ಜೆಡಿಎಸ್ನ ಭದ್ರಕೋಟೆ ಎಂದೇ ಖ್ಯಾತಿ ಪಡೆದಿರುವ ಹಾಸನದಲ್ಲಿ ಚುನಾವಣೆ (Election) ಕಾವು ಜೋರಾಗಿದೆ. ಬಿಜೆಪಿ (BJP) ಹಾಗೂ ಜೆಡಿಎಸ್ (JDS) ನಾಯಕರು ಪಕ್ಷದ ಪರ ಪ್ರಚಾರಕ್ಕೆ ಈಗಲೇ ಅಖಾಡಕ್ಕಿಳಿದ್ದಿದ್ದಾರೆ. ಈ ನಡುವೆ ಹಾಸನ (Hassan) ಶಾಸಕ ಪ್ರೀತಂಗೌಡ (Preetham Gowda) ಮತದಾರರಿಗೆ ತಮಗೆ ಮತ ಹಾಕುವಂತೆ ಪರೋಕ್ಷವಾಗಿ ಬೆದರಿಕೆಯೊಡ್ಡಿದ್ದಾರೆ. ಕೆಲಸ ಮಾಡುತ್ತೇನೆ, ಕೂಲಿ ಮಾಡಿ ವೋಟು ಕೇಳುತ್ತೇನೆ. ನೀವೇನಾದರೂ ಕೈಕೊಟ್ಟರೆ, ನಾನು ಕೈ, ಕಾಲು ಕೊಡುತ್ತೇನೆ. ಯಾರ ಕೈಗೂ ಸಿಗುವುದಿಲ್ಲ. ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳುಹಿಸುತ್ತೇನೆ, ಯಾವ ಕೆಲಸವನ್ನು ಮಾಡಿಕೊಡುವುದಿಲ್ಲ ಎಂದಿದ್ದಾರೆ.
ಕಗ್ಗತ್ತಲಲ್ಲಿ ನಿಂತು ಮತದಾರರಿಗೆ ಪ್ರೀತಂ ಗೌಡ ಧಮ್ಕಿ
ಹಾಸನದ ಶ್ರೀನಗರಕ್ಕೆ ರಾತ್ರಿ ಪ್ರೀತಂಗೌಡ ಅವರು ಭೇಟಿ ನೀಡಿದ್ದರು. ಈ ಬಡಾವಣೆಯಲ್ಲಿ ಹೆಚ್ಚಾಗಿ ಮುಸ್ಲಿಮರೇ ವಾಸಗಿದ್ದು, ಇದೇ ವೇಳೆ ಸಾರ್ವಜನಿಕರನ್ನುದ್ದೇಶಿ ಮಾತನಾಡಿದ ಪ್ರೀತಂಗೌಡ ಅವರು, ಯಾರು ಉತ್ತಮ ಕೆಲಸ ಮಾಡುತ್ತಾರೋ ಅವರಿಗೆ ವೋಟು ಹಾಕಬೇಕು. ಬಾಯಲ್ಲಿ ಅಣ್ಣಾ ಅಂತ ಕರೆದು ಕೊನೆಗೆ ನಾವು ಬಿಜೆಪಿಗೆ ವೋಟು ಹಾಕಲ್ಲ ಎಂದರೆ ಕೆಲಸ ಮಾಡುವವರಿಗೆ ಕೋಪ ಬರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲಸ ಮಾಡಿ, ವೋಟು ಕೇಳುತ್ತೇನೆ
ನೀವೆಲ್ಲರೂ ಬೆಳಗ್ಗೆಯಿಂದಲೂ ಕೂಲಿಗೆ ಹೋಗುತ್ತೀರಾ, ಸಂಜೆ ಕೂಲಿ ಕೊಡದೇ ಹೋದರೆ ಬಿಡುತ್ತೀರಾ? ದುಡ್ಡು ಕೊಡು ಅಂತೀರಲ್ವಾ? ಹಾಗೆಯೇ ನಾನು ಇಲ್ಲಿ ಕೆಲಸ ಮಾಡುತ್ತೇನೆ, ಕೂಲಿ ಮಾಡಿ ವೋಟು ಕೇಳುತ್ತೇನೆ. ನೀವು ನನಗೆ ವೋಟು ಹಾಕದೇ, ನಾನು ಕಾಂಗ್ರೆಸ್ಗೆ ವೋಟು ಹಾಕುತ್ತೇನೆ. ಓ ಬಿಜೆಪಿಕಾ ಮತ್ ಡಾಲರೇ (ಬಿಜೆಪಿಗೆ ವೋಟು ಹಾಕಲ್ಲ) ಅಂದರೆ ನಾನು ಕೇಳಿಕೊಂಡು ಸುಮ್ಮನೆ ಇರಬೇಕೇ ಎಂದು ಪ್ರಶ್ನಿಸಿದ್ದಾರೆ.
ಮುಸ್ಲಿಂ ಸಹೋದರರನ್ನು ನಮ್ಮ ಸಹೋದರರಂತೆ ಕಾಣುತ್ತೇನೆ
ನಾನು ಚಿಕ್ಕ ಮಕ್ಕಳಿಗೂ ಅರ್ಥ ಆಗುವಂತೆ ನನ್ನ ಮನಸ್ಸು ಪೂರ್ವಕವಾಗಿ ಬಿಡಿಸಿ ಹೇಳುತ್ತಿದ್ದೇನೆ. ನಮ್ಮ ಮುಸಲ್ಮಾನ್ ಸಹೋದರರನ್ನ ನಮ್ಮ ಸಹೋದರರ ರೀತಿಯಲ್ಲಿ ಪ್ರಮಾಣಿಕವಾಗಿ ಪ್ರೀತಿಯಿಂದ ಕಾಣುತ್ತಿದ್ದೇನೆ, ಮುಂದೇಯೂ ಕಾಣುತ್ತೇನೆ. ಆದರೆ ನಾನು ಕೆಲಸ ಮಾಡಿದ್ದರೂ ಕೂಡ ನೀವೇನಾದರೂ ಸಹಾಯ ಮಾಡಿಲ್ಲ ಅಂದರೆ, ಇವರಿಗೆ ಎಷ್ಟು ಕೆಲಸ ಮಾಡಿದರೂ ಇಷ್ಟೇ ನಮ್ಮ ಹಣೆಬರಹ ಬದಲಾಗಲ್ಲ ಅಂತ ಹೇಳಿ ಈ ಕಡೆ ತಿರುಗಿ ನೋಡಬಾರದು ಎಂಬ ತೀರ್ಮಾನಕ್ಕೆ ಬರುತ್ತೇನೆ. ಆ ರೀತಿಯ ತೀರ್ಮಾನಕ್ಕೆ ಬರದೇ ಇರುವಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ ಎಂದು ಎಚ್ಚರಿಸಿದ್ದಾರೆ.
ಮತಹಾಕದಿದ್ದರೆ ಕೆಲಸ ಮಾಡಿ ಕೊಡಲ್ಲ
ಮೂರು ಸಾರಿ ನನಗೆ ಕೈಕೊಟ್ಟಿದ್ದೀರಾ, ನನ್ನ ಎಂಎಲ್ಎ ಚುನಾವಣೆಯಲ್ಲಿ ವೋಟು ಹಾಕಿಲ್ಲ, ಕೌನ್ಸಿಲರ್ ಚುನಾವಣೆಯಲ್ಲಿ ವೋಟು ಹಾಕಿಲ್ಲ, ಎಂಪಿ ಚುನಾವಣೆಯಲ್ಲೂ ವೋಟು ಹಾಕಿಲ್ಲ. ಈಗ ಐದು ವರ್ಷ ಬಳಿಕ ಮತ್ತೆ ಚುನಾವಣೆ ಬರುತ್ತದೆ. ಆ ಸಂದರ್ಭದಲ್ಲಿ ನೀವೇನಾದರೂ ಕೈಕೊಟ್ಟರೆ, ನಾನು ಕೈ, ಕಾಲು ಕೊಡುತ್ತೇನೆ. ಯಾರ ಕೈಗೂ ಸಿಗುವುದಿಲ್ಲ. ನನ್ನ ಮನೆಗೆ ಬಂದರೆ ಕಾಫಿ ಕುಡಿಸಿ ಕಳುಹಿಸುತ್ತೇನೆ, ಯಾವ ಕೆಲಸವನ್ನು ಮಾಡಿಕೊಡುವುದಿಲ್ಲ ಎಂದು ನೇರವಾಗಿ ವಾರ್ನ್ ಮಾಡಿದ್ದಾರೆ.
ವೈಯಕ್ತಿಕವಾಗಿ ಯಾವುದೇ ಕೆಲಸ ಮಾಡಿಕೊಡಲ್ಲ
ರಸ್ತೆ, ಚರಂಡಿ, ನೀರು ಕೊಡುತ್ತೇನೆ. ಒಬ್ಬ ಶಾಸಕನಾಗಿ ಈ ಎಲ್ಲಾ ಕೆಲಸವನ್ನು ಮಾಡಿಕೊಡುವುದು ನನ್ನ ಧರ್ಮ ಹಾಗಾಗಿ ಮಾಡುತ್ತೇನೆ. ಇನ್ನು ಉಳಿದಂತ ಯಾವುದೇ ಕೆಲಸ ವೈಯುಕ್ತಿಕವಾಗಿ ಮಾಡುವುದಿಲ್ಲ. ಇದರಲ್ಲಿ ಯಾವುದೇ ಮುಲಾಜಿಲ್ಲಾ. ಇವತ್ತೇ ನೀವೆಲ್ಲಾ ಸೇರಿ ತೀರ್ಮಾನ ಮಾಡಿಕೊಳ್ಳಿ. ಶಾಸಕರಿಗೆ ಒಂದೂವರೆ ಸಾವಿರ ವೋಟು ಕೊಡುತ್ತೇನೆ ಅಂದರೆ ಇಲ್ಲಿಂದ ಹೊರಡುತ್ತೇನೆ.
ಯಾರೋ ದಳದವರು, ಕಾಂಗ್ರೆಸ್ನವರು ಬರುತ್ತಾರೆ ಅಂತ, ಅವರು ಬಂದಾಗಲೆಲ್ಲಾ ಅವರ ಹಿಂದೆ ಸುಮ್ಮನೆ ಬಂದಿದ್ದೇವು, ಮೆರವಣಿಗೆಗೆ ಹೋಗಿದ್ದೇವು, ಸುಮ್ಮನೆ ಅವರ ಹಿಂದೆ ಹೋಗಿ ವೋಟು ಕೇಳಿಕೊಂಡು ಬಂದೇವು ಅಂತೆಲ್ಲಾ ಹೋಗಬೇಡಿ ಎಂದಿದ್ದಾರೆ.
ದೊಡ್ಡಗೌಡರ ಕುಟುಂಬದ ವಿರುದ್ಧ ಪ್ರೀತಂಗೌಡ ವಾಗ್ದಾಳಿ
ನನಗೂ ಜನರಿದ್ದಾರೆ. ಅವರಿಗೆ ಓಟು ಹಾಕಬೇಡಿ ನಾನು ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದವರ ಮನೆಯಲ್ಲಿ ಮೂರು ಬಾರಿ ಮುಖ್ಯಮಂತ್ರಿ ಆಗಿದ್ದರು. ಒಂದು ಬಾರಿ ದೊಡ್ಡಗೌಡರು, ಎರಡು ಬಾರಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದರು, ನಾಲ್ಕು ಬಾರಿ ರೇವಣ್ಣ ಅವರು ಮಂತ್ರಿಯಾಗಿದ್ದರು. ಆದರೆ ಯಾವತ್ತಾದರೂ ಶ್ರೀನಗರಕ್ಕೆ ಬಂದಿದ್ದಾರಾ? ನೋಡಿದ್ದೀರಾ? ಆದರೆ ಈಗ ಬರುತ್ತಾರೆ, ಅವರು ಬಂದಾಗ ಏನು ಹೇಳಬೇಕು ಎಂಬುವುದನ್ನು ಆಲೋಚಿಸಿ ಎಂದು ದೊಡ್ಡಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆದಿದ್ದಾರೆ.
ಇದನ್ನೂ ಓದಿ: Hassan: ಪ್ರಶಾಂತ್ ನಾಗರಾಜ್ ಹತ್ಯೆ: ಐಜಿಪಿ ಹೇಳಿದ್ದೇನು? ಇತ್ತ ಪ್ರೀತಂಗೌಡ, ಗೋಪಾಲಯ್ಯ ಸುದ್ದಿಗೋಷ್ಠಿ
ನಾನು ನಾಲ್ಕು ವರ್ಷದಿಂದ ಎಂಎಲ್ಎ ಆಗಿದ್ದೇನೆ. ನಾಲ್ಕು ವರ್ಷದಲ್ಲಿ ನಿಮಗೆ ಎಲ್ಲಾ ಕೆಲಸ ಮಾಡಿಕೊಟ್ಟಿದ್ದೇನೆ. ಯುಜಿಡಿ ಮಾಡಬೇಕು ಬೇಡವೋ? ವೋಟು ಹಾಕದಿದ್ದರೆ ಯುಜಿಡಿ ಕಾಮಗಾರಿ ಮಾಡಲ್ಲ ಅಂತ ನೇರವಾಗಿ ಮತದಾರರಿಗೆ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ