• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • GT Devegowda: ನೀವ್ಯಾಕೆ ಶಕುನಿ ಮಾತು ಕೇಳುತ್ತೀರಾ: ಎಚ್​ಡಿಕೆಗೆ ಜಿ.ಟಿ. ದೇವೇಗೌಡ ಟಾಂಗ್

GT Devegowda: ನೀವ್ಯಾಕೆ ಶಕುನಿ ಮಾತು ಕೇಳುತ್ತೀರಾ: ಎಚ್​ಡಿಕೆಗೆ ಜಿ.ಟಿ. ದೇವೇಗೌಡ ಟಾಂಗ್

ಜಿ.ಟಿ.ದೇವೇಗೌಡ

ಜಿ.ಟಿ.ದೇವೇಗೌಡ

ಕುಮಾರಸ್ವಾಮಿ ಅವರು ಜಿ.ಟಿ. ದೇವೇಗೌಡರ ಬೇರು ತೆಗೆಯುತ್ತಿಲ್ಲ ಬದಲಿಗೆ ಜೆಡಿಎಸ್ ಬೇರುಗಳನ್ನು ಬುಡಸಮೇತ ತೆಗೆಯುತ್ತಿದ್ದಾರೆ

  • Share this:

ಮೈಸೂರು (ಮಾ. 15):  ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ವಿರುದ್ಧ ಪ್ರತಿಕ್ರಿಯಿಸಿರುವ ಜಿಟಿ ದೇವೇಗೌಡ ಅವರು, ಎಚ್​ಡಿಕೆ ಯಾಕೆ ಶಕುನಿ ಮಾತು ಕೇಳುತ್ತಿದ್ದಾರೆ. ಶಕನಿಯ ಮಾತು ಕೇಳಿ ನನ್ನನ್ನು ಯಾಕೆ ಅಪಮಾನ ಮಾಡುತ್ತಿದ್ದೀರಾ. ನಾನು ಜೆಡಿಎಸ್​ನಲ್ಲಿಯೇ ಇದ್ದೇನೆ ಎಲ್ಲಿಗೂ ಹೋಗಿಲ್ಲ ಎಂದು ಸಮಾಜಾಯಿಷಿ ನೀಡಿದ್ದಾರೆ.  ಮಾಜಿ ಸಚಿವ, ಸ್ವಪಕ್ಷದ ಶಾಸಕ ಸಾ.ರಾ.ಮಹೇಶ್ ಅವರನ್ನು ಶಕುನಿಗೆ ಹೋಲಿಸಿ ಮಾತನಾಡಿದ ಅವರು, ಮಹಾಭಾರತದಲ್ಲಿ ದಶರಥ ಕೈಕೇಯಿ, ಮಂಥರೆ, ರಾಮನನ್ನು ಕಾಡಿಗೆ ಅಟ್ಟಿದ. ಶಕುನಿ ಮಾತು ಕೇಳಿಕೊಂಡು ಕೌರವರ ವಂಶ ನಾಶ ಆಯ್ತು. ಅದೇ ಥರ ಕುಮಾರಸ್ವಾಮಿ ಅವರೇ ನೀವ್ಯಾಕೆ ಶಕುನಿ ಮಾತು ಕೇಳುತ್ತೀರಿ ? ಎಂದು ತಿರುಗೇಟು ನೀಡಿದ್ದಾರೆ.


ನಾನು ಪಕ್ಷ ಬಿಡುತ್ತೇನೆ ಎಂದು ಎಲ್ಲಿಯೂ ಹೇಳಿಲ್ಲ. ಸಾ.ರಾ.ಮಹೇಶ್ ಛತ್ರಕ್ಕೆ ಬಂದು  ಜೆಡಿಎಸ್‌ನಿಂದ ನಿಮ್ಮನ್ನು ಹೊರಗೆ ಹಾಕುತ್ತೇವೆ ಎಂದು ಅವರೇ ಹೇಳಿದರು, ಪದೇ ಪದೇ ನನ್ನನ್ನು ಯಾಕೆ ಅವಮಾನ ಮಾಡುತ್ತೀರಿ.  ನಾನು ಈಗಲೂ ಜೆಡಿಎಸ್‌ನಲ್ಲೇ ಇದ್ದೇನೆ ವಿಧಾನಸಭೆಯಲ್ಲಿ ಜೆಡಿಎಸ್ ಶಾಸಕರ ಸಾಲಿನಲ್ಲೇ ನನಗೆ ಖುರ್ಚಿ ಇದೆ. ನಾನು ಈಗಲೂ ಜೆಡಿಎಸ್ ಶಾಸಕರ ಜೊತೆಯಲ್ಲೇ ಕುಳಿತುಕೊಳ್ಳುತ್ತಿದ್ದೇನೆ. ನಾನು ಎಲ್ಲಿಗೂ ಹೋಗದಂತೆ ಜೆಡಿಎಸ್‌ನಲ್ಲಿ ಕೂಡಿಹಾಕಿ ಬೀಗ ಹಾಕಲಾಗಿದೆ. ಇಷ್ಟಾದರೂ ಕುಮಾರಸ್ವಾಮಿ ಅವರು ಯಾರ್ಯಾರದ್ದೋ ಮಾತು ಕೇಳಿಕೊಂಡು ನನ್ನ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಬಹಿರಂಗವಾಗಿ ಹೆಚ್‌ಡಿಕೆ ವಿರುದ್ದ ವಾಗ್ದಾಳಿ ಮಾಡಿದರು.


ಹೆಚ್.ಡಿ.ಕೋಟೆಯಲ್ಲಿ ಮೈಮುಲ್ ಪ್ರಚಾರದ ವೇಳೆ  ಮೈಸೂರು ಹೈಕಮಾಂಡ್ ನನ್ನ ವಿರುದ್ಧ ಮಾತನಾಡಿದ್ದಾರೆ. ಜಿ.ಟಿ.ದೇವೇಗೌಡ ಎನ್ನುವ ಆಲದ ಮರವನ್ನು ಬುಡಸಮೇತ ಕಿತ್ತುಹಾಕಿ ಹೊಸ ಗಿಡ ನೆಡುತ್ತೇವೆ ಎಂದು ಹೇಳಿದ್ದಾರೆ. ಅವರ ಮಾತು ಕೇಳಿಕೊಂಡು ಕುಮಾರಸ್ವಾಮಿ ಕೂಡ ನನ್ನ ವಿರುದ್ಧ ಮಾತನಾಡಿದ್ದಾರೆ.  ನಾನು ಯಾವತ್ತೂ ಅಧಿಕಾರಕ್ಕೆ ಆಸೆ ಪಟ್ಟಿಲ್ಲ ನಾನು ಮನಸ್ಸು ಮಾಡಿದ್ದಾರೆ ಶಾಶ್ವತವಾಗಿ ಮೈಮುಲ್ ಅಧ್ಯಕ್ಷನಾಗಿರುತ್ತಿದ್ದೆ.  ಯಾವ ಕಾಲದಲ್ಲೋ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗುತ್ತಿದ್ದೆ.  ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಿದಾಗ ಕುಮಾರಸ್ವಾಮಿ ಸಹಕಾರ ಕೊಡಲಿಲ್ಲ, ಸಾ.ರಾ.ಮಹೇಶ್ ಮಾತು ಕೇಳಿಕೊಂಡು ಪ್ರತಿಸ್ಪರ್ಧಿ ಚಂದ್ರಶೇಖರ್ ಪರವಾಗಿ ಮತಯಾಚನೆ ಮಾಡಿದರು.  ಜನರ ಆಶೀರ್ವಾದದಿಂದ ನನ್ನ ಮಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆಗಿದ್ದಾನೆ. ಜನ ಯಾರ ಪರವಾಗಿದ್ದಾರೆ ಎಂಬುದನ್ನು ಮೈಮುಲ್ ಚುನಾವಣೆ ಫಲಿತಾಂಶ ನಿರ್ಣಯ ಮಾಡಲಿದೆ ಎಂದು ಸಾ.ರಾ.ಮಹೇಶ್ ಹಾಗೂ ಹೆಚ್‌ಡಿಕೆ ಇಬ್ಬರಿಗು ತಿರುಗೇಟು ನೀಡಿದರು.


ಕುಮಾರಸ್ವಾಮಿ ಅವರು ಜಿ.ಟಿ. ದೇವೇಗೌಡರ ಬೇರು ತೆಗೆಯುತ್ತಿಲ್ಲ ಬದಲಿಗೆ ಜೆಡಿಎಸ್ ಬೇರುಗಳನ್ನು ಬುಡಸಮೇತ ತೆಗೆಯುತ್ತಿದ್ದಾರೆ ಎಂದು ಟೀಕಿಸಿದರು.


ಇದನ್ನು ಓದಿ: ಸಂಪರ್ಕಕ್ಕೆ ಸಿಕ್ಕಿಲ್ಲ ಸಂತ್ರಸ್ತೆ; ಎಸ್​ಐಟಿಯಿಂದ ನಿರಂತರ ಶೋಧ; ಆಯುಕ್ತ ಕಮಲ್​ಪಂತ್


ಮೈಮುಲ್ ಚುನಾವಣೆಯನ್ನು ನಾನು ಪ್ರತಿಷ್ಠೆಯಾಗಿ ತೆಗೆದುಕೊಂಡಿಲ್ಲ.  ಊರೂರಿಗೆ ಹೋಗಿ ಪ್ರಚಾರವನ್ನೂ ಮಾಡದೆ ಮನೆಯಲ್ಲಿ ಕುಳಿತಿದ್ದೇನೆ. ನೀವು ಮಾತ್ರ ತಾಲೂಕುಗಳನ್ನು ಸುತ್ತುತ್ತಿದ್ದೀರಿ.  ನನ್ನನ್ನು ನಾನು ಎಲ್ಲಿಯೂ ಆಲದಮರ ಅಂತ ಕರೆದುಕೊಂಡಿಲ್ಲ, ಆದರೆ ನನ್ನ ವಿರುದ್ಧ ನೀವು ತಾಲೂಕುಗಳಿಗೆ ಹೋಗಿ ಮಾತನಾಡಿದ್ದೀರಿ ಹಾಗಾದರೆ ಆಲದಮರ ಯಾರು?  ಪಿರಿಯಾಪಟ್ಟಣದಲ್ಲಿ ಶಾಸಕ ಮಹದೇವು ಸಂಕಷ್ಟ ಕಾಲದಲ್ಲೂ ಜೆಡಿಎಸ್‌ನಲ್ಲೇ ಉಳಿದುಕೊಂಡರು ಈಗ ನೋಡಿದರೆ ಅವರ ಮಗನ ವಿರುದ್ಧ ನೀವು ಪ್ರಚಾರ ಮಾಡಿದ್ದೀರಿ. ಜೆಡಿಎಸ್ ಬದಲು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದೀರಿ, ಕಾಂಗ್ರೆಸ್ ಮಾಜಿ ಶಾಸಕ ವೆಂಕಟೇಶ್ ಜತೆಗೆ ಮಾತನಾಡಿಕೊಂಡು ಅವರ ಪರವಾಗಿ ಪ್ರಚಾರಕ್ಕೆ ಬಂದಿದ್ದೀರಿ ಇದು ಸರೀಯೆ ಎಂದು  ಪ್ರಶ್ನಿಸಿದರು.


ಮೈಸೂರು ಜೆಡಿಎಸ್‌ನಲ್ಲಿ ಜಿಟಿಡಿ ವರ್ಸಸ್ ಸಾ.ರಾ.ಮಹೇಶ್ ಎನ್ನುವ ರೀತಿ ಆಗಿದ್ದು, ಮೈಮುಲ್ ಚುನಾವಣೆ ಇಬ್ಬರಿಗು ಪ್ರತಿಷ್ಠೆಯಾಗಿದೆ. ನಾಳೆ ಬೆಳಗ್ಗೆ ನಡೆಯಲಿರುವ ಚುನಾವಣೆಯಲ್ಲಿ ಹೆಚ್‌ಡಿಕೆ ಜೆಡಿಎಸ್‌ ಅಭ್ಯರ್ಥಿಗಳ ಪರವಾಗಿ ನಿಂತಿದ್ದರೆ, ಜಿಟಿಡಿ ಬಣ ಮತ್ತೆ ಮೈಮುಲ್ ಅಧಿಕಾರ ಹಿಡಿಯುವ ಹಂಬಲದಲ್ಲಿದೆ. ಈ ಚುನಾವಣೆಯಲ್ಲಿ ಯಾರ ಪ್ರತಿಷ್ಠೆ ಉಳಿಯುತ್ತೆ? ಯಾರ ಪ್ರತಿಷ್ಠೆ ಮಣ್ಣಾಗುತ್ತೆ ಎನ್ನೋದನ್ನ ಕಾದು ನೋಡಬೇಕಿದೆ.

Published by:Seema R
First published: