ಶಾಲಾರಂಭದಲ್ಲಿ ಕರ್ನಾಟಕವೇ ಮುಂದು; ಸಚಿವ ಸುರೇಶ್ ಕುಮಾರ್ ಹೇಳಿಕೆ
ಮಕ್ಕಳ ಹಿತದೃಷ್ಟಿಯಿಂದ ಪೋಷಕರೊಂದಿಗೆ ಮಾತನಾಡಿಕೊಂಡು ಸೂತ್ರವೊಂದನ್ನು ತಂದರೆ ನಾನಂತೂ ಎಲ್ಲರಿಗೂ ಹಿತವಾಗುವಂತಹ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.
ಬೆಂಗಳೂರು (ಫೆಬ್ರವರಿ 24): ಆಂಧ್ರ ಮತ್ತು ಪಂಜಾಬ್ ಹೊರತುಪಡಿಸಿದರೆ ಆರನೇ ತರಗತಿಯಿಂದ ಶಾಲೆ ಆರಂಭ ಮಾಡಿರುವುದು ನಮ್ಮ ರಾಜ್ಯ ಮಾತ್ರ. ನಾವು ಎಲ್ಲರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಇನ್ನೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಒಂದನೇ ತರಗತಿಯಿಂದ ಶಾಲೆ ಆರಂಭಿಸಲೂ ಚಿಂತನೆ ನಡೆಸಿದ್ದೇವೆ. ಹಾಗೆಯೇ ಮಕ್ಕಳ ಮತ್ತು ಶಾಲೆಗಳ ಹಿತದೃಷ್ಟಿಯಿಂದ ಶಾಲಾ ದಾಖಲಾತಿ ಸಮಯವನ್ನೂ ವಿಸ್ತರಿಸಲಾಗಿದೆ. ಇದೆಲ್ಲವನ್ನೂ ನಮ್ಮ ಆಡಳಿತ ಮಂಡಳಿಗಳೂ ಗಮನಿಸಬೇಕಿದೆ ಎಂದೂ ಸುರೇಶ್ ಕುಮಾರ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಖಾಸಗಿ ಶಾಲೆಗಳ ಶುಲ್ಕದ ಬಗ್ಗೆಯೂ ಮಾತನಾಡಿರುವ ಸಚಿವರು, "ನಾನಂತೂ ಯಾವುದೇ ರೀತಿಯ ಮಾತುಕತೆಗೆ ಮುಕ್ತನಾಗಿದ್ದೇನೆ. ಆದರೆ ನೀವು ಮಕ್ಕಳ ಹಿತದೃಷ್ಟಿಯಿಂದ ಪೋಷಕರೊಂದಿಗೆ ಮಾತನಾಡಿಕೊಂಡು ಸೂತ್ರವೊಂದನ್ನು ತಂದರೆ ನಾನಂತೂ ಎಲ್ಲರಿಗೂ ಹಿತವಾಗುವಂತಹ ನಿರ್ಧಾರ ಕೈಗೊಳ್ಳಲು ಹಿಂಜರಿಯುವುದಿಲ್ಲ. ಆದರೆ ಈ ಸಂದರ್ಭದಲ್ಲಿ ಆರ್ಥಿಕವಾಗಿ ಜರ್ಝರಿತವಾಗಿರುವ ಪೋಷಕರ ಹಿತ ಮತ್ತು ನಮ್ಮ ಶಿಕ್ಷಕರ ಹಿತಗಳೂ ಮುಖ್ಯವಾಗಬೇಕಿದೆ. ನಮ್ಮ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಸೃಷ್ಟಿಸಬೇಕೆಂಬುದು ನಮ್ಮ ಹಾಗೂ ನಿಮ್ಮ ಉದ್ದೇಶವಾಗಿದೆ. ಅದಕ್ಕಾಗಿ ನಾವೆಲ್ಲರೂ ಶ್ರಮಿಸಬೇಕಿದೆ. ಅದನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯೋಣ " ಎಂದು ಅಭಿಪ್ರಾಯಪಟ್ಟಿದ್ದಾರೆ.
ಸುರಕ್ಷಿತ ನಿಯಮಗಳ ಸರಳೀಕರಣ;
ನವೀಕರಣಕ್ಕೆ ವಿದ್ಯಾರ್ಥಿ ಸುರಕ್ಷತೆ ಮತ್ತು ಕಟ್ಟಡ ಸುಸ್ಥಿರ ಪ್ರಮಾಣ ಪತ್ರಗಳನ್ನು ಪಡೆಯುವುದು ನಮ್ಮ ಸರ್ಕಾರ ಬಂದ ಮೇಲೆ ಮಾಡಿದ ಆದೇಶವಲ್ಲ. ತಮಿಳುನಾಡಿನ ಕುಂಭಕೋಣಂ ಮತ್ತು ಗುಜರಾತಿನ ವಡೋದರ ಶಾಲೆಗಳ ವಿದ್ಯಾರ್ಥಿಗಳು ಶಾಲಾ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಮಾಡಿದ ಆದೇಶದ ಹಿನ್ನೆಲೆಯಲ್ಲಿ ಸರ್ಕಾರ ಅದನ್ನು ಪಾಲಿಸಬೇಕಿದೆ.
ಆದರೂ ತಮ್ಮ ಬೇಡಿಕೆಯಂತೆ ಅವುಗಳನ್ನು ಯಾವ ರೀತಿಯಲ್ಲಿ ಸರಳೀಕರಿಸಬೇಕೆಂಬುದನ್ನು ನಾವೆಲ್ಲ ಇನ್ನೊಂದೆರಡು ದಿನಗಳಲ್ಲಿ ಕುಳಿತು ಚರ್ಚೆ ಮಾಡೋಣ. ಅದಕ್ಕಾಗಿ ಆನ್ಲೈನ್ನಲ್ಲಿ ಎರಡೂ ಇಲಾಖೆಗಳ ಕ್ಲಿಯರೆನ್ಸ್ ಪಡೆದುಕೊಳ್ಳುವಂತೆ ಮಾಡುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದು ಸಚಿವರು ಹೇಳಿದರು.
ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಕಡತಗಳು ಧೂಳು ತಿನ್ನತ್ತಿದ್ದು, ಯಾವುದೇ ಕೆಲಸಗಳಾಗುತ್ತಿಲ್ಲ ಎಂಬ ಆಡಳಿತ ಮಂಡಳಿಗಳ ಪ್ರಸ್ತಾಪಕ್ಕೆ, ಇದನ್ನು ತಡೆಯಲೆಂದು ಇದೇ ಮಾರ್ಚ್ ಒಂದರಿಂದ ವಿಭಾಗ ಮಟ್ಟ ಮತ್ತು ನಂತರ ಜಿಲ್ಲಾ ಮಟ್ಟದಲ್ಲಿ ಕಡತ ವಿಲೇವಾರಿ ಆಂದೋಲನ ನಡೆಸಲಾಗುವುದು ಎಂದಿದ್ದಾರೆ.
ಆರ್.ಟಿ.ಇ. ಶುಲ್ಕ ಮರುಪಾವತಿ ನಿಯಮ ಸಡಿಲಿಕೆ;
ಹಾಗೆಯೇ ಕೊರೋನಾ ಹಿನ್ನೆಲೆಯಲ್ಲಿ ಶಾಲೆಗಳು ತಡವಾಗಿ ಆರಂಭವಾಗಿರುವುದು ಮತ್ತು ಮಕ್ಕಳ ಶಾಲಾ ಹಾಜರಾತಿಯನ್ನು ಪೋಷಕರು ಮತ್ತು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟು ಪ್ರಸ್ತುತ ವರ್ಷ ಹಾಜರಾತಿ ಕಡ್ಡಾಯವಲ್ಲವೆಂದು ಶಿಕ್ಷಣ ಇಲಾಖೆಯೇ ಆದೇಶಿಸಿರುವ ಹಿನ್ನೆಲೆಯಲ್ಲಿ ಖಾಸಗಿ ಅನುದಾನರಹಿತ ಶಾಲೆಗಳ ಹಿತದೃಷ್ಟಿಯಿಂದ ಪ್ರಸ್ತುತ ಶೈಕ್ಷಣಿಕ ವರ್ಷಕ್ಕೆ ಸಂಬಂಧಿಸಿದಂತೆ ಮಕ್ಕಳಿಗೆ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ಮತ್ತು ಆರ್.ಟಿ.ಇ. ಶುಲ್ಕ ಮರುಪಾವತಿಗೆ ಸಂಬಂಧಿಸಿದಂತೆ ಹಾಜರಾತಿ ಮತ್ತು ದಾಖಲಾತಿ ಕುರಿತು ನಿಯಮದಲ್ಲಿ ಸಡಿಲಿಕೆ ಮಾಡಿ ವಿನಾಯಿತಿ ನೀಡಲೂ ಸೂಚನೆ ನೀಡಲಾಗಿದೆ ಎಂದರು.
*
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ