ತುಮಕೂರು : ಜಮೀನು ವಿವಾದದ (Land Dispute) ದ್ವೇಷಕ್ಕೆ ವೃದ್ಧೆಯೊಬ್ಬರಿಗೆ ಸೇರಿದ 84 ತೆಂಗಿನ ಸಸಿಗಳ (Coconut Tree) ಮಾರಣಹೋಮ ಮಾಡಿರುವ ಘಟನೆ ತುಮಕೂರು (Tumkur) ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಅಣೆಕಟ್ಟೆ ಗ್ರಾಮದಲ್ಲಿ ನಡೆದಿದೆ. ಎರೆಹಳ್ಳಿ ಸರ್ವೆ ನಂಬರ್ 21ರ ಸಾಗುವಳಿ ಜಮೀನಿನಲ್ಲಿ ಬೆಳೆದಿದ್ದ ತೆಂಗಿನ ಮರಗಳನ್ನು ಕಡಿದು ಹಾಕಲಾಗಿದೆ. ಅಣೆಕಟ್ಟೆ ಗ್ರಾಮದ ವೃದ್ಧೆ ಶಿವಮ್ಮ ಅವರಿಗೆ ಸೇರಿದ ಜಮೀನಿನಲ್ಲಿ ಬೆಳೆಸಲಾಗಿದ್ದ ಗಿಡಗಳನ್ನು ದುಷ್ಕರ್ಮಿಗಳು ಕಡಿದು ಹಾಕಿದ್ದಾರೆ. ಜಮೀನಿನ ವಿವಾದ ಸದ್ಯ ಕೋರ್ಟ್ ಮೆಟ್ಟಿಲೇರಿತ್ತು. ಇದೇ ದ್ವೇಷಕ್ಕೆ ವೃದ್ಧೆ ಶಿವಮ್ಮಳ ಜಮೀನನಲ್ಲಿದ್ದ ತೆಂಗಿನ ಸಸಿಗಳನ್ನ ನಾಶ ಮಾಡಿದ್ದಾರೆ.
ಇಬ್ಬರ ಮೇಲೆ ಎಫ್ಐಆರ್
ತೆಂಗಿನ ಮರಗಳನ್ನು ಕಡಿದಿರುವ ಘಟನೆ ಸಂಬಂಧ ಜಮೀನು ಮಾಲೀಕರು ವಿಶ್ವನಾಥ ಮತ್ತು ಕುಮಾರ್ ಎನ್ಎಸ್ ಎಂಬುವರ ಮೇಲೆ ಎಫ್ಐಆರ್ ದಾಖಲಾಗಿದೆ. ಆದರೆ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ ಎಂದು ದೂರುದಾರರು ಆರೋಪಿಸಿದ್ದಾರೆ.
ಇದನ್ನೂ ಓದಿ: Tumkur: ಒಂದೇ ತೆಂಗಿನ ಮರದಲ್ಲಿ 20 ಕವಲು, ಮಾಲೀಕರಿಂದ ಪ್ರತಿದಿನ ಪೂಜೆ!
ಆಂಜನೇಯನ ಗರ್ಭಗುಡಿಯನ್ನೇ ಅಗೆದ ದುಷ್ಕರ್ಮಿಗಳು
ನಿಧಿ ಆಸೆಗಾಗಿ ಪುರಾತನ ಆಂಜನೇಯ ದೇವಾಲಯದ ಗರ್ಭಗುಡಿಯನ್ನೇ ಅಗೆದಿರುವ ಘಟನೆ ತುಮಕೂರು ಜಿಲ್ಲೆ, ಶಿರಾ ತಾಲ್ಲೂಕಿನ, ಗುಮ್ಮನಹಳ್ಳಿಯಲ್ಲಿ ನಡೆದಿದೆ. ಶಿರಾ ದೊಡ್ಡಕೆರೆಗೆ ನೀರು ಹರಿಯುವ ಹಳ್ಳದ ದಂಡೆಯಲ್ಲಿರುವ ಪುರಾತನ ಕಾಲದ ಆಂಜನೇಯ ದೇವಾಲಯವಿದ್ದು, ಹಲವು ವರ್ಷಗಳಿಂದ ಇಲ್ಲಿ ಯಾವುದೇ ಪೂಜೆ ಕೈಂಕರ್ಯ ನಡೆಯದ ಕಾರಣ ಗಿಡಗಂಟಿಗಳಿಂದ ಮುಚ್ಚಿಹೋಗಿತ್ತು.
ಪೊಲೀಸರಿಗೆ ದೂರು
ಭಾನುವಾರ ಬೆಳಗ್ಗೆ ಗ್ರಾಮದ ಕೆಲವು ಯುವಕರು ದೇವಾಲಯದ ಬಳಿ ಹೋದಾಗ ಗರ್ಭಗುಡಿ ಮತ್ತು ಒಳ ಆವರಣದಲ್ಲಿ ಹತ್ತಾರು ಅಡಿ ಗುಂಡಿ ಅಗೆದಿರುವುದು ಬೆಳಕಿಗೆ ಬಂದಿದೆ. ನಿಧಿ ಆಸೆಗಾಗಿ ಕಳ್ಳರು ದೇವಾಲಯದ ಗರ್ಭಗುಡಿ ಅಗೆದಿರುವುದಾಗಿ ಪೊಲೀಸರಿಗೆ ದೂರು ನೀಡಿದ ಗ್ರಾಮಸ್ಥರು ದೂರು ನೀಡಿದ್ದು, ಸ್ಥಳಕ್ಕೆ ಶಿರಾ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ ಬಿದ್ದ ಚಿರತೆ
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಡೇನಹಳ್ಳಿ ಗ್ರಾಮದಲ್ಲಿ ಹಲವಾರು ತಿಂಗಳುಗಳಿಂದ ಚಿರತೆ ಕಾಟ ಹೆಚ್ಚಾಗಿತ್ತು. ಸ್ಥಳೀಯರ ಮನವಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಬೋನಿಟ್ಟಿದ್ದರು. ಇದೀಗ ಚಿರತೆ ಬೋನಿಗೆ ಬಿದ್ದಿದ್ದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಚಿರತೆ ನೋಡಲು ಸ್ಥಳೀಯರು ಮುಗಿ ಬಿದ್ದರು.
ಪಾವಗಡದಲ್ಲಿ ಕರಡಿ ಕಾಟ
ಪಾವಗಡ ಪಟ್ಟಣದ ಕೆಲವು ಬಡಾವಣೆಗಳಲ್ಲಿ ರಾತ್ರಿ ಕರಡಿ ಓಡಾಡುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರದಿಂದ ಇರಬೇಕು ಎಂದು ವಲಯ ಅರಣ್ಯಾಧಿಕಾರಿ ಕೆ.ಎಸ್. ಸತೀಶ್ ಚಂದ್ರ ತಿಳಿಸಿದ್ದಾರೆ. ಪೆನುಗೊಂಡ ರಸ್ತೆಯ ಬಡಾವಣೆಗೆ ಹೊಂದಿಕೊಂಡು ಸಪೋಟ ಗಿಡ ಗಳಿದ್ದು, ಹಣ್ಣುಗಳನ್ನು ತಿನ್ನಲು ಕರಡಿ ಬರುತ್ತಿದೆ. ಅದನ್ನು ಕಂಡ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಆದರೆ ಅದರತ್ತ ಕಲ್ಲು ಎಸೆಯುವುದು, ಕೋಲಿನಿಂದ ಅಟ್ಟಿಸಿಕೊಂಡು ಹೋಗುವುದು, ಗಾಬರಿಗೊಳಿಸುವ ಕೆಲಸ ಮಾಡಬಾರದು ಎಂದು ಸಲಹೆ ನೀಡಿದ್ದಾರೆ.
ಈಗಾಗಲೇ ಕರಡಿ ಓಡಾಡುತ್ತಿರುವ ದಾರಿಯಲ್ಲಿ ಬೋನುಗಳನ್ನು ಇರಿಸಲಾಗಿದೆ. ರಾತ್ರಿ ಗಸ್ತಿಗಾಗಿ ಸಿಬ್ಬಂದಿ ನಿಯೋಜಿಸಲಾಗಿದೆ. ಇಲಾಖೆಗೆ ಸಾರ್ವಜನಿಕರು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಕರಡಿ ಕಂಡು ಬಂದರೆ ಅಥವಾ ಹೆಚ್ಚಿನ ಮಾಹಿತಿಗೆ ಮೊಬೈಲ್ 94829 79112, 99023 17536 ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ