ಹುಬ್ಬಳ್ಳಿ: ರಾಜ್ಯದಲ್ಲಿ ಸದ್ಯ ಮತದಾರರ ಹೆಸರು ಡಿಲೀಟ್ (Voters Name Delete) ಸುದ್ದಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಧಾರವಾಡ (Dharwad) ಜಿಲ್ಲೆಯಲ್ಲಿಯೂ ಕಳೆದ ಒಂದು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್ ಆಗಿದೆ. ಆದರೆ ಇದನ್ನು ಅಲ್ಲಗಳೆದಿರುವ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ಡಿಲೀಟ್ ಆಗಿದೆ ಎನ್ನೋದು ಶುದ್ಧ ಸುಳ್ಳು ಎಂದಿದ್ದಾರೆ. ಇದೇ ವೇಳೆ ಅವರದೇ ಪಕ್ಷದ ಶಾಸಕ ಅರವಿಂದ್ ಬೆಲ್ಲದ್ (BJP Arvind Bellad) ಧಾರವಾಡ ಜಿಲ್ಲೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗಿರೋದು ಸತ್ಯ. ನನ್ನದೇ ಕ್ಷೇತ್ರದಲ್ಲಿ ಸುಮಾರು 20 ಸಾವಿರ ಮತದಾರರ ಹೆಸರು ಡಿಲೀಟ್ ಆಗಿದೆ. ಆದ್ರೆ ಇದರ ಹಿಂದೆ ಬಿಜೆಪಿ (BJP) ಕೈವಾಡವಿಲ್ಲ ಎಂದಿರೋದು ಚರ್ಚೆಗೆ ಗ್ರಾಸವಾಗಿದೆ.
ಡಿಲೀಟ್ ಆಗಿಲ್ಲ ಎಂದ ಸಿಎಂ
ಮತದಾರರ ಅನಧಿಕೃತ ಸರ್ವೇ, ಅಲ್ಪಸಂಖ್ಯಾತರ ಮತ ಡಿಲೀಟ್ ಅನ್ನೋದು ಎಲ್ಲಾ ಸುಳ್ಳು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈ ಕುರಿತು ಎಲೆಕ್ಷನ್ ಕಮಿಷನ್ ಗಮನ ಹರಿಸಿದೆ. ಚುನಾವಣಾ ಆಯೋಗದ ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಿದ್ದಾರೆ. ದೂರು ಇದ್ದೆಡೆ ಕ್ರಮ ಕೈಗೊಳ್ಳಲು ನಾವೂ ಹೇಳಿದ್ದೇವೆ.
ಅನಧಿಕೃತ ಮತದಾರರನ್ನು ತೆಗೆದು ಹಾಕಲಾಗಿದೆ. ಪರಿಶೀಲನೆ ವೇಳೆ ಮನೆಯಲ್ಲಿ ಇಲ್ಲದವರ ಹೆಸರುಗಳು ಪಟ್ಟಿಯಿಂದ ಕೈಬಿಟ್ಟಿದ್ದು, ಸರಿಪಡಿಸಲಾಗುತ್ತಿದೆ. ಬೆಂಗಳೂರು ಇರಲಿ, ಹುಬ್ಬಳ್ಳಿ ಇರಲಿ ಅನಧಿಕೃತ ಮತದಾರರನ್ನು ತೆಗೆಯಲಾಗಿದೆ. ಅಧಿಕೃತ ಮತದಾರರು ಇದ್ದರೆ ಅದನ್ನು ಸರಿಪಡಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಇದನ್ನೂ ಓದಿ: Karnataka Elections: ಚಾಮುಂಡೇಶ್ವರಿ ಕ್ಷೇತ್ರ ಅಖಾಡಕ್ಕೆ ಇಳಿದ ಮಾಜಿ ಸಿಎಂ ಸಿದ್ದರಾಮಯ್ಯ ಪರಮಾಪ್ತ!
ಡಿಲೀಟ್ ಆಗಿರೋದು ಸತ್ಯ ಎಂದ ಬೆಲ್ಲದ್
ಧಾರವಾಡ ಜಿಲ್ಲೆಯಲ್ಲಿ ಮತದಾರರ ಹೆಸರು ಡಿಲೀಟ್ ಆಗಿರೋದು ಸತ್ಯ. ಆದ್ರೆ ಇದರ ಹಿಂದೆ ನಮ್ಮ ಕೈವಾಡವಿಲ್ಲ ಎಂದು ಹುಬ್ಬಳ್ಳಿ- ಧಾರವಾಡ ಪಶ್ಚಿಮ ಶಾಸಕ ಅರವಿಂದ್ ಬೆಲ್ಲದ್ ತಿಳಿಸಿದ್ದಾರೆ. ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಅವರು, ಪಶ್ಚಿಮ ಕ್ಷೇತ್ರದಲ್ಲಿಯೂ ಮತದಾರರು ಡಿಲೀಟ್ ಆಗಿದ್ದು ನಿಜ ಎಂದಿದ್ದಾರೆ.
ಸುಮಾರು 20 ಸಾವಿರ ಮತದಾರರ ಹೆಸರು ಡಿಲೀಟ್ ಆಗಿವೆ. ಈ ಕುರಿತು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ಸರ್ವೆ ಮಾಡಿಸೋದು ತಪ್ಪಲ್ಲ, ವಿವಿಧ ಮಾಧ್ಯಮಗಳು ಸರ್ವೇ ಮಾಡುತ್ತೆ. ಅದೇ ರೀತಿ ರಾಜಕೀಯ ಪಕ್ಷಗಳು ಮಾಡಿಸುತ್ತವೆ. ಇದಕ್ಕೆ ಅನುಮತಿಯ ಆಗತ್ಯವಿಲ್ಲ.
ನಾವೂ ಬಿಜೆಪಿ ಕಾರ್ಯಕರ್ತರ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಸಿದ್ದೇವೆ. ಖಾಸಗಿ ಏಜೆನ್ಸಿಗಳು ಎಲ್ಲೆಡೆ ಸರ್ವೇ ಮಾಡುತ್ತಿವೆ. ನಮ್ಮ ಪಕ್ಷದಿಂದಲೂ ಸರ್ವೇ ಮಾಡಿ, ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದೇವೆ. ಆ್ಯಪ್ ಮೂಲಕ ಸರ್ವೇ ಮಾಡುತ್ತಿದ್ದೇವೆ, ಮಾಹಿತಿಯನ್ನು ಪಾಲಿಕೆಗೆ ಸಲ್ಲಿಸುತ್ತೇವೆ ಎಂದರು.
ಇದನ್ನೂ ಓದಿ: Siddaramaiah: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಸ್ತ್ರಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು
ಹೊಸ ವೋಟರ್ಗಳನ್ನು ಪಟ್ಟಿಯಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ಚುನಾವಣಾಧಿಕಾರಿಗಳು ಪರಿಶೀಲಿಸಿ ಸೂಕ್ತ ಹೆಸರುಗಳನ್ನು ಸೇರಿಸುತ್ತಾರೆ. ಸೇರ್ಪಡೆ, ತೆಗೆದು ಹಾಕುವುದು ಸಹಜ ಪ್ರಕ್ರಿಯೆ. ಯಾರದಾದರೂ ಹೆಸರು ಕೈಬಿಟ್ಟಿದ್ದರೆ ಮರಳಿ ಸೇರಿಸಲು ಅವಕಾಶವಿದೆ. ಆದರೆ ಕಾಂಗ್ರೆಸ್ನವರು ಇದನ್ನು ರಾಜಕೀಕರಣ ಮಾಡ್ತಿದಾರೆ. ಕಾಂಗ್ರೆಸ್ ಮುಖಂಡರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಬೆಲ್ಲದ್ ತಿಳಿಸಿದ್ದಾರೆ.
ಧ್ವಜ ಹಾರಿಸಿದ ಯುವಕನಿಗೆ ಥಳಿತದ ವಿಚಾರದ ತನಿಖೆ
ಕನ್ನಡ ಧ್ವಜ ಹಾರಿಸಿದ ಯುವಕನಿಗೆ ಪೊಲೀಸರ ಥಳಿತ ವಿಚಾರದ ಕುರಿತು ತನಿಖೆ ಮಾಡಲು ಸೂಚಿಸಿರೋದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ಯಾರೇ ತಪ್ಪು ಮಾಡಿದ್ರೂ ಕ್ರಮ ಕೈಗೊಳ್ಱಳುತ್ತೇವೆ. ಯುವಕನ ಮೇಲೆ ಹಲ್ಲೆ ಮಾಡಿಲ್ಲ ಎಂದು ಪೊಲೀಸರು ಸ್ಪಷ್ಟನೆ ಕೊಟ್ಟಿದ್ದಾರೆ. ಆದರೂ ಈ ಕುರಿತು ತನಿಖೆ ಮಾಡಲು ಸೂಚಿಸಿದ್ದೇನೆ. ಸುಪ್ರೀಂ ಕೋರ್ಟ್ ನಲ್ಲಿ ಕೇಸ್ ಇರೋ ಕಾರಣಕ್ಕೆ ಇದೀಗ ಮಹಾರಾಷ್ಟ್ರದವರು ವಿವಾದ ಮಾಡಿದ್ದಾರೆ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ