ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಹಂಚಿಕೆ ಗೊಂದಲಕ್ಕೆ (JDS Ticket Fight) ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣ (Sooraj Reavanna) ಅವರು ಟಾಂಗ್ ನೀಡಿದ್ದಾರೆ. ಈ ಸಂಬಂಧ ಹಾಸನ ಜಿಲ್ಲೆಯ (Hassan JDS)ಅರಕಲಗೂಡು ತಾಲ್ಲೂಕಿನ ಹರದೂರು ಗ್ರಾಮದಲ್ಲಿ ಮಾತನಾಡಿರುವ ಎಂಎಲ್‌ಸಿ ಸೂರಜ್ ರೇವಣ್ಣ, ಎಚ್‌ಡಿ ಕುಮಾರಸ್ವಾಮಿ ಅವರು ಪಕ್ಷದ ಹಿರಿಯ ರಾಜಕಾರಣಿ ಇದ್ದಾರೆ. ನಾವು ಅವರ ಬಗ್ಗೆ ಮಾತನಾಡೋದು ಸೂಕ್ತ ಅಲ್ಲ. ಅವರವರ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿರುತ್ತಾರೆ. ಅದು ನಮಗೆ ಸಂಬಂಧವಿಲ್ಲ. ಆದರೆ ಇರುವ ವಿಷಯ ಹೇಳಬೇಕೆಂದರೆ ಇವತ್ತು ಹಾಸನ ಜಿಲ್ಲೆ ತೆಗೆದುಕೊಂಡಾಗ ರೇವಣ್ಣ ಸಾಹೆಬ್ರು, ದೇವೇಗೌಡರು ಕೂತ್ಕೊಂಡು ತೀರ್ಮಾನ ಮಾಡ್ತಾರೆ. ದೇವೇಗೌಡರ ತೀರ್ಮಾನವೇ ಅಂತಿಮ ತೀರ್ಮಾನ. ಇದು ಕುಮಾರಸ್ವಾಮಿ ಅವರಿಗೆ ಮನವರಿಕೆ ಮಾಡುವ ವಿಷಯವಲ್ಲ ಎಂದು ಹೇಳಿದರು.
ಇನ್ನು, ಜೆಡಿಎಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಸ್ವರೂಪ್ ಅವರಿಗೆ ಪಕ್ಷದ ಅಭ್ಯರ್ಥಿ ಆಗಬೇಕು ಅನ್ನುವ ಆಕಾಂಕ್ಷೆ ಇದೆ. ಸ್ವರೂಪ್ ಅವರು ಹೋಗಿ ಬೇಡಿಕೆ ಇಟ್ಟಿರಬಹುದು. ಅದರಿಂದ ಎಚ್‌ಡಿ ಕುಮಾರಸ್ವಾಮಿ ಅವರು ಆ ರೀತಿ ಹೇಳಿಕೆ ಕೊಡ್ತಿರಬಹುದು ಎಂದು ಹೇಳಿದ ಸೂರಜ್ ರೇವಣ್ಣ, ಎಚ್‌ಡಿ ರೇವಣ್ಣ, ಕುಮಾರಣ್ಣ, ದೇವೇಗೌಡರ ಸಮ್ಮುಖದಲ್ಲಿ ಎಲ್ಲಾರೂ ಕೂತ್ಕಂಡು ಮಾತಾಡಿ ಒಂದು ಅಂತಿಮವಾದ ನಿರ್ಧಾರಕ್ಕೆ ಬರ್ತೀವಿ. ಭವಾನಿ ರೇವಣ್ಣ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ ಎಂದು ಹೇಳಲು ಬಯಸುತ್ತೇನೆ. ನಾನು ರಾಜಕಾರಣದಲ್ಲಿ ಕಿರಿಯ ವಯಸ್ಸಿನವನು, ಒಂದು ವರ್ಷದಿಂದ ಎಂಎಲ್‌ಸಿ ಆಗಿದ್ದೀನಿ. ನಾನು ನೂಡೆಲ್ ಕ್ಷೇತ್ರ ತಗೊಂಡು ಪ್ರತಿಯೊಂದು ಕಾರ್ಯಕ್ರಮಗಳಿಗೂ ಅಟೆಂಡ್ ಮಾಡಿ, ಜನರ ಮಿಡಿತವನ್ನು ನೋಡ್ತಿದ್ದೀನಿ. ಗ್ರೌಂಡ್ ಲೆವೆಲ್‌ನಲ್ಲಿ ಏನ್ ನಡಿತಿದೆ ಅಂತಾ ನೋಡ್ತಾ ಇದ್ದೀನಿ ಎಂದು ಹೇಳಿದರು.
ಇದನ್ನೂ ಓದಿ: ಭವಾನಿ ರೇವಣ್ಣ ಸ್ಪರ್ಧೆ ಹಾಸನಕ್ಕೆ ಅನಿವಾರ್ಯ ಅಲ್ಲ, ಸೂಕ್ತ& ಮಾಜಿ ಸಿಎಂ ಹೆಚ್ಡಿಕೆಗೆ ಸೂರಜ್ ರೇವಣ್ಣ ಟಾಂಗ್
ಇನ್ನು, ನಮ್ಮ ತಾಯಿ ಅಭ್ಯರ್ಥಿ ಆಗಬೇಕು ಅನ್ನುವ ಉದ್ದೇಶ ಅಲ್ಲ, ಆದರೆ ನಾವು ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದ ಸೂರಜ್ ರೇವಣ್ಣ, ಪಕ್ಷವನ್ನು ಮತ್ತೆ ಸಂಘಟನೆ ಮಾಡಬೇಕಿದೆ. 2024 ಕ್ಕೆ ಲೋಕಸಭೆ ಚುನಾವಣೆ ಬರ್ತಿದೆ. ಇದೆಲ್ಲ ಒಂದು ಬುನಾದಿ, ನಾವು ಮಾಡಲೇಬೇಕಿದೆ. ನಾವು ಜಿಲ್ಲೆಯಲ್ಲಿ ಪಕ್ಷವನ್ನು ಹೆಚ್ಚಿನ ರೀತಿ ಸಂಘಟನೆ ಮಾಡಬೇಕಂದ್ರೆ ಇದೊಂದು ಬುನಾದಿ ಎಂದು ಹೇಳಲು ಬಯಸುತ್ತೇನೆ ಎಂದರು.
'ಭವಾನಿ ರೇವಣ್ಣ ನಿಂತರೆ ಗೆಲುವು ಖಚಿತ'
ಹಾಸನ ಜಿಲ್ಲೆ ಜೆಡಿಎಸ್‌ನ ಭದ್ರಕೋಟೆ ಅಂತ ಏನ್ ಕರೀತೀವಿ. 2018ರಲ್ಲಿ ಹಾಸನ ತಾಲ್ಲೂಕನ್ನು ಕಳೆದುಕೊಂಡಿದ್ದೇವೆ. ಆದರೆ 2023ರಲ್ಲಿ ಮರು ಪಡೆದುಕೊಳ್ಳಬೇಕು ಎನ್ನುವುದೇ ನಮ್ಮ ಉದ್ದೇಶ. ಹಾಲಿ ಶಾಸಕರು ಏನಾದ್ರು ಸವಾಲ್ ಹಾಕಿಕೊಳ್ಳಲಿ, ನಮಗೂ ಅದಕ್ಕೂ ಸಂಬಂಧವಿಲ್ಲ. ನಮ್ಮ ಕಾರ್ಯಕರ್ತರನ್ನು ಉಳಿಸಿಕೊಳ್ಳಬೇಕು. ಪಕ್ಷವನ್ನು ಸಧೃಡವಾಗಿ ಕಟ್ಟಬೇಕು, ಸಂಘಟನೆ ಮಾಡಬೇಕು ಅನ್ನೋದು ನಮ್ಮ ಮುಖ್ಯ ಉದ್ದೇಶ ಅಷ್ಟೇ. ಇವತ್ತಿನ ಲೆಕ್ಕಾಚಾರ ನೋಡಿದ್ರೆ, ಭವಾನಿ ರೇವಣ್ಣ ಅಭ್ಯರ್ಥಿ ಆದರೆ ಗೆಲುವು ಖಚಿತ. ಇದನ್ನು ಬರೆದಿಟ್ಟುಕೊಳ್ಳಿ. ಇದನ್ನು ಬಿಟ್ಟು, ಬೇರೆ ಜನಸಾಮಾನ್ಯರನ್ನ, ಕಾರ್ಯಕರ್ತರನ್ನು ನಿಲ್ಲಿಸ್ತೀವಿ ಎನ್ನುವ ಹೇಳಿಕೆಗಳನ್ನು ಬಿಟ್ಟು ಬಿಡಬೇಕು ಎಂದರು.
'ಎಚ್‌ಡಿ ರೇವಣ್ಣಗೆ ಹಾಸನದ ಬಗ್ಗೆ ಅರಿವಿದೆ'
ಇನ್ನು, ಹಾಸನ ಜಿಲ್ಲೆಯನ್ನ ರೇವಣ್ಣ ಸಾಹೇಬರಷ್ಟು ಅರಿತಿರುವಂತಹ ವ್ಯಕ್ತಿ ಈ ಭೂಮಿಲೇ ಇಲ್ಲ ಅಂತ ಹೇಳಲು ಬಯಸುತ್ತೀನಿ ಎಂದ ಸೂರಜ್, ಇಡೀ ಜಿಲ್ಲೆನಾ ಸಮರ್ಪಕವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಹದಿನೈದು ವರ್ಷದಿಂದ ಸತತವಾಗಿ ಆರರಿಂದ ಏಳು ಜನ ಶಾಸಕರನ್ನ ಆಯ್ಕೆ ಮಾಡಿ ಕಳಿಸಿದ್ದಾರೆ. ಅದು ರೇವಣ್ಣ ಅವರ ಸ್ವಂತ ಪ್ರಯತ್ನ ಅಂತ ಹೇಳಲು ಬಯಸುತ್ತೇನೆ. ಅವರನ್ನು ಬಿಟ್ರೆ ಇನ್ಯಾರಿಗೂ ಈ ಜಿಲ್ಲೆಯಲ್ಲಿ ಯಾವುದೇ ತರಹ ನಿರ್ಧಾರ ತೆಗೆದುಕೊಳ್ಳೋಕೆ ಅವಕಾಶವಿಲ್ಲ ಅಂತ ಹೇಳುತ್ತೇನೆ. ನಾನು ವೈಯಕ್ತಿಕವಾಗಿ ಹೇಳಬೇಕೆಂದರೆ ಇವತ್ತು ಜನರು, ಕಾರ್ಯಕರ್ತರು ಅಪೇಕ್ಷೆ ಪಡ್ತಾರೆ. ಅವರೇನು ನೋವುಗಳನ್ನು ತೋಡಿಕೊಂಡಿದ್ದಾರೆ, ಅವರೇನು ನೋವುಗಳನ್ನು ಅನುಭವಿಸುತ್ತಿದ್ದಾರೆ ಅದಕ್ಕೆ ಒಂದು ಸ್ಪಂದಿಸುವ, ಉತ್ತರ ಕೊಡುವ ಅಭ್ಯರ್ಥಿ ಆಗಬೇಕು ಅಂತ ಹೇಳುತ್ತೇನೆ ಎಂದರು.
ಭವಾನಿ ರೇವಣ್ಣಗೆ ಟಿಕೆಟ್ ನೀಡುವಂತೆ ಪ್ರತಿಭಟನೆ
ಹಾಸನದಲ್ಲಿ ಜೆಡಿಎಸ್ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದೊಳಗಿನ ಆಂತರಿಕ ಕಚ್ಚಾಟ ಮಿತಿ ಮೀರಿದ್ದು, ಇದೀಗ ಭವಾನಿ ರೇವಣ್ಣಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಗಿದೆ. ಶಾಸಕಿ ಭವಾನಿ ರೇವಣ್ಣ ಬೆಂಬಲಿಗರು ಹಾಗೂ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಇನ್ನೊಂದೆಡೆ ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಕಾರ್ಯಕರ್ತರು ಸಿದ್ಧತೆ ನಡೆಸಿದ್ದಾರೆ.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಕಾರ್ಯಕರ್ತರು ಸಂಸದ ಪ್ರಜ್ವಲ್ ರೇವಣ್ಣ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಶಾಮಿಯಾನ ಹಾಕಿ ಧರಣಿ ಕೂರಲು ಸಿದ್ಧತೆ ನಡೆಸಿದ್ದಾರೆ. ವಿಶೇಷ ಅಂದ್ರೆ ಈ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನ ಮಹಿಳೆಯರೇ ಭಾಗಿಯಾಗಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ