ಚಿಕ್ಕಬಳ್ಳಾಪುರ(ಜ. 27): ಕನಕಪುರದಿಂದ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರವಾಗಿದ್ದ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಇಂದು ಎರಡನೇ ಬಾರಿ ಭೂಮಿ ಪೂಜೆ ನಡೆಯಿತು. ಜಿಲ್ಲೆಯ ಬಿಜೆಪಿ ಶಾಸಕ ಡಾ. ಕೆ ಸುಧಾಕರ್ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಜಿಲ್ಲೆಯ ನಲ್ಲಘಟ್ಟು ಗ್ರಾಮದ ಬಳಿ 525 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ಈ ಕಾಲೇಜು ನಿರ್ಮಾಣವಾಗುತ್ತಿದೆ. ಇನ್ನು, ಕೆಎನ್ಆರ್ ಎಂಬ ಸಂಸ್ಥೆ ಈ ಕಾಮಗಾರಿ ಗುತ್ತಿಗೆ ಪಡೆದಿದೆ.
ಈ ಹಿಂದೆ ಉಪಚುನಾವಣೆಗೆ ಮುನ್ನವೇ ಸಿಎಂ ಬಿಎಸ್ ಯಡಿಯೂರಪ್ಪ ಅವರು ಶಂಕು ಸ್ಥಾಪನೆಗಾಗಿ ಭೂಮಿಪೂಜೆ ಮಾಡಿದ್ದರು. ಈಗ ಶಾಸಕ ಡಾ. ಸುಧಾಕರ್ ಕಾಮಗಾರಿ ಪ್ರಾರಂಭಕ್ಕೆ ಮತ್ತೊಮ್ಮೆ ಗುದ್ದಲಿ ಪೂಜೆ ಮಾಡಿದ್ದಾರೆ.
ಮೈತ್ರಿ ಸರ್ಕಾರದಲ್ಲಿ ಕನಕಪುರಕ್ಕೆ ಘೋಷಣೆಯಾಗಿದ್ದ ಈ ಕಾಲೇಜನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಸ್ಥಳಾಂತರಿಸಲಾಗಿತ್ತು. ಈ ಸ್ಥಳಾಂತರ ಕಾರ್ಯಕ್ಕೆ ಕನಕಪುರ ಶಾಸಕ ಡಿಕೆ ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ತಮ್ಮ ಕ್ಷೇತ್ರಕ್ಕೆ ಮಂಜೂರಾಗಿದ್ದ ಕಾಲೇಜ್ನ್ನು ಈ ರೀತಿ ಹಸ್ತಾಂತರಿಸುವುದು ಸರಿಯಲ್ಲ. ಈ ಕ್ರಮದಿಂದ ಹಿಂದೆ ಸರಿಯಬೇಕು ಎಂದು ಪತ್ರದ ಮೂಲಕ ಬಿಎಸ್ ಯಡಿಯೂರಪ್ಪಗೆ ಮನವಿ ಮಾಡಿದ್ದರು. ಆದರೆ, ಸರ್ಕಾರ ರಚನೆಯಲ್ಲಿ ಸಹಾಯ ಮಾಡಿದ ಡಾ. ಸುಧಾಕರ್ ಅವರ ಕ್ಷೇತ್ರದಲ್ಲಿಯೇ ಮೆಡಿಕಲ್ ಕಾಲೇಜು ನಿರ್ಮಾಣವಾಗಲಿದೆ ಎಂದು ಸಿಎಂ ಸ್ಪಷ್ಟಪಡಿಸಿದ್ದರು. ಇದೇ ಹಿನ್ನೆಲೆಯಲ್ಲಿ ಉಪಚುನಾವಣೆಗೂ ಮುನ್ನ ತರಾತುರಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಶಂಕು ಸ್ಥಾಪನೆ ಮಾಡಬೇಕು ಎಂದು ಸುಧಾಕರ್ ಪಟ್ಟು ಹಿಡಿದು ಮಾಡಿಸಿಕೊಂಡಿದ್ದರು.
ಇದನ್ನು ಓದಿ: ಹೊರ ರಾಜ್ಯದ ಕಾರ್ಮಿಕರ ದಾಖಲೆ ಪರಿಶೀಲನೆ; ಕಾರಣ ಕೇಳಿ ಕೊಡಗು ಎಸ್ಪಿಗೆ ಕಾರ್ಮಿಕ ಇಲಾಖೆ ನೋಟಿಸ್
ಮೆಡಿಕಲ್ ಕಾಲೇಜು ನಿರ್ಮಾಣದ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ರಾಜ್ಯದಲ್ಲಿ ಆರ್ಥಿಕ ದಿವಾಳಿತನ ಆಗಿಲ್ಲ. ರಾಜ್ಯದಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಆಗಿಲ್ಲ. ನೆರೆ ಸಂತ್ರಸ್ತರಿಗೆ ಮೊದಲು 70-80 ಸಾವಿರ ಹಣ ಬಿಡುಗಡೆಯಾಗಿದೆ. ಈಗ ಬಿಎಸ್ವೈ ಪ್ರತಿ ಮನೆಗೆ 5 ಲಕ್ಷ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಅವರು ಯಾವಾಗಲಾದರೂ ಇಷ್ಟೊಂದು ಹಣ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ