ಚಾಮರಾಜನಗರ: ಇತ್ತೀಚಿನ ದಿನಗಳಲ್ಲಿ ಅತೀ ಹೆಚ್ಚು ಟ್ರೋಲ್‌ಗೆ ಗುರಿಯಾಗುತ್ತಿರುವ ಬಿಜೆಪಿ ಶಾಸಕ ಎನ್ ಮಹೇಶ್, (N Mahesh) ನಾನು ಈ ಹಿಂದೆ ಪೂರ್ವಾಗ್ರಹ ಪೀಡಿತನಾಗಿ ಬಿಜೆಪಿಯ (BJP) ವಿರುದ್ಧ ಮಾತನಾಡಿದ್ದೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಿಎಸ್‌ಪಿ (BSP Party) ಪಕ್ಷದಿಂದ ಚುನಾವಣೆ ಗೆದ್ದು ಬಳಿಕ ಬಿಜೆಪಿ ಸೇರಿ ಸಚಿವರಾಗಿದ್ದ ಎನ್ ಮಹೇಶ್, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ನಾನು ಹಿಂದೆ ಪೂರ್ವಾಗ್ರಹ ಪೀಡಿತನಾಗಿ ಬಿಜೆಪಿಯ ವಿರುದ್ದ ಮಾತನಾಡಿದ್ದು ನಿಜ’ ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಮುಂದುವರಿಯುವ ಬಗ್ಗೆ ಸ್ಪಷ್ಟವಾಗಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
ಟ್ರೋಲ್‌ಗೆ ನಾನು ತಲೆಕೆಡಿಸೋದಿಲ್ಲ
ಒಂದು ಕಾಲದ ತಮ್ಮ ಅಭಿಮಾನಿಗಳಿಂದಲೇ ಅತಿ ಹೆಚ್ಚು ಟ್ರೋಲ್ ಗೆ ಗುರಿಯಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಕೊಳ್ಳೇಗಾಲ ಶಾಸಕ ಎನ್ ಮಹೇಶ್, ಬಿಜೆಪಿಯ ಒಳ್ಳೆಯ ಕೆಲಸವನ್ನು ಗುರುತಿಸಿ ಮಾತನಾಡುತ್ತೇನೆ. ಈಗ ಟ್ರೋಲ್ ಮಾಡಿದರೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಒಳ್ಳೆಯದು ಕೆಟ್ಟದ್ದು ಎರಡನ್ನೂ ನನಗೆ ಟಾರ್ಗೆಟ್ ಮಾಡಿ ಟ್ರೋಲ್ ಮಾಡ್ತಿದ್ದಾರೆ. ಎಲ್ಲರೂ ನನ್ನನ್ನೇ ಕೇಂದ್ರೀಕರಿಸಿ ಟ್ರೋಲ್ ಮಾಡ್ತಿದ್ದಾರೆ ಅಂದ್ರೆ ನಾನು ಜನಪ್ರಿಯ ವ್ಯಕ್ತಿ ಅಂತಾಯ್ತಲ್ಲಾ ಎಂದು ಹೇಳಿದರು.
ವಿ ಸೋಮಣ್ಣ ಬಿಜೆಪಿ ಬಿಟ್ಟು ಹೋಗಲ್ಲ
ಇನ್ನು ವಸತಿ ವಿ.ಸೋಮಣ್ಣ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಶಾಸಕ ಎನ್ ಮಹೇಶ್, ಇದು ಕೇವಲ ಊಹಾಪೋಹ ಮಾತ್ರ. ಅವರು ಎಲ್ಲೂ ಹೋಗೋದಿಲ್ಲ. ಬಿಜೆಪಿಯಲ್ಲೇ ಇರುತ್ತಾರೆ ಎಂದು ಹೇಳಿದರು. ವಿ ಸೋಮಣ್ಣ ಅವರು ನಮ್ಮ ಪಕ್ಷದ ಮುಖಂಡರು ಎಂದ ಎನ್ ಮಹೇಶ್, ಅವರು ನಮ್ಮ ಜೊತೆಯೇ ಇರುತ್ತಾರೆ. ಪಕ್ಷವನ್ನು ಗೆಲುವಿನ ಕಡೆ ಕರೆದೊಯ್ಯಲು ವಿ ಸೋಮಣ್ಣ ಸಹಕರಿಸುತ್ತಾರೆ. ಚುನಾವಣಾ ಸಂದರ್ಭದಲ್ಲಿ ಊಹಾಪೋಹಗಳು ಸಾಮಾನ್ಯ. ಬಿಜೆಪಿ ವಿಜಯಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಅವರನ್ನು ಸಂಪರ್ಕಿಸಿದಾಗ ಹುಷಾರಿಲ್ಲ , ನೀವೆ ಮಾಡಿ ಅಂತ ಹೇಳಿದ್ದರು ಎಂದು ಹೇಳಿದರು.
ಎನ್ ಮಹೇಶ್ ವಿರುದ್ಧ ಕೂಗಿದ ಕಾರ್ಯಕರ್ತ
ಇನ್ನು ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಬಿಜೆಪಿ ಜನಸಂಕಲ್ಪ ಯಾತ್ರೆಯಲ್ಲಿ ಕೊಳ್ಳೇಗಾಲ ಬಿಜೆಪಿ ಶಾಸಕ ಎನ್ ಮಹೇಶ್ ವಿರುದ್ಧ ಕಾರ್ಯಕರ್ತನೊಬ್ಬ ಕೂಗಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೊಳ್ಳೇಗಾಲದಲ್ಲಿ ನಡೆದ ವಿಜಯಸಂಕಲ್ಪ ಯಾತ್ರೆ ಸಮಾವೇಶದಲ್ಲಿ ಶಾಸಕರ ವಿರುದ್ಧವೇ ಕೂಗಿದ ಕಾರ್ಯಕರ್ತ, ಶಾಸಕ ಎನ್.ಮಹೇಶ್ ಏನೂ ಕೆಲಸ ಮಾಡಿಲ್ಲ. ಎಲ್ಲಾ ಮೋಸ, ಕಪಟ. ಯಾವ ಕೆಲಸವೂ ಮಾಡಿಲ್ಲ, ಈತ ನಾಟಕಕಾರ, ಅನ್ ಫಿಟ್ ಟು ಎಂಎಲ್ಎ ಎಂದು ಘೋಷಣೆ ಕೂಗಿದ್ದಾನೆ.
ಕಾರ್ಯಕರ್ತನ ಈ ಕೂಗು ಶಾಸಕ ಎನ್ ಮಹೇಶ್ ಅವರಿಗೆ ತೀವ್ರ ಮುಖಭಂಗವನ್ನುಂಟು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ