ಉಸ್ತುವಾರಿ ಸಚಿವರನ್ನೇ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕಾಂಗ್ರೆಸ್ ಶಾಸಕ : ಆಡಿಯೋ ವೈರಲ್

ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಸಚಿವ ಸುರೇಶ್ ಕುಮಾರ್

ಶಾಸಕ ಸಿ.ಪುಟ್ಟರಂಗಶೆಟ್ಟಿ ಹಾಗೂ ಸಚಿವ ಸುರೇಶ್ ಕುಮಾರ್

  • Share this:
ಚಾಮರಾಜನಗರ(ಡಿಸೆಂಬರ್. 16): ಚಾಮರಾಜನಗರ ಜಿಲ್ಲೆಯಲ್ಲಿ ಕೆರೆ ನೀರು ತುಂಬಿಸುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಅವರನ್ನೇ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಸಿ.ಪುಟ್ಟರಂಗಶೆಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾದ ಆಡಿಯೋ ಒಂದು ವೈರಲ್ ಆಗಿದೆ. ಮೂರು ಹಾಗು ನಾಲ್ಕನೇ ಹಂತದ ಕೆರೆಗಳಿಗೆ ನೀರು ತುಂಬಿಸುವ ವಿಚಾರವಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ರೈತರೊಬ್ಬರೊಡನೆ ಪೋನ್ ನಲ್ಲಿ ಮಾತನಾಡುತ್ತಾ ಉಸ್ತುವಾರಿ ಸಚಿವರನ್ನೆ ಅವಾಚ್ಯ ಶಬ್ದ ಉಪಯೋಗಿಸಿ ನಿಂದಿಸಿದ್ದಾರೆ. ಅಲ್ಲದೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ಮನಬಂದಂತೆ ಹೀನಾಮಾನವಾಗಿ ನಿಂದಿಸಿ ಬೈಯ್ದಿರುವ ಆಡಿಯೋ ಇದೀಗ ವೈರಲ್ ‌ಆಗಿದೆ. ಅಲ್ಲದೆ ಸಂಸದ ಶ್ರೀನಿವಾಸ್ ಪ್ರಸಾದ್, ಶಾಸಕ ನಿರಂಜನ್ ಕುಮಾರ್ ಹಾಗೂ ಜಿಲ್ಲಾಧಿಕಾರಿಗಳನ್ನು ಏಕವಚನದಲ್ಲೇ ಸಂಬೋಧಿಸಿರುವ ಶಾಸಕರು, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡುವಂತೆ ರೈತರನ್ನು ಪ್ರಚೋಧಿಸಿರುವ ಆಡಿಯೋ ಬಹಿರಂಗಗೊಂಡಿದೆ.

ರೈತರೊಬ್ಬರು ಶಾಸಕ ಪುಟ್ಟರಂಗಶೆಟ್ಟಿಗೆ ದೂರವಾಣಿ ಕರೆ ಮಾಡಿ ಮೂರನೇ ಹಂತದ ಕಿಲೆಗೆರೆ ಕೆರೆಗೆ ನೀರು ಬಿಡದೆ ನಾಲ್ಕನೇ ಹಂತದ ಕೆರೆಗೆ ನೀರು ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ಪುಟ್ಟರಂಗಶೆಟ್ಟಿ, ನೀವು ಯಾರು ಕೇಳ್ತಾ ಇಲ್ಲ , ವಡ್ಡಗೆರೆ ಕಡೆಯವರು ಪ್ರತಿಭಟನೆ ಮಾಡಿದ್ದಾರೆ, ನೀವು ಒಂದು ದಿನವಾದರು ಪ್ರತಿಭಟನೆ ಮಾಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಹೋಗಿ ವಡ್ಡಗೆರೆ ಕೆರೆಗೆ ನೀರು ಬಿಟ್ಟಿರುವುದನ್ನು ತಡೆಯಿರಿ, ಹೀಗೆ ತಡೆದರೆ ಇಂಜಿನಿಯರ್ ಬರುತ್ತಾರೆ , ಅವರಿಗೆ ಕ್ಯಾಕರಿಸಿ ಉಗಿಯಿರಿ , ಮರ್ಯಾದೆಯಾಗಿ ಮೂರನೇ ಹಂತದ ಕೆರೆಗಳನ್ನು ತುಂಬಿಸಿ ನಂತರ ನಾಲ್ಕನೆ ಹಂತಕ್ಕೆ ಬಿಡು ಎಂದು ತುಚ್ಛಪದಗಳಿಂದ ಕಾವೇರಿ ನೀರಾವರಿ ನಿಗಮದ ಇಂಜಿನಿಯರನ್ನು ಶಾಸಕರು ನಿಂದಿಸಿದ್ದಾರೆ.

ನಾಲ್ಕನೇ ಹಂತದ ಕೆಲವು ಕೆರೆಗಳು ಆರು ತಿಂಗಳಾದರೂ ತುಂಬುವುದಿಲ್ಲ, ಇನ್ನು ನಿಮಗೆಲ್ಲಿ ಬರುತ್ತೆ ನೀರು? ನಾಲ್ಕನೇ ಹಂತದ ಕೆರೆಗಳಿಗೆ ಪೈಪ್ ಲೈನ್ ಮಾಡಿಸು ಅಂದ್ರೆ ಗುಂಡ್ಲುಪೇಟೆ ಶಾಸಕ ನಿರಂಜನಕುಮಾರ್ ನನ್ನ ಮಾತು ಕೇಳಲಿಲ್ಲ.  ಪೈಪ್ ಲೈನ್ ಗೆ ಬಂದಿದ್ದ 8 ಕೋಟಿ ರೂಪಾಯಿ ವಾಪಸ್ ಹೊರಟು ಹೋಗಿದೆ, ಇದಕ್ಕೆ ಶಾಸಕ ನಿರಂಜನಕುಮಾರ್ ಅವರೇ ಕಾರಣ ಎಂದು ಪುಟ್ಟರಂಗಶೆಟ್ಟಿ ಹೇಳಿದ್ದಾರೆ.

ನಾಲ್ಕನೇ ಹಂತದ ಕಲ್ಕಟ್ಟ ಕೆರೆ 750 ಎಕರೆ ಇದೆ. ಈ ಕಾಲಕ್ಕೆ ತುಂಬಲ್ಲ, ಹಾಗಾಗಿ ನೀವು ತಡೆಯದೇ ಇದ್ರೆ ನಿಮಗೆ ಈ ವರ್ಷವೂ ನೀರಿಲ್ಲಾ. ಹಾಗಾಗಿ ಗಲಾಟೆ ಮಾಡಿ ಡಿಸಿ ಆಫೀಸ್ ಮುಂದೆ ಪ್ರತಿಭಟನೆ ಮಾಡಿ.. ನಾನ್ ಹೇಳ್ತೀನಿ. ಆ ಇಂಜಿನಿಯರ್ ಕರೆದು ಉಗಿತೀನಿ, ರೈತರನ್ನು ಎತ್ತಿಕಟ್ಟೋಕೆ ಬಂದಿದ್ದಿಯಾ ನಿನಗೆ ಹೇಳಿಕೊಟ್ಟಿದ್ದು, ಯಾರು ಅಂತ ಶಾಸಕ ಪುಟ್ಟರಂಗಶೆಟ್ಟಿ ಮನಸ್ಸಿಗೆ ಬಂದಂತೆ ಮಾತನಾಡಿದ್ದಾರೆ.

ಇದನ್ನೂ ಓದಿ : ಯೋಧನ ಕುಟುಂಬದ ಮೇಲೆ ಹಲ್ಲೆ ; ನ್ಯಾಯಕ್ಕಾಗಿ ಪೊಲೀಸ್ ವರಿಷ್ಠಾಧಿಕಾರಿಗೆ ಮೊರೆ

ನಾಲ್ಕನೇ ಹಂತಕ್ಕೆ ನೀರು ಹೇಗೆ ಬಿಟ್ರಿ ಅಂತ ಪ್ರತಿಭಟನೆ ಮಾಡಿ, ಗಲಾಟೆ ಮಾಡಿ ಆಮೇಲೆ ಬೇಕಾದ್ರೆ ಡಿಸಿ ಹತ್ತಿರ ಬನ್ನಿ , ಡಿಸಿನೂ ಏನು ಮಾಡಲ್ಲಾ. ಡಿಸಿ, ಉಸ್ತುವಾರಿ ಸಚಿವರನ್ನು ಕೇಳ್ಳುತ್ತಾರೆ . ಉಸ್ತುವಾರಿ ಸಚಿವರೇ  ಇದನ್ನೆಲ್ಲಾ ಮಾಡಿರೋದು ಎಂದು ಶಾಸಕರು ಏಕವಚನದಲ್ಲಿ ನಿಂದಿಸಿದ್ದಾರೆ. ಅಲ್ಲದೆ ಉಸ್ತುವಾರಿ ಸಚಿವರು ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್ ಮಾತು ಕೇಳಿಕೊಂಡು ಇದನ್ನೆಲ್ಲಾ ಮಾಡಿದ್ದಾನೆ ಎಂದು ಸಹ ಆರೋಪಿಸಿದ್ದು ಈ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆಆಡಿಯೋ ವೈರಲ್ ವಿಚಾರಕ್ಕೆ  ಪ್ರತಿಕ್ರಿಯಿಸಿರು ಉಸ್ತುವಾರಿ ಸಚಿವ ಸುರೇಶ್​​ಕುಮಾರ್​,  ಅವರು ಏನು ಕಲಿತಿದ್ದಾರೋ ಆ ರೀತಿ ಮಾತನಾಡಿದ್ದಾರೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಅವರವರು ಬೆಳೆದ ಬಂದ ಹಿನ್ನಲೆಯಲ್ಲಿ ಮಾತನಾಡಿದ್ದಾರೆ. ಆಡಿಯೋ ಬಹಳ ಕೆಟ್ಟದಾಗಿದೆ ಅಂತ ಕೆಲವು ಸ್ನೇಹಿತರು ತಿಳಿಸಿದ್ದಾರೆ. ಅದೃಷ್ಟವಶಾತ್ ಆ ಆಡಿಯೋವನ್ನು ನಾನು ಕೇಳಿಲ್ಲ ಎಂದು ತಿಳಿಸಿದ್ದಾರೆ. ಇನ್ನೂ ಈ ಬಗ್ಗೆ ಶಾಸಕ ಪುಟ್ಟರಂಗಶೆಟ್ಟಿಯವರು ಪ್ರತಿಕ್ರಿಯೆ ನೀಡಿದೇ ಕೋಪಿಸಿಕೊಂಡು ಹೋದರು.
Published by:G Hareeshkumar
First published: