ಕೋಲಾರ(ಜ.24): ಸ್ತ್ರೀ ಶಕ್ತಿ ಮಹಿಳಾ ಸಂಘಗಳಿಗೆ ಸಾಲ ವಿತರಣೆ ಮಾಡುವುದರಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿರುವ ಕೋಲಾರದ ಡಿಸಿಸಿ ಬ್ಯಾಂಕ್ ಮುಡಿಗೆ ಮತ್ತೊಂದು ಗರಿ ಸೇರಿಕೊಂಡಿದೆ. ಇಷ್ಟು ದಿನ ಬ್ಯಾಂಕ್ ಕಚೇರಿಯಲ್ಲಿ ಮಾತ್ರ ನಡೆಯುತ್ತಿದ್ದ ಬ್ಯಾಂಕ್ ಅರ್ಥಿಕ ವ್ಯವಹಾರ, ಈಗ ಮೊಬೈಲ್ ವ್ಯಾನ್ ಬ್ಯಾಂಕಿಂಗ್ ಗೂ ವಿಸ್ತರಣೆಯಾಗಿದೆ. ಕೋಲಾರದ ಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ನಬಾರ್ಡ್ ಸಂಸ್ತೆಯ ಸಿ.ಜಿ.ಎಂ ಮನೋಜ್ಕುಮಾರ್ ವರ್ಮಾ ಅವರು ಮೊಬೈಲ್ ವ್ಯಾನ್ ಬ್ಯಾಂಕಿಂಗ್ ಹೊಂದಿರುವ ಎರಡು ವಾಹನಗಳಿಗೆ ಚಾಲನೆ ನೀಡಿದರು. ವಾಹನಗಳಿಗೆ ಪೂಜೆ ಸಲ್ಲಿಸುವ ಕಾರ್ಯಕ್ರಮದಲ್ಲಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ್ಯ ಗೋವಿಂದಗೌಡ, ಬ್ಯಾಂಕ್ ನಿರ್ದೇಶಕ ಅನಿಲ್ಕುಮಾರ್, ಬ್ಯಾಂಕ್ನ ಸಿಇಒ, ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಭಾಗಿಯಾಗಿದ್ದರು.
ಇನ್ನು ವಿಶೇಷವಾಗಿ ಬ್ಯಾಂಕಿಂಗ್ಗಾಗಿ ಎರಡು ವಾಹನಗಳನ್ನು ಸಿದ್ದಪಡಿಸಲಾಗಿದೆ. ವಾಹನದಲ್ಲಿ ಒಂದು ಎಟಿಎಂ ಯಂತ್ರ, ಇಬ್ಬರು ಸಿಬ್ಬಂದಿಗಳು ಕೆಲಸ ಮಾಡಲು ಎಲ್ಲಾ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೋಲಾರ ಜಿಲ್ಲೆಯ ಪ್ರತಿ ಹಳ್ಳಿಯ ಪ್ರತಿ ಮನೆಗೂ ಬ್ಯಾಂಕ್ ಸೇವೆ ಒದಗಿಸುವ ನಿಟ್ಟಿನಲ್ಲಿ, ಪ್ರಾಯೋಗಿಕವಾಗಿ ಎರಡು ವ್ಯಾನ್ಗಳಿಗೆ ಚಾಲನೆ ನೀಡಲಾಗಿದೆ. ಮುಂದೆ ಎಲ್ಲಾ ತಾಲೂಕುಗಳಿಗೂ ಸೇವೆಯನ್ನು ವಿಸ್ತರಿಸುವ ಚಿಂತನೆ ಮಾಡಿಕೊಳ್ಳಲಾಗಿದೆ. ಮೊಬೈಲ್ ವ್ಯಾನ್ ಬ್ಯಾಂಕಿಂಗ್ನಲ್ಲಿ ಗ್ರಾಹಕರು ವಾಹನದಲ್ಲೇ ಹಣ ಕಟ್ಟುವುದು, ಹಣ ಪಡೆಯುವುದು, ಮತ್ತೊಬ್ಬರ ಖಾತೆಗೆ ರವಾನಿಸುವ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ನಾನು ಸಾಯೋದ್ರೊಳಗೆ ಯಡಿಯೂರಪ್ಪನೇ ಹಾಸನ ವಿಮಾನ ನಿಲ್ದಾಣ ಓಪನ್ ಮಾಡಲಿ; ಹೆಚ್.ಡಿ ದೇವೇಗೌಡ
ವೇದಿಕೆ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ನಬಾರ್ಡ್ ಸಂಸ್ಥೆಯ ಸಿಜಿಎಂ ಮನೋಜ್ ಕುಮಾರ್ ವರ್ಮಾ, ಬ್ಯಾಂಕಿನ ಸೌಲಭ್ಯಗಳನ್ನ ಬಳಸುವಲ್ಲಿ ಕೋಲಾರ ಡಿಸಿಸಿ ಬ್ಯಾಂಕ್ ಸಾಕಷ್ಟು ಪ್ರಗತಿ ಸಾಧಿಸಿದೆ, ಬ್ಯಾಂಕಿನ ಎಲ್ಲಾ ಸಿಬ್ಬಂದಿಗಳು ಸೌಲಭ್ಯಗಳ ಬಗ್ಗೆ ಮಾಹಿತಿ ರವಾಸುವ ಜವಾಬ್ದಾರಿ ಹೊರಬೇಕು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು
ಬಳಿಕ ಮಾತನಾಡಿದ ಬ್ಯಾಂಕ್ ಅಧ್ಯಕ್ಷ್ಯ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ನಲ್ಲಿ ಎಲ್ಲರು ಪ್ರಾಮಾಣಿಕವಾಗಿ ದುಡಿಯಬೇಕು, ಇರುವ ಹಣವನ್ನು ಖರ್ಚು ಮಾಡಿ ಬ್ಯಾಂಕ್ ದಿವಾಳಿಯಾಗಿಸುವುದು ಸುಲಭ , ಆದರೆ ಬಡವರು ಈ ಬ್ಯಾಂಕ್ ನಂಬಿರುವುದರಿಂದ ನಾವೆಲ್ಲರೂ ನಿಷ್ಠೆಯಿಂದ ಸೇವೆ ಸಲ್ಲಿಸಬೇಕಿದೆ ಎಂದು ಸಿಬ್ಬಂದಿಗೆ ಕಿವಿಮಾತು ಹೇಳಿದರು.
ವೇದಿಕೆ ಕಾರ್ಯಕ್ರಮದ ನಂತರ ಕೊಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಗುಂಡಮನತ್ತ ಗ್ರಾಮಕ್ಕೆ ಭೇಟಿ ನೀಡಿದ, ನಬಾರ್ಡ್ ಸಿಜಿಎಂ ಮನೋಜ್ಕುಮಾರ್ ವರ್ಮಾ, ಮಹಿಳಾ ಸ್ತ್ರೀ ಶಕ್ತಿ ಗುಂಪಿನ ಸದಸ್ಯರು ನಡೆಸುತ್ತಿರುವ ಸಿರಿ ದಾನ್ಯಗಳ ಸಣ್ಣ ಕೈಗಾರಿಕೆಯ ಚಟುವಟಿಕೆಗಳನ್ನು ವೀಕ್ಷಿಸಿದರು.
10 ಮಹಿಳಾ ಸ್ತ್ರೀ ಶಕ್ತಿ, ಸ್ವ ಸಹಾಯ ಮಹಿಳಾ ಸಂಘದ ಸದಸ್ಯರು ಒಗ್ಗೂಡಿ, ಡಿಸಿಸಿ ಬ್ಯಾಂಕ್ ನಿಂದ ಆರ್ಥಿಕ ಸಹಾಯ ಪಡೆದುಕೊಂಡು ಉದ್ಯಮ ಆರಂಭಿಸಿದ್ದಾರೆ. ಕೈಗಾರಿಕೆಯಲ್ಲಿ ಸಿರಿಧಾನ್ಯಗಳಿಂದ ವಿವಿಧ ಉತ್ಪನ್ನಗಳನ್ನ ತಯಾರಿಸಿ ಮಾರಾಟ ಮಾಡುತ್ತಾ ಹತ್ತಾರು ಮಹಿಳೆಯರು ಕೈಗಾರಿಕೆಯನ್ನು ನಡೆಸುತ್ತಿದ್ದು, ಮಹಿಳಾ ಸಂಘದ ಸದಸ್ಯರ ಪರಿಶ್ರಮಕ್ಕೆ ನಬಾರ್ಡ್ ಸಂಸ್ತೆಯ ಅಧಿಕಾರಿಗಳು ಶ್ಲಾಘಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ