ಅರಸೀಕೆರೆ ಜೆಡಿಎಸ್ (JDS) ಶಾಸಕ ಕೆ.ಎಂ.ಶಿವಲಿಂಗೇಗೌಡ (JDS KM Shivalingegowda) ಪಕ್ಷ ತೊರೆಯುವ ವದಂತಿ ರಾಜ್ಯ ರಾಜಕಾರಣದಲ್ಲಿ (Karnataka politics) ಸಂಚಲನ ಸೃಷ್ಟಿಸಿದೆ. ಭಾನುವಾರ ಜೆಡಿಎಸ್ ವಾಟ್ಸಪ್ ಗ್ರೂಪ್ (JDS Whatsapp Group) ಗಳಿಂದ ಹೊರ ಬಂದ ಹಿನ್ನೆಲೆ ಪಕ್ಷ ತೊರೆಯುವ ಚರ್ಚೆಗಳು ಮುನ್ನಲೆಗೆ ಬಂದಿದ್ದವು. ಇಂದು ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಗೇಶಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಶಿವಲಿಂಗೇಗೌಡರು, ಪರೋಕ್ಷವಾಗಿ ಪಕ್ಷ ತೊರೆಯುವ ಸುಳಿವು ನೀಡಿದರು. ಇದೇ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (Former CM BS Yediyurappa) ಅವರ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ (NR Santosh) ಹೆಸರು ಹೇಳದೆ ವಾಗ್ದಾಳಿ ನಡೆಸಿದರು.
ಹೆಚ್ಚು ಜನ ಸೇರಿಸಿದ್ದೀರಿ. ಇಂತಹ ಸಂದರ್ಭದಲ್ಲಿ ನಾಲ್ಕು ಮಾತುಗಳನ್ನು ಆಡದೇ ಹೋದರೆ ತಪ್ಪಾಗುತ್ತದೆ. ಇಂದಿನ ರಾಜಕಾರಣದ ಸನ್ನಿವೇಶ ಪ್ರಸ್ತಾಪ ಮಾಡಲು ಹೋಗಲ್ಲ ಎಂದರು. ಈ ವೇಳೆ ಕಾರ್ಯಕ್ರಮದಿಂದ ಕೆಲವರು ಹೊರಡುತ್ತಿದ್ದಂತೆ ಕೋಪಗೊಂಡ ಶಿವಲಿಂಗೇಗೌಡರು, ಏಯ್ ಯಾರಿ ಅವರು, ಯಾಕೆ ತೆರೆಮರೆಗೆ ಹೋಗುತ್ತಿದ್ದೀರಾ? ಮಾತನಾಡಲು ಡಿಸ್ಟರ್ಬ್ ಆಗುತ್ತೆ, ಇಲ್ಲಾ ದೂರಕ್ಕೆ ಹೋಗಬೇಕು ಎಂದು ಹೇಳಿದರು.
ಹಿಂಸೆ ಎಂದು ಭಾವಿಸಲ್ಲ, ಪ್ರೀತಿ ಅಂದುಕೊಳ್ತಿನಿ.
ಅವರು ನಮ್ಮವರೇ, ಅಲ್ಲಿಂದ ಮಾತಾಡಿಕೊಂಡು ಇಲ್ಲಿಗೆ ಬಂದರು. ನಾನು ಇದನ್ನು ಮೊದಲಿನಿಂದಲೂ ಗಮನಿಸುತ್ತಿದ್ದೇನೆ. ನಾನು ಅರಸೀಕೆರೆ ಕ್ಷೇತ್ರದ ಶಾಸಕರಾಗುವ ಮುಂಚೆ ಯಾವ ಕಾರ್ಯಕ್ರಮ ನಡೆದಿದ್ದವು? ಇವತ್ತು ನಾನೇನು ಮಾಡಿದ್ದೇನೆ ಅನ್ನೋದನ್ನು ಕಾರ್ಯಕರ್ತರು ಹೇಳಬೇಕು. ನೀವು ಕಾರ್ಯಕರ್ತರು, ಮುಖಂಡರು ನಿಲ್ಲಬೇಕು. ನನ್ನ ಬಳಿ ಬಂದು ಗಂಟೆಗಟ್ಟಲೆ ಕುಳಿತು ಕೆಲಸ ಮಾಡಿಸಿಕೊಂಡಿಸಿದ್ದೀರಿ. ಅದನ್ನು ನಾನು ಹಿಂಸೆ ಎಂದು ಭಾವಿಸಲ್ಲ, ಪ್ರೀತಿ ಅಂದುಕೊಳ್ತಿನಿ. ನಾನೇನು ಮಾಡಿದ್ದೀನಿ ಅಂತ ಕೇಳುವವರಿಗೆ ನೀವು ಉತ್ತರ ಹೇಳಿ ಎಂದರು.
ಇದನ್ನೂ ಓದಿ: Siddaramaiah: ಪಾಪದ ಹಣದಲ್ಲಿ ಆಪರೇಷನ್ ಕಮಲ; ಜೆಡಿಎಸ್ಗೆ ನನ್ನನ್ನು ಕಂಡ್ರೆ ಭಯ- ಸಿದ್ದರಾಮಯ್ಯ
ನನಗೆ ರಾಜಕೀಯವಾಗಿ ಶಕ್ತಿ ತುಂಬಿ
ಅರಸೀಕೆರೆ ಪಿಪಿ ಸರ್ಕಲ್‌ನವರಿಗೆ ನೀವು ನಿಂತು ಉತ್ತರ ಹೇಳಬೇಕು. ಹೇಮಾವತಿ ನದಿಯಿಂದ ಕುಡಿಯುವ ನೀರು, ಎತ್ತಿನಹೊಳೆ ಯೋಜನೆಯನ್ನು ಅರಸೀಕೆರೆ ವಿಧಾನಸಭಾ ಕ್ಷೇತ್ರಕ್ಕೆ ತಂದಿದ್ದೇನೆ. ಅದಕ್ಕಾಗಿ ನನಗೆ ರಾಜಕೀಯವಾಗಿ ಶಕ್ತಿ ತುಂಬಿ ಎಂದು ಮನವಿ ಮಾಡಿಕೊಂಡರು.
ನನ್ನ ರಾಜಕಾರಣದಲ್ಲಿ ಅರಸೀಕೆರೆ ತಾಲೂಕಿನ ಎಲ್ಲಾ ಕೆರೆಕಟ್ಟೆಗಳು ತುಂಬಿ ಕೋಡಿ ಬೀಳಬೇಕು ಎನ್ನುವ ಆಸೆಯಿದೆ. ಅದನ್ನು ಮಾಡಲು ಹೆಚ್ಚಿನ ರೀತಿಯ ಸಹಕಾರ ಕೊಡಬೇಕು ಎಂದು ಕೇಳಿಕೊಂಡರು.
ಮೆರವಣಿಗೆ ಮಾಡಿ ಶಪಥ ಮಾಡಿದೆ
ಸುಮಾರು 40 ಲಕ್ಷ ತೆಂಗಿನಮರಗಳು ರೋಗದಿಂದ ನಾಶವಾಗಿದ್ದಾಗ ಇದಕ್ಕೆ ಪರಿಹಾರ ಕೊಡಬೇಕು ಅಂತ ನಾನು ಹನ್ನೊಂದು ದಿನ ಗಿಜಿಹಳ್ಳಿಯಲ್ಲಿ ಪ್ರತಿಭಟನೆ ಮಾಡುತ್ತ ಮಲಗಿದ್ದೆ. ಅವತ್ತು ನನ್ನನ್ನು ಮಾತನಾಡಿಸಲು ಯಾರೂ ಬರಲಿಲ್ಲ. ನಂತರ ನಾನೇ ಎದ್ದು ಹೋಗಿ ಅರಸೀಕೆರೆಯಲ್ಲಿ ಪ್ರತಿಭಟನಾ ಮೆರವಣಿಗೆ ಮಾಡಿ ಶಪಥ ಮಾಡಿದೆ.
ದೇವೇಗೌಡರಿಗೆ ಮಿಸ್‌ಗೈಡ್ ಮಾಡಿದ್ರು
ಆಗ ಅಲ್ಲಿಗೆ ರೇವಣ್ಣ ಅವರು ಬಂದರು. ನಂತರ ಹಾಸನದಲ್ಲಿ ನಡೆದ ಸಭೆ ವೇಳೆ ರಾಜಕಾರಣದ ಹಿನ್ನೆಲೆಯಲ್ಲಿ ನಮ್ಮ ಪೂಜ್ಯರಾದ ದೇವೇಗೌಡರಿಗೆ ಮಿಸ್‌ಗೈಡ್ ಮಾಡಿದ್ರು. ನಾನು ಪ್ರತಿಭಟನೆ ಮಾಡುತ್ತ ಮಲಗಿರುತ್ತೇನೆ. ನೀವು ಬಂದು ಮೇಲೆ ಏಳಿಸಿಕೊಂಡು ಬನ್ನಿ ಎಂದು ನಾನು ನಾಟಕವಾಡಿದ ಎಂಬ ಪದವನ್ನು ನನ್ನ ಮೇಲೆ ಪ್ರಯೋಗ ಮಾಡಿದ್ದಾರೆ. ಯಾವ ತಪ್ಪು ಗ್ರಹಿಕೆಯಿಂದ ಅವರು ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ ಎಂದು ಬೇಸರ ಹೊರ ಹಾಕಿದರು.
50 ಕೋಟಿ ಹಣ ರೈತರ ಮನೆ ಮನೆಗೆ ಹೋಗುತ್ತಿತ್ತಾ
ಯಾರ ಬಗ್ಗೆಯೂ ನಾನು ಮಾತನಾಡಲು ಹೋಗಲ್ಲ. ಒಂದು ವೇಳೆ ನಾನು ನಾಟಕ ಮಾಡಿದ್ದರೆ 50 ಕೋಟಿ ಹಣ ರೈತರ ಮನೆ ಮನೆಗೆ ಹೋಗುತ್ತಿತ್ತಾ ಎಂದು ಪ್ರಶ್ನೆ ಮಾಡಿದರು.
ದುಷ್ಕೃತ್ಯ, ಹೇಯ್ಯ ಕೃತ್ಯಕ್ಕೆ ಕೈ ಹಾಕಲ್ಲ
ರಾಜ್ಯಸಭೆ ಚುನಾವಣೆ ವೇಳೆ ದುಡ್ಡು ತೆಗೆದುಕೊಂಡು ಶಿವಲಿಂಗೇಗೌಡ ಬೇರೆ ಪಕ್ಷಕ್ಕೆ ವೋಟ್ ಹಾಕುತ್ತಾನೆ ಅಂತ ಬಹಳ ಜನ ಕಾಯುತ್ತಿದ್ದರು.ದುಡ್ಡಿಗೋಸ್ಕರ ಶಿವಲಿಂಗೇಗೌಡ ಮಾರಾಟ ಆಗ್ತಾನೆ ಅಂತ ತಿಳಿದಿದ್ದರು. ನಿಮ್ಮೆಲ್ಲರ ಆಶೀರ್ವಾದದಿಂದ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿ ಅಂತ ದುಷ್ಕೃತ್ಯ, ಹೇಯ್ಯ ಕೃತ್ಯಕ್ಕೆ ಕೈ ಹಾಕುವುದಿಲ್ಲ ಎಂದು ತಮ್ಮ ವಿರುದ್ಧ ಕೇಳಿ ಬಂದ ಆರೋಪಗಳಿಗೆ ತಿರುಗೇಟು ನೀಡಿದರು.
ಜನತೆಗೆ ದ್ರೋಹ ಮಾಡುವ ಕೆಲಸ ಮಾಡಲ್ಲ
ನನ್ನ ಮತ್ತು ಕುಮಾರಸ್ವಾಮಿ ಮಧ್ಯೆ ಅನೇಕ ಭಿನ್ನಾಭಿಪ್ರಾಯಗಳು ಇರುವುದು ನಿಜ. ಆದರೆ ಅವರು ಕೊಟ್ಟಿರುವ ಬಿಫಾರಂ ಋಣ 2023 ರವರೆಗೆ ಇದೆ. ಅಲ್ಲಿಯವರೆಗೂ ಕಾಯುತ್ತೇನೆ, ಆನಂತರ ಮೂರು ಬಾರಿ ಶಾಸಕನನ್ನಾಗಿ ಮಾಡಿರುವ ಈ ನನ್ನ ಕ್ಷೇತ್ರದ ಜನರ ಬಳಿ ಬರುತ್ತೇನೆ. ಈ ಜನ ಏನು ಹೇಳುತ್ತಾರೆ, ಆ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಹೊರತು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿ ನನ್ನ ಜನತೆಗೆ ದ್ರೋಹ ಮಾಡುವ ಕೆಲಸ ಮಾಡಲ್ಲ ಅಂತ ಹೇಳಿದರು.
ಇದನ್ನೂ ಓದಿ: H Vishwanatah: ಅಕ್ಷರ ವಿಚಾರದಲ್ಲಿ ಸರ್ಕಾರ ಹಠ ಮಾಡೋದು ಬೇಡ; ಬಾಂಬೆ ಡೇಸ್ ಹೆಸರು ಬದಲಿಸಿದ್ರು ಹೆಚ್ ವಿಶ್ವನಾಥ್
ಚುನಾವಣೆಗೆ ನಿಲ್ಲು ಅಂದರೆ ನಿಲ್ಲುತ್ತೇನೆ
ನಾನು ಪ್ರಾಮಾಣಿಕವಾದಂತಹ ಹೋರಾಟ ಮಾಡುತ್ತೇನೆ. ನಿಮ್ಮಗಳ ನಿರ್ಧಾರವೇ ನನ್ನ ನಿರ್ಧಾರ ಎಂದು ವಾಗ್ದಾನ ನೀಡಿದರು. ನೀವು ಮನೆಗೆ ಹೋಗು ಅಂದರೆ ಹೋಗುತ್ತೇನೆ, ಚುನಾವಣೆಗೆ ನಿಲ್ಲು ಅಂದರೆ ನಿಲ್ಲುತ್ತೇನೆ. ನೀವು ಕೊಡುವ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ನಾನು ಯಾವತ್ತು ರಾಜಕಾರಣದಲ್ಲಿ ತಪ್ಪು ಹೆಜ್ಜೆ ಇಡುವ ಸಂಸ್ಕೃತಿ ಹೊಂದಿಲ್ಲ.
530 ಹಳ್ಳಿಗಳಲ್ಲಿ ಸುಮಾರು 700 ರಿಂದ 800 ದೇವಾಲಯ ನಿರ್ಮಾಣ
ನಾನು ರಾಜಕಾರಣದಲ್ಲಿ ಇರುವವರೆಗೂ ಪ್ರಾಮಾಣಿಕವಾದ ಹೋರಾಟ ಮಾಡುತ್ತೇನೆ. ನಿಮ್ಮ ಆಶೀರ್ವಾದ ಇರುವವರೆಗೂ ಹೆದರುವ ಸನ್ನಿವೇಶ ಇಲ್ಲ. ನಿಮ್ಮ ಗೌರವ, ಆತ್ಮಸಾಕ್ಷಿ ಮರೆತು, ನನ್ನ ಆತ್ಮಸಾಕ್ಷಿಗೆ ವಿರುದ್ಧವಾಗಿ ನಾನೆಂದು ರಾಜಕಾರಣ ಮಾಡಲ್ಲ. ಕೆಲವರು ಸೋಗಲಾಡಿತನದಲ್ಲಿ ಬರ್ತಾರೆ, ಏನೇನು ಹೇಳಿಕೆ ಕೊಡುತ್ತಿದ್ದಾರೆ. ನಾನು ಶಾಸಕನಾದ ಮೇಲೆ 530 ಹಳ್ಳಿಗಳಲ್ಲಿ ಸುಮಾರು 700 ರಿಂದ 800 ದೇವಾಲಯಗಳನ್ನು ನಿರ್ಮಾಣ ಮಾಡಿರುವ ಹೆಗ್ಗಳಿಕೆ ನನಗಿದೆ. ನನ್ನ ಸಹಕಾರದಿಂದ ನಿರ್ಮಾಣವಾಗಿರುವ ದೇವಾಲಯಗಳ ದೊಡ್ಡ ಬುಕ್‌ನ್ನು ಜನತೆ ಮುಂದೆ ಇಡುತ್ತೇನೆ.
ಅದ್ಯಾಕೆ ಇಲ್ಲಿಗೆ ಬರ್ತಾರೆ ನನಗೆ ಗೊತ್ತಿಲ್ಲ
ಇನ್ಯಾರೋ ಏನೇನೋ ಹೇಳಿಕೊಂಡು ಬರ್ತಾರೆ, ಅವರಿಗೆಲ್ಲಾ ಮರುಳಾಗಬೇಡಿ. ನಾವು ದೈವ ಭಕ್ತರು, ದೈವ ಸಂಸ್ಕೃತರು, ಭಾರತದ ಇತಿಹಾಸವನ್ನು ಹೊಂದಿರುವವರು ಎನ್ನುತ್ತಾರೆ. ನಾನೆಂದು ಆ ದೈವ ಭಕ್ತಿಗೆ, ಧರ್ಮ ಭಕ್ತಿಗೆ, ಧಾರ್ಮಿಕತೆಗೆ ದ್ರೋಹ ಮಾಡುವಂತಹ ಯಾವುದೇ ಕೆಲಸಗಳನ್ನು ಮಾಡುವುದಿಲ್ಲ. ಅವರೆಲ್ಲಾ ಆ ಕೆಲಸವನ್ನು ಮಾಡಿ ಇಲ್ಲಿಗೆ ಬರ್ತಾರೆ. ಬಹಳ ಜನ ಮೂರ್ನಾಲ್ಕು ಬಾರಿ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಅಂಥ ಪಿತೂರಿಯನ್ನು ನಡೆಸಿಕೊಂಡು ಬಂದಿದ್ದಾರೆ. ಬೆಂಗಳೂರಿಂದ ಬರ್ತಾರೆ, ಅದ್ಯಾಕೆ ಬರ್ತಾರೆ ನನಗೆ ಗೊತ್ತಿಲ್ಲ ಎಂದು ಸಂತೋಷ್ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ