಾಯತರ ಮನ ಗೆಲ್ಲುತ್ತಾರಾ ಪ್ರಧಾನಿ..?
news18
Updated: April 16, 2018, 2:24 PM IST
- ನ್ಯೂಸ್18 ಕನ್ನಡ

ಬೆಂಗಳೂರು: ಲಂಡನ್​ನಲ್ಲಿ ನಡೆಯಲಿರುವ 885ನೇ ಬಸವ ಉತ್ಸವದಲ್ಲಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ ಎಂದು ಲಂಡನ್​ನ ಲ್ಯಾಮ್​ಬೇತ್​ ಮಾಜಿ ಮೇಯರ್​ ನೀರಜ್​​ ಪಾಟೀಲ್​ ದೃಢಪಡಿಸಿದ್ದಾರೆ. ಏ.18ರಂದು ನಡೆಯಲಿರುವ ಉತ್ಸವದಲ್ಲಿ ಭಾಗಿಯಾಗಲಿರುವ ಮೋದಿ ಥೇಮ್ಸ್​ನದಿಯ ದಡದಲ್ಲಿರುವ ಬಸವೇಶ್ವರ ಮೂರ್ತಿಗೆ ಗೌರವವಂದನೆ ಸಲ್ಲಿಸಿದ್ದಾರೆ. ಏಪ್ರಿಲ್ 17ರಿಂದ 20ವರೆಗೆ ನಡೆಯಲಿರುವ ಕಾಮನ್​ವೆಲ್ತ್ ರಾಷ್ಟ್ರಗಳ ಮುಖ್ಯಸ್ಥರ ಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ಬ್ರಿಟನ್​ಗೆ ತೆರಳಲಿದ್ದಾರೆ. ಆ ಸಂದರ್ಭದಲ್ಲಿ ಅವರು ಬಸವಣ್ಣಗೆ ಗೌರವಾರ್ಪಣೆ ಮಾಡಲಿದ್ದಾರೆ

ಕರ್ನಾಟಕವು ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ ಪ್ರಚಲಿತವಿರುವ ಹಾಗೂ ಚುನಾವಣೆ ಹೊಸ್ತಿಲಲ್ಲಿರುವ ಹಿನ್ನೆಲೆಯಲ್ಲಿ ಈ ಭೇಟಿ ತುಸು ಮಹತ್ವ ಪಡೆದುಕೊಂಡಿದೆ.

ಕರ್ನಾಟಕದ ಚುನಾವಣೆಯಲ್ಲಿ ಲಿಂಗಾಯತ ಮತಗಳು ನಿರ್ಣಯಕವಾಗಿದ್ದು, ಉತ್ತರ ಕರ್ನಾಟಕ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅವರ ಪ್ರಾಬಲ್ಯ ಅಧಿಕವಿದೆ. ಲಿಂಗಾಯತರಲ್ಲಿ ಅಧಿಕ ಮಂದಿ ಸಾಂಪ್ರದಾಯಿಕವಾಗಿ ಬಿಜೆಪಿ ಮತದಾರರೆಂಬ ಭಾವನೆಯಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಶಿಫಾರಸು ಮಾಡುವ ಮೂಲಕ ಕಾಂಗ್ರೆಸ್ ಪಕ್ಷವು ಲಿಂಗಾಯತರನ್ನು ಸೆಳೆಯುವ ಪ್ರಯತ್ನ ಮಾಡಿದೆ. ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಬಿಜೆಪಿ ಬೆಂಬಲ ನೀಡದಿರುವುದು ಕೂಡ ಲಿಂಗಾಯತರ ಅಸಮಾಧಾನಕ್ಕೆ ಗುರಿಯಾಗಿರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಲಿಂಗಾಯತ ಮಠಾಧೀಶರು ಬಹಿರಂಗವಾಗಿ ತಮ್ಮ ಬೆಂಬಲವನ್ನು ಕಾಂಗ್ರೆಸ್​ಗೆ ಘೋಷಿಸಿದ್ದಾರೆ. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ.

ಈ ಎಲ್ಲ ಬೆಳವಣಿಗೆಗಳಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ನಾಯಕರು ಲಿಂಗಾಯತರ ಧರ್ಮ ಸಂಸ್ಥಾಪಕ ಬಸವಣ್ಣನವರ ವಿಷಯದಲ್ಲಿ ಭಾವನಾತ್ಮಕವಾಗಿ ಹೆಜ್ಜೆಇಡಲು ಮುಂದಾಗಿದೆ. ಈ ಹಿಂದೆ ರಾಜ್ಯದಲ್ಲಿ ಪ್ರವಾಸ ನಡೆಸಿದ ಅಮಿತ್​ ಶಾ ಕೂಡ ಮಠಗಳಿಗೆ ಭೇಟಿ ನೀಡಿ, ಲಿಂಗಾಯತ ಮತ ಕೈತಪ್ಪದಂತೆ  ಕಸರತ್ತು ನಡೆಸಿದರು. ಆದರೆ ಇದು ಎಷ್ಟರ ಮಟ್ಟಿಗೆ ಲಾಭ ತಂದುಕೊಡಲಿದೆ ಎಂಬ ಅನುಮಾನ ಬಿಜೆಪಿ ನಾಯಕರಲ್ಲಿಯೂ ಮೂಡಿದೆ.

ಈ ಹಿನ್ನೆಲೆಯಲ್ಲಿ ದೂರದ ಲಂಡನ್​ನ ಥೇಮ್ಸ್ ನದಿ ತಟದಲ್ಲಿ ಬಸವೇಶ್ವರರ ಪ್ರತಿಮೆಗೆ ಮೋದಿ ಗೌರವಾರ್ಪಣೆ ಮಾಡಲಿರುವ ವಿಚಾರ ಚುನಾವಣೆಯ ಹೊಸ್ತಿಲಲ್ಲಿರುವ ಕರ್ನಾಟಕದ ಬಿಜೆಪಿ ಪಾಲಿಗೆ ತುಸು ಮಹತ್ವದ್ದೇ ಆಗಿದೆ. ಆದರೆ, ಮೂರು ವರ್ಷಗಳ ಹಿಂದೆ ಮೋದಿಯವರೇ ಈ ಪ್ರತಿಮೆಯನ್ನು ಇಲ್ಲಿ ಅನಾವರಣ ಮಾಡಿ ಬಸವ ತತ್ವದ ಕುರಿತು ವಿಶ್ವಕ್ಕೆ ಸಾರಿದ್ದರು. ಅಷ್ಟೇ ಅಲ್ಲದೇ ಲೋಕಸಭೆಯಲ್ಲಿ ಬಸವ ವಚನಗಳ ಪಠಣ ಮಾಡಿ ಗಮನ ಸೆಳೆದಿದ್ದರು.

ಆದಾದ ಬಳಿಕ 2017ರಲ್ಲಿ ರಾಜ್ಯ ಬಸವ ಸಮಿತಿಗೆ 50 ವರ್ಷವಾದ ಹಿನ್ನೆಲೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮೊದಲಬಾರಿ ಬಸವ ಜಯಂತಿ ಆಚರಿಸಲು ಮುಂದಾದರು. ದೆಹಲಿಯಲ್ಲಿ ಅಂತಾರಾಷ್ಟ್ರೀಯ ಬಸವ ಸಮಾವೇಶ ಉದ್ಘಾಟಿಸಿ ಬಸವಣ್ಣನ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿದ್ದರು. ಓಂ ಶ್ರೀ ಬಸವ ಲಿಂಗಾಯ ನಮಃ ಎಂಬ ನಾಮ ಸ್ಮರಣೆ ಮೂಲಕ ಮಾತು ಆರಂಭಿಸಿ ಭಾಷಣದುದ್ದಕ್ಕೂ ಬಸವಣ್ಣನ ನಿಲುವು , ಕಾರ್ಯ ಶ್ಲಾಘಿಸಿದ್ದರು. ಇದೇ ವೇಳೆ 23 ರಾಜ್ಯದ ವಿವಿಧ ಭಾಷೆಗಳಲ್ಲಿ 2 ಸಾವಿರದ 500 ವಚನಗಳನ್ನು ಮುದ್ರಿಸಲಾಗಿದ್ದು ಈ ಪುಸ್ತಕವನ್ನು ಪ್ರಧಾನಿ ಬಿಡುಗಡೆ ಮಾಡಿದ್ದರು.
Loading...

ಇತ್ತ, ಕಾಂಗ್ರೆಸ್ ಅಧ್ಯಕ್ಷ ರಾಹುಲ್​ ಗಾಂಧಿ ಕೂಡ ಬಸವ ಮಂತ್ರ ಜಪಿಸುವಲ್ಲಿ ಹಿಂದೆ ಬಿದ್ದಿಲ್ಲ. ಜನಾಶೀರ್ವಾದ ಯಾತ್ರೆಯಲ್ಲಿ ಪ್ರಮುಖ ಮಠ, ಮಂದಿರಗಳಿಗೆ ಭೇಟಿ ನೀಡಿದ್ದರು. ಅಲ್ಲದೇ ತಮ್ಮ ಭಾಷಣದಲ್ಲಿ  ಬಸವಣ್ಣನ ಜಪ ಮಾಡುತ್ತ ವಚನಗಳನ್ನು ಹೇಳುತ್ತಿದ್ದರು. ಅಲ್ಲದೇ ನುಡಿದಂತೆ ನಡೆದ ಸರ್ಕಾರ ಎಂದು ಪದೇ ಪದೇ ಹೇಳುತ್ತಾ ಲಿಂಗಾಯತ ಓಲೈಕೆಗೆ ಪೈಪೋಟಿ ನಡೆಸಿದ್ದಾರೆ.

ಎರಡು ರಾಷ್ಟ್ರೀಯ ಪಕ್ಷಗಳು ಕೂಡ ಲಿಂಗಾಯತ ಧರ್ಮಯುದ್ಧವನ್ನು ಗುರಿಯಾಗಿಸಿಕೊಂಡು ಚುನಾವಣೆಯಲ್ಲಿ ಹೇಗೆ ಸಫಲವಾಗುತ್ತವೆ ಎಂಬುದನ್ನು ಕಾದುನೋಡಬೇಕಿದೆ.
First published:April 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...