ನವದೆಹಲಿ (ಫೆ. 22): ಕಳೆದ ಹಲವಾರು ತಿಂಗಳುಗಳಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುವ ಮೂಲಕ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿರುವ ಬಿಜೆಪಿಯ ಬಂಡಾಯ ನಾಯಕ, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ 'ನಿಮಗೆ ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ, ಪಕ್ಷದ ಶಿಸ್ತನ್ನು ಕಾಪಾಡಿ ಅಥವಾ ಕ್ರಮ ಎದುರಿಸಲು ಸಿದ್ದರಾಗಿ ಎಂದು ಜೆ.ಪಿ. ನಡ್ಡಾ ಖಡಕ್ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಬಸವನ ಗೌಡ ಪಾಟೀಲ್ ಯತ್ನಾಳ್ ವಿವರಣೆ ನೀಡಲು ಮುಂದಾದಾಗ "ಈಗಾಗಲೇ ಪಕ್ಷ ನಿಮಗೆ ನೊಟೀಸ್ ನೀಡಿದೆ. ನೀವು ನೊಟೀಸ್ ಗೆ ಉತ್ತರ ನೀಡಿದ್ದೀರಿ. ನೀವು ನೀಡಿರುವ ಸ್ಪಷ್ಟೀಕರಣ ಪಕ್ಷದ ಶಿಸ್ತು ಸಮಿತಿ ಮುಂದೆ ಇದೆ. ಶಿಸ್ತು ಸಮಿತಿಯು ನೀವು ನೀಡಿರುವ ಸ್ಪಷ್ಟೀಕರಣವನ್ನು ಪರಿಶೀಲಿಸಿ ಶಿಫಾರಸು ಮಾಡಲಿದೆ. ಸಮಿತಿಯು ಮಾಡುವ ಶಿಫಾರಸಿನ ಅನುಗುಣವಾಗಿ ಪಕ್ಷ ಕ್ರಮ ಜರುಗಿಸಲಿದೆ. ಹಾಗಾಗಿ ನೀವು ಏನೇ ಹೇಳುವುದಿದ್ದರೂ ಶಿಸ್ತು ಸಮಿತಿಯನ್ನು ಸಂಪರ್ಕಿಸಿ" ಎಂದು ಜೆ.ಪಿ. ನಡ್ಡ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಂಗಳವಾರ ಮತ್ತೊಮ್ಮೆ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಅಲ್ಲದೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹಾಗೂ ಮತ್ತಿತರ ನಾಯಕರನ್ನೂ ಭೆಟಿ ಆಗುವ ಸಾಧ್ಯತೆ ಇದೆ.
ಇನ್ನೊಂದೆಡೆ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಮೇಲೆ ಪಂಚಮಸಾಲಿ ಸಮುದಾಯದ ಸಚಿವ ದ್ವಯರಾದ ಮುರುಗೇಶ್ ನಿರಾಣಿ ಮತ್ತು ಸಿ.ಸಿ. ಪಾಟೀಲ್ ಹರಿ ಹಾಯ್ದಿದ್ದಾರೆ. ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಮಾಡುತ್ತಿರುವ ಹೋರಾಟವನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಮಾಜದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಇಂಥವರ ಕೈಗೊಂಬೆಯಾಗಬಾರದು ಎಂದು ಕೂಡ ಹೇಳಿದ್ದಾರೆ. ಪಂಚಮಸಾಲಿ ಹೋರಾಟದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಮುಂಚೂಣಿಯಲ್ಲಿರುವುದರಿಂದಲೇ ಮುರುಗೇಶ್ ನಿರಾಣಿ ಮತ್ತು ಸಿ.ಸಿ. ಪಾಟೀಲ್ ಗದಾ ಪ್ರಹಾರ ನಡೆಸಿದ್ದಾರೆ.
ಇದನ್ನೂ ಓದಿ: Crime News: ಇಬ್ಬರು ಎಲ್ಇಟಿ ಉಗ್ರರ ವಿರುದ್ಧ 8 ವರ್ಷದ ಬಳಿಕ ಕೊನೆಗೂ ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ
ಸಚಿವ ದ್ವಯರಾದ ಸಿ.ಸಿ. ಪಾಟೀಲ್ ಮತ್ತು ಮುರುಗೇಶ್ ನಿರಾಣಿ ಅವರ ಜೊತೆ ಪಂಚಮಸಾಲಿ ಸಮುದಾಯದ ಶಾಸಕರಾದ ಮಹೇಶ್ ಕುಮಟಳ್ಳಿ, ಅರುಣ್ ಪೂಜಾರಿ, ಶಂಕರ್ ಪಾಟೀಲ್, ಸಂಸದ ಸಂಗಣ್ಣ ಕರಡಿ, ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮೋಹನ್ ಲಿಂಬಿಕಾಯಿ, ವಿರೂಪಾಕ್ಷಪ್ಪ ಬಳ್ಳಾರಿ ಮೊದಲಾದವರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದು ಕೂಡ ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ