ರೈತರಿಗೆ ಗೊತ್ತಿಲ್ಲದೆಯೇ ಸಾಲ ಮಂಜೂರು, ಸಾಲ ಮನ್ನಾ; ಮೈಸೂರಿನ ಈ ಸಹಕಾರಿ ಬ್ಯಾಂಕ್​ನಲ್ಲಿ ಲಕ್ಷ ಲಕ್ಷ ಹಣ ಗುಳುಂ

ರೈತರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ ಒಬ್ಬನೇ ರೈತನಿಗೆ ಎರಡೆರಡು ಬಾರಿ ಸಾಲ ವಿತರಣೆ ಮಾಡಲಾಗಿದೆ. ಮೃತ ರೈತನ ಹೆಸರಿನಲ್ಲೂ ಸಾಲ ಮಂಜೂರಾತಿ ಮಾಡಿ, ಮನ್ನಾ ಮಾಡಲಾಗಿದೆ. ಹೆಚ್.ಡಿ. ಕೋಟೆಯ ಅಂತರಸಂತೆ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ದೋಖ ಪ್ರಕರಣ ಬೆಳಕಿಗೆ.

ಅಂತರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

ಅಂತರಸಂತೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ

  • News18
  • Last Updated :
  • Share this:
ಮೈಸೂರು(ಜ. 31): ಒಬ್ಬನೇ ರೈತನಿಗೆ ಎರಡೆರಡು ಬಾರಿ ಸಾಲ ವಿತರಣೆ. ಸಾಲ ಮನ್ನಾ ಆದಾಗ ಎರಡೆರಡು ಬಾರಿ ಸಾಲ ಮನ್ನಾ. ಎರಡನೇ ಬಾರಿ ನೀಡಲಾದ ಸಾಲ ಹಾಗೂ ಮನ್ನಾ ಆಗಿರುವ ಹಣದ ಮಾಹಿತಿ ರೈತನ ಗಮನಕ್ಕೇ ಬಂದಿಲ್ಲ. ಇಷ್ಟೇ ಯಾಕೆ, ಮೃತ ರೈತರೊಬ್ಬರ ಹೆಸರಲ್ಲೂ ಬೆಳೆ ಸಾಲ ಪಡೆದು ಸಾಲಮನ್ನ ಯೋಜನೆಯಲ್ಲಿ ಆ ಹಣವನ್ನ ಮನ್ನಾ ಮಾಡಲಾಗಿದೆ. ಇದು ಒಬ್ಬಿಬ್ಬರು ರೈತರ ಹೆಸರಿನಲ್ಲಿ ಮಾಡಲಾದ ದೋಖಾ ಅಲ್ಲ. ಬರೋಬ್ಬರಿ ನೂರಕ್ಕು ಹೆಚ್ಚು ರೈತರ ಹೆಸರಿನಲ್ಲಿ ನಡೆದಿರುವ ಮಹಾಮೋಸ. ಮೈಸೂರಿನ ಅಂತರಸಂತೆ ಕೃಷಿಪತ್ತಿನ ಸಹಕಾರಿ ಸಂಘದ ಮಹಾದೋಖ ಬೆಳಕಿಗೆ ಬಂದಿದೆ. ಈ ಬಗ್ಗೆ ದೂರು ದಾಖಲಾಗಿದೆ.

ಅಂತರಸಂತೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಎಂಡಿಸಿಸಿ ಬ್ಯಾಂಕ್ ವ್ಯಾಪ್ತಿಗೆ ಒಳಪಡುತ್ತದೆ. ಹೆಗ್ಗಡದೇವನ ಕೋಟೆ ತಾಲೂಕಿನಲ್ಲಿರುವ ಈ ಬ್ಯಾಂಕಿನಲ್ಲಿ ಇದೀಗ ಲಕ್ಷ ಲಕ್ಷ ಹಣ ದುರುಪಯೋಗವಾಗಿರುವ ಆರೋಪ ಕೇಳಿ ಬಂದಿದೆ. ಅದು ಸಹಕಾರ ಸಂಘದ ಹಣವಲ್ಲ, ಬದಲಿಗೆ ಬಡ ರೈತರಿಗೆಂದು ನೀಡಲಾಗುವ ಮೂರು ಲಕ್ಷದವರೆಗಿನ ಬಡ್ಡಿ ರಹಿತ ಬೆಳೆ ಸಾಲದಲ್ಲಿ ಆಗಿರುವ ಅಕ್ರಮ. 2017-18ನೇ ಸಾಲಿನಲ್ಲಿ ಸಹಕಾರ ಸಂಘದ ಆಡಿಟ್ ವರದಿಯಲ್ಲಿ ಹಣ ದುರುಪಯೋಗವಾದ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಹಿನ್ನೆಲೆಯಲ್ಲಿ ಸಂಘದ ಕೆಲ ಸದಸ್ಯರು ಈ ಬಗ್ಗೆ ಪ್ರಶ್ನೆ ಮಾಡಿದಾರೆ. ಮಾತ್ರವಲ್ಲ ಹಣ ದೊಡ್ಡ ಪ್ರಮಾಣದಲ್ಲಿದ್ದ ಕಾರಣ ಸ್ಥಳೀಯರೇ ಇದೀಗ ರಾಜ್ಯಪಾಲರು, ನಬಾರ್ಡ್ ಸೇರಿದಂತೆ ಮುಖ್ಯಮಂತ್ರಿಗಳಿಗೂ ಪತ್ರ ಬರೆದು ದಾಖಲೆ ಸಮೇತ ದೂರು ಸಲ್ಲಿಸಿದ್ದಾರೆ.

ಇದನ್ನೂ ಓದಿ: 10 ವರ್ಷದ ಮಂಗಳೂರು ಪಂಪ್ವೆಲ್​ ಮೇಲ್ಸೇತುವೆಗೆ ಕೊನೆಗೂ ಸಿಕ್ತು ಮುಕ್ತಿ; ಇಂದು ಉದ್ಘಾಟಿಸಿದ ಸಂಸದ ನಳಿನ್ ಕುಮಾರ್

ಒಬ್ಬ ರೈತನಿಗೆ 2 ಬಾರಿ ಬೆಳೆ ಸಾಲ, 2 ಬಾರಿ ಸಾಲಮನ್ನಾ ಆಗಿದೆ. ಆದ್ರೆ ಎರಡನೆ ಬಾರಿ ಮಂಜೂರಾದ ಸಾಲ ಹಾಗೂ ಮನ್ನ ಆದ ಸಾಲದ ಹಣದ ಮಾಹಿತಿ ಆ ರೈತನಿಗೆ ಗೊತ್ತಿಲ್ಲ. ಬ್ಯಾಂಕಿನ ಕಾರ್ಯನಿರ್ವಹಣಾಧಿಕಾರಿ ಸಿದ್ದೇಗೌಡ ಮೇಲೆ ಅವ್ಯವಹಾರದ ಗಂಭೀರ ಆರೋಪ ಮಾಡಲಾಗಿದೆ. ಸರ್ಕಾರಕ್ಕೆ ತಪ್ಪು ಲೆಕ್ಕಕೊಟ್ಟು ರೈತರ ಹೆಸರಿನಲ್ಲಿ ಹಣ ಗುಳುಂ ಮಾಡಿರುವ ಸಿದ್ದೇಗೌಡ ಅವರ ಈ ವಂಚನೆಯು 2017-18 ಆಡಿಟ್ ರಿಪೋರ್ಟ್‌ನಲ್ಲಿ ಬೆಳಕಿಗೆ ಬಂದಿದೆ.

ಬ್ಯಾಂಕಿನಿಂದ ರೈತರಿಗೆ 3 ಲಕ್ಷದವರೆಗಿನ ಬಡ್ಡಿ ರಹಿತ ಬೆಳೆ ಸಾಲ‌ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಸಹಕಾರ ಸಂಘದಿಂದ 1,258 ಮಂದಿ ರೈತರಿಗೆ ಹಣ ನೀಡಿರುವುದಾಗಿ ಉಲ್ಲೇಖವಾಗಿದೆ. ಆದರೆ ಒಬ್ಬನೇ ವ್ಯಕ್ತಿಯ ಹೆಸರಿಗೆ ಎರಡೆರಡು ಬಾರಿ ಸಾಲ‌ ನೀಡಿ ಮನ್ನಾ ಕೂಡ ಮಾಡಲಾಗಿದೆ. ಇದಕ್ಕೆ ಪೂರಕ ದಾಖಲೆಗಳೂ ಲಭ್ಯವಾಗಿವೆ. ರೈತರ ದಾಖಲೆ ಬಳಸಿಕೊಂಡು ಹೊಸ ಅಕೌಂಟ್‌ಗೆ ಸಾಲ ಜಮಾ ಮಾಡಿರುವ ಸಿದ್ದೇಗೌಡ 130 ಮಂದಿಗೆ 2 ಬಾರಿ ಸಾಲ ನೀಡಿದ್ದಾರೆ. 79 ಸಾವಿರ, 1 ಲಕ್ಷ 1.5 ಲಕ್ಷ, 3 ಲಕ್ಷ ಹೀಗೆ ತರಹೇವಾರಿ ರೂಪದಲ್ಲಿ  ಸಾಲ ಜಮಾ ಮಾಡಿ ನಂತರ ಸಿದ್ದರಾಮಯ್ಯ ಸರ್ಕಾರದಲ್ಲಿ ಆದ 50 ಸಾವಿರ ರೂ ಸಾಲಮನ್ನ ಸಂದರ್ಭದಲ್ಲಿ ಎಲ್ಲ ಸಾಲ ಮನ್ನ ಮಾಡಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಂತೂ ಮೃತ ರೈತನ ಹೆಸರಿನಲ್ಲೂ ಸಾಲ‌ ಮಂಜೂರಾಗಿದ್ದು ದೊಡ್ಡೇಗೌಡ ಬಿನ್ ಸಿದ್ದೇಗೌಡ ಹೆಸರಿನಲ್ಲಿ ದಾಖಲೆ ಸೃಷ್ಟಿ ಮಾಡಲಾಗಿದೆ. 2017ರ ಫೆಬ್ರವರಿಯಲ್ಲಿ ಮೃತನಾಗಿರುವ ದೊಡ್ಡೇಗೌಡ ಹೆಸರಿನಲ್ಲಿ 2017ರ ಜೂನ್‌ನಲ್ಲಿ ಸಾಲ ವಿತರಣೆಯಾಗಿದೆ. 2018ರ ಮೇ ತಿಂಗಳಿನಲ್ಲಿ ಸಾಲ ಮನ್ನ ಮಾಡಿರುವ ಕಾರ್ಯನಿರ್ವಹಣಾಧಿಕಾರಿ ಸಿದ್ದೇಗೌಡ ಮೃತ ರೈತರ ಹೆಸರಿನಲ್ಲಿ ಹಣ ಗುಳುಂ ಮಾಡಿದ್ದಾರೆ. ಈ ಬಗ್ಗೆ ದಾಖಲೆ ಸಮೇತ ದೂರು ನೀಡಿದ ಸ್ಥಳೀಯ ತೇಜಸ್ವಿ ವಿ.ಹೆಚ್. ಗೌಡ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬರದ ನಾಡು ವಿಜಯಪುರದ 500 ಎಕರೆಯಲ್ಲಿ ಹಸಿರು ಕ್ರಾಂತಿ; ವಿಶಿಷ್ಟ ಮಾದರಿಯ ಹನಿನೀರಾವರಿ ಪ್ರಯೋಗಕ್ಕೆ ಪ್ರಶಂಸೆ

ದಾಖಲೆ ಸಮೇತ ದೂರು ಬಂದ ಹಿನ್ನೆಲೆಯಲ್ಲಿ ನಬಾರ್ಡ್ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು, ಅಪೆಕ್ಸ್ ಬ್ಯಾಂಕ್ ಮೂಲಕ ಎಂಡಿಸಿಸಿ ಬ್ಯಾಂಕ್​ಗೆ ಹಣ ದುರುಪಯೋಗ ಪ್ರಕರಣದ ತನಿಖೆ ಮಾಡಿ ವರದಿ ನೀಡುವಂತೆ ಆದೇಶಿಸಿದೆ. ನಬಾರ್ಡ್​ನಿಂದ ಸೂಚನೆ ಬಂದ ಹಿನ್ನಲೆಯಲ್ಲಿ ಎಂಡಿಸಿಸಿ ಬ್ಯಾಂಕ್​ನ ಅಧ್ಯಕ್ಷ ಜಿ.ಡಿ. ಹರೀಶ್‌ ಗೌಡ ಸೂಪರ್​ವೈಸರ್ ಹಾಗೂ ಮ್ಯಾನೇಜರ್ ನೇತೃತ್ವದ ತಂಡ ರಚಿಸಿ, ಖುದ್ದು ರೈತರ ಬಳಿ ಭೇಟಿ ನೀಡಿ ಹಣ ದುರುಪಯೋಗ ಆಗಿದೆಯೋ ಇಲ್ಲವೋ ಎಂದು ತನಿಖೆ ಮಾಡುವಂತೆ ಸೂಚಿಸಿದ್ದಾರೆ. ಈಗಾಗಲೇ ತನಿಖೆ ಅಂತಿಮ ಹಂತದಲ್ಲಿದ್ದು, ಇನ್ನೊಂದು ವಾರದಲ್ಲಿ ತನಿಖೆಯ ವರದಿ ಅಧ್ಯಕ್ಷರ ಕೈ ಸೇರಲಿದೆ. ಸರ್ಕಾರ ಹಾಗೂ ನಬಾರ್ಡ್‌ಗೂ ವರದಿ ಸಲ್ಲಿಸಿ, ತಪ್ಪಿತಸ್ಥ ಅಧಿಕಾರಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ಸರ್ಕಾರ ರೈತರಿಗೆ ನೆರವಾಗಲು ಬೆಳೆ ಸಾಲ ಕೊಟ್ರೆ, ಆ ಬೆಳೆಸಾಲದಲ್ಲೇ ರೈತರ ಹೆಸರಲ್ಲಿ ಮೋಸವಾಗಿರೋದು ವಿಪರ್ಯಾಸದ ಸಂಗತಿ. ಇನ್ನಾದರೂ ಕೃಷಿಪತ್ತಿನ ಸಂಘ ಈ ದೋಖದ ಬಗ್ಗೆ ತನಿಖೆಯಾಗಿ ನುಂಗಣ್ಣರಿಂದ ಹಣ ವಾಪಸ್ ಪಡೆಯಲಿ ಅನ್ನೋದೇ ದೂರುದಾರರ ಆಗ್ರಹವಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: