Karnataka Legislative Council: ವಿಧಾನ ಪರಿಷತ್ ಉಪಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಎಂಕೆ ಪ್ರಾಣೇಶ್ (MK Pranesh) ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ನಿಂದ ಅರವಿಂದ್ ಅರಳಿ (Arvind Arali) ಸ್ಪರ್ಧೆ ಮಾಡಿದ್ದರು. ಎಂಕೆ ಪ್ರಾಣೇಶ್ ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಕೋಟಾ ಶ್ರೀನಿವಾಸ್ ಪೂಜಾರಿ, ಎಸ್. ರುದ್ರೇಗೌಡ, ತಳವಾರ್ ಸಾಬಣ್ಣ, ಅರುಣ್ ಡಿಎಸ್ ಅವರು ಬಿಜೆಪಿಯಿಂದ ಎಂ.ಕೆ ಪ್ರಾಣೇಶ್ ಹೆಸರು ಉಪಸಭಾಪತಿ ಸ್ಥಾನಕ್ಕೆ ಪ್ರಸ್ತಾಪ ಮಾಡಿದರು. ಉಪಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಅರವಿಂದ ಕುಮಾರ್ ಅರಳಿ ಅವರ ಹೆಸರನ್ನು ಬಿ.ಕೆ. ಹರಿಪಸ್ರಾದ್ (BK Hariprasad) ಪ್ರಸ್ತಾಪ ಮಾಡಿದರು.
ಪ್ರಸ್ತಾವದ ಪರವಾಗಿ 39 ಮತಗಳು ಬಂದಿವೆ. ಪ್ರಸ್ತಾವದ ವಿರೋಧವಾಗಿ 26 ಮತಗಳು ಬಂದವು. ಅಂತಿಮವಾಗಿ ಪ್ರಾಣೇಶ್ ಅವರು ಉಪಸಭಾಪತಿಯಾಗಿ ಆಯ್ಕೆಯಾಗಿದ್ದಾರೆಂದು ಸಭಾಪತಿ ಬಸವರಾಜ್ ಹೊರಟ್ಟಿ ಘೋಷಣೆ ಮಾಡಿದರು.
ಪರಿಷತ್ನಲ್ಲಿ ಪಕ್ಷಗಳ ಬಲಾಬಲ
ಪಕ್ಷ | ಸ್ಥಾನ |
ಬಿಜೆಪಿ | 39 |
ಕಾಂಗ್ರೆಸ್ | 26 |
ಜೆಡಿಎಸ್ | 8 |
ಪಕ್ಷೇತರ | 1 |
ಸಭಾಪತಿ | 1 |
ಒಟ್ಟು | 75 |
ಈ ವೇಳೆ ಮಧ್ಯ ಪ್ರವೇಶ ಮಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಸಭಾಪತಿ ಸ್ಥಾನ ದೊಡ್ಡದು, ಸದನದಲ್ಲಿ ಸಂಪ್ರದಾಯವಿದೆ. ನಿನ್ನೆ ಚುನಾವಣೆ ನಡೆದಿದೆ, ಚ್ಯುತಿ ಬರದಂತೆ ನಡೆದುಕೊಳ್ಳೊಣ ಎಂದು ಹೇಳಿದರು.
ಜಾತಿ ಬಣ್ಣ ಕೊಡಬೇಡಪ್ಪ
ಆಗ ನನಗೆ ಜಾತಿ ಬಣ್ಣ ಕೊಡಬೇಡಪ್ಪ. ನಾನು ಅಲ್ಲಿದ್ದಾಗ (ಜೆಡಿಎಸ್) ನಾನು ಒಕ್ಕಲಿಗ ಎಂದು ಅನೇಕರು ತಿಳಿದುಕೊಂಡಿದ್ದರು ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ಇದನ್ನೂ ಓದಿ: Namma Metro: ಗ್ರೂಪ್ ಟಿಕೆಟ್ ಪರಿಚಯಿಸಲು ಮುಂದಾದ ಬಿಎಂಆರ್ಸಿಎಲ್; ಏನಿದರ ಲಾಭ?
ಸಾಮಾಜಿಕ ನ್ಯಾಯ ಹೇಳಿ ಕೊಡುವ ಅಗತ್ಯವಿಲ್ಲ
ಜೆಡಿಎಸ್ ಆರೋಪಕ್ಕೆ ಪ್ರತಿಕ್ರಿಯಿಸಿದ ವಿಧಾನಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಮಹಿಳೆ ಅಥವಾ ಹಿಂದುಳಿದ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ರೆ ಅಭ್ಯರ್ಥಿಯನ್ನು ಹಾಕಬೇಡಿ ಎಂದು ನಮ್ಮ ಹೈಕಮಾಂಡ್ ಹೇಳಿತ್ತು. ಬಿಜೆಪಿ ಮಹಿಳೆ ಅಥವಾ ಹಿಂದುಳಿದ ಅಭ್ಯರ್ಥಿಯನ್ನು ಹಾಕಿದ್ದರೆ ನಾವೂ ಅಭ್ಯರ್ಥಿಯನ್ನು ಹಾಕುತ್ತಿರಲಿಲ್ಲ. ನಮಗೆ ಯಾರೂ ಸಾಮಾಜಿಕ ನ್ಯಾಯ ಹೇಳಿ ಕೊಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದರು.
ನೂತನ ಉಪ ಸಭಾಪತಿಗಳಿಗೆ ಅಭಿನಂದನೆ
ನೂತನ ಉಪ ಸಭಾಪತಿ ಪ್ರಾಣೇಶ್ ಅವರಿಗೆ ಸಿಎಂ ಬಸವರಾಜ್ ಬೊಮ್ಮಾಯಿ ಸೇರಿದಂತೆ ಎಲ್ಲಾ ನಾಯಕರು ಅಭಿನಂದಿಸಿದರು. ಈ ವೇಳೆ ಮಾತನಾಡಿದ ಸಚಿವ ಮಾಧುಸ್ವಾಮಿ, ಹಳೇ ಬೇರು, ಹೊಸ ಚಿಗುರು ಎನ್ನುವ ರೀತಿಯಲ್ಲಿದೆ. ಒಳ್ಳೆಯಾದಾಗಲಿ, ಧರ್ಮೇಗೌಡರು ಆಕಾಲಿಕ ನಿಧನದಿಂದ ಪ್ರಾಣೇಶ್ ಅವರನ್ನು ಕೂರಿಸಬೇಕಾಯಿತು. ಅವರು ಚಿಕ್ಕಮಗಳೂರನ್ನ, ಚಿಕ್ಕವಯಸ್ಸಿನಲ್ಲಿ ಸಿಕ್ಕಿದೆ. ವಿಪಕ್ಷಗಳು ಹೇಳಿದ್ದನು ನಾನು ಅನುಮೋದಿಸುತ್ತೇನೆ. ಆದರೆ ಸದಸ್ಯರು ತಮ್ಮ ಜವಾಬ್ದಾರಿ ಅರಿತರೇ ಎಲ್ಲವೂ ಸರಿ ಹೋಗುತ್ತೆ ಎಂದರು.
ನಾನು ಲಾ ಕಾಲೇಜಿಗೆ ಹೋಗಿದ್ದಾಗ ಅಲ್ಲಿ ಮಾಕ್ ಅಸೆಂಬ್ಲಿ ಮಾಡಿದ್ರು. ನನ್ನ ಕೂರಿಸಿ, ಕುಸ್ತಿಗೆ ಬಿಟ್ಟುಬಿಟ್ಟರು. ಆಗ ಯಾರಪ್ಪ ನಿಮಗೆ ಈ ನಿಯಮ ಹೇಳಿದ್ದು ಎಂದು ಕೇಳಿದ್ದೆ. ಅವರು ಕುಸ್ತಿ ಆಡೋದೆ ಅಸೆಂಬ್ಲಿ ಎಂದುಕೊಂಡಿದ್ದಾರೆ. ನಾವೆಲ್ಲರೂ ಸದನದ ನಿಯಮ ಪಾಲನೆ ಮಾಡಬೇಕು ಎಂದು ಹೇಳಿದರು.
ಬೆಲ್ ಆದ್ಮೇಲೆ ನೀವು ಪ್ರವೇಶಿಸುವ ದ್ವಾರದಿಂದ ನೀವೊಬ್ಬರೆ ಬರಬೇಕು. ಬೆಲ್ ಆದ ಬಳಿಕ ಬೇರೆ ಸದಸ್ಯರು ನೀವು ಪ್ರವೇಶ ಮಾಡುವ ದ್ವಾರದಿಂದ ಬರುವುದು ಹೋಗುವುದು ಮಾಡಬಾರದು. ಬೆಲ್ ಆದರೂ ಕೆಲವರು ಓಡಾಡುತ್ತಾರೆ. ಸಣ್ಣಪುಟ್ಟ ನಿಯಮ ನಾವು ಪಾಲನೆ ಮಾಡೋಣ ಎಂದು ಕಾನೂನು ಸಚಿವ ಮಾಧುಸ್ವಾಮಿ ಪರಿಷತ್ ಕಲಾಪದಲ್ಲಿ ಸಂಪ್ರದಾಯದ ಪಾಲನೆ ಪಾಠ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ