ನಾನು ಚುನಾವಣೆಗೆ (Election) ಸ್ಪರ್ಧಿಸುವ ಬಗ್ಗೆ ನಮ್ಮ ಮನೆಯಲ್ಲಿ ಚರ್ಚೆಯಾಗಿಲ್ಲ. ಪಕ್ಷದ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ ಎಂದು ಮಾಜಿ ಜಿ.ಪಂ. ಸದಸ್ಯೆ ಹಾಗೂ ದೊಡ್ಡಗೌಡರ ಸೊಸೆ ಭವಾನಿ ರೇವಣ್ಣ (Bhavani Revanna) ಹೇಳಿದ್ದಾರೆ. ಹಾಸನದ ಕಾಮಧೇನು ವೃದ್ಧಾಶ್ರಮದಲ್ಲಿ ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರ ಹುಟ್ಟುಹಬ್ಬ (HD Devegowda Birthday) ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನನ್ನ ಅನುಪಸ್ಥಿತಿಯಲ್ಲಿ ರೇವಣ್ಣ (HD Revanna) ಅವರು ಏನು ಹೇಳಿದ್ದಾರೆ ನನಗೆ ಗೊತ್ತಿಲ್ಲ. ನಾನು ಮೊದಲಿನಿಂದ ಹೇಗೆ ಇದ್ದೀನಿ, ಈಗಲೂ ಹಾಗೇ ಇದ್ದಿನಿ. ನಾನು ಟಿಕೆಟ್ ಆಕಾಂಕ್ಷಿಯಾಗಿ ಹೊಸದಾಗಿ ಜನರನ್ನು ಭೇಟಿ ಮಾಡುತ್ತಿಲ್ಲ. ಕಾರ್ಯಕ್ರಮ ಆಯೋಜಿಸುತ್ತಿಲ್ಲ. ರೇವಣ್ಣ ಅವರು ಸಚಿವರಾದಗಿನಿಂದ ಅವರಿಗೆ ಸಾಥ್ ಕೊಡುವ ಜೊತೆಗೆ ಜನರನ್ನ ಹತ್ತಿರದಿಂದ ನೋಡುತ್ತಿದ್ದೇನೆ. ನಮ್ಮ ಮನೆಯಲ್ಲಿ ಹಾಸನ ಜಿಲ್ಲೆ, ಹಾಸನ ವಿಧಾನಸಭಾ ಕ್ಷೇತ್ರದ (Hassan) ರಾಜಕೀಯದ ಬಗ್ಗೆ ಕುಳಿತು ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.
ಈಗ ನನಗೇನು ಗೊತ್ತಿಲ್ಲ, ಮುಂದೆ ನೋಡೋಣ. ಮುಂದೆ ಏನು ಎಂದು ನನಗೆ ಮಾಹಿತಿ ಇಲ್ಲ. ಹಾಗಾಗಿ ಈಗಲೇ ಏನು ಹೇಳಲ್ಲ. ಹಾಸನ ವಿಧಾನಸಭಾ ಕ್ಷೇತ್ರಕ್ಕೆ ನಾನು ಒಬ್ಬಳೆ ಆಕಾಂಕ್ಷಿಯಲ್ಲ, ಇನ್ನೂ ಸುಮಾರು ಜನ ಇದ್ದಾರೆ. ಪಕ್ಷದ ವರಿಷ್ಠರು ಹಾಸನ ಜಿಲ್ಲೆಯ ಮುಖಂಡರು, ಶಾಸಕರುಗಳು, ಸಂಸದರ ಜೊತೆ ಚರ್ಚೆ ಮಾಡಿ ಯಾರು ಹೆಸರನ್ನ ಘೋಷಣೆ ಮಾಡ್ತಾರೆ ಅವರ ಪರವಾಗಿ ದುಡಿಯುವ ಕೆಲಸ ಮಾಡ್ತೇನೆ ಎಂದರು.
ಪ್ರೀತಂಗೌಡ ಹೇಳಿಕೆಗೆ ಪ್ರತಿಕ್ರಿಯೆ
ಸಾಮಾನ್ಯ ಕಾರ್ಯಕರ್ತನಿಗೆ ನಿಲ್ಲಿಸಿ ಗೆಲ್ಲಿಸುತ್ತೇನೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಕುರಿತು ನನಗೆ ಆ ವಿಷಯನೇ ಗೊತ್ತಿಲ್ಲ ಎಂದರು. ಭವಾನಿ ಅವರು ನನ್ನ ವಿರುದ್ಧ ಸ್ಪರ್ಧೆ ಮಾಡಲಿ ಎಂಬ ಶಾಸಕ ಪ್ರೀತಂಗೌಡ ಆಹ್ವಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಶಾಸಕರು ಏನು ಮಾತನಾಡಬೇಕೋ ಮಾತನಾಡಲಿ, ಅದಕ್ಕೆ ನಾನು ತಿರುಗಿ ಮಾತನಾಡುವುದಿಲ್ಲ.
ಇದನ್ನೂ ಓದಿ: Target Bengaluru: 'ಉಗ್ರರ ರಾಜಧಾನಿ' ಆಗಲಿದೆಯಾ ಬೆಂಗಳೂರು? NIA ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ
ನಾನು ಇದುವರೆಗೂ ಯಾವ ವ್ಯಕ್ತಿಗೂ ಅವಮಾನ ಮಾಡಿಲ್ಲ, ಕೆಟ್ಟದ್ದನ್ನು ಬಯಸಲ್ಲ. ಅವರ ಬಗ್ಗೆ ಏನನ್ನು ಮಾತನಾಡಲ್ಲ. ಅದಕ್ಕೆ ಉತ್ತರವನ್ನು ರೇವಣ್ಣ ಅವರು ಕೊಡ್ತಾರೆ, ನಾವೇಕೆ ಮಾತನಾಡಬೇಕು ಎಂದರು.
ಇತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಸನ ಜಿಲ್ಲೆಯಲ್ಲಿ ಮಳೆಯಿಂದ ಸಾಕಷ್ಟು ಹಾನಿಯಾಗಿದೆ. ಜಿಲ್ಲಾ ಮಿನಿಸ್ಟರ್ ಬರ್ತಾರೆ, ಬ್ರಾಂಡಿ ಶಾಪ್ ನೋಡ್ಕಂಡು ಹೋಗ್ತಾರೆ ಎಂದು ಲೇವಡಿ ಮಾಡಿದರು.
ಎಲ್ಲಾ ಕೇಸ್ ಗಳನ್ನು ಮುಚ್ಚಿ ಹಾಕ್ತಿದ್ದಾರೆ
ಮದ್ಯದಂಗಡಿ ಲೈಸನ್ಸ್ ರಿನಿವಲ್ ಗೆ ಅಬಕಾರಿ ಡಿಸಿ ಗಂಡ ಸತ್ತಿರೋರತ್ರ ಹದಿನೈದು ಲಕ್ಷ ಲಂಚ ಸೇರಿ ಮೂವತ್ತು ಲಕ್ಷ ತಗೊಂಡಿದ್ದಾರೆ. ಈ ನನ್ಮಕ್ಕಳು ನನ್ನ ಕೈಗೆ ಸಿಗದೆ ಎಲ್ಲಿ ಹೋಗ್ತಾರೆ. ಅಬಕಾರಿ ಡಿಸಿ ಮಂಜೇಗೌಡ ಅಕ್ರಮ ಮದ್ಯ ಮಾರಾಟದ ಎಲ್ಲಾ ಕೇಸ್ ಗಳನ್ನು ಮುಚ್ಚಿ ಹಾಕುತ್ತಿದ್ದಾರೆ.
ಈ ಜಿಲ್ಲೆ ಲೂಟಿಕೋರರ ಕೈಗೆ ಸೇರಿದೆ. ಅಬಕಾರಿ ಡಿಸಿ ಪಾಪದವನು, ಇಲ್ಲಿಗೆ ಬರೋಕೆ ಇಷ್ಟು ಕೊಟ್ಟು ಬಂದೀದಿನಿ ಅಂತ ಹೇಳ್ತಾನೆ. ಬಡವರನ್ನು ಯಾಕೆ ಗೋಳುಹುಯ್ತಿರಾ, ನಿಮ್ಮ ಮಕ್ಕಳಿಗೆ ಒಳ್ಳೆಯದು ಆಗುತ್ತ ಎಂದು ಕಿಡಿಕಾರಿದರು.
ದೇವರ ಮುಂದೆ ಹೇಳ್ತಿನಿ
ಎಸ್.ಎಚ್.ಡಿ.ಪಿ. ವರ್ಕ್ ಆರ್ಡರ್ ನೀಡಲು 12% ಲಂಚ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಹೇಳಿಕೆಯಿಂದ ಈಶ್ವರಪ್ಪ ಅವರು ಬೇಜಾರ್ ಮಾಡ್ಕೋಬಹುದು. ಎಕ್ಸಿಕ್ಯೂಟಿವ್ ಇಂಜಿನಿಯರ್ ಕೇಶವಪ್ರಸಾದ್ ಲಂಚದ ಹಣ ಎಣಿಸಲು ನೋಟು ಎಣಿಸುವ ಮಿಷನ್ ತಂದಿದ್ದ. ಬೇಕಾದರೆ ಧರ್ಮಸ್ಥಳದಲ್ಲಿ ದೇವರ ಮುಂದೆ ಸತ್ಯ ಮಾಡ್ತಿನಿ.
ಪ್ರೊಬೆಷನರಿ ಇಂಜಿನಿಯರ್‌ಗಳು ಲೂಟಿ ಮಾಡ್ತಾರ್ವೆ. ಕಡೂರಿನ ಕಂಟ್ರ್ಯಾಕ್ಟರ್ ಹಾಲಪ್ಪ ಮನೆಗೆ ಯಾರು ಬಂದಿದ್ದರು, ಮಿಷನ್ ಯಾರು ತಂದಿದ್ದು, ಎಷ್ಟು ಹಣ ತಗೊಂಡ್ರು ಅನ್ನೊದನ್ನ ತನಿಖೆ ನಡೆಸಲಿ, ಹೀಗೆ ಕೆಲಸ ಮಾಡಿ ಕೊಡುವ ವ್ಯಕ್ತಿಗೆ ಒಳ್ಳೆಯ ಪೋಸ್ಟ್, ಜಾಗ ಸಿಗುತ್ತೆ, ಕೇಶವಪ್ರಸಾದ್‌ಗೆ ನಂಬರ್ ಒನ್ ಜಾಗ ಸಿಗುತ್ತೆ ಎಂದರು.
ಮಳೆ ಹಾನಿ ಬಂದು ನೋಡಿ
ಹಾಸನ ಜಿಲ್ಲೆಯ ಡಿಸಿ, ಎಸಿಗಳು ಹಳ್ಳಿಗಳಿಗೆ ನುಗ್ಗಬೇಕು, ಮಳೆಯಿಂದ ಬಿದ್ದು ಹೋಗಿರುವ ಮನೆಗಳನ್ನು ನೋಡಿ ಸರಿಯಾದ ರೀತಿ ಮಳೆ ಹಾನಿ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಎಂ.ಎಲ್.ಸಿ. ಚುನಾವಣೆ ಪ್ರಚಾರಕ್ಕೆ ಟೂರ್ ಹಾಕಂಡು ತಿರುಗ್ತಾರ್ವೆ, ಮೊದಲು ಮಳೆಯಿಂದ ಹಾನಿ ಆಗಿರೋದನ್ನ ನೋಡಿ ಎಂದು ಕುಟುಕಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ