Minister Sudhakar| ಆಧುನಿಕ ಭಾರತೀಯ ಮಹಿಳೆಯರು ಒಂಟಿಯಾಗಿರಲು, ಮಗುವನ್ನು ಹೆರದಿರಲು ಬಯಸಿದ್ದಾರೆ; ಸಚಿವ ಸುಧಾಕರ್
ಇಂದು, ನಾನು ಇದನ್ನು ಹೇಳಲು ವಿಷಾದಿಸುತ್ತೇನೆ. ಭಾರತದ ಬಹಳಷ್ಟು ಆಧುನಿಕ ಮಹಿಳೆಯರು ಒಂಟಿಯಾಗಿ ಉಳಿಯಲು ಬಯಸುತ್ತಾರೆ. ಅವರು ಮದುವೆಯಾದರೂ ಮಕ್ಕಳಿಗೆ ಜನ್ಮ ನೀಡಲು ಬಯಸುತ್ತಿಲ್ಲ. ಬಾಡಿಗೆ ತಾಯ್ತನದ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಸಚಿವ ಕೆ. ಸುಧಾಕರ್ ಹೇಳಿಕೆ ನೀಡಿದ್ದಾರೆ.
ಬೆಂಗಳೂರು; "ಆಧುನಿಕ ಭಾರತದ ಮಹಿಳೆಯರು ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿದ್ದಾರೆ. ಪರಿಣಾಮ ಅವರು ಒಂಟಿಯಾಗಿರುವುದನ್ನೇ ಇಷ್ಟಪಡುತ್ತಿದ್ದಾರೆ. ಮದುವೆಯ ನಂತರವೂ ಮಕ್ಕಳನ್ನು ಹೆರುವುದಕ್ಕೆ ಮುಂದಾಗುತ್ತಿಲ್ಲ, ಬದಲಾಗಿ ಬಾಡಿಗೆ ತಾಯಿಯರಿಂದ ಮಕ್ಕಳನ್ನು ಪಡೆಯಲು ಬಯಸುತ್ತಿದ್ದಾರೆ" ಎಂದು ಸಚಿವ ಡಾ|ಕೆ. ಸುಧಾಕರ್ (K Sudhakar) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾನುವಾರ ವಿಶ್ವ ಮಾನಸಿಕ ಆರೋಗ್ಯ ದಿನದ ಅಂಗವಾಗಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವೈಜ್ಞಾನಿಕ ವಿಜ್ಞಾನ ಸಂಸ್ಥೆಯಲ್ಲಿ (Nimhans) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಚಿವರು ಈ ಮೇಲಿನ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಮಾರಂಭದಲ್ಲಿ ಮಾತನಾಡಿರುವ ಸಚಿವ ಡಾ|ಕೆ. ಸುಧಾಕರ್, "ಇಂದು, ನಾನು ಇದನ್ನು ಹೇಳಲು ವಿಷಾದಿಸುತ್ತೇನೆ. ಭಾರತದ ಬಹಳಷ್ಟು ಆಧುನಿಕ ಮಹಿಳೆಯರು ಒಂಟಿಯಾಗಿ ಉಳಿಯಲು ಬಯಸುತ್ತಾರೆ. ಅವರು ಮದುವೆಯಾದರೂ ಮಕ್ಕಳಿಗೆ ಜನ್ಮ ನೀಡಲು ಬಯಸುತ್ತಿಲ್ಲ. ಅವರು ಬಾಡಿಗೆ ತಾಯ್ತನವನ್ನು ಬಯಸುತ್ತಾರೆ. ಆದ್ದರಿಂದ ನಮ್ಮ ಆಲೋಚನೆಯಲ್ಲಿ ಒಂದು ಮಾದರಿ ಬದಲಾವಣೆಯಿದೆ, ಇದು ಒಳ್ಳೆಯದಲ್ಲ. ಅಲ್ಲದೆ, ಭಾರತೀಯ ಸಮಾಜದ ಮೇಲೆ ಪಾಶ್ಚಿಮಾತ್ಯ ಪ್ರಭಾವವೂ ಮಹಿಳೆಯರ ಈ ಮನಸ್ಥಿತಿಗೆ ಕಾರಣವಾಗಿದೆ. ಪರಿಣಾಮ ಜನರು ತಮ್ಮ ಹೆತ್ತವರನ್ನು ಸಹ ತಮ್ಮೊಂದಿಗೆ ಇಟ್ಟುಕೊಳ್ಳಲು ಹಿಂಜರಿಯುತ್ತಿದ್ದಾರೆ" ಎಂದು ಹೇಳಿದ್ದಾರೆ.
"ದುರದೃಷ್ಟವಶಾತ್, ಇಂದು ನಾವು ಪಾಶ್ಚಿಮಾತ್ಯ ಮಾರ್ಗದಲ್ಲಿ ಹೋಗುತ್ತಿದ್ದೇವೆ. ನಮ್ಮ ಪೋಷಕರು ನಮ್ಮೊಂದಿಗೆ ಬದುಕುವುದನ್ನು ನಾವು ಬಯಸುವುದಿಲ್ಲ. ಅಜ್ಜಿಯರು ನಮ್ಮೊಂದಿಗೆ ಇರುವುದನ್ನು ಇಂದಿನ ಪೀಳಿಗೆ ಇಷ್ಟಪಡುತ್ತಿಲ್ಲ" ಎಂದು ಸಚಿವ ಸುಧಾಕರ್ ವಿಷಾಧಿಸಿದ್ದಾರೆ.
ಭಾರತದಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ಸಚಿವ ಸುಧಾಕರ್, "ಪ್ರತಿ ಏಳರಲ್ಲಿ ಓರ್ವ ಭಾರತೀಯರು ಕೆಲವು ರೀತಿಯ ಮಾನಸಿಕ ಸಮಸ್ಯೆಯನ್ನು ಹೊಂದಿದ್ದಾರೆ. ಅದು ಸೌಮ್ಯ, ಮಧ್ಯಮ ಮತ್ತು ತೀವ್ರವಾಗಿರಬಹುದು. ಈ ಒತ್ತಡ ನಿರ್ವಹಣೆ ಒಂದು ಕಲೆ, ಅದನ್ನು ಹೇಗೆ ನಿರ್ವಹಿಸಬೇಕು ಎಂದು ಭಾರತೀಯರು ಇಡೀ ಜಗತ್ತಿಗೆ ಬೋಧಿಸಬೇಕು. ಏಕೆಂದರೆ ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಜಗತ್ತಿಗೆ ಕಲಿಸಿದ ಅದ್ಭುತ ಸಾಧನಗಳು" ಎಂದು ಅವರು ತಿಳಿಸಿದ್ದಾರೆ.
ಕೋವಿಡ್ನಿಂದ ಮೃತಪಟ್ಟವರ ಬಗ್ಗೆಯೂ ಗಮನ ಸೆಳೆದ ಸಚಿವ ಸುಧಾಕರ್, "ಕೋವಿಡ್ -19 ನಿಂದ ಸಾವನ್ನಪ್ಪಿದವರ ಮೃತ ದೇಹವನ್ನು ಅವರ ಹತ್ತಿರದ ಸಂಬಂಧಿಕರು ಮತ್ತು ಆತ್ಮೀಯರು ಸಹ ಮುಟ್ಟಲು ಸಾಧ್ಯವಾಗಲಿಲ್ಲ, ಇದು ಅವರಿಗೆ ಮಾನಸಿಕ ನೋವನ್ನು ಉಂಟುಮಾಡಿದೆ. ಸರ್ಕಾರವು ಕೋವಿಡ್ -19 ರೋಗಿಗಳಿಗೆ ಸಮಾಲೋಚನೆ ನೀಡಲು ಪ್ರಾರಂಭಿಸಿತು. ಇಲ್ಲಿಯವರೆಗೆ, ನಾವು ಕರ್ನಾಟಕದಲ್ಲಿ 24 ಲಕ್ಷ ಕೋವಿಡ್ 19 ರೋಗಿಗಳಿಗೆ ಸಲಹೆ ನೀಡಿದ್ದೇವೆ. ಇದನ್ನು ಮಾಡಿದ ಬೇರೆ ಯಾವ ರಾಜ್ಯವೂ ನನಗೆ ಗೊತ್ತಿಲ್ಲ" ಎಂದಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ