Male Mahadeshwara: ಮಹದೇಶ್ವರ ಬೆಟ್ಟದಲ್ಲಿ ಕಾಣೆಯಾಗಿದ್ದ ಚಿನ್ನದ ಕರಡಿಗೆ ಕಸದ ರಾಶಿಯಲ್ಲಿ ಪತ್ತೆ!

ದೇವಾಲಯದ ಉತ್ಸವ ಮೂರ್ತಿ ಶ್ರೀ ಪಾರ್ವತಿ ಅಮ್ಮರವರಿಗೆ ಧರಿಸಿದ್ದ ಚಿನ್ನದ ಕರಡಿಗೆ ಇಂದು ರಾಜಗೋಪುರದ ಮುಂಭಾಗ ಕಸ ಹಾಕುವ ಜಾಗದಲ್ಲಿ  ಬಿದ್ದಿದೆ

ಚಿನ್ನದ ಕರಡಿ

ಚಿನ್ನದ ಕರಡಿ

  • Share this:
ಚಾಮರಾಜನಗರ (ಮಾ.25) ಮಲೈಮಹದೇಶ್ವರ ಬೆಟ್ಟದಲ್ಲಿ  ಉತ್ಸವಮೂರ್ತಿಯ ಮೇಲಿದ್ದ ಚಿನ್ನದ ಕರಡಿಗೆ ಏಳು‌ದಿನಗಳ ಬಳಿಕ ಪತ್ತೆಯಾಗಿದೆ .ಉತ್ಸವ ಮೂರ್ತಿಯ ಮೇಲಿದ್ದ ಚಿನ್ನದ ಕರಡಿಗೆ ಕಾಣೆಯಾಗಿರುವ ವಿಷಯ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ದೇವಾಲಯದ ಉತ್ಸವ ಮೂರ್ತಿ ಶ್ರೀ ಪಾರ್ವತಿ ಅಮ್ಮರವರಿಗೆ ಧರಿಸಿದ್ದ ಚಿನ್ನದ ಕರಡಿಗೆ ಇಂದು ರಾಜಗೋಪುರದ ಮುಂಭಾಗ ಕಸ ಹಾಕುವ ಜಾಗದಲ್ಲಿ  ಬಿದ್ದಿದೆ ಎಂದು ದೇವಾಲಯದ ಹೊರಗುತ್ತಿಗೆ ನೌಕರ  ಸುನಿಲ್ ಕುಮಾರ್ ಎಂಬುವವರು ಮಲೈಮಹದೇಶ್ವರ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕೂಡಲೇ  ಪ್ರಾಧಿಕಾರದ ಜಯವಿಭವಸ್ವಾಮಿ ಹಾಗೂ ಉಪಕಾರ್ಯದರ್ಶಿ ಬಸವರಾಜು ಅವರು ಮಹದೇಶ್ವರ ಬೆಟ್ಟ ಪೊಲೀಸ್  ಇನ್ಸ್‌ಪೆಕ್ಟರ್ ಜಿ.ಎನ್ ರಮೇಶ್ ಅವರೊಡನೆ  ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ  ಪೊಲೀಸರು ಮಹಜರು ನಡೆಸಿ ಈ ಚಿನ್ನದ ಕರಡಿಗೆಯನ್ನು  ವಶಪಡಿಸಿಕೊಂಡಿದ್ದು ನಿಯಮಾನುಸಾರ ದೇವಾಲಯಕ್ಕೆ ಹಸ್ತಾಂತರಿಸುವುದಾಗಿ ತಿಳಿಸಿದ್ದಾರೆ.

ಪ್ರಕರಣ ಸುಖಾಂತ್ಯ ಕಂಡಿದೆ. ಆದರೆ,  ನಿರ್ಲಕ್ಷ್ಯತನ ಹಾಗೂ‌ ಬೇಜವಾಬ್ದಾರಿ ಬಗ್ಗೆ‌ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ತಿಳಿಸಿದ್ದಾರೆ

ಏನಿದು ಪ್ರಕರಣ?

ಮಲೈ ಮಹದೇಶ್ವರ ನಿಗೆ ಬೇಡಗಂಪಣ ಸಮುದಾಯದ ಅರ್ಚಕರ ಗುಂಪುಗಳು  ಸರದಿ ಪ್ರಕಾರ ಪೂಜಾ ಕೈಂಕರ್ಯ ನೆರವೇರಿಸುತ್ತಾರೆ. ಪ್ರತಿ ತಿಂಗಳು ಸರದಿ ಪ್ರಕಾರ ಅರ್ಚಕರು ಬದಲಾಗುತ್ತಾ ಹೋಗುತ್ತಾರೆ. ಪ್ರತಿ ತಿಂಗಳು ಉತ್ಸವ ಮೂರ್ತಿ ಸೇರಿದಂತೆ ಇನ್ನಿತರೆ ಒಡವೆವಸ್ತ್ರ, ಪೂಜಾ ಸಾಮಾಗ್ರಿಗಳನ್ನು ಆಯಾ ಅರ್ಚಕರ ಸುಪರ್ದಿಗೆ ವಹಿಸಲಾಗುತ್ತದೆ. ಇದರ ಪ್ರಕಾರ ಈ ಬಾರಿ ಕೆ.ವಿ.ಮಾದೇಶ್, ಕಿರುಬಮಾದ ತಮ್ಮಡಿ ಗುಂಪಿನ ಅರ್ಚಕರ ಸುಪರ್ದಿನಲ್ಲಿ ಈ  ಚಿನ್ನದ ಕರಡಿಗೆ ಇತ್ತು.

ಆದರೆ, ಏಳು ದಿನಗಳ ಹಿಂದೆ ಚಿನ್ನದ ಕರಡಿಗೆ ಕಾಣೆಯಾಗಿದ್ದರು  ದೂರು ದಾಖಲಿಸಿರಲಿಲ್ಲ. ಹಾಲಿ ಸರದಿಯಲ್ಲಿದ್ದ  ಅರ್ಚಕರ ಗುಂಪಿಗೆ ಕೆಟ್ಟ ಹೆಸರು ತರಲು ಈ ಚಿನ್ನದ ಕರಡಿಗೆಯನ್ನು ಉತ್ಸವ ಮೂರ್ತಿಯಿಂದ ತೆಗೆದು  ಹುಂಡಿಗೆ ಹಾಕಿರಬಹುದೆಂಬ ಶಂಕೆಯು ವ್ಯಕ್ತವಾಗಿತ್ತು.  ಹುಂಡಿ ಎಣಿಕೆ ವೇಳೆ ಚಿನ್ನದ ಕರಡಿಗೆ ಸಿಕ್ಕರೆ ಪ್ರಕರಣಕ್ಕೆ ತೆರೆ ಎಳೆಯಲು , ಸಿಗದಿದ್ದರೆ ಸರದಿ ಅರ್ಚಕರಿಂದ ಹೊಸ ಚಿನ್ನದ ಕರಡಿಗೆ ಮಾಡಿಸಿ ಪ್ರಕರಣ ಕ್ಕೆ ಇತಿಶ್ರಿ ಹಾಡಲೂ ಸಹ ನಿರ್ಧಾರಿಸಲಾಗಿತ್ತು ಎನ್ನಲಾಗಿದೆ

ಇದನ್ನು ಓದಿ: ರಾಜ್ಯ ಬಿಜೆಪಿ ಕೋರ್ ಕಮಿಟಿ ಪುನರ್ ರಚನೆ ಮಾಡಿದ ಹೈ ಕಮಾಂಡ್​

ಆದರೆ,  ಇಂದು ನಡೆದ ಹುಂಡಿ ಎಣಿಕೆ ಸಂದರ್ಭದಲ್ಲಿ ಚಿನ್ನದ ಕರಡಿಗೆ ಪತ್ತೆಯಾಗಲಲ್ಲಿ. ಈ ನಡುವೆ ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿ, ಸರದಿ ಅರ್ಚಕರಿಗೆ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿತ್ತು.

ಚಿನ್ನದ ಕರಡಿಗೆ ನಾಪತ್ತೆಯಾಗಿರುವ ಸುದ್ದಿ ನ್ಯೂಸ್ 18 ಕನ್ನಡದಲ್ಲಿ ಪ್ರಸಾರವಾದ ಕೆಲವೇ ಗಂಟೆಗಳಲ್ಲಿ ಚಿನ್ನದ ಕರಡಿಗೆ ಕಸದ ರಾಶಿಯಲ್ಲಿ  ಪತ್ತೆಯಾಗಿದೆ. ಕಳೆದ ಏಳು ದಿನಗಳಿಂದ ಹುಡುಕಾಟ ನಡೆಸಿದ್ದರೂ  ಸಿಗದ ಚಿನ್ನದ ಕರಡಿಗೆ ಸುದಿ ಪ್ರಸಾರ ವಾಗುತ್ತಿದ್ದಂತೆ ಕಸದ ರಾಶಿಯಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ

ಈ ಚಿನ್ನದ ಕರಡಿಗೆಯನ್ನು ಯಾರಾದರು ಕದ್ದಿದ್ದರಾ? ಅಥವಾ ಸರದಿ ಅರ್ಚಕರಿಗೆ ಕೆಟ್ಟ ಹೆಸರು ತರಲು ಅದನ್ನು ಕದ್ದು ಈಗ ಕಸದ ರಾಶಿಯಲ್ಲಿ ಹಾಕಿದರಾ? ಅಥವಾ ಉತ್ಸವ ಮೂರ್ತಿಯ ಮೇಲಿದ್ದ ಹೂವನ್ನು ತೆಗೆದು ಕಸದ ರಾಶಿಗೆ ಹಾಕುವ ವೇಳೆ ಆಕಸ್ಮಿಕವಾಗಿ ಚಿನ್ನದ ಕರಡಿಗೆಯು ಸೇರಿಕೊಂಡಿತ್ತಾ? ಎಂಬ ಪ್ರಶ್ನೆ ಗಳು ತಲೆದೋರಿದ್ದು ತನಿಖೆಯಿಂದಷ್ಟೇ ಸತ್ಯಾಂಶ ಬಯಲಾಗಬೇಕಿದೆ.

(ವರದಿ: ಎಸ್.ಎಂ.ನಂದೀಶ್)
Published by:Seema R
First published: