ಚಾಮರಾಜನಗರ(ಫೆ. 09): ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಅರಣ್ಯಗ್ರಾಮ ಪಚ್ಚೆದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಳೆ, ಫೆಬ್ರುವರಿ 10ರಂದು ವಾಸ್ತವ್ಯ ಮಾಡಲಿದ್ದಾರೆ. ಶಿಕ್ಷಣ ಸಚಿವರಾದ ನಂತರ ರಾಜ್ಯದಲ್ಲಿ ಇದು ಅವರ ಮೂರನೇ ಶಾಲಾ ವಾಸ್ತವ್ಯವಾಗಿದೆ.
ನಾಳೆ, ಸೋಮವಾರ ಸಂಜೆ 6.30ಕ್ಕೆ ಪಚ್ಚೆದೊಡ್ಡಿ ಗ್ರಾಮಕ್ಕೆ ಭೇಟಿ ನೀಡುವ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಅವರು ಆ ಭಾಗದ ಶೈಕ್ಷಣಿಕ ಹಾಗೂ ಇತರೆ ಮೂಲಭೂತ ಸೌಲಭ್ಯಗಳ ಬಗ್ಗೆ ಸಂವಾದ ಮಾಡಲಿದ್ದಾರೆ. ಪಚ್ಚೆದೊಡ್ಡಿ, ಕಾಂಚಳ್ಳಿ, ಅಜ್ಜಿಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಸಚಿವರೊಂದಿಗಿನ ಸಂವಾದದಲ್ಲಿ ಪಾಲ್ಗೊಳ್ಳಲಿದ್ಧಾರೆ. ಸಕಾಲ ಮತ್ತು ಕಾರ್ಮಿಕ ಸಚಿವರೂ ಆಗಿರುವ ಸುರೇಶ್ ಕುಮಾರ್ ಈ ಸಂವಾದದ ನಂತರ ಪಚ್ಚೆದೊಡ್ಡಿ ಗ್ರಾಮದ ಶಾಲೆಯಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಸಚಿವರೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಸಹ ಗ್ರಾಮಕ್ಕೆ ತೆರಳಲಿದೆ.
ಇದನ್ನೂ ಓದಿ: ಬಿಜೆಪಿ ಕಚೇರಿ ಕಸ ಗುಡಿಸುವ ಕೆಲಸ ಮುಗಿದಿದ್ದರೆ ಕ್ಷೇತ್ರಕ್ಕೆ ಬನ್ನಿ; ಕುಮಟಳ್ಳಿ ವಿರುದ್ದ ಅಥಣಿ ಜನರ ಆಕ್ರೋಶ
ಪಚ್ಚೆದೊಡ್ಡಿ ಗ್ರಾಮವು ಹನೂರು ಪಟ್ಟಣದಿಂದ ಸುಮಾರು 15 ಕಿ.ಮೀ. ದೂರದಲ್ಲಿದ್ದು ಕಚ್ಚಾ ರಸ್ತೆಯ ಮೂಲಕ ಮಾತ್ರ ಸಂಪರ್ಕ ಹೊಂದಿದೆ. ಇದು ಅರಣ್ಯದೊಳಗಿರುವ ಗ್ರಾಮವಾಗಿದೆ. ಸುಮಾರು 60 ಮನೆಗಳಿದ್ದು 200 ರಷ್ಟು ಜನಸಂಖ್ಯೆ ಹೊಂದಿದೆ.
ಸಚಿವರು ತುಮಕೂರು ಜಿಲ್ಲೆಯ ಅಚ್ಚಮ್ಮನಹಳ್ಳಿಯಲ್ಲಿ ತಮ್ಮ ಮೊದಲನೆಯ ಶಾಲಾ ವಾಸ್ತವ್ಯ ಹಾಗೂ ಚಾಮರಾಜನಗರ ಜಿಲ್ಲೆಯ ಗೋಪೀನಾಥಂನಲ್ಲಿ ಎರಡನೇಯ ಶಾಲಾ ವಾಸ್ತವ್ಯ ನಡೆಸಿದ್ದರು. ಇದೀಗ ತಮ್ಮ ಮೂರನೇ ಶಾಲಾ ವಾಸ್ತವ್ಯವನ್ನು ಚಾಮರಾಜನಗರ ಜಿಲ್ಲೆಯ ಪಚ್ಚೆದೊಡ್ಡಿಯಲ್ಲಿ ಕೈಗೊಂಡಿದ್ದಾರೆ.
ಇದನ್ನೂ ಓದಿ: ಡಿಕೆಶಿ ನನ್ನನ್ನು ವಿರೋಧಿಸಿದ್ದಕ್ಕೆ ನಾನು ದೊಡ್ಡ ಲೀಡರ್ ಆದೆ; ರಮೇಶ್ ಜಾರಕಿಹೊಳಿ
ಪಚ್ಚೆದೊಡ್ಡಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆಯಿದ್ದು 6 ತರಗತಿಯಿಂದ ಮುಂದಿನ ವಿದ್ಯಾಭ್ಯಾಸಕ್ಕೆ 5 ಕಿಲೋ ಮೀಟರ್ ದೂರದ ಅಜ್ಜೀಪುರಕ್ಕೆ ನಡದೇ ಬರಬೇಕು. ಅರಣ್ಯ ಗ್ರಾಮವಾಗಿರುವುದರಿಂದ ಯಾವುದೇ ವಾಹನ ಸೌಲಭ್ಯವಿಲ್ಲ. ಕಲ್ಲುಮುಳ್ಳುಗಳ ಕಡಿದಾದ ಹಾದಿಯಲ್ಲೇ ಕಾಲ್ನಡಿಗೆಯಲ್ಲಿ ಸಾಗಬೇಕು. ಜೊತೆಗೆ ಕಾಡುಪ್ರಾಣಿಗಳ ಭೀತಿಯಿದ್ದು ಮಕ್ಕಳು ಭಯದಿಂದಲೇ ಸಂಚರಿಸಬೇಕು.
ಮಕ್ಕಳು ಶಾಲೆಗೆ ಕಚ್ಚಾ ಹಾದಿಯಲ್ಲಿ ಕಾಲ್ನಡಿಗೆಯಲ್ಲಿ ಹೋಗಲು ಕನಿಷ್ಠ ಒಂದುವರೆ ಗಂಟೆ ಬೇಕು. ವಾಪಸ್ ಬರಲು ಅಷ್ಟೇ ಸಮಯ ಹಿಡಿಯುತ್ತೆ. ಇದರಿಂದ ಮಕ್ಕಳು ಸಾಕಷ್ಟು ಬಸವಳಿಯುವುದರಿಂದ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಈ ಗ್ರಾಮಕ್ಕೆ ಬರುತ್ತಿರುವುದು ಊರಿನವರಿಗೆ ಭರವಸೆ ಮೂಡಲು ಕಾರಣ ಸಿಕ್ಕಂತಾಗಿದೆ. ಸಚಿವರ ವಾಸ್ತವ್ಯದಿಂದಾಗಿ ಇಲ್ಲಿನ ಮಕ್ಕಳ ಸಮಸ್ಯೆಗೆ ಮುಕ್ತಿ ಸಿಗುತ್ತಾ? ಶಾಲೆಗೆ ಹೋಗಿಬರಲು ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸುತ್ತಾರಾ? ಅರಣ್ಯ ಗ್ರಾಮಕ್ಕೆ ಉತ್ತಮ ರಸ್ತೆ ಕಲ್ಪಿಸಲು ಸಾಧ್ಯವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗುತ್ತದಾ ಎಂದು ಕಾದುನೋಡಬೇಕು.
(ವರದಿ: ಎಸ್.ಎಂ. ನಂದೀಶ್)
ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ