ಕೋಲಾರ: ಈಗಾಗಲೇ ಮೂರು ಮದುವೆ (Marriage) ಯಾಗಿದ್ದ ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕಿಯನ್ನು (Minor Girl) ಪುಸಲಾಯಿಸಿ ಆಕೆಯೊಂದಿಗೆ ಪರಾರಿಯಾಗಿರುವ ಘಟನೆ ಕೋಲಾರ (Kolar) ತಾಲೂಕಿನ ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ (Vemagal Police Station) ನಡೆದಿದೆ. ಕೋಲಾರದ ನರಸಾಪುರ (Narasapura) ಗ್ರಾಮದ ಸಂತೋಷ್ ಅಪ್ರಾಪ್ತೆಯೊಂದಿಗೆ ಎಸ್ಕೇಪ್ ಆಗಿರುವ ಆರೋಪಿಯಾಗಿದ್ದು, ಬಾಲಕಿಯ ಪೋಷಕರು ಆತನ ವಿರುದ್ಧ ಪ್ರಕರಣವನ್ನು ದಾಖಲಿಸಿ ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ. ನಿತ್ಯ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಬಾಲಕಿಯನ್ನು ಪುಸಲಾಯಿಸಿರುವ ಆರೋಪಿ ಸಂತೋಷ್, ಆಕೆಯನ್ನು ಕರೆದುಕೊಂಡು ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಆಟೋ ಚಾಲಕನಾಗಿರುವ ಆರೋಪಿ ಈಗಾಗಲೇ ಮೂರು ಮದುವೆಯಾಗಿ ಯುವತಿಯರಿಗೆ ಮೋಸ ಮಾಡಿದ್ದನಂತೆ, ಈಗ ಅಪ್ರಾಪ್ತ ಬಾಲಕಿಯ ಜೀವನವನ್ನು ಹಾಳು ಮಾಡಲು ಮುಂದಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿ ಸಂತೋಷ್ ನರಸಾಪುರ ಗ್ರಾಮದಲ್ಲಿ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದ. ನಿತ್ಯ ಕೂಲಿ ಕೆಲಸಗಾರರನ್ನು ಕರೆದುಕೊಂಡು ಹೋಗುವ ಕೆಲಸ ಮಾಡುತ್ತಿದ್ದ. ಅಪ್ರಾಪ್ತ ಬಾಲಕಿ ಕೂಡ ತನ್ನ ಅಜ್ಜಿಯೊಂದಿಗೆ ಕೂಲಿ ಕೆಲಸಕ್ಕೆ ಅಂತ ಆತನ ಆಟೋದಲ್ಲೇ ಹೋಗಿ ಬರುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: Udupi: ಹೋರಾಟಕ್ಕೆ ಸಜ್ಜಾಗ್ತಿದ್ದಾರೆ ಸಮುದ್ರದ ಮಕ್ಕಳು! ಉಡುಪಿ ಮೀನುಗಾರರ ಜೀವಕ್ಕೆ ಬೇಕಿದೆ ರಕ್ಷಣೆ
ಕೆಲಸಕ್ಕೆ ಅಂತ ಹೋಗುತ್ತಿದ್ದ ಬಾಲಕಿಯನ್ನೇ ಪುಸಲಾಯಿಸಿದ
ನಿತ್ಯ ಕೂಲಿ ಕೆಲಸಕ್ಕೆ ಹೋಗುತ್ತಿದ್ದ ಬಾಲಕಿಯನ್ನು ಆರೋಪಿ ಪುಸಲಾಯಿಸಿದ್ದಾನಂತೆ. ಈ ನಡುವೆ ಡಿಸೆಂಬರ್ 5ರಂದು ಬಾಲಕಿ ಅಜ್ಜಿ ಅನಾರೋಗ್ಯದ ಕಾರಣ ಕೆಲಸಕ್ಕೆ ಹೋಗದೆ, ಬಾಲಕಿಯೊರ್ವಳನ್ನೇ ಇತರರೊಂದಿಗೆ ಕಳುಹಿಸಿದ್ದಾರೆ. ಈ ಸಂದರ್ಭವನ್ನೇ ತನ್ನ ಅನುಕೂಲಕ್ಕೆ ಬಳಸಿಕೊಂಡಿರುವ ಆರೋಪಿ, ಬಾಲಕಿಯೊಂದಿಗೆ ಎಸ್ಕೇಪ್ ಆಗಿದ್ದಾನೆ.
ಆದರೆ ಕೆಲಸಕ್ಕೆ ಹೋದ ಬಾಲಕಿ ಮನೆಗೆ ವಾಪಸ್ ಬಾರದಿದ್ದ ಕಾರಣ ಆತಂಕಗೊಂಡ ಅಜ್ಜಿ, ಆಕೆಗಾಗಿ ಹುಡುಕಾಟ ನಡೆಸಿದಾಗ ಆಟೋ ಡ್ರೈವರ್ ಕರಾಮತ್ತು ಬೆಳಕಿಗೆ ಬಂದಿದೆ. ಕೂಡಲೇ ಬಾಲಕಿಯ ಪೋಷಕರು ವೇಮಗಲ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಆರೋಪಿ ಬಗ್ಗೆ ಮಾಹಿತಿ ನೀಡಿದ ಮೂರನೇ ಹೆಂಡತಿ
ಇನ್ನು, ಆರೋಪಿ ಸಂತೋಷ್ ಮೂರನೇ ಪತ್ನಿ ಕೂಡ ಪೊಲೀಸ್ ಠಾಣೆಗೆ ತೆರಳಿ ಗಂಡನ ಕುರಿತು ಮಾಹಿತಿಯನ್ನು ನೀಡಿದ್ದಾರಂತೆ. ಸದ್ಯ ಆಕೆಯೂ ಆರೋಪಿಯಿಂದ ದೂರ ಆಗಿ ಜೀವನ ನಡೆಸುತ್ತಿದ್ದಾರಂತೆ. ಈ ಹಿಂದೆಯೂ ಆರೋಪಿ ಹುಡುಗಿಯನ್ನು ನಂಬಿಸಿ ಅವರನ್ನು ಕರೆದುಕೊಂಡು ಮದುವೆಯಾಗುತ್ತಿದ್ದನಂತೆ.
ಇದೇ ರೀತಿ ಇದುವರೆಗೂ ಮೂವರು ಯುವತಿಯರ ಬಾಳಿನಲ್ಲಿ ಆರೋಪಿ ಆಟವಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈತನೊಂದಿಗೆ ಮದುವೆಯಾಗಿದ್ದ ಯುವತಿಯರು ಆತನೊಂದಿಗೆ ಬಾಳಲು ಸಾಧ್ಯವಾಗದೇ ಕೆಲವೇ ದಿನಗಳಲ್ಲಿ ಬಿಟ್ಟು ಹೋಗಿದ್ದಾರಂತೆ.
ಇದನ್ನೂ ಓದಿ: Bengaluru: ಕಾಲೇಜು ಕಟ್ಟಡದಿಂದ ಜಿಗಿದ ವಿದ್ಯಾರ್ಥಿನಿ ಚಿಕಿತ್ಸೆ ಫಲಕಾರಿಯಾಗದೇ ಸಾವು!
ಸ್ಥಳೀಯ ಗ್ರಾಮಸ್ಥರಿಗೆ ಫೋಟೋ ಕಳುಹಿಸಿದ್ದ ಆರೋಪಿ
ಆರೋಪಿ ಬಾಲಕಿಯನ್ನು ಕರೆದುಕೊಂಡು ಹೋಗಿರುವ ಬಗ್ಗೆ ಕೆಲವು ಫೋಟೋಗಳನ್ನು ತೆಗೆದು ಗ್ರಾಮದಲ್ಲಿದ್ದ ಕೆಲ ಸ್ಥಳೀಯರಿಗೆ ಕಳುಹಿಸಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಆರೋಪಿ ನಮ್ಮ ಬಾಲಕಿಯನ್ನು ಕಿಡ್ನಾಪ್ ಮಾಡಿದ್ದು, ಹೇಗಾದರೂ ಮಾಡಿ ಆಕೆಯನ್ನು ರಕ್ಷಣೆ ಮಾಡಿ, ಆಕೆಯ ಜೀವನವನ್ನೇ ಆರೋಪಿ ಹಾಳು ಮಾಡ್ತಾನೆ ಎಂದು ಕುಟುಂಬಸ್ಥರು ಪೊಲೀಸರ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ