news18-kannada Updated:January 7, 2021, 2:06 PM IST
ಸಚಿವ ಜಗದೀಶ್ ಶೆಟ್ಟರ್
ಚಾಮರಾಜನಗರ (ಜ. 07): ಮುಖ್ಯಮಂತ್ರಿ ಹುದ್ದೆ ಖಾಲಿ ಇಲ್ಲ, ಬಿ.ಎಸ್ . ಯಡಿಯೂರಪ್ಪನವರೇ ಪೂರ್ಣಾವಧಿ ಪೂರೈಸುತ್ತಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಚಾಮರಾಜನಗರ ತಾಲೂಕು ಕೆಲ್ಲಂಬಳ್ಳಿ-ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಸಿಎಂ ಬದಲಾವಣೆ ದೂರವಾದ ವಿಚಾರವಾಗಿದೆ.ಈ ಬಗ್ಗೆ ರಾಜ್ಯ ಬಿಜೆಪಿ ಉಸ್ತುವಾರಿ ಅರಣ್ ಸಿಂಗ್ ಸಹ ಈಗಾಗಲೇ ಸ್ಪಷ್ಟಪಡಿಸಿದ್ದಾರೆ, ನಾನು ಸಹ ಅದನ್ನೇ ಸ್ಪಷ್ಟಪಡಿಸುತ್ತಿದ್ದೇನೆ, ಇನ್ನು ಎರಡುವರೆ ವರ್ಷ ಕಾಲ ಯಡಿಯೂರಪ್ಪ ನವರೇ ಮುಖ್ಯಮಂತ್ರಿಗಳಾಗಿರುತ್ತಾರೆ, ರಾಜ್ಯ ಉಸ್ತುವಾರಿ ಯವರೇ ಹೇಳಿದ ಮೇಲೆ ಯಡಿಯೂರಪ್ಪ ಬದಲಾವಣೆ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಚಿವ ರೇಣುಕಾಚಾರ್ಯ ಅವರ ನಡುವೆ ನಡೆಯುತ್ತಿರುವ ಟಾಕ್ ವಾರ್ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದು ನನಗೆ ಸಂಬಂಧಿಸಿದ ವಿಚಾರವಲ್ಲ, ಪಕ್ಷದ ಅಧ್ಯಕ್ಷರು, ಮುಖ್ಯಮಂತ್ರಿ ಗಳು ಈ ವಿಚಾರ ಬಗೆಹರಿಸುತ್ತಾರೆ, ಎಲ್ಲವೂ ಸರಿಹೋಗಲಿದೆ ಎಂದರು. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರ, ಅವರು ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ನಿರ್ಧರಿಸುತ್ತಾರೆ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಚಾಮರಾಜನಗರಕ್ಕೆ ಹಿಂದೆ ಸಚಿವನಾಗಿದ್ದಾಗ, ಸ್ಪೀಕರ್ ಆಗಿದ್ದಾಗ, ಸಿಎಂ ಆಗಿದ್ದಾಗ ಹೀಗೆ ಹಲವಾರು ಬಾರಿ ಬಂದಿದ್ದೇನೆ ಈಗ ಕೈಗಾರಿಕಾ ಸಚಿವನಾದ ಬಳಿಕ ಮೊದಲ ಸಲ ಬಂದಿದ್ದೇನೆ ಎನ್ನುವ ಮೂಲಕ ಚಾಮರಾಜನಗರಕ್ಕೆ ಬರಲು ಯಾವುದೇ ಹಿಂಜರಿಕೆ ಇಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಪರೋಕ್ಷವಾಗಿ ಹೇಳಿದರು. ಚಾಮರಾಜನಗರಕ್ಕೆ ಮುಖ್ಯಮಂತ್ರಿ ಭೇಟಿ ನೀಡದೆ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು , ಚಾಮರಾಜನಗರದ ಪತ್ರಕರ್ತರು ಸಿಎಂ ಬರಬೇಕೆಂದು ಕೇಳುತ್ತಿದ್ದಾರೆ ಎಂದು ಸಿಎಂ ಯಡಿಯೂರಪ್ಪವನರಿಗೆ ತಿಳಿಸುತ್ತೇನೆ ಎಂದರು
ಪರಿಹಾರ ಕೊಟ್ಟಿಲ್ಲ: ಜಮೀನು ಮಾಲೀಕರ ಅಳಲು
ಕೆಲ್ಲಂಬಳ್ಳಿ ಬದನಗುಪ್ಪೆ ಕೈಗಾರಿಕಾ ಪ್ರದೇಶಕ್ಕೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿದ್ದ ವೇಳೆ, ಕೈಗಾರಿಕಾ ವಸಾಹತು ಗೆ ತಮ್ಮ ಜಮೀನು ಸ್ವಾಧೀನಪಡಿಸಿಕೊಂಡು ಹಲವು ವರ್ಷಗಳೆ ಕಳೆದರು ಇನ್ನೂ ಪರಿಹಾರ ನೀಡಿಲ್ಲ ಹಾಗು ಉದ್ಯೋಗವನ್ನು ನೀಡಿಲ್ಲ ಎಂದು ಕೆಲವು ರೈತರು ತಮ್ಮ ಅಳಲು ತೋಡಿಕೊಂಡರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಕೈಗಾರಿಕಾ ಸಚಿವರಾಗಿದ್ದ ಕೆ.ಜೆ.ಜಾರ್ಜ್ ಅವರು ಭೇಟಿ ನೀಡಿದ್ದ ವೇಳೆಯು ಅರ್ಜಿ ಕೊಟ್ಟಿದ್ದೇವೆ, ಅಧಿಕಾರಿಗಳು ಇಂದು ನಾಳೆ ಎಂದು ಹೇಳಿಕೊಂಡು ಬರುತ್ತಿದ್ದಾರೆ , ಒಂದು ಎಕರೆ, ಒಂದುವರೆ ಎಕರೆ ಜಮೀನು ಹೊಂದಿದ್ದ ರೈತರಿಗೆ ಹಾಗು ಜಮೀನುಗಳಲ್ಲಿದ್ದ ಮರಗಳಿಗೆ ಪರಿಹಾರ ನೀಡಿಲ್ಲ ಇಲ್ಲಿ ಆರಂಭವಾಗಿರುವ ಕೈಗಾರಿಕೆಗಳಲ್ಲಿ ಅರ್ಹತೆ ಇದ್ದರೂ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ ಎಂದು ಅವರು ದೂರಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಜಗದೀಶ್ ಶೆಟ್ಡರ್, ಯಾರಿಗೆ ಪರಿಹಾರ ಬಂದಿಲ್ಲವೋ ಅಂತಹವರನ್ನು ಬೆಂಗಳೂರಿಗೆ ಕರೆಸುತ್ತೇನೆ, ಯಾವುದೇ ಸಮಸ್ಯೆ ಇಲ್ಲದಿದ್ದರೆ ತಕ್ಷಣ ಪರಿಹಾರ ಕೊಡಿಸುವ ಬಗ್ಗೆ ಕ್ರಮವಹಿಸುತ್ತೇನೆ, ಅಲ್ಲದೆ ಸ್ಥಳೀಯರಿಗೆ ಉದ್ಯೋಗವಕಾಶ ನೀಡುವ ಬಗ್ಗೆಯು ಸಂಬಂಧಿಸಿದವರಿಗೆ ತಿಳಿಸುತ್ತೇನೆ ಎಂದರು.
( ಎಸ್.ಎಂ.ನಂದೀಶ್)
Published by:
Latha CG
First published:
January 7, 2021, 2:06 PM IST