ಬೆಂಗಳೂರು: ಪುತ್ರ ಪ್ರಶಾಂತ್ ಮಾಡಾಳ್ (Prashant Madal) ನಿವಾಸದ ಮೇಲೆ ಲೋಕಾಯುಕ್ತ ದಾಳಿ (Lokayukta Raid) ಬೆನ್ನಲ್ಲೆ ಶಾಸಕ ವಿರೂಪಾಕ್ಷಪ್ಪ ಮಾಡಾಳ್ (MLA Virupakshappa Madal) ಕೆಎಸ್‌ಡಿಎಲ್ (ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ) ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಸೂಚನೆ ಮೇರೆಗೆ ಶಾಸಕರು ಕೆಎಸ್‌ಡಿಎಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಮಾಡಾಳ್ ವಿರೂಪಾಕ್ಷಪ್ಪ ಮಗನ ಮೇಲೆ ಲೋಕಾಯುಕ್ತ ದಾಳಿಯ ಕುರಿತು ಸಿಎಂ ಬಸವರಾಜ್ ಬೊಮ್ಮಾಯಿ ಇಂದು ಬೆಳಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಲೋಕಾಯುಕ್ತ ಪುನರ್ ಸ್ಥಾಪನೆ ಮಾಡಿರೋದೇ ಭ್ರಷ್ಟಾಚಾರ ತಡೆಯೋಕೆ. ಈ ಹಿಂದೆ ಲೋಕಾಯುಕ್ತ ಇಲ್ಲದೇ ಕಾಂಗ್ರೆಸ್ ಕಾಲದ ಕೇಸ್ ಗಳು ಮುಚ್ಚಿಹೋಯ್ತು. ಲೋಕಾಯುಕ್ತ ಸರ್ವ ಸ್ವತಂತ್ರವಾಗಿ ಕೆಲಸ ಮಾಡಲಿ. ತಪ್ಪು ಮಾಡಿದವರಿಗೆ ಶಿಕ್ಷೆಯಾಗುವಂತೆ ತನಿಖೆಯಾಗಲಿ ಎಂದು ಹೇಳಿದರು. ಇತ್ತ ಇಂದು ಬಂಧನಕ್ಕೊಳಗಾಗಿದ್ದ ಪ್ರಶಾಂತ್ ಮಾಡಾಳ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಲೋಕಾಯುಕ್ತ ಅಧಿಕಾರಿಗಳು ಪ್ರಶಾಂತ್ ಮಾಡಾಳ್ ಮತ್ತು ಕುಟುಂಬಸ್ಥರ ಬ್ಯಾಂಕ್ ಖಾತೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಇಂದು ಅಧಿಕಾರಿಗಳು ಪ್ರಶಾಂತ್ ಮಾಡಾಳ್ ಬ್ಯಾಂಕ್ ಖಾತೆಗಳ ಪರಶೀಲನೆ ನಡೆಸಲಿದ್ದಾರೆ.ಇತ್ತೀಚಿನ ಟ್ರಾನ್ಸಕ್ಷನ್ ಎಷ್ಟಿದೆ? ಯಾವ ಯಾವ ಖಾತೆಗಳಿಂದ ಹಣ ಬಂದಿದೆ. ಪ್ರಶಾಂತ್ ಮಾಡಾಳ್ ಸಂಬಳ ಹೊರತುಪಡಿಸಿ ಇತರ ಮೂಲಗಳಿಂದ ಹಣ ಸಂದಾಯವಾಗಿದೆಯಾ ಎಂದು ಪರಿಶೀಲನೆ ನಡೆಸಲಿದ್ದಾರೆ.
ಐಟಿ, ಇಡಿ ಆತಂಕ
ಪ್ರಶಾಂತ್ ಮಾಡಾಳ್ ಕಚೇರಿ ಮತ್ತು ಮನೆಯಲ್ಲಿ ಎಂಟು ಕೋಟಿಗೂ ಅಧಿಕ ನಗದು ಪತ್ತೆಯಾಗಿದೆ. ಈ ಹಿನ್ನೆಲೆ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಂಡಿದೆ ಎನ್ನಲಾಗಿದೆ. ಶೀಘ್ರದಲ್ಲಿಯೇ ಎರಡು ಇಲಾಖೆಗಳು ಪ್ರಕರಣ ದಾಖಲಿಸಿಕೊಳ್ಳುವ ಸಾಧ್ಯತೆಗಳಿವೆ.
ಶಾಸಕರಿಗೂ ನೋಟಿಸ್ ಸಾಧ್ಯತೆ
ಇನ್ನು ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರಿಗೂ ಲೋಕಾಯುಕ್ತ ನೋಟಿಸ್ ನೀಡುವ ಸಾಧ್ಯತೆಗಳಿವೆ. ಮಗನ ಜೊತೆ ಯಾವೆಲ್ಲಾ ವ್ಯವಹಾರ ನಡೆದಿದೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಲು ವಿಚಾರಣೆಗೆ ಕರೆಸಬಹುದು. ಈ ಸಂಬಂಧ ಅಧಿಕಾರಿಗಳು ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.
ಯಾರು ಈ ಮಾಡಾಳ್ ಪ್ರಶಾಂತ್?
ಮಾಡಾಳು ಪ್ರಶಾಂತ್ ದಾವಣಗೆರೆ ಜಿಲ್ಲೆಯ ಚನ್ನಗಿರಿ ವಿಧಾನಸಭಾ ಕ್ಷೇತ್ರದ ಶಾಸಕ, ಬಿಜೆಪಿ ನಾಯಕ ಮಾಡಾಳು ವಿರೂಪಾಕ್ಷಪ್ಪ ಅವರ ಪುತ್ರ. ವೃತ್ತಿಯಲ್ಲಿ ಬೆಂಗಳೂರು ಜಲಮಂಡಳಿಯ ಚೀಫ್ ಅಕೌಂಟೆಂಟ್ ಆಗಿದ್ದಾನೆ.
80 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಮಾಡಾಳು ಪ್ರಶಾಂತ್
ಮಾಡಾಳು ಪ್ರಶಾಂತ್ ಬರೋಬ್ಬರಿ 80 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಎನ್ನಲಾಗಿದೆ. ಈ ಪೈಕಿ ಬರೋಬ್ಬರಿ 40 ಲಕ್ಷ ಹಣದೊಂದಿಗೆ ಮಾಡಾಳು ಪ್ರಶಾಂತ್ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಇದನ್ನೂ ಓದಿ: BBMP Budget-2023: 11,158 ಕೋಟಿ ರೂಪಾಯಿ ಗಾತ್ರದ 'ಬೃಹತ್' ಬಜೆಟ್, ಯಾವುದಕ್ಕೆ ಎಷ್ಟು ಅನುದಾನ?
ಮಾಡಾಳ್ ಪ್ರಶಾಂತ್ ಲಂಚ ಕೇಳಿದ್ದು ಯಾಕೆ?
BWSSBಯಲ್ಲಿ ಚೀಫ್ ಅಕೌಂಟೆಂಟ್ ಆಗಿರುವ ಮಾಡಾಳು ಪ್ರಶಾಂತ್ ಕಚ್ಚಾ ವಸ್ತುಗಳ ಖರೀದಿ ಟೆಂಡರ್‌ಗಾಗಿ ಕೆಎಸ್‌ಡಿಎಲ್ ಅಧ್ಯಕ್ಷರ ಪರವಾಗಿ ಬರೋಬ್ಬರಿ 80 ಲಕ್ಷ ರೂಪಾಯಿ ಹಣ ಕೇಳಿದ್ದ ಎನ್ನಲಾಗಿದೆ. ಈ ವೇಳೆ 40 ಲಕ್ಷ ಹಣ ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಎಸ್‌ಪಿ ಅಶೋಕ್, ಇನ್ಸ್‌ಪೆಕ್ಟರ್ ಕುಮಾರ ಸ್ವಾಮಿ ನೇತೃತ್ವದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ