ಹೆಚ್ಚಾಗುತ್ತಿದೆ ರಾಹುಲ್ ಜನಪ್ರಿಯತೆ…!: ಟೆಂಪಲ್ ರನ್ ಗಿಂತ ಮಿರ್ಚಿ ಮಂಡಕ್ಕಿಯದ್ದೇ ಸದ್ದು ಜಾಸ್ತಿ


Updated:February 13, 2018, 6:05 PM IST
ಹೆಚ್ಚಾಗುತ್ತಿದೆ ರಾಹುಲ್ ಜನಪ್ರಿಯತೆ…!: ಟೆಂಪಲ್ ರನ್ ಗಿಂತ ಮಿರ್ಚಿ ಮಂಡಕ್ಕಿಯದ್ದೇ ಸದ್ದು ಜಾಸ್ತಿ

Updated: February 13, 2018, 6:05 PM IST
-ಶರಣು ಹಂಪಿ, ನ್ಯೂಸ್ 18 ಕನ್ನಡ

ಬಳ್ಳಾರಿ(ಫೆ.13): ಗುಜರಾತ್ ಚುನಾವಣೆಯ ಮುಂದುವರೆದ ಭಾಗವಾಗಿ, ಎಐಸಿಸಿ ಅಧ್ಯಕ್ಷರಾದ ಮೇಲೆ ರಾಹುಲ್ ಗಾಂಧಿ ಮಾಡಿದ ಮೊದಲ ರಾಜ್ಯಪ್ರವಾಸ ಯಶ ಕಂಡಿದೆ. ಗುಜರಾತ್ ಚುನಾವಣೆ ಮುಂಚಿತವಾಗಿದ್ದ ಇಮೇಜ್ ಗೂ ಆನಂತರ ರಾಹುಲ್ ನಡೆಸಿದ ಟೆಂಪಲ್ ರನ್ ಹಿಂದೂ ಮೃದುಧೋರಣೆ ಎಲೆಕ್ಷನ್ ನಲ್ಲಿ ಕೆಲಸ ಮಾಡಿದೆ. ಈ ಕಾರಣಕ್ಕೆ ಚುನಾವಣೆ ಹೊಸ್ತಿನಲ್ಲಿ ಅದರ ಅಪ್ ಡೇಟ್ ವರ್ಶನ್ ರೀತಿ ಸೌಹಾರ್ದಯುತ ಟೆಂಪಲ್ ರನ್ ಮುಂದುವರೆಸಿದ್ದಾರೆ.

ರಾಜ್ಯದಲ್ಲಿ ಅತಿ ಹಿಂದುಳಿದ ಪ್ರದೇಶ ಎನ್ನುವ ಕಾರಣಕ್ಕೆ ಮೀಸಲಾತಿ ಪಡೆದ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ರಾಹುಲ್ ಗಾಂಧಿ ಕಳೆದ ನಾಲ್ಕು ದಿನಗಳಿಂದ ನಡೆಸಿದ ಜನಾರ್ಶಿವಾದ ಯಾತ್ರೆ ಮಾಡಿದ್ದಾರೆ. ಇಲ್ಲಿ ಕಾಂಗ್ರೆಸ್ ಎಷ್ಟು ಯಶಸ್ವಿಗೊಂಡಿದೆ ಎನ್ನುವುದಕ್ಕಿಂತ ರಾಹುಲ್ ಗಾಂಧಿ ಇಮೇಜ್ ಹೆಚ್ಚು ಮಾಡುವ ಪ್ರಯತ್ನವಾದಂತೆ ಕಾಣುತ್ತಿದೆ. ಈ ಹಿಂದಿದ್ದ (ಪಪ್ಪು) ಇಮೇಜ್ ನ್ನು ತೊಡೆದುಹಾಕಲು ರಾಜ್ಯ ಕೈ ನಾಯಕರು ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಈ ನಿಟ್ಟಿನಲ್ಲಿ ರಾಹುಲ್ ಇಮೇಜ್ ಎಷ್ಟು ಹೆಚ್ಚಿದೆ ಎನ್ನುವುದರ ಬಗ್ಗೆ ಕುತೂಹಲಿಗಳಾಗಿದ್ದಾರೆ. ಯಾತ್ರೆಯ ಆರಂಭದಿಂದಲೂ ಬಿಜೆಪಿಯ ಮೋದಿ ರೀತಿ ರಾಹುಲ್ ಗಾಂಧಿ ಒನ್ ಮ್ಯಾನ್ ಷೋ ರೀತಿ ಅವರಿಗೆ ಬೂಸ್ಟ್ ಮಾಡುವ ಕೆಲಸ ಯಾತ್ರೆಯಲ್ಲಿ ಕಾಣಿಸಿತು. ‘ನಮ್ಮ ಪಕ್ಷದ ಅಧಿನಾಯಕ, ಮುಂದಿನ ಪ್ರಧಾನಿ’ ಎಂದು ಸಿಎಂ ಸಿದ್ದರಾಮಯ್ಯ ಅವರಿಂದ ಹಿಡಿದು ಕೈ ನಾಯಕರು ಭಾಷಣದಲ್ಲಿ ಪುಶ್ ಅಪ್ ಮಾಡುತ್ತಿದ್ದರು. ಪಕ್ಷದ ಅಧಿನಾಯಕ ಬಂದಾಗ ಸಿಎಂ ಸಿದ್ರಾಮಯ್ಯ ಸ್ವಲ್ಪ ಮಂಕಾದಂತೆ ಕಂಡುಬಂದರೂ ತಮ್ಮ ಜನಪ್ರಿಯತೆ ರಾಹುಲ್ ಅವರಿಗಾಗಿಯೇ ಎಂಬಂತೆ ಭಾಸವಾಯಿತು.ಯಾತ್ರೆ ವೇಳೆ ಹಿಂದೂ ದೇವಾಲಯ, ಮಠಮಾನ್ಯಗಳ ಭೇಟಿ, ಭದ್ರ ಕೋಟೆಯಂತಹ ಆಪ್ತ ರಕ್ಷಕರ ಮಧ್ಯೆ ಜನಸಾಮಾನ್ಯರನ್ನು ಮಾತನಾಡಿಸುವುದು, ಸೆಲ್ಫಿ ತೆಗೆಸಿಕೊಳ್ಳುವದು, ನಿಗಧಿತ ಕಾರ್ಯಕ್ರಮದ ಜೊತೆಗೆ ಪರಿಸ್ಥಿತಿಗನುಗುಣವಾಗಿ ಕೆಲ ಮಾರ್ಪಾಟು ಮಾಡಿ ಜನರೊಂದಿಗೆ ಬೆರೆಯುವ ಕಾರ್ಯ ರಾಹುಲ್ ಗಾಂಧಿ ಮಾಡಿದ್ದಾರೆ. ಇದು ಇವರ ಪಾಪ್ಯೂಲಾರಟಿಯನ್ನು ಇನ್ನಷ್ಟು ಹೆಚ್ಚಿಸಲು ಕಾರಣವಾಗಿದೆ.ಯಾತ್ರೆಯುದ್ದಕ್ಕೂ ಬಹಿರಂಗ ಸಮಾವೇಶದಲ್ಲಿ ಭಾರಿ ಜನಸ್ತೋಮ ಕಾಣಿಸುತ್ತಿತ್ತು. ಪ್ರವಾಸದ ವೇಳೆ ಹೋಗುವ ದಾರಿಯಲ್ಲೆಲ್ಲ ಜನರು ತಮ್ಮ ಮನೆ ಮುಂದೆ, ಮಾಳಿಗೆ ಮೇಲೆ ನಿಂತು ಕುತೂಹಲಕ್ಕೆಯಾದ್ರೂ ನೋಡಬೇಕೆಂಬ ಆಸೆಯ ಕಂಗಳು ಜನರಲ್ಲಿ ಕಾಣಿಸುತ್ತಿದ್ದವು. ಆರತಿ ಬೆಳಗಿ, ಕುಂಕುಮ ಹಣೆಗಿಟ್ಟು ರಾಹುಲ್ ಹರಿಸುತ್ತಿದ್ದದ್ದು, ಶೆಡ್ ಹೋಟೆಲ್ ನಲ್ಲಿ ಮಿರ್ಚಿ ಮಂಡಕ್ಕಿ ತಿಂದು, ಪಕೋಡ ಸವಿದಿದ್ದು, ಭದ್ರತೆಯನ್ನು ಲೆಕ್ಕಿಸದೇ ಹತ್ತಿರದಿಂದ ನೇರವಾಗಿ ನೋಡಬೇಕೆಂಬ ಆಸೆಗೆ ರಾಹುಲ್ ಗಾಂಧಿ ಸ್ಪಂದಿಸಿದ್ದು ಜನತೆಗೆ ಖುಷಿ ತಂದಿದೆ. ಇದು ರಾಹುಲ್ ಗಾಂಧಿಗೆ ಅಷ್ಟೇ ಸಂತಸವನ್ನೂ ತಂದಿದೆ.
Loading...

ರಾಜ್ಯ ಪ್ರವಾಸದ ವೇಳೆ ರಾಹುಲ್ ಸಾಕಷ್ಟು ಪ್ರೌಢತೆಯನ್ನು ಮೆರೆದಂತೆ ಕಂಡುಬಂದಿತು. ಗಾಂಧಿ ಕುಟುಂಬದವರಾಗಿದ್ದರೂ ಸರಳತೆ ಮೈಗೂಡಿಸಿಕೊಂಡವ, ಎಲ್ಲ ಧರ್ಮಗಳೂ ಬೇಕು, ಹಿಂದೂ ಧರ್ಮವನ್ನು ವಿನಾಕಾರಣ ಎದುರುಹಾಕಿಕೊಳ್ಳುವುದಿಲ್ಲ ಎನ್ನುವುದನ್ನು ರಾಜ್ಯಪ್ರವಾಸದಲ್ಲಿ ಸ್ಪಷ್ಟವಾಗಿ ತೋರಿಸಿಕೊಟ್ಟರು. ಆ ನಿಟ್ಟಿನಲ್ಲಿ ರಾಜ್ಯ ನಾಯಕರು ಯಶ ಕಂಡಿದ್ದಾರೆ, ತಮ್ಮ ಸ್ವಾಮಿನಿಷ್ಟೆ, ಗಾಂಧಿ ಕುಟುಂಬದ ಮೇಲಿರುವ ಪ್ರೀತಿಯನ್ನು ತೋರಿಸಲು ಜನರನ್ನು ಸೇರಿಸುವ ಕೆಲಸವನ್ನು ಕೈ ನಾಯಕರು ಚಾಚೂತಪ್ಪದೇ ಮಾಡಿದ್ದಾರೆ.
40 ವರುಷಗಳ ಹಿಂದೆದಕ್ಷಿಣ ಭಾರತದಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪಿಸಿದ ವಿಜಯನಗರ ಕ್ಷೇತ್ರದಿಂದಲೇ ರಾಹುಲ್ ಗಾಂಧಿ ಪ್ರವಾಸ ಕೈಗೊಂಡರು. ಬಳ್ಳಾರಿಯ ಹೊಸಪೇಟೆಯಲ್ಲಿ ಫೆ.10ರಂದು ಮಧ್ಯಾಹ್ನದಿಂದ ಶುರುವಾದ ಜನಾರ್ಶಿವಾದ ಯಾತ್ರೆ ಇಂದು ಕೊನೆಗೊಂಡಿದೆ. ಈಗೇನು ಅದ್ಧೂರಿಯಾಗಿ ಜರುಗಿದ ಜನಾರ್ಶಿದ ಯಾತ್ರೆಯ ಮೊದಲ ಕಾರ್ಯಕ್ರಮ 40 ವರುಷಗಳ ಹಿಂದೆ ಹೊಸಪೇಟೆಯ ತಾಲೂಕು ಕ್ರೀಡಾಂಗಣದಲ್ಲಿ ರಾಹುಲ್ ಅಜ್ಜಿ ಇಂದಿರಾ ಗಾಂಧಿ ಚುನಾವಣಾ ಪ್ರಚಾರ ಮಾಡಿದ್ದರು. ಆ ಸಂದರ್ಭದಲ್ಲಿ ಕಟ್ಟಿದ ಕಟ್ಟೆ ಇಂದಿರಾ ಕಟ್ಟೆಯಾಗಿ ಈಗಲೂ ಉಳಿದಿದೆ. ಇನ್ನು ಅವರ ತಾಯಿ ಸೋನಿಯಾ ಗಾಂಧಿ ಸಹ 1999ರಲ್ಲಿ ಪ್ರಚಾರವನ್ನು ಇಲ್ಲಿ ಮಾಡಿದ್ದರು. ಮೇಲಾಗಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಮೂಲಕ ಗಾಂಧಿ ಕುಟುಂಬ ಬಳ್ಳಾರಿ ಜಿಲ್ಲೆಯ ಒಡನಾಟ ರಾಹುಲ್ ಗಾಂಧಿಯಿಂದಲೂ ಮುಂದುವರೆದಿದೆ. ಇಂಥ ಹೊಸಪೇಟೆಯಲ್ಲಿ ಜರುಗಿದ ಕಾರ್ಯಕ್ರಮಕ್ಕೂ ಮುನ್ನ ರೆಡ್ಡಿ ಬಳಗದಲ್ಲಿ ಗುರುತಿಸಿಕೊಂಡಿದ್ದ ಸ್ಥಳೀಯ ಬಿಜೆಪಿ ಶಾಸಕ ಆನಂದ್ ಸಿಂಗ್ ಕೂಡ್ಲಿಗಿ ಶಾಸಕ ನಾಗೇಂದ್ರ ಕೈ ಹಿಡಿದು ಸಮಾವೇಶ ಯಶಸ್ವಿಗೊಳಿಸಿದರು. ರಾಹುಲ್ ಗೆ 25 ಲಕ್ಷ ಮೌಲ್ಯದ ವಾಲ್ಮೀಕಿ ಪುತ್ಥಳಿಯನ್ನು ನಾಗೇಂದ್ರ ನೀಡಿದರೆ, ಗದೆಯನ್ನು ಸಿಂಗ್ ರಾಹುಲ್ ಗೆ ನೀಡಿ ಫೋಟೋಗೆ ಪೋಸು ಕೊಟ್ಟರು. ಅಕ್ರಮ ಗಣಿಗಾರಿಕೆಯ ಆರೋಪಿಗಳೂ, ಜೈಲಿಗೆ ಹೋಗಿಬಂದವರನ್ನು ಸೆಳೆಯುವ ಮೂಲಕ ಸಿಎಂ ಸಿದ್ರಾಮಯ್ಯ ಕಾಂಗ್ರೆಸ್ ಸರ್ಕಾರಕ್ಕೆ ನೈತಿಕತೆಯಿಲ್ಲ ಎಂದು ಮಾತು ಕೇಳಿಬಂದಿತು. ಇದು ರಾಜಕೀಯ, ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಯಾಯಿತು.ಮುಂದುವರೆದ ಟೆಂಪಲ್ ರನ್

ಗುಜರಾತ್ ಚುನಾವಣೆಯಲ್ಲಿ ಯಶ ಕಂಡ ಟೆಂಪಲ್ ರನ್ ನಿರೀಕ್ಷೆಯಂತೆ ರಾಜ್ಯ ಪ್ರವಾಸದಲ್ಲಿ ಮುಂದುವರೆಯಿತು. ಆದರೆ ಹೊಸಪೇಟೆಗೂ ಬಂದರೂ ದಕ್ಷಿಣಕಾಶಿ ಹಂಪಿ ಶ್ರೀ ವಿರುಪಾಕ್ಷೇಶ್ವರ ದೇವಸ್ಥಾನಕ್ಕೆ ಭೇಟಿ ನೀಡದರ ಬಗ್ಗೆ ಅಪಸ್ವರ ಕೇಳಿಬಂದಿತು. ಹೊಸಪೇಟೆಗೆ ಬಂದ ರಾಹುಲ್ ಹಂಪಿಗೂ ಭೇಟಿ ನೀಡಬೇಕಾಗಿತ್ತು ಎಂದು ಜನರು ಇಚ್ಚಿಸಿದರು. ಆದರೆ ಹಂಪಿಗೆ ಭೇಟಿ ನೀಡಿದವರು ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಅಪನಂಬಿಕೆಗೋ ಇಲ್ಲವೇ ಮತಗಳಾಗಿ ಪರಿವರ್ತಿಸುವ ದೇವಾಲಯವಲ್ಲ ಎನ್ನುವ ಕಾರಣಕ್ಕೋ ಏನೋ ಹಂಪಿಗೆ ಭೇಟಿಯನ್ನು ರಾಹುಲ್ ಮಾಡಲಿಲ್ಲ. ಇದಕ್ಕೆ ಪುಷ್ಟಿಕೊಡುವಂತೆ ಸಿಎಂ ಸಿದ್ರಾಮಯ್ಯ ಕಳೆದ ನಾಲ್ಕು ವರುಷದಲ್ಲಿ ಅಪ್ಪಿತಪ್ಪಿಯೂ ಹಂಪಿ ದೇವಸ್ಥಾನಕ್ಕೆ ಭೇಟಿ ನೀಡಿಲ್ಲ. ಹಂಪಿ ಉತ್ಸವಕ್ಕೆ ಬಂದರೂ ಹಂಪಿಗೆ ಬಂದರೂ ದೇವಸ್ಥಾನಕ್ಕೆ ಹೋಗಲಿಲ್ಲ. ಆದರೆ ಲಕ್ಷಾಂತರ ಭಕ್ತರ ಆರಾಧ್ಯ ದೈವ ಕೊಪ್ಪಳದ ಶ್ರೀ ಹುಲಿಗೆಮ್ಮ ದೇವಸ್ಥಾನ ಹಾಗೂ ಲಿಂಗಾಯತ ಮಠವಾದ ಗವಿಸಿದ್ದೇಶ್ವರ ಮಠದ ಅಭಿನವ ಶ್ರೀಗಳು, ಅಲ್ಲಿಯ ದೇವಾಲಯಕ್ಕೆ ರಾಹುಲ್ ಭೇಟಿ ನೀಡಿ ಗಮನಸೆಳೆದರು. ಇನ್ನು ಯಲಬುರ್ಗಾ ದೇವಿ ದೇವಸ್ಥಾನ, ಕನಕಗಿರಿಯ ಶ್ರೀ ಲಕ್ಷ್ಮಿ ನರಸಿಂಹ ದೇವಾಲಯದ ದರುಶನ ಪಡೆದರು. ರಾಯಚೂರಿನ ಷಂಸಾದ್ ದರ್ಗಾಕ್ಕೂ ಸೌಹಾರ್ದಯುತ ಭೇಟಿ ನೀಡಿದರು.ಪ್ರದಾನಿ ಮೋದಿ ಟಾರ್ಗೆಟ್

ಹೈಕ ಜನಾರ್ಶಿವಾದ ಯಾತ್ರೆಯುದ್ದಕ್ಕೂ ರಾಹುಲ್ ಗಾಂಧಿ ತನ್ನ ಟಾರ್ಗೆಟ್ ಮೋದಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಮಾಡಿದ ಅರ್ದದಷ್ಟು ಕೆಲಸವನ್ನು ಪ್ರದಾನಿ ಮೋದಿ ಮಾಡಲಿಲ್ಲ. ಲೋಕಸಭೆಯಲ್ಲಿ ಒಂದುವರೆ ಗಂಟೆ ಕಾಲ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾಸ ಮಾಡಿದರೆ ಹೊರತೆ ಅಭಿವೃದ್ಧಿ ಕುರಿತು ಒಂದೇ ಮಾತು ಆಡಲಿಲ್ಲ ಎಂದು ತಮ್ಮ ಜನಾರ್ಶಿವಾದ ಯಾತ್ರೆಯುದ್ದಕ್ಕೂ ವಾಗ್ದಾಳಿ ಮುಂದುವರೆಸಿದರು. ಕಾಂಗ್ರೆಸ್ ವಿರುದ್ಧ ಮಾತಾಡುವುದೇ ಮೋದಿ ಕೆಲಸ ಎನ್ನುತ್ತ ರಾಹುಲ್ ಗಾಂಧಿ ತನ್ನ ಟಾರ್ಗೆಟ್ ಮೋದಿಯೇ ಎಂಬುದನ್ನು ತಮ್ಮ ಭಾಷಣದಲ್ಲಿಯೂ ಮುಂದುವರೆಸಿದರು. ಸಿಂಧನೂರಿನಲ್ಲಿ ಜರುಗಿದ ರೈತ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಬಹುತೇಕ ಪ್ರಶ್ನೆಗಳಿಗೆ ಸಿಎಂ ಸಿದ್ರಾಮಯ್ಯ ಉತ್ತರಿಸಿದರೇ ವಿನಃ ರಾಹುಲ್ ಹೆಚ್ಚೇನು ಪ್ರತಿಕ್ರಿಯೆ ನೀಡಲಿಲ್ಲ.ಮಿರ್ಚಿ, ಮಂಡಕ್ಕಿ ಹಾಗೂ ಪಕೋಡಾ

ದೇಶದಲ್ಲಿರುವ ನಿರುದ್ಯೋಗ ಸಂಬಂಧ ಪ್ರದಾನಿ ಮೋದಿ ಬಾಯಲ್ಲಿ ಬಂದ ಪಕೋಡಾ ಮಾತನ್ನೇ ಗಾಳವಾಗಿ ಸ್ವೀಕರಿಸಿ ಮೋದಿಗೆ ಟಾಂಗ್ ನೀಡಲು ಬೀದಿಬದಿಯ ಹೋಟೆಲ್ ನಲ್ಲಿ ಕೈ ನಾಯಕರೆಲ್ಲ ಒಂದೆಡೆ ಸೇರಿದಂತಿತ್ತು. ಫೆ.12ರಂದು ಮಧ್ಯಾಹ್ನ ರಾಯಚೂರು ತಾಲೂಕಿನ ಕಲ್ಮಲಾ ಗ್ರಾಮದಲ್ಲಿ ಮೌಲಾಸಾಬ್ ಶೆಡ್ ನಲ್ಲಿರುವ ಹೋಟೆಲ್ ನಲ್ಲಿ ಮಿರ್ಚಿ, ಮಂಡಕ್ಕಿ ಹಾಗೂ ಪಕೋಡೆ ಸವಿದರು. ಸಿಎಂ ಸಿದ್ರಾಮಯ್ಯ, ಅಧ್ಯಕ್ಷ ಡಾ ಜಿ ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ ಹಾದಿಯಾಗಿ ಕೈ ನಾಯಕರೆಲ್ಲ ತಿನ್ನುತ್ತ ಮೋದಿ ಸರಕಾರವನ್ನು ತೀಕ್ಷ್ಣವಾಗಿ ಟೀಕಿಸುವ ಪ್ರಯತ್ನ ಮಾಡಿದರು. ಆದರೆ ಗಾಂಧಿ ಕುಟುಂಬದ ರಾಹುಲ್ ಪೇಪರ್ ಮೇಲಿಟ್ಟಿದ್ದ ಮಿರ್ಚಿ ತಿಂದು, ಬೇರೆಯವರೆಗೂ ತಿನ್ನಿ ಎಂದೇಳಿ ತಿನ್ನಿಸಿದ್ದು ಅವರ ಸರಳತೆಯನ್ನು ತೋರಿಸುತಿತ್ತು. ಹೋಟೆಲ್ ನವರಿಗೆ ಕೊಡಲು ಡಿ ಕೆ ಶಿವಕುಮಾರ್ ಎರಡು ಸಾವಿರ ನೋಟು ರಾಹುಲ್ ಜೇಬಿಗಿಳಿಸಿದ್ದು, ಅದನ್ನು ನಯವಾಗಿ ಹೋಟೆಲ್ ನವರು ಸ್ವೀಕರಿಸಿದರು. ಮಿರ್ಚಿ, ಮಂಡಕ್ಕಿ, ಪಕೋಡಾ ಮೂಲಕ ರಾಹುಲ್ ಗಾಂಧಿ ಚರ್ಚೆಗೆ ನಾಂದಿ ಹಾಡಿದರು. ಇದು ಸಾಮಾಜಿಕ ಜಾಲತಾಣದಲ್ಲಿ ಬಿಸಿ ಬಿಸಿಯಾಗಿ ಹರಿದಾಡುತ್ತಿದೆ.ಜೈ..ಜೈ..ಕೈ..ಕೈ..

ಎಐಸಿಸಿ ಅಧ್ಯಕ್ಷರಾದ ಮೇಲೆ ಕರ್ನಾಟಕಕ್ಕೆ ಆಗಮಿಸಿದ ರಾಹುಲ್ ಗಾಂಧಿ ಯಶಸ್ವಿಯಾಗಬೇಕಿತ್ತು. ಇಲ್ಲಿಯವರೆಗೆ ತಾಯಿ ಸೋನಿಯಾಗಾಂಧಿ ಸಂಬಾಳಿಸಿಕೊಂಡು ಹೋಗುತ್ತಿದ್ದರು. ಆದರೆ ಈ ಬಾರಿ ತಾನೇ ಚುನಾವಣಾ ಪ್ರಚಾರವನ್ನು ತನ್ನ ನೇತೃತ್ವ ವಹಿಸಿಕೊಂಡು ಮುಂದಾಗಿದ್ದರಿಂದ ರಾಜ್ಯದ ಚುನಾವಣೆಯ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದವು. ಈ ಹಿನ್ನೆಲೆ ರಾಜ್ಯ ನಾಯಕರು ತನ್ನ ನಾಯಕ ರಾಹುಲ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಭಾರೀ ಜನರನ್ನೇ ಸೇರಿಸಿದ್ದರು. ಹೊಸಪೇಟೆಯಲ್ಲಿಯಂತೂ ಪ್ರತಿ ಗ್ರಾಮದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಬಸ್ , ಟ್ರಾಕ್ಸ್ ವ್ಯವಸ್ಥೆ ಮಾಡಲಾಗಿತ್ತು. ಕೊಪ್ಪಳ, ಕುಕನೂರು, ಕುಷ್ಟಗಿ, ಕನಕಗಿರಿ, ಗಂಗಾವತಿ, ಸಿಂಧನೂರು, ರಾಯಚೂರು, ದೇವದುರ್ಗ ಹೀಗೆ ಹೋದಲ್ಲೆಲ್ಲ ಜನವೋ ಜನ. ಸಮಾವೇಶದಲ್ಲಿ ಜನರನ್ನು ಕರೆತರುವಲ್ಲಿ ಸ್ಥಳೀಯ ಕೈ ನಾಯಕರು ಯಶಸ್ವಿಯಾಗಿದ್ದಾರೆ. ನಿಗಧಿತ ಸಮಯಕ್ಕೆ ಕಾರ್ಯಕ್ರಮ ಶುರುವಾಗದೆ ತಡವಾಗಿದ್ದಕ್ಕೆ ಮಹಿಳೆಯರನ್ನು ಕೆಲ ಕಾರ್ಯಕ್ರಮಗಳಲ್ಲಿ ರಾಹುಲ್ ಮಾತನಾಡುವ ವೇಳೆ ಸೀಟು ಬಿಟ್ಟು ಹೋಗುತ್ತಿದ್ದ ದೃಶ್ಯ ಕಂಡುಬಂದಿತು. ವೇದಿಕೆ ಮುಂಭಾಗದ ಮಹಿಳೆಯರ ಸೀಟುಗಳು ಕಾಲಿಯಿದ್ದಿದ್ದು ಇರಿಸುಮುರಿಸಿಗೂ ಕಾರಣವಾಯಿತು. ಆದರೆ ಯಾತ್ರೆಯುದ್ದಕ್ಕೂ ರಸ್ತೆಯಲ್ಲಿ ಬರುವ ಗ್ರಾಮಗಳಲ್ಲಿ ಜನರು ಬರ ಮಾಡಿಕೊಳ್ಳುವುದು, ಕುತೂಹಲದಿಂದ ನೋಡುವುದು, ಭಾರೀ ಜನಸ್ತೋಮವನ್ನು ನೋಡಿ ರಾಹುಲ್ ಖುಷಿಯಾದ್ರು. ಅವರ ಜನಪ್ರಿಯತೆ ಹೆಚ್ಚಾಗಲೂ ಇದು ಕಾರಣವಾಯಿತು.ಹೆಚ್ಚಾಗುತ್ತಿದೆ ರಾಹುಲ್ ಹವಾ!

ಎಐಸಿಸಿ ಅಧ್ಯಕ್ಷರಾದ ಮೇಲೆ ಜನಾರ್ಶಿವಾದ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜನಪ್ರಿಯತೆ ಹೆಚ್ಚಾದಂತೆ ಕಾಣುತ್ತಿದೆ. ಹಾಗೆ ರಾಜ್ಯದ ನಾಯಕರು ಸಿಎಂ ಸಿದ್ರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆಯಿಂದ ಹಿಡಿದು ಹಿರಿಯ ನಾಯಕರು ರಾಹುಲ್ ಗಾಂಧಿಯನ್ನು ಪುಶ್ಶಪ್ ಮಾಡುತ್ತಿದ್ದದ್ದು ಕಂಡುಬಂದಿತು. ತನ್ನ ತಾಯಿ ಸೋನಿಯಾಗಾಂಧಿಯೇ ತನ್ನ ಮಗ ರಾಹುಲ್ ಬಾಸ್ ಎಂದೇಳುವ ಮೂಲಕ ಕೈ ನಾಯಕರಿಗೆ ಸ್ಪಷ್ಟ ಸಂದೇಶ ನೀಡಿದ್ದರು. ಹಾಗಾಗಿ ರಾಹುಲ್ ಗಾಂಧಿ ಮೇನಿಯಾ ಎಂಬಂತೆ ರಾಜ್ಯದಲ್ಲಿ ಪ್ರವಾಸುದುದ್ದಕ್ಕೂ ಎಐಸಿಸಿ ಅಧ್ಯಕ್ಷರಿಗೆ ಮಾತ್ರ ಅತಿ ಹೆಚ್ಚು ಪ್ರಾಶಸ್ಯತೆಯನ್ನು ಸಹಜವಾಗಿ ನೀಡಿದರು. ಆದರೆ ರಾಹುಲ್ ಗಾಂಧಿ ಸರಳತೆ, ಸಾಕಷ್ಟು ಭದ್ರತೆ, ಭದ್ರತಾ ಸಿಬ್ಬಂದಿಗಳ ಮಧ್ಯೆ ಜನರನ್ನು ರಾಹುಲ್ ಮನ ಮಿಡಿಯುತ್ತಿತ್ತು. ಇದು ಭದ್ರತಾ ಸಿಬ್ಬಂದಿಗಳ ತಲೆನೋವಿಗೂ ಕಾರಣವಾಗಿತ್ತು.ಪ್ರತಿಭಟನೆ, ಕಪ್ಪು ಪಟ್ಟಿ ಪ್ರದರ್ಶನ

ಹಾಗಂತ ರಾಹುಲ್ ಗಾಂಧಿ ಎಲ್ಲೆಡೆ ಭವ್ಯ ಸ್ವಾಗತ ಸಿಗಲಿಲ್ಲ. ಹೊಸಪೇಟೆ, ರಾಯಚೂರು ಸೇರಿದಂತೆ ಎಲ್ಲೆಡೆ ದಲಿತಪರ ಸಂಘಟನೆಗಳು ಅದರಲ್ಲೂ ಸದಾಶಿವ ಆಯೋಗ ವರದಿ ಆಗ್ರಹಿಸಿ ರಾಹುಲ್ ವೇಳೆ ಪ್ರತಿಭಟನೆ ಮಾಡಿ ಬಂಧಿಸಿ ಅದರ ಬಿಸಿ ಕಡಿಮೆಗೊಳಿಸಿದರು. ಆದರೆ ರಾಯಚೂರಿನಲ್ಲಿ ರಾಹುಲ್ ಗಾಂಧಿ ಪ್ರಯಾಣಿಸುತ್ತಿದ್ದ ಜನಾರ್ಶಿವಾದ ಯಾತ್ರೆ ಬಸ್ ಗೆ ಕಪ್ಪು ಪಟ್ಟಿ ಪ್ರದರ್ಶಿಸಿದರು. ಸದಾಶಿವ ಆಯೋಗದ ವರದಿಗೆ ಒತ್ತಾಯಿಸಿ ರಕ್ಷಣಾ ಸಿಬ್ಬಂದಿ, ಪೊಲೀಸರನನ್ನು ಕಣ್ತಪ್ಪಿಸಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಸದಾಶಿವ ಆಯೋಗದ ಮುಖಂಡರನ್ನು ಕರೆಸಿ ಮಾತುಕತೆ ನಡೆಸಿ, ಜಾರಿಗೊಳಿಸುವಂತೆ ಸಮಯೋಚಿತವಾಗಿ ಸಿಎಂ ಗೆ ಸೂಚಿಸುವುದಾಗಿ ಭರವಸೆ ನೀಡಿ ಪ್ರೌಢತೆಯನ್ನು ರಾಹುಲ್ ಮೆರೆದರು.

ಕೊಪ್ಪಳದಿಂದ ಸ್ಪರ್ಧಿಸುತ್ತಾರಾ?

ಹೀಗೊಂದು ಅನುಮಾನ, ಪ್ರಶ್ನೆ ಜನರಲ್ಲಿ ಮೂಡುತ್ತಿದೆ. ಯಾಕೆಂದರೆ ನಾಲ್ಕು ದಿನಗಳ ಜನಾರ್ಶಿಯಾದ ಯಾತ್ರೆಯಲ್ಲಿ ನಾಲ್ಕು ದಿನಗಳಲ್ಲಿ ಎರಡು ದಿನ ಕೊಪ್ಪಳ ಜಿಲ್ಲೆಯಲ್ಲಿಯೇ ಕಳೆದಿದ್ದಾರೆ. ಹೊಸಪೇಟೆ ವೈಕುಂಠದಲ್ಲ ಅತಿರಥ ಮಹರಥರು ತಂಗುತಿದ್ದರು. ಆದರೆ ರಾಹುಲ್ ಗಾಂಧಿ ಕುಕನೂರಿನ ಅತಿಥಿಗೃಹದಲ್ಲಿ ಉಳಿದುಕೊಂಡರು. ಇದಕ್ಕೆ ಉನ್ನತ ಶಿಕ್ಷಣ ಸಚಿವ ಬಸವರಾಜ್ ರಾಯರೆಡ್ಡಿ ಮತ್ತು ಅವರಿಗಿರುವ ಹೈಕಮಾಂಡ್ ಸಂಪರ್ಕ ಕಾರಣವಿರಬಹುದು. ಉತ್ತರ ಪ್ರದೇಶದಲ್ಲಿ ಹೇಳಿಕೊಳ್ಳುವಂಥ ಜನಪ್ರಿಯತೆ ಇಲ್ಲದೇ ಇರುವುದು, ಕೊಪ್ಪಳ ಜಿಲ್ಲೆ ಲೋಕಸಭಾ ಸಾಮಾನ್ಯ ಕ್ಷೇತ್ರವಾಗಿರುವುದರಿಂದ ಇಲ್ಲಿ ರಾಹುಲ್ ಗಾಂಧಿ ಬರ್ತಾರಾ, ಸಿಎಂ ಸಿದ್ರಾಮಯ್ಯ ಕೊಪ್ಪಳ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತು ಮೊದಲಿನಿಂದಲೂ ಇದೆ. ಈ ಹಿನ್ನೆಲೆ ಈಗಿನಿಂದಲೇ ರಾಹುಲ್ ಗಾಂಧಿ ಟ್ರೈಯಲ್ ರನ್ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ಎಐಸಿಸಿ ಅಧ್ಯಕ್ಷರಾದ ಮೇಲೆ ತನಗೂ ಹಾಗೂ ರಾಜ್ಯ ಚುನಾವಣೆ ಅಗ್ನಿಪರೀಕ್ಷೆಗೆ ರಾಹುಲ್ ಗಾಂಧಿ ತನ್ನನ್ನು ತಾನು ಮುಖಂಡತ್ವಕ್ಕೆ ಎದುರುಗೊಳ್ಳುತ್ತಿದ್ದಾರೆ. ಮೊದಲ ಹಂತದ ನಾಲ್ಕು ದಿನಗಳ ರಾಹುಲ್ ಪ್ರವಾಸ ಯಶ ಕಂಡಿದೆ. ಯಾತ್ರೆಯುದ್ದಕ್ಕೂ ಕಂಡ ಭಾರೀ ಜನಸ್ತೋಮ ಮತವಾಗಿ ಪರಿವರ್ತನೆಯಾಗುತ್ತಾ ಎನ್ನುವುದಕ್ಕಿಂತ ರಾಹುಲ್ ಜನಪ್ರಿಯತೆ ಸ್ವಲ್ಪಮಟ್ಟಿಗೆ ಹೆಚ್ಚಾಗಿದೆ ಎಂಬುದಂತೂ ಸುಳ್ಳಲ್ಲ.
First published:February 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ