HOME » NEWS » State » MLA ROOPA SHASHIDHAR PROTESTED AGAINST KOLAR DC DEMANDING TO START KGF ROAD CONSTRUCTION GNR

’ಕೆಜಿಎಫ್​​ ನಗರದ ರಸ್ತೆ ಅಗಲೀಕರಣ ಕಾಮಗಾರಿ ಮುಗಿಸಿ‘ - ಕೋಲಾರ ಡಿಸಿ ಕಚೇರಿ ಎದುರು ಶಾಸಕಿ ರೂಪಾ ಶಶಿಧರ್​​​ ಪ್ರತಿಭಟನೆ

ಬಳಿಕ ರಸ್ತೆ ಅಗಲೀಕರಣ ಕಾಮಗಾರಿ ಆಗಿಲ್ಲ ಎಂದು 11 ಮಂದಿ ವ್ಯಾಪಾರಿಗಳು ಕೋರ್ಟ್​ ಮೆಟ್ಟಿಲೇರಿದ್ದರು. ನ್ಯಾಯಲಯವೂ ಜಿಲ್ಲಾಡಳಿತ ಹಂತದಲ್ಲೇ ರಸ್ತೆ ಅಗಲೀಕರಣ ಕಾಮಗಾರಿ ಮುಗಿಯಲಿ ಎಂದು ಆದೇಶ ನೀಡಿತ್ತು. ಇದೀಗ ಜಿಲ್ಲಾಡಳಿತ ಕಚೇರಿ ನಿರ್ಲಕ್ಷ್ಯದಿಂದ ಇನ್ನೂ ರಸ್ತೆ ಅಗಲೀಕರಣ ಕಾಮಗಾರಿ ಮುಗಿದಿಲ್ಲ ಎಂಬುದು ಶಾಸಕಿ ರೂಪಾ ಶಶಿಧರ್​ ಆರೋಪ.

news18-kannada
Updated:September 19, 2020, 4:50 PM IST
’ಕೆಜಿಎಫ್​​ ನಗರದ ರಸ್ತೆ ಅಗಲೀಕರಣ ಕಾಮಗಾರಿ ಮುಗಿಸಿ‘ - ಕೋಲಾರ ಡಿಸಿ ಕಚೇರಿ ಎದುರು ಶಾಸಕಿ ರೂಪಾ ಶಶಿಧರ್​​​ ಪ್ರತಿಭಟನೆ
ಕೋಲಾರ ಡಿಸಿ ಕಚೇರಿ ಎದುರು ಶಾಸಕಿ ರೂಪಾ ಶಶಿಧರ್​​​ ಪ್ರತಿಭಟನೆ
  • Share this:
ಕೋಲಾರ(ಸೆ.19): ಕೋಲಾರದ ಚಿನ್ನದ ಗಣಿ ಕೆಜಿಎಫ್​​ ನಗರದಲ್ಲಿ ರಸ್ತೆ ಕಾಮಗಾರಿ ಸಂಬಂಧ ಮತ್ತೊಮ್ಮೆ ಜಿಲ್ಲಾಡಳಿತ ವಿರುದ್ಧ ಕಾಂಗ್ರೆಸ್​ ಶಾಸಕಿ ರೂಪಾ ಶಶಿಧರ್​​ ಪ್ರತಿಭಟನೆ ಮಾಡುವ ಮುಖೇನ ಅಸಮಾಧಾನ ಹೊರಹಾಕಿದ್ದಾರೆ. ಇಂದು ಬೆಳಿಗ್ಗೆ 10.30 ಗಂಟೆಗೆ ಕೋಲಾರ ಡಿಸಿ ಕಚೇರಿ ಎದುರು ಶಾಸಕಿ ರೂಪಾ ಶಶಿಧರ್​​ ಏಕಾಂಗಿಯಾಗಿ ನಿಂತು ಪ್ರತಿಭಟನೆ ನಡೆಸಿದರು. ಕೈಯಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿ ಅವರ ಫೋಟೋ ಹಿಡಿದು ಕೆಜಿಎಫ್​​ನ ಅಶೋಕ ನಗರ, ಎಂಜಿ ರಸ್ತೆ ಕಾಮಗಾರಿ ಶುರು ಮಾಡುವಂತೆ ಆಗ್ರಹಿಸಿದರು. ಮಧ್ಯಾಹ್ನ 12 ಗಂಟೆಯಾದರೂ ಜಿಟಿ ಜಿಟಿ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದ ರೂಪಾ ಶಶಿಧರ್​​​​ ಡಿಸಿ ಕಚೇರಿ ಮುಂಭಾಗ ತನ್ನ ಪ್ರತಿಭಟನೆ ಮುಂದುವರಿಸಿದರು. ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತಾಡಿದ ರೂಪಾ ಶಶಿಧರ್​​, ರಸ್ತೆ ಕಾಮಗಾರಿ ಸಮಸ್ಯೆಯನ್ನು ಜಿಲ್ಲಾಡಳಿತ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಇದು ಸರ್ಕಾರ ಮತ್ತು ನ್ಯಾಯಲಯ ಹಂತದ ಕಾಮಗಾರಿಯಲ್ಲ. ಬದಲಿಗೆ ಜಿಲ್ಲಾಡಳಿತ ಹಂತದಲ್ಲಿರುವ ಕಾಮಗಾರಿ, ಹೀಗಾಗಿ ಕೂಡಲೇ ಪ್ರರಾಂಭಿಸಬೇಕು ಎಂದು ಆಗ್ರಹಿಸಿದರು.

ರಸ್ತೆ ಕಾಮಗಾರಿ ಸಂಬಂಧ ಒಬ್ಬ ಶಾಸಕರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರೇ ಯಾವುದೇ ರೀತಿ ಕ್ರಮ ಜರಿಗಿಸುತ್ತಿಲ್ಲ. ನಾನೋರ್ವ ಜನ ಪ್ರತಿನಿಧಿಯಾಗಿ ಒಂದು ಸಣ್ಣ ರಸ್ತೆ ಕಾಮಗಾರಿ ಮಾಡಿಸೋಕೆ ಆಗಿಲ್ಲ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ. ಇದರಿಂದ ಜನ ಸಮಸ್ಯೆ ಎದುರಿಸುತ್ತಿದ್ಧಾರೆ. ಈ ಕಾಮಗಾರಿಗೆ ಬಲಾಡ್ಯರು ಅಡ್ಡಪಡಿಸುತ್ತಿದ್ದಾರೆ. ಈ ಕಾಮಗಾರಿಗಾಗಿ ಜನ ಮನೆ ಕಳೆದುಕೊಂಡು ಸಮಸ್ಯೆಗೀಡಾಗಿದ್ಧಾರೆ. ಈ ಕೂಡಲೇ ಜಿಲ್ಲಾಡಳಿತ ಮತ್ತು ಲೋಕೋಪಯೋಗಿ ಇಲಾಖೆ ಈ ರಸ್ತೆ ಕಾಮಗಾರಿ ಬಗ್ಗೆ ಸ್ಪಷ್ಟನೆ ನೀಡಬೇಕು. ಇಲ್ಲದೇ ಹೋದಲ್ಲಿ ವಿಧಾನಸಭಾ ಕಲಾಪ ಬಹಿಷ್ಕರಿಸಿ ಹೋರಾಟ ಮುಂದುವರಿಸುತ್ತೇನೆ ಎಂದು ರೂಪಾ ಶಶಿಧರ್​ ಎಚ್ಚರಿಕೆ ನೀಡಿದ್ದಾರೆ.

ಕೆಜಿಎಫ್​​ ನಗರದ ಸ್ಕೂಲ್ ಮೈನ್ಸ್​ನಿಂದ ಗಾಂಧಿ ಸರ್ಕಲ್​ವರೆಗೂ 1.8 ಕಿಲೋ ಮೀಟರ್​ ರಸ್ತೆ ಅಗಲೀಕರಣ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ 2013ರಲ್ಲೇ ಮಾಜಿ ಶಾಸಕ ವೈ ಸಂಪಂಗಿ ಅವಧಿಯಲ್ಲೇ ರಸ್ತೆ ತೆರವು ಕಾರ್ಯಾಚರಣೆ ನಡೆದಿತ್ತು. ಅನುಮತಿ ಪಡೆಯದೇ ತೆರವು ಕಾರ್ಯಾಚರಣೆ ಮಾಡಲಾಗದು ಎಂದು ಪೊಲೀಸರು ಮಧ್ಯಪ್ರವೇಸಿದ್ದರು. ಹೀಗಾಗಿ ರಸ್ತೆ ತೆರವು ಕಾರ್ಯಾಚರಣೆ ಸ್ಥಗಿತಗೊಂಡಿತ್ತು.

ಇದನ್ನೂ ಓದಿ: Ashwathnarayan: ಡಿಸಿಎಂ ಅಶ್ವತ್ಥ ನಾರಾಯಣಗೆ ಕೊರೋನಾ ಪಾಸಿಟಿವ್; ಅಧಿವೇಶನಕ್ಕೆ ಗೈರು

ಬಳಿಕ ರಸ್ತೆ ಅಗಲೀಕರಣ ಕಾಮಗಾರಿ ಆಗಿಲ್ಲ ಎಂದು 11 ಮಂದಿ ವ್ಯಾಪಾರಿಗಳು ಕೋರ್ಟ್​ಮೆಟ್ಟಿಲೇರಿದ್ದರು. ನ್ಯಾಯಲಯವೂ ಜಿಲ್ಲಾಡಳಿತ ಹಂತದಲ್ಲೇ ರಸ್ತೆ ಅಗಲೀಕರಣ ಕಾಮಗಾರಿ ಮುಗಿಯಲಿ ಎಂದು ಆದೇಶ ನೀಡಿತ್ತು. ಇದೀಗ ಜಿಲ್ಲಾಡಳಿತ ಕಚೇರಿ ನಿರ್ಲಕ್ಷ್ಯದಿಂದ ಇನ್ನೂ ರಸ್ತೆ ಅಗಲೀಕರಣ ಕಾಮಗಾರಿ ಮುಗಿದಿಲ್ಲ ಎಂಬುದು ಶಾಸಕಿ ರೂಪಾ ಶಶಿಧರ್​ ಆರೋಪ.
Published by: Ganesh Nachikethu
First published: September 19, 2020, 4:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories